Saturday, July 13, 2019

ಅಕ್ಷರ ಸೈನ್ಯದ ಬೌದ್ಧಿಕ ಮಸೆತ

 
                ನಿಜಕ್ಕೂ ಖುಷಿಯ ಮತ್ಸರವಾಗುತ್ತಿದೆ! ಎಳೆ ಮನಸ್ಸುಗಳ ಕನಸುಗಳನ್ನು ಕಂಡಾಗ ವಯಸ್ಸು ಹಿಂದೋಡುತ್ತಿದೆ! ಕಳೆದ ವಾರ ಜರುಗಿದ ಕೃಷಿ ಯಂತ್ರಮೇಳದಲ್ಲಿ ವಿದ್ಯಾರ್ಥಿಗಳು ಕಾಲಿಗೆ ಚಕ್ರಕಟ್ಟಿ ಓಡಾಡುತ್ತಿದ್ದರು. ವೇಗದಲ್ಲಿ ಭವಿಷ್ಯದ ನೀರೀಕ್ಷೆಗಳು ಮಡುಗಟ್ಟಿದ್ದುವು. ಉತ್ಸಾಹದ ಚಿಲುಮೆಯಲ್ಲಿ ಕನಸುಗಳು ಚಿಮ್ಮುತ್ತಿದ್ದುವು.

                ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗವು - ಪದವಿ ಮತ್ತು ಸ್ನಾತಕೋತ್ತರ (ಎಂ.ಸಿ.ಜೆ) – ದಾಖಲಾತಿಗಾಗಿ ಮೇಳವನ್ನು ಪೂರ್ತಿ ಆವರಿಸಿತ್ತು. ಥಿಯರಿಯಲ್ಲಿ ರಿಂಗಣಿಸುತ್ತಿದ್ದ ವಿದ್ಯಾರ್ಥಿಗಳಿಗಂದು ಪ್ರಾಕ್ಟಿಕಲ್ ಸ್ಪರ್ಶ. ವಿಭಾಗದ ಗುರುಗಳ ಮಾರ್ಗದರ್ಶನ. ಮೂರು ದಿವಸ ತನುಶ್ರಮವನ್ನು ಮರೆತ ಓಡಾಟ. ವಯಸ್ಸನ್ನು ಮೀರಿದ ಸಾಧನೆ. ಬೌದ್ಧಿಕ ಮಸೆತಕ್ಕೆ ಒಡ್ಡಿಕೊಳ್ಳುವ ಮನಸ್ಥಿತಿಯ ರೂಪೀಕರಣ.

                ಯಂತ್ರಮೇಳದ  ಆರಂಭದ ಮತ್ತು ಕೊನೆಯ ದಿವಸವಿಕಸನ ಪತ್ರಿಕೆಗಳ ಬಿಡುಗಡೆ. ವಿದ್ಯಾರ್ಥಿಗಳಿಂದಲೇ ಮಾರಾಟ. ತಡರಾತ್ರಿಯ ತನಕವೂ ಸಂಪಾದಕೀಯ ವಿಭಾಗದ ದುಡಿತ. ಪತ್ರಿಕೋದ್ಯಮದ ಪದವಿ ವಿದ್ಯಾರ್ಥಿಗಳ ಟೀಂ ವರ್ಕ್ ಗುರುತರ ಮತ್ತು ಮಾನ್ಯ.  ಮೇಳಕ್ಕೆ ಆಗಮಿಸಿದ ಕೃಷಿಕರು ವಿಕಸನವನ್ನು ಖರೀದಿಸಿ ಮಕ್ಕಳ ಮನೋವಿಕಸನಕ್ಕೆ ಕಾರಣರಾದರು

                ಎಂ.ಸಿ.ಜೆ. ವಿದ್ಯಾರ್ಥಿಗಳ ತಂಡವು ಯಂತ್ರಮೇಳದ ತಿಂಗಳ ಮೊದಲೇ ಅಲರ್ಟ್ ಆಗಿದ್ದರು. ಪ್ರಚಾರ ತುಣುಕುಗಳ ವೀಡಿಯೋಗಳನ್ನು ನವಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದರು. ಗೋಷ್ಠಿಗಳ ಸಂಪನ್ಮೂಲ ವ್ಯಕ್ತಿಗಳನ್ನು ಭೇಟಿಯಾಗಿ ಸಂದರ್ಶನ ಮಾಡಿದ್ದರು. ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದರು. ಯಶೋಯಾನಗಳನ್ನು  ದಾಖಲಿಸಿದರು. ಮೇಳದ ಪ್ರಚಾರದ ಬಹುಪಾಲು ಯಶಸ್ಸು ವಿದ್ಯಾರ್ಥಿಗಳಿಗೆ ಸಲ್ಲಬೇಕು

                ತಂಡತಂಡವಾಗಿ ಮಳಿಗೆಗಳನ್ನು ಸಂದರ್ಶಿಸಿದರು. ಕೃಷಿಕರನ್ನು ಮಾತನಾಡಿಸಿದರು. ಫೋಟೋ ಕ್ಲಿಕ್ಕಿಸಿದರು. ಮಾಹಿತಿಗಳನ್ನು ದಾಖಲಿಸಿಕೊಂಡರು. “ವಿದ್ಯಾರ್ಥಿಗಳ ತೊದಲು ಮಾತುಗಳನ್ನು ಯಾರೂ ಹಗುರವಾಗಿ ಕಂಡಿಲ್ಲ. ತುಂಬು ಪ್ರೋತ್ಸಾಹ ನೀಡಿದ್ದಾರೆ. ಇದರಿಂದ ಛಳಿ ಬಿಟ್ಟು ರಂಗಕ್ಕೆ ಧುಮುಕುವ ಪ್ರಾಕ್ಟಿಕಲ್ ಕಲಿಕೆ ವಿದ್ಯಾರ್ಥಿಗಳಿಗೆ ಸಿಕ್ಕಂತಾಗಿದೆ.” ಖುಷಿ ಹಂಚಿಕೊಳ್ಳುತ್ತಾರೆ, ರಾಕೇಶ್ ಕುಮಾರ್ ಕಮ್ಮಜೆ. ಇವರು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರು

                ಮತ್ತೊಂದು ವಿಶೇಷó ‘ ಮೈ ಡಾಗ್! ಇದು ಪುಸ್ತಕದ ಹೆಸರು. ಲೇಖಕಿ ಶ್ರಾವ್ಯ ರೈ. ನಾಯಿಯ ಬಗ್ಗೆಯೂ ಅಂಕಣ ಬರೆಯಲು ಸಾಧ್ಯ - ವಿದ್ಯಾರ್ಥಿ ಹಂತದಲ್ಲಿಯೇ ಮಾಡಿ ತೋರಿಸಿರುವುದು ಎಂ.ಸಿ.ಜೆ. ವಿಭಾಗಕ್ಕೆ ಹಿರಿಮೆ. ಉಳಿದವರಿಗೆ ಮಾದರಿ. ಮೇಳದ ಮೂರು ದಿವಸಗಳಲ್ಲಿ ಒಂದು ಸಾವಿರ ಪ್ರತಿ ಮಾರಾಟ ಆಗಿರುವುದು ದಾಖಲೆ. 
 
                ಯಂತ್ರಮೇಳದ ಕಲಾಪಗಳು, ಪ್ರದರ್ಶನಗಳು, ಕೃಷಿಕರ ಮಾತುಗಳನ್ನು ವಿದ್ಯಾರ್ಥಿಗಳು ದಾಖಲಿಸಿ ಪತ್ರಿಕೆಗಳಿಗೆ ನೀಡಿದ್ದಾರೆ. ಎಲ್ಲಾ ಪತ್ರಿಕೆಗಳೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಕಲಿಕಾ ಹಂತದಲ್ಲಿ ಮುಖ್ಯವಾಹಿನಿ ಪತ್ರಿಕೆಗಳು ಬೆನ್ನು ತಟ್ಟಿರುವುದು ಸ್ಫೂರ್ತಿ ನೀಡಿದೆ. ಶ್ರಾವ್ಯಳಿಗೆ ಪತ್ರಿಕೆಯು ಅವಕಾಶ ನೀಡದೇ ಇರುತ್ತಿದ್ದರೆ ಸುಪ್ತ ಆಶಯವು ಅಲ್ಲೇ ಮುರುಟುತ್ತಿತ್ತು

                ಈಚೆಗೆ ವಾಟ್ಸಾಪ್ ತೆರೆದರೆ ಸಾಕು, ವಿದ್ಯಾರ್ಥಿಗಳ ಲೇಖನಗಳು ಪ್ರತ್ಯಕ್ಷವಾಗುತ್ತಿದ್ದುವು. ಒಂದರ್ಥದಲ್ಲಿ ಲೇಖನಗಳ ಮಹಾಪೂರ! ದಿನಕ್ಕೊಂದೆರಡು ಲೇಖನವಾದರೂ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದುವು. ಅನುಭವಿ ಲೇಖಕರು ಯೋಚಿಸುವಷ್ಟರಲ್ಲಿ ಇವರ ಲೇಖನಿಗಳು ಸದ್ದು ಮಾಡಿದ್ದುವು. ಇದು ಪತ್ರಿಕೋದ್ಯಮ ಬಯಸುವ ವೇಗ.

                ಇದೆಲ್ಲಾ ಹೇಗೆ ಸಾಧ್ಯವಾಯಿತು?  ಕಾಲೇಜಿನ ಸಮರ್ಥ ಅಧ್ಯಾಪಕ ವರ್ಗ, ಆಡಳಿತ ಮಂಡಳಿ ನೀಡಿದ ಅವಕಾಶ, ಜತೆಗೆ ವಿದ್ಯಾರ್ಥಿಗಳಿಗಿರುವ ಭವಿಷ್ಯ ಜೀವನದ ಎಚ್ಚರವು ಒಳಗಿದ್ದ ಹೊಸ ಪತ್ರಕರ್ತನನ್ನು ಎಬ್ಬಿಸಿವೆ. ಸಮಾಜವನ್ನು ನೋಡಲು ದೃಷ್ಟಿನೀಡಿದೆ. ಇದು ವಿದ್ಯಾರ್ಥಿಗಳ ಭಾಗ್ಯ. ಪತ್ರಕರ್ತನಿಗಿರಬೇಕಾದ ತಾಳ್ಮೆ, ಸಂಯಮ ಮತ್ತು ಕಲಿಕಾ ದಾಹವನ್ನು ಭಾವಿ ಪತ್ರಕರ್ತರಲ್ಲಿ ಮೊಳಕೆಯೊಡೆದುದನ್ನು ಹತ್ತಿರದಿಂದ ಗಮನಿಸಿದ್ದೇನೆ

                ನೆಗೆಟಿವ್ ವಿಚಾರಗಳು ಸಂಭ್ರಮಿಸುವ ಕಾಲಘಟ್ಟದಲ್ಲಿ ಪಾಸಿಟಿವ್ ವಿಚಾರಗಳಿಗೆ ಮಹತ್ವವಿದೆ ಎಂದು ಎಳೆಯ ಮನಸ್ಸುಗಳಿಗೆ ತಿಳಿಸುವ ಕೆಲಸವಾಗಬೇಕು. ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಕೆಲಸ ಮಾಡುತ್ತಿದೆ. ಇದು ವರ್ತಮಾನ ಬಯಸುವ ಪತ್ರಿಕೋದ್ಯಮ ಶಿಕ್ಷಣ.  

                ಇದೇ ತಂಡವು ಈಚೆಗೆ ಪುತ್ತೂರಿನಲ್ಲಿ ಜರುಗಿದ ಹದಿನೆಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಓಡಾಡಿ ಪತ್ರಿಕೆಯನ್ನು ಹೊರತಂದಿರುವುದು ಉಲ್ಲೇಖನಿಯ. ನಾಲ್ಕು ಗೋಡೆಗಳ ಮಧ್ಯದಿಂದ ಹಾರಲು ಬಿಟ್ಟಾಗ ಪೆನ್ನು, ಕ್ಯಾಮರಾಗಳು ಹೇಗೆ ದುಡಿಯುತ್ತವೆ ಎನ್ನುವುದನ್ನು ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ. ಎಲ್ಲರಿಗೂ ಅಭಿನಂದನೆಗಳು.

                ಪತ್ರಿಕೋದ್ಯಮ ಉದ್ಯಮವಲ್ಲ. ಅದೊಂದು ಜವಾಬ್ದಾರಿ. ಜವಾಬ್ದಾರಿಯೊಳಗಿದೆ ಸಾಮಾಜಿಕ ಸ್ವಾಸ್ಥ್ಯ. ಪತ್ರಕರ್ತ ಸಮಾಜದ ಕಣ್ಣು. ಕಣ್ಣು ಮಂಜಾಗಕೂಡದು. ನಿತ್ಯ ಅದು ಸ್ಪಷ್ಟವಾದ ನೋಟವನ್ನು ಕಟ್ಟಿಕೊಟ್ಟರೆ ನಿಜಾರ್ಥದ ಸಮಾಜದ ಕಣ್ಣಾಗಿ ರೂಪುಗೊಳ್ಳುತ್ತದೆ. ಇದು ಎಲ್ಲಾ ಎಳೆಮನಸ್ಸುಗಳು ತುಂಬಿಕೊಳ್ಳಬೇಕಾದ ಎಚ್ಚರ

ಊರುಸೂರು /  3-3-2019

No comments:

Post a Comment