Saturday, July 13, 2019

ಭಾಷಣ ವಿಂಶತಿಯೊಳಗೆ ಕಾಲದ ನೋಟ



ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರ ಮಾತುಗಳುಅಧ್ಯಕ್ಷ ಭಾಷಣವಾಗಿ ಶಿಖರಪ್ರಾಯ. ವ್ಯಕ್ತಿಯ ಯೋಚನೆ, ಬೌದ್ಧಿಕತೆ, ಸಮಾಜವನ್ನು ನೋಡುವ ದೃಷ್ಟಿಕೋನ ಮತ್ತು ಸಮಸಾಮಯಿಕ ವಿಚಾರಗಳ ಅಪ್ಡೇಟ್ ವಿಚಾರಗಳನ್ನು ಅಧ್ಯಕ್ಷೀಯ ಭಾಷಣ ಒಳಗೊಂಡಿರುತ್ತದೆ. ಏನಿಲ್ಲವೆಂದರೂ ಸುಮಾರು ಒಂದು ಘಂಟೆಗಳ ಕಾಲ ಅಧ್ಯಕ್ಷರ ಲಿಖಿತ ಭಾಷಣಕ್ಕೆ ಸಮಯ ನಿಗದಿಗೊಳ್ಳುತ್ತದೆ. ಈಗೀಗ ಭಾಷಣಗಳ ಸಾರವನ್ನಷ್ಟೇ ಪ್ರಸ್ತುತಪಡಿಸುವ ಪರಿಪಾಠ ಶುರುವಾಗಿದೆ

ಸ್ಥಳೀಯತೆಯನ್ನು ಹೊರತುಪಡಿಸಿ ಅಧ್ಯಕ್ಷೀಯ ಭಾಷಣ ರೂಪುಗೊಳ್ಳಲು ಸಾಧ್ಯವಿಲ್ಲ. ಪ್ರದೇಶದ ಭಾಷೆಯ ಅಡಿಗಟ್ಟು, ಅದರ ಮೇಲೆ ಭಾಷೆಯನ್ನು ಕಟ್ಟಿದ ಮತ್ತು ಕಟ್ಟುವ ಪರಿ, ಕಟ್ಟುವಿಕೆಯಲ್ಲಿ ಮಿಳಿತಗೊಂಡ ಪ್ರಾಕೃತಿಕ ಸಂಗತಿಗಳು.. ಇವೆಲ್ಲವುಗಳ ಪಾಕವೇ ಭಾಷೆಯ ಸೊಗಸುಗಾರಿಕೆಯ ಅನಾವರಣಕ್ಕೆ ಕಾರಣವಾಗುತ್ತವೆ. ಕೆಲವೊಮ್ಮೆ ಸಮಸ್ಯೆಗಳೇ ಭಾಷಣಗಳ ಹೂರಣವಾದರೂ ಢಾಳಾಗುತ್ತದೆ! ತಾಲೂಕು ಮಟ್ಟದ ಸಮ್ಮೇಳನಗಳ  ಅಧ್ಯಕ್ಷೀಯ ಭಾಷಣಗಳ ಅಂದ ಮತ್ತು ಹೂರಣಗಳಲ್ಲಿ ಕಸಗಳಿರುವುದು ತೀರಾ ಕಡಿಮೆ. ರಾಜ್ಯಕ್ಕಾಗುವಾಗ ಹೂರಣವೇ ಕಸ! ಅದಕ್ಕೆ ಒಂದಷ್ಟು ಎಡ-ಬಲಗಳ ಥಳಕು. ವಿಕಾರಗಳಿಗೆ ಆಕಾರ ಕೊಡುವ ತಾಣ!

ಇಂತಹ ಸಾಹಸಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕವು ಮುಂದಾಗಿದೆ. ಪರಿಷತ್ತಿನ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕರ ಮೆದುಳ ಮರಿ. ಎಲ್ಲಾ ಪದಾಧಿಕಾರಿಗಳ ಸಾಥ್. ತಾಲೂಕಿನಲ್ಲಿ ಹದಿನೆಂಟು ಸಾಹಿತ್ಯ ಸಮ್ಮೇಳನಗಳಾಗಿವೆ. ಜತೆಗೆ ಹೋಬಳಿ ಸಮ್ಮೇಳನ ಮತ್ತು ಕರ್ನಾಟಕ ಏಕೀಕರಣ ಸಮ್ಮೇಳನ : ಹೀಗೆ ಒಟ್ಟು ಇಪ್ಪತ್ತು ಸಮ್ಮೇಳನಗಳ ಅಧ್ಯಕ್ಷರ ಮಾತುಗಳುಭಾಷಣ ವಿಂಶತಿಯೊಳಗೆ ಬಂಧಿಯಾಗಿರುವುದು ಪ್ರಾಯಃ ದಕ್ಷಿಣ ಜಿಲ್ಲೆಗೆ ಒಂದು ಇತಿಹಾಸ.  

1994ರಲ್ಲಿ ಪುತ್ತೂರು ಪುರಭನದಲ್ಲಿ ತಾಲೂಕಿನ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ. ಕೆದಂಬಾಡಿ ಜತ್ತಪ್ಪ ರೈಗಳು ಅಧ್ಯಕ್ಷತೆ ವಹಿಸಿದ್ದರು. ಇಪ್ಪತ್ತನೇ ಸಮ್ಮೇಳನವು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ 2018ರಲ್ಲಿ ಜರುಗಿತ್ತು. ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸಮ್ಮೇಳನಾಧ್ಯಕ್ಷರು. ಸುಮಾರು ಹದಿನೆಂಟು ವರುಷಗಳ ಕಾಲದ ಮತ್ತು ಮನಸ್ಥಿತಿಗಳ ಪಲ್ಲಟಗಳ ನೋಟಭಾಷಣ ವಿಂಶತಿ ಪುಟಗಳಲ್ಲಿದೆ.  

ಕೆದಂಬಾಡಿ ಜತ್ತಪ್ಪ ರೈಗಳ ಸಾಹಿತ್ಯದ ನೋಟ ಗಮನಿಸಿ. “ಸಾಹಿತ್ಯದ ಕೈಂಕರ್ಯವು ನಮ್ಮ ನಡುವಿನ ಗೋಡೆಗಳನ್ನು ಒಡೆಯಬೇಕೇ ವಿನಾ ನಿರ್ಮಿಸಬಾರದು. ನವೋದಯವೋ, ಪ್ರಗತಿಶೀಲವೋ, ನವ್ಯವೋ, ಬಂಡಾಯವೋ ಅಥವಾ ದಲಿತ ಯಾವುದಾದರೂ ಸರಿ, ಪಂಥಗಳು ಪಂಗಡಗಳನ್ನುಂಟುಮಾಡದ ಸಾಹಿತ್ಯವನ್ನು ಸೃಷ್ಟಿಸಬೇಕು. ಕೊನೆಗೂ ಉಳಿಯುವುದು ಪಂಥಗಳಲ್ಲ, ಸಾಹಿತ್ಯ ತಾನೆ?”

ಇಲ್ಲಿನ ಎಲ್ಲಾ ಭಾಷಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿದ್ವತ್ತು, ಸಾಹಿತ್ಯ, ಪರಿಸರ ಕಾಳಜಿ, ಪುಸ್ತಕ ಪ್ರಕಾಶನದ ಸಂಕಟಗಳು, ಕಲಾವಿದರ ಒಳತೋಟಿಗಳು, ಚಾರಿತ್ರಿಕ ಸಂಗತಿಗಳು, ಪುತ್ತೂರಿನ ಸಾಹಿತ್ಯ ಪಡೆದುಕೊಂಡ ತಿರುವುಗಳನ್ನು ಗಮನಿಸುವುದಕ್ಕೆ ಸಾಧ್ಯ. ನಾಡಿನ ಸಾಂಸ್ಕøತಿಕ ಬೆಳವಣಿಗೆಯ ದೃಷ್ಟಿಯಿಂದ ಇಲ್ಲಿ ಚರ್ಚಿತವಾದ ಸಂಗತಿಗಳಿಗೆ ಚಾರಿತ್ರಿಕ ಮಹತ್ತ್ವವಿದೆ.” ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಗೌರವ ಕಾರ್ಯದರ್ಶಿ ಡಾ.ಹೆಚ್.ಜಿ.ಶ್ರೀಧರ್ ಮುನ್ನುಡಿಯಾದರೆ, ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ ಬೆನ್ನುಡಿಯಾಗುತ್ತಾರೆ, “ಬಹುಶಃ ತಾಲೂಕು ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳ ಸಮಗ್ರ ಸಂಪುಟ ಬೇರೆಲ್ಲೂ ಆಗಿಲ್ಲವೆಂಬುದು ನನ್ನ ಅನಿಸಿಕೆ.”

ಭಾಷಣ ವಿಂಶತಿಯ ಸಂಪಾದಕರು ಬಿ.ಐತ್ತಪ್ಪ ನಾಯ್ಕ್. ಮೂರು ವರುಷಗಳಲ್ಲಿ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾಗಿ ಸಮರ್ಪಿತವಾದ ಕೈಂಕರ್ಯ. ಸಭೆ, ಸಮ್ಮೇಳನಗಳ ಶಿಷ್ಟಾಚಾರದಿಂದ ತೊಡಗಿ ವಾಸ್ತವತೆ ವರೆಗಿನ ಎಲ್ಲಾ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳು ಅವರಿಗೆ ನಾಲಗೆ ತುದಿಯಲ್ಲಿದೆ.  ಅವರ ಸಂಯೋಜನೆಯ ಕಲಾಪಗಳೆಲ್ಲಾ ಬಿಗಿಯಾಗಿರುತ್ತದೆ. ಅವರದು ಬೆನ್ನುತಟ್ಟಿ ಪ್ರೋತ್ಸಾಹಿಸುವ ಅಪರೂಪದ ಗುಣ. ಸಾಹಿತ್ಯ ಪರಿಷತ್ತಿನ ಒಂದು ಕಾಲಘಟ್ಟದ ದಾಖಲೆಗಳೆಲ್ಲಾ ಐತ್ತಪ್ಪ ನಾಯ್ಕರ ಮಸ್ತಕದಲ್ಲಿದೆ. ಅವರೇ ಒಂದು ಪುಸ್ತಕ! ‘ಭಾಷಣ ವಿಂಶತಿಸಾಹಿತ್ಯ ಲೋಕಕ್ಕೆ ಉತ್ತಮ ಕಾಣ್ಕೆ. ಅದು ಇಂದು ಲೋಕಾರ್ಪಣೆಯಾಗುತ್ತಿದೆ

ಊರು ಸೂರು / 16-12-2018

No comments:

Post a Comment