Saturday, July 13, 2019

ಬದುಕಿನ ಸುಭಗತೆಗೆ ಶ್ರದ್ಧೆಯ ಗೋಡೆ



ನೇಪಾಳವು ರುದ್ರಾಕ್ಷಿ ಹಾಗೂ ಸಾಲಿಗ್ರಾಮಗಳಿಗೆ ಖ್ಯಾತಿ. ಪಶುಪತಿನಾಥ ರುದಾಕ್ಷಿ ಪ್ರಿಯ. ವಿಶೇಷ ಪೂಜೆ, ಹರಕೆ ಸಲ್ಲಿಕೆ, ಅತಿ ಗಣ್ಯ ವ್ಯಕ್ತಿಗಳಿಗೆ ರುದ್ರಾಕ್ಷಿ ಹಾರವು ಪ್ರಸಾದವಾಗಿ ಕೊರಳಿಗೆ ಬಿದ್ದರೆ ತನ್ಮಯತೆಯ ಭಾವ. ಅನೇಕ ಯಾತ್ರಿಗಳು ಪಶುಪತಿನಾಥನ ದರ್ಶನದ ಬಳಿಕವೂ ರುದ್ರಾಕ್ಷಿ ಹಾರ, ಹೂವಿನ ಹಾರವನ್ನು ಕೊರಳಿನಿಂದ ತೆಗೆಯುವುದಿಲ್ಲ! ಕಾಠ್ಮಂಡು ನಗರದೆಲ್ಲಡೆ ಅಂತಹವರು ಓಡಾಡುತ್ತಿದ್ದಾಗಹೆಚ್ಚೇಗಮನ ಸೆಳೆದರು

ದೇವಾಲಯದ ಸುತ್ತಮುತ್ತಲಿನ ಬಹುತೇಕ ಅಂಗಡಿಗಳಲ್ಲಿ, ಮುಂಗಟ್ಟುಗಳಲ್ಲಿ ವಿವಿಧ ಬಗೆಯ ರುದ್ರಾಕ್ಷಿಗಳು, ಮಾಲೆಗಳು ವಿಕ್ರಯಕ್ಕಿಟ್ಟಿರುವುದು ಗಮನೀಯ. ಪೂಜಾ ಸಾಮಗ್ರಿಗಳ ಜತೆ ರುದ್ರಾಕ್ಷಿಗೆ ಮಹತ್ತು. ಅದಿಲ್ಲದೆ ಪೂಜಾ ಪರಿಕರ ಅಪರಿಪೂರ್ಣ. ಸಾಧಕರಿಗೆ ರುದ್ರಾಕ್ಷಿಯು ಜಪಸರ. ಶಿವನ ಸಾನ್ನಿಧ್ಯ ಎಲ್ಲೆಲ್ಲಿದೆಯೋ ಅಲ್ಲಿ ರುದ್ರಾಕ್ಷಿಯೂ ಒಂದು ಆರಾಧನೆಯ ಉಪಾಧಿ.

ನೇಪಾಳದಲ್ಲಿ ರುದ್ರಾಕ್ಷಿಯ ಬೆಳೆ ಹಸನು. ವರುಷಕ್ಕೆ ಎರಡು ಬೆಳೆ. ಆಗಸ್ಟ್ ತಿಂಗಳಲ್ಲಿ ಹೂ ಬಿಟ್ಟರೆ ನವೆಂಬರಿನಲ್ಲಿ; ಮರಳಿ ಜನವರಿಯಲ್ಲಿ ಹೂ ಬಿಟ್ಟು ಎಪ್ರಿಲ್ ತಿಂಗಳಲ್ಲಿ ಕಾಯಿ ಕೊಡುತ್ತದೆ. “ಇದರ ಬೀಜದಿಂದ ಗಿಡವಾಗುವುದು ಗೊತ್ತಿಲ್ಲ. ಬಲಿತ ಕೊಂಬೆಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ನಮ್ಮೂರಿನ ಕೆಲವು ಮರಗಳಲ್ಲಿ ಕಾಯಿ ಕಚ್ಚುವುದೇ ಇಲ್ಲ.” ಪೆರ್ಲದ ಕೃಷಿಕರಾದ ವರ್ಮುಡಿ ಶಿವಪ್ರಸಾದ್ ಹೇಳಿರುವುದು ನೆನಪಿಗೆ ಬಂತು

 ಇದರ ಹಣ್ಣುಗಳನ್ನು ನೀರಿನಲ್ಲಿ ಹಾಕಿದರೆ ಕೊಳೆಯುತ್ತದೆ. ಬ್ರಷ್ ಮೂಲಕ ಶುಚಿ. ಬಳಿಕ ಅದರ ಮುಖಗಳನ್ನು ನೋಡಿ ಬೆಲೆ ನಿರ್ಧಾರ. ಒಂದು ಮುಖದ ರುದ್ರಾಕ್ಷಿಗೆ ಸಾವಿರಾರು ರೂಪಾಯಿ ದರ. ಅದು ತೀರಾ ವಿರಳ ಕೂಡ,” ಎಂದು ಏಕಮುಖ ರುದ್ರಾಕ್ಷಿಯ ಒಂದು ಹರಳನನ್ನು ತೋರಿಸುತ್ತಾ, ಕಾಠ್ಮಂಡುವಿನ ಓರ್ವ ವ್ಯಾಪಾರಿ. “ಬೇಕಾ, ಒಯ್ತೀರಾ. ಕೇವಲ ನಾಲ್ಕುವರೆ ಸಾವಿರ ರಾಪಾಯಿ.” ಎಂದು ಕಣ್ಣುಮಿಟುಕಿಸಿದರು

ಅವರ ಸಂಗ್ರಹದಲ್ಲಿ ಸ್ಪಟಿಕದ ಹಲವು ವಿನ್ಯಾಸಗಳಿದ್ದುವು. ‘ನೋಡಿ, ಇಲ್ಲೊಂದು ಶಿವಲಿಂಗವಿದೆ. ಇದಕ್ಕೆ ಎಷ್ಟು ಬೆಲೆ ಇರಬಹುದು ಊಹಿಸಿಎನ್ನುತ್ತಾ ನಮ್ಮ ತಂಡದ ಸುಬ್ರಹ್ಮಣ್ಯ ಐತಾಳರಿಗೆ ನೀಡಿದರು. ತಂಪಾದ ಹಿತವಾದ ಅನುಭವ. ಕೊನೆಗೆಇದಕ್ಕೆ ಎಂಭತ್ತು ಸಾವಿರ ರೂಪಾಯಿಎಂದು ಅಂಗಡಿಯಾತನೇ ಹೇಳಿದ. “ಒಂದೂವರೆ ಲಕ್ಷ, ಎರಡು ಲಕ್ಷದ್ದೂ ಇದೆಎಂದು ಮಾಹಿತಿ ಪೂರ್ಣಗೊಳಿಸಿದರು.  

ಅಂಗಡಿಯಲ್ಲಿ ಪೂಜಾ ಕೈಂಕರ್ಯಗಳಿಗೆ ಸಂಬಂಧಿಸಿದ ಹಲವು ವಸ್ತುಗಳಿದ್ದುವು. ಅವುಗಳಲ್ಲಿ ಸಾಲಿಗ್ರಾಮಗಳ ಸಂಗ್ರಹಗಳೂ ಅಪಾರ. ವಿವಿಧ ಸಾಲಿಗ್ರಾಮಗಳು ಗಮನ ಸೆಳೆದುವು. ಅಂಗಡಿಯ ಯಜಮಾನ ಕೇವಲ ವ್ಯಾಪಾರಿ ಆಗಿ ನನಗೆ ಕಾಣಲಿಲ್ಲ. ಒಂದೊಂದು ಸಾಲಿಗ್ರಾಮದ ವಿವರಗಳನ್ನು ಕೊಡುತ್ತಾ ಅದರ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಅಧ್ಯಯನ ಮಾಡಿದವರಂತೆ ಕಂಡರು

ಹಿಮಾಲಯ ತಪ್ಪಲಲ್ಲಿ ಪ್ರವಹಿಸುವ ಯಾ ನೇಪಾಳದ ಉತ್ತರದಲ್ಲಿ ಗಂಡಕಿ ನದಿ ಹರಿಯುತ್ತದೆ. ಸಮೀಪ ಸಾಲಿಗ್ರಾಮ - ಸಾಲಗ್ರಾಮ - ಎನ್ನುವ ಶಿಲಾಮಯ ಪ್ರದೇಶವಿದೆ. ಇಲ್ಲಿನ ಕಲ್ಲುಗಳು ವಿವಿಧ ರೂಪಾಂತರಗೊಂಡು ಸಾಲಿಗ್ರಾಮದ ರೂಪ ಪಡೆಯುತ್ತದೆ. ಹಾಗಾಗಿ ಪ್ರದೇಶವನ್ನುಸಾಲಗ್ರಾಮ ಶಿಲಾಎಂದು ಕರೆಯುತ್ತಾರಂತೆ

ಇಲ್ಲಿ ಶಿಲಾ ಕಲ್ಲುಗಳನ್ನು ಕೊರೆಯುವ ಕೀಟಗಳಿವೆ. ಅವುಗಳಿಗೆವಜ್ರಕೀಟ (ವಿಷ್ಣುವೇ ಕೀಟದ ರೂಪದಲ್ಲಿದ್ದಾನೆ ಎನ್ನುವ ನಂಬುಗೆ) ಎನ್ನುತ್ತಾರೆ. ಬಹುಶಃ ವಜ್ರದಂತೆ ಹಲ್ಲುಗಳನ್ನು ಹೊಂದಿರುವುದರಿಂದ ಹೆಸರು ಬಂದಿರಲೂ ಬಹುದು. ಅವುಗಳು ಶಿಲೆಯೊಳಗೆ ರಂದ್ರ ಕೊರೆದು ಒಳ ಸೇರುತ್ತವೆ. ತನ್ನ ಹಲ್ಲುಗಳಿಂದ ಕೊರೆದ ಕಲ್ಲುಗಳಲ್ಲಿ ಚಕ್ರದ ರೀತಿಯ ವಿನ್ಯಾಸಗಳು, ಕೆಲವು ಶಂಖದ ಹಾಗೆ, ಕೆಲವು ಗದೆಯ ಹಾಗೆ ಗೋಚರಿಸುತ್ತವೆ. ಇವೆಲ್ಲಾ ಸಾಲಿಗ್ರಾಮಗಳಾಗಿ ಆರಾಧಿಸಲ್ಪಡುತ್ತದೆ. ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮ ಶೇಷ್ಟಅರ್ಚಕ ರಾಮ ಕಾರಂತರು ಹೇಳುತ್ತಿರುವಾಗ ಕಿವಿಯಾಗುವ ಕೆಲಸ ಮಾತ್ರ ನಮ್ಮದು

ಪ್ರವಾಸ ಮುಗಿಸಿ ಊರಿಗೆ ಬಂದಾಗಿ ಆಪ್ತರುನೀವು ಹೆಚ್ಚುವರಿಯಾಗಿ ಸಾಲಿಗ್ರಾಮ ತಂದಿದ್ದರೆ ನಮಗೆ ಬೇಕಿತ್ತು,” ಎಂದಾಗಲೇ ಜನರ ಮನದೊಳಗೆ ಸಾಲಿಗ್ರಾಮದ ಚಿತ್ರ ಅಚ್ಚೊತ್ತಿರುವುದು ಸ್ಪಷ್ಟವಾಗಿತ್ತು. ತೀರ್ಥಯಾತ್ರೆಗಳಿಗೆ ಹೋದವರು ಮರಳಿ ಬರುವಾಗ ಸಾಲಿಗ್ರಾಮ ತಂದರೆ ಅದು ದೊಡ್ಡ ಕೊಡುಗೆ. ಇವೆಲ್ಲಾ ನಂಬುಗೆಯ ಪ್ರಶ್ನೆ. ವಿವಿಧ ವರ್ಣದ ಮತ್ತು ಗಾತ್ರದ ಸಾಲಿಗ್ರಾಮಗಳ ಆರಾಧನೆಗಳು ಆವರವರ ಆಯ್ಕೆಗೆ ಬಿಟ್ಟದ್ದು

ಕಾಠ್ಮಂಡುವಿನ ಮಾಲ್ಗಳಲ್ಲಿ ಸುತ್ತಾಡುತ್ತಿದ್ದಾಗ ಒಂದೆಡೆ ಸ್ವರ್ಣದ ಅಂಗಡಿ. ಅಲ್ಲಿ ಚಿನ್ನದಿಂದ ಕಟ್ಟಿಸಿದ ರುದ್ರಾಕ್ಷಿಯನ್ನು ಗಮನಿಸಿದೆ. ರಾಮಕಾರಂತರುಇದರ ಬೆಲೆ ಎಷ್ಟುಎಂದು ಉದ್ಯಮಿಯಲ್ಲಿ ವಿಚಾರಿಸಿದಾಗ ಆತ ನಕ್ಕುಮೂರುವರೆ ಲಕ್ಷಎಂದರು. ರುದ್ರಾಕ್ಷಿಯನ್ನು ಚಿನ್ನ, ಬೆಳ್ಳಿಯಲ್ಲಿ ಕಟ್ಟಿಸಿ ಧರಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಬಳೆಯ ಹಾಗೆ ಬಳಸುವುದೂ ಇದೆ.
ರುದ್ರಾಕ್ಷಿಯ ಊರಿನ ರುದ್ರಾಕ್ಷಿಯ ಪಾರಮ್ಯ ಅಲ್ಪಸ್ವಲ್ಪ ಕೇಳಿಗೊತ್ತಿತ್ತು. ಕಣ್ಣಾರೆ ನೋಡುವ ಅವಕಾಶ ಪ್ರಾಪ್ತವಾಗಿತ್ತು. ಇತರ ಅರ್ಚಕರ ಮನೆಗಳಿಗೆ ಭೇಟಿ ನೀಡಿದಾಗಲೂರುದ್ರಾಕ್ಷಿ ಉಡುಗೊರೆ. ಒಬ್ಬರಲ್ಲಂತೂಸಾಲಿಗ್ರಾಮಪ್ರದಾನ. ಹೀಗೆ ರುದ್ರಾಕ್ಷಿ, ಸಾಲಿಗ್ರಾಮಗಳು ನೇಪಾಳದ ಬದುಕಿನ ನಂಬುಗೆಯೊಳಗೆ ಶ್ರದ್ದೆಯ ಗೋಡೆಗಳಾಗಿವೆ. (Photo : website)

ಊರು ಸೂರು / 28-4-2019





No comments:

Post a Comment