Saturday, July 13, 2019

ಎಲ್ಲೂ ‘ಪಶುಪತಿನಾಥ’ನ ಚಿತ್ರಗಳಿಲ್ಲ!


                ಪ್ರವಾಸ, ದೇಗುಲ ದರ್ಶನ, ತೀರ್ಥಯಾತ್ರೆಗಳಿಂದ ಮರಳುವಾಗ ಆಯಾಯ ಕ್ಷೇತ್ರದ ಚಿತ್ರಗಳನ್ನು, ನೆನಪಿನ ವಸ್ತುಗಳನ್ನು ತರುವುದು ವಾಡಿಕೆ. ಹಾಗೆ ತಂದ ಚಿತ್ರಗಳನ್ನು ಫ್ರೇಮ್ ಕಟ್ಟಿಸಿ ಜೋಪಾನವಾಗಿಟ್ಟ ಅನೇಕರು ನೆನಪಾಗುತ್ತದೆ. ಕಾಠ್ಮಂಡು ಪ್ರವಾಸ ನಿಶ್ಚಯವಾದಾಗ ಆಪ್ತೇಷ್ಟರು ಪಶುಪತಿನಾಥನ ಚಿತ್ರ, ಮೂರ್ತಿ, ಸ್ಮರಣಿಕೆಗಳನ್ನು ತರುವಂತೆ ಬೇಡಿಕೆ ಮುಂದಿಟ್ಟಿದ್ದರು

                ಆರಾಧನಾ ಕ್ಷೇತ್ರಗಳ ಸನಿಹದಲ್ಲಿ ಹತ್ತಾರು ಅಂಗಡಿಗಳು ಸರ್ವೇಸಾಮಾನ್ಯ. ಪೂಜಾ ಪರಿಕರಗಳಿಂದ ತೊಡಗಿ ಫ್ರೇಮ್ ಅಂಗಡಿ ತನಕ. ಕ್ಷೇತ್ರದ ಅಧಿದೇವತೆಯನ್ನು ವಿವಿಧ ವಿನ್ಯಾಸಗಳಲ್ಲಿ ಸೆರೆಹಿಡಿದು ಗ್ರಾಹಕರನ್ನು ಸೆಳೆಯುತ್ತಾರೆ. ಕಾಠ್ಮಂಡುವಿನ ನಗರದೆಲ್ಲೆಡೆ ಅನೇಕ ಅಂಗಡಿಗಳಿವೆ, ಮುಂಗಟ್ಟುಗಳಿವೆ. ಎಲ್ಲೂಪಶುಪತಿನಾಥ ಚಿತ್ರಗಳಿಲ್ಲ

                ಒಮ್ಮೆ ನಿರಾಶೆಯಾಯಿತು, ಮತ್ತೊಂದು ಕ್ಷಣ ಸಂತೋಷವೂ ಆಯಿತು. ನಮ್ಮ ದೇವ, ದೇವರುಗಳ ಚಿತ್ರಗಳನ್ನು ಬೇಕಾದಾಗ ಮುದ್ರಿಸುವುದು, ಅದನ್ನು ಹಂಚುವುದು, ಪಡೆದವರು ಅಲ್ಲಲ್ಲೇ ಮರೆತುಬಿಡುವುದು, ಅದು ಇನ್ಯಾರದೋ ಕಾಲಿನ ಕಸವಾಗುವುದು... ಇವೆಲ್ಲಾ ನಮ್ಮಲ್ಲಿ ನೋಡಿಯೂ ನೋಡದಂತಿರುವ ವಿದ್ಯಮಾನ. ಕೆಲವೊಮ್ಮೆ ದಾಕ್ಷಿಣ್ಯಕ್ಕೆ ತಂದಿತ್ತ ಫೋಟೋಗಳಿಗೆ ಪಡೆದಾತದಲ್ಲಿ ಉದಾಸೀನವೇ ಪ್ರತಿಕ್ರಿಯೆಯಾದರಂತೂ ದೇವರೇ ಗತಿ! ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಪಶುಪತಿನಾಥ ನಿಜಾರ್ಥದಲ್ಲಿ ನಿರಾಕಾರನಾಗಿದ್ದ.

                ಪಶುಪತಿನಾಥನ ಸಾನ್ನಿಧ್ಯಕ್ಕೆ ಬರುವ ಹಾದಿಯುದ್ದಕ್ಕೂ ಪೂಜಾ ಪರಿಕರಗಳ ಚಿಕ್ಕ, ದೊಡ್ಡ ಅಂಗಡಿಗಳು ಯಥೇಷ್ಟ. ರುದ್ರಾಕ್ಷಿಗಳಿಗೆ ಮೊದಲಾದ್ಯತೆ. ದೂರದೂರಿನ ಭಕ್ತಾದಿಗಳಿಗೆ ಇಂತಹ ಅಂಗಡಿಗಳೇ ಪಥದರ್ಶಕರು. ಒಂದು ಅಂಗಡಿಗೆ ವ್ಯಾಪಾರವಾದರೆ ಪಕ್ಕದಾತ ಕರಬುವ ದೃಶ್ಯಗಳು ಮಾಮೂಲಿ. ನಮಗೆ ಭಾಷೆಯ ಸಮಸ್ಯೆಯಿದ್ದುದರಿಂದ ಅವರೇನು ಬೈದರೋ, ಹೊಗಳಿದರೋ ಗೊತ್ತಾಗಲಿಲ್ಲ.  

                ಸಂಜೆಯ ಹೊತ್ತು. ಬೀದಿ ಅಂಗಡಿಗಳ ಮಧ್ಯೆ ಒಂದೆಡೆ ಮುತ್ತುಗದ ಎಲೆಯನ್ನು ಪರಸ್ಪರ ಪೋಣಿಸುವ ಕಾಯಕದಲ್ಲೊಬ್ಬರು ನಿರತರಾಗಿದ್ದರು. “ಇದರ ಎಲೆಗಳನ್ನು ಪೋಣಿಸಿ ಊಟದೆಲೆಗಳಂತೆ ಬಳಸುತ್ತಾರೆ. ಮುತ್ತುಗದ ಎಲೆಯಲ್ಲಿ ಪ್ರಸಾದ ನೀಡುವುದು ಪಶುಪತಿನಾಥನ ಸನ್ನಿಧಿಯಲ್ಲಿ ಪರಂಪರೆಯಾಗಿದೆ.” ಎನ್ನುವ ಮಾಹಿತಿ ನೀಡಿದರು ಅರ್ಚಕ ರಾಮ ಕಾರಂತರು. ನೂರು ಎಲೆಯ ಒಂದು ಕಟ್ಟಿಗೆ ಒಂದು ನೂರು ರೂಪಾಯಿ. ನಮ್ಮಲ್ಲಿನ ಅರುವತ್ತು ರೂಪಾಯಿ

                ನೇಪಾಳ ಪ್ರವಾಸಕ್ಕೆ ಹೊರಡುವ ಮುನ್ನವೇ ತಂಡದ ಅನೇಕರುಪ್ರವಾಸದ ಖರ್ಚಿಗೆಸ್ವಲ್ಪ ಮೊತ್ತವನ್ನು ಬಜೆಟ್ ಮಾಡಿದ್ದರು. “ಅಲ್ಲಿ ಐನೂರು, ಸಾವಿರ, ಎರಡು ಸಾವಿರ ರೂಪಾಯಿ ಮೊತ್ತದ ನೋಟನ್ನು ಬ್ಯಾನ್ ಮಾಡಿದ್ದಾರೆ. ಹಾಗಾಗಿ ನೂರರ ನೋಟು ನಡೆದೀತಷ್ಟೇ.” ಎನ್ನುವ ಮಾಹಿತಿಯು ಖರೀದಿ ಆಸಕ್ತಿಯ ತೀವ್ರತೆಯನ್ನು ಕಡಿಮೆ ಮಾಡಿತ್ತು! ಆದರೆ ತೀರಾ ಪರಿಚಿತರಾದರೆ, ಸ್ವಲ್ಪ ಹೆಚ್ಚೇ ವ್ಯಾಪಾರ ಮಾಡಿದರೆ ಐನೂರರ ನೋಟು ಕಾಣದಂತೆ ಚಲಾವಣೆಯಾಗುತ್ತಿತ್ತು

                ಕಾಠ್ಮಂಡು ನಗರದ ಸ್ವಚ್ಛತೆಯತ್ತ ಅಲ್ಲಿನ ಸರಕಾರದ ಅಸಡ್ಡೆ ಎದ್ದು ಕಾಣುತ್ತಿತ್ತು. ಒಂದು ದೇಶದ ರಾಜಧಾನಿ ಮತ್ತು ಅಲ್ಲಿಗೆ ಆಗಮಿಸುವ ಅಸಂಖ್ಯಾತ ದೇಶ, ವಿದೇಶಗಳ ಪ್ರವಾಸಿಗರನ್ನು ಲಕ್ಷ್ಯವಿಟ್ಟಾದರೂ ಸರಕಾರವು ನಗರದ ಸೌಂದರ್ಯಕ್ಕೆ ಒತ್ತು ಕೊಡಬೇಕಿತ್ತು. ಭೂಕಂಪದ ಬಳಿಕವಂತೂ ಬಹುಶಃ ಹೇಳುವಂತಹ ಯಾವುದೇ ಹೊಸ ಕಾಮಗಾರಿಗಳು ನಡೆದಿಲ್ಲ. ಕುರಿತು ಓರ್ವ ಹಿರಿಯ ನಾಗರಿಕರಲ್ಲಿ ವಿಚಾರ ಎತ್ತಿದಾಗ, “ ಕುರಿತು ಮಾತನಾಡದೇ ಇರುವುದು ಒಳಿತು. ಸರಕಾರಕ್ಕೆ ನಾಗರಿಕರ ಹಿತರಕ್ಷಣೆ, ನಗರ ಸೌಂದರ್ಯ, ಕನಿಷ್ಠ ಅವಶ್ಯಕತೆಗಳತ್ತ ಲಕ್ಷ್ಯವಿಲ್ಲ.” ಎಂದು ಆಡಳಿತದ ವೈಫಲ್ಯಗಳತ್ತ ಬೆರಳು ತೋರಿದರು

                ದೇವಾಲಯಕ್ಕೆ ಪ್ರವೇಶಿಸುವ ಆರಂಭದಲ್ಲಿ ದೊಡ್ಡ ಪಾರಿವಾಳ ಸಂಸಾರ ಗಮನ ಸೆಳೆಯುತ್ತದೆ. ಅವುಗಳಿಗೆ ಸುಲಭವಾಗಿ ಸಿಗುವಂತೆ ನೀರು, ಕಾಳು ವ್ಯವಸ್ಥೆ. ಪ್ರವಾಸಿಗರಿಗೆ ಕಾಳು ಹಾಕುವ ತವಕ, ಅವಕ್ಕೆ ತಿನ್ನುವ ತವಕ! ಪಕ್ಷಿಪ್ರೀತಿಯಿರುವ ಅನೇಕ ಮಂದಿ ತಮಗೆ ತೋಚಿದ ರೀತಿಯಲ್ಲಿ ಪಾರಿವಾಳವನ್ನು ವರ್ಣಿಸುವ ರೀತಿ ಅನನ್ಯ. ಮಧ್ಯೆ ವಿಕಾರವಾಗಿ ಸದ್ದು ಮಾಡಿ ಅವುಗಳಿಗೆ ಭಯಹುಟ್ಟಿಸುವ ಮಂದಿಯೂ ಇದ್ದರೆನ್ನಿ

                ನಗರದ ಎಲ್ಲೆಡೆ ಮಾಂಸದಂಗಡಿಗಳು ಯಥೇಷ್ಟ. ಓಪನ್ ಆಗಿ ಮಾಂಸಗಳನ್ನು ಕಟ್ ಮಾಡುವ, ಅವುಗಳನ್ನು ಖರೀದಿಸುವ, ಅಲ್ಲೇ ಖಾದ್ಯಗಳನ್ನು ಸವಿಯುವ ದೃಶ್ಯಗಳು ನೆನಪಿನಿಂದ ಮಾಸುತ್ತಿಲ್ಲ. ರೀತಿಯ ಮುಕ್ತ ಅಂಗಡಿಗಳು ನೇಪಾಳದ ಬದುಕಿನ ಒಂದಂಗ. ಒಂದೆಡೆ ಪ್ರಾಣಿಪ್ರೀತಿ, ಮತ್ತೊಂದೆಡೆ ಪ್ರಾಣಿಬಲಿ! ಇಲ್ಲಿ ಆರಾಧನೆಯಲ್ಲೂ ಪ್ರಾಣಿಬಲಿ ಸಹಜ! 

                ನಾವಿದ್ದ ವಸತಿಗೆ ದೇವಳಕ್ಕೆ ತಾಗಿಕೊಂಡಂತಿರುವ ರುದ್ರಭೂಮಿಯನ್ನು ಹಾದು ಬರಬೇಕು. ಹಾಗೆ ಬರುವಾಗಲೆಲ್ಲಾ ಹಾದಿಯಲ್ಲಿ ಒಂದೋ ಎರಡೋ ಶವಗಳು ದಹನಕ್ಕಾಗಿ ಕಾಯುತ್ತಿದ್ದುವು. ನಮ್ಮ ತಂಡದಲ್ಲಿರುವ ಹಿರಿಯರಾದ ಕಮಲಮ್ಮನವರುಶವ ನೋಡಿದರೆ ಸ್ನಾನ ಮಾಡಬೇಕು. ಅಪಶಕುನಎಂದು ಎಚ್ಚರಿಸುತ್ತಲೇ ಮೊಬೈಲಿನಲ್ಲಿ ಫೋಟೋ ಕ್ಲಿಕ್ಕಿಸಲು ಅವಸರಿಸುತ್ತಿದ್ದರು! ಪ್ರವಾಸದ ಕೊನೆಗೆ ಅವರ ಮೊಬೈಲಿನ ಸ್ಟೋರೇಜ್ ಭರ್ತಿಯಾಗಿತ್ತು.  

                ರಾಮ ಕಾರಂತರು ಅವರ ಪರಿಚಯದ ಒಂದೆರಡು ಮಾಲ್ಗಳಿಗೆ ಕರೆದೊಯ್ದರು. ನಿಬ್ಬೆರಗಾಗುವ ಸಂಗ್ರಹಗಳು. ಎಲ್ಲಾ ಉತ್ಪನ್ನಗಳಲ್ಲೂ ಚೀನಿಯತೆ ಸದ್ದು ಮಾಡುತ್ತಿತ್ತು. ಜಾಗತೀಕರಣದ ಪ್ರಭಾವಗಳು ಆಚಾರ, ವಿಚಾರಗಳಲ್ಲಿ ಹಾಸುಹೊಕ್ಕಾಗಿವೆ. ನೇಪಾಳಿ ಬದುಕಿನಲ್ಲಿ ಪದ್ಧತಿಗಳು, ಪಾರಂಪರಿಕ ಸಾಂಸ್ಕøತಿಕ ನೆಲೆಗಳು ಅನುಷ್ಠಾನವಾಗುತ್ತಿದ್ದರೂ, ಭವಿಷ್ಯದ ನಾಳೆಗಳತ್ತ ಯೋಚಿಸಿದಾಗ ಇವುಗಳನ್ನು ಉಳಿಸಿಕೊಳ್ಳುವುದೇ ನೇಪಾಳಕ್ಕೆ ದೊಡ್ಡ ಸವಾಲು

ಊರು ಸೂರು / 5-5-2019

No comments:

Post a Comment