Saturday, July 13, 2019

ಮನವನ್ನು ಅರಳಿಸುವ ‘ಮನಕಾಮನ’


                ಕಿತ್ತಳೆ ಮರವು ಇಷ್ಟೊಂದು ಗೊಂಚಲು ಗೊಂಚಲು ಫಸಲು ನೀಡುತ್ತದಲ್ಲಾ.. ಇದರ ಗೆಲ್ಲು ಒಯ್ದರೆ ಕಸಿ ಕಟ್ಟಿ ಬೆಳೆಸಬಹುದಿತ್ತೇನೋ, ಅಲ್ಲ ಬೀಜ ಸಿಗಬಹುದಾಜತೆಯಲ್ಲಿದ್ದ ರಾಮಪ್ರಸಾದ್ ಮುಖ ನೋಡಿದರು. ಅವರ ಛೇಡನೆಗೆ ಮುಸಿನಕ್ಕೆ. ಜತೆಗಿದ್ದವರಿಗೆ ವಿಸ್ಮಯ. ‘ನಮ್ಮೂರಿನಲ್ಲಿ ಹೀಗೆ ಆಗದೇ ಆಗದು,’ ತೀರ್ಪು ಕೂಡಾ ಪ್ರಕಟವಾಯಿತು

                ವಿಸ್ಮಯಗಳಿಗೆ ಪೂರಕವಾಗಿ ಅಲ್ಲಿಲ್ಲಿ ಕಿತ್ತಳೆಯನ್ನು ಬುಟ್ಟಿಯಲ್ಲಿಟ್ಟು ಮಾರುವ ಹತ್ತಾರು ಮಹಿಳೆಯರಿದ್ದರು. ಕಿಲೋಗೆ ಅರುವತ್ತರಿಂದ ಎಂಭತ್ತು ರೂಪಾಯಿ. ಅದು ಕಿತ್ತಳೆಯೋ ಅಥವಾ ಕಿನೋ ಜಾತಿಯದ್ದೋ ತಿಳಿಯಲಿಲ್ಲ. ತುಂಬಾ ರುಚಿಯಿತ್ತು. ಕಿತ್ತಳೆಯ ಎಸಳು ತಿನ್ನುವಾಗಲೆಲ್ಲಾ ದೃಷ್ಟಿಯು ಮರದತ್ತಲೇ ನೆಟ್ಟಿತ್ತು

                ಮೂರ್ನಾಲ್ಕು ಮರಗಳಲ್ಲಿ ಭರಪೂರ ಕಿತ್ತಳೆ. ಕಡು ಕೆಂಬಣ್ಣದ ಗೋಲವನ್ನು ಗೆಲ್ಲುಗಳಿಗೆ ಪೋಣಿಸಿದಂತೆ ಭಾಸವಾಗಿತ್ತು. ಅದು ನಿಜವಾದ ಕಿತ್ತಳೆಯೋ? ಅಥವಾ ಪ್ರವಾಸಿಗರನ್ನು ಸೆಳೆಯುವ ತಂತ್ರವೋ ಗೊತ್ತಿಲ್ಲ. ಕಿತ್ತಳೆಯೇ ಹೌದೆಂದಾದರೆ ಫಲದ ಭಾರದಿಂದ ಸ್ವಲ್ಪವಾದರೂ ಗೆಲ್ಲುಗಳು ಬಾಗುತ್ತಿದ್ದುವು. ಎಳೆ ಮಿಡಿಗಳು, ಅರೆ ಹಣ್ಣಾದ ಕಾಯಿಗಳು ಇರಬೇಕಿತ್ತು. ಪಕ್ಷಿಗಳ ಕಲರವವೂ ಇದ್ದಿರಲಿಲ್ಲ.

                ಇದು ನೇಪಾಳದಮನಕಾಮನದೇವಳಕ್ಕೆ ಸಾಗುವ ಇಕ್ಕೆಡೆಗಳ ಉದ್ಯಾನದೊಳಗೆ ಬಂಧಿಯಾಗಿ ಮರಗಳ ಗಾಥೆ. ಶಿಸ್ತಿನ ಭದ್ರತೆಯೂ ಇತ್ತು. ಹಣ್ಣನ್ನು ನೋಡುವಾಗ ಆಗಲೇ ಕೊಯ್ಯಬಹುದಾದಷ್ಟು ಮಾಗಿತ್ತು. ಪ್ರವಾಸದ ಮೂಡ್ ಮತ್ತು ಭಾಷಾ ಸಮಸ್ಯೆಯಿಂದ ಹೆಚ್ಚಿನ ಮಾಹಿತಿ ಪಡೆಯಲಾಗಲಿಲ್ಲ. ನನ್ನ ಆಸಕ್ತಿಯು ಉಳಿದವರಿಗೆ ಕಿರಿಕಿರಿಯಾಗದಿರಲಿ ಎಂದು ಕಿತ್ತಳೆ ಮರವನ್ನು ಮರೆತುಬಿಟ್ಟೆ

                ಜನವರಿ ತಿಂಗಳ ಕೊನೆಯ ವಾರ. ಕಿತ್ತಳೆ ಮರವನ್ನು ನೋಡಿದ ಬಳಿಕ ಅದು ಮನದೊಳಗೆ ಹುದುಗಿಸಿಟ್ಟ ಗುಮಾನಿ ಬೀಜ ಕಾವು ಕೊಡುತ್ತಲೇ ಇತ್ತು. ಚಿತ್ರವನ್ನುತಿರ್ಗಾಮುರ್ಗಾನೋಡಿದರೂ ಗುಮಾನಿಯು ಗುಮಾನಿಯಾಗಿಯೇ ಉಳಿದಿತ್ತು! ಹೀಗೂ ಸಾಧ್ಯವಾ? ಅದು ಸಾಧ್ಯವಾದರೆ ಸಂತೋಷ

                ನೇಪಾಲದ ಕಾಠ್ಮಂಡುವಿನಿಂದ ಗೋರ್ಖಾ ಹಾದಿಯಲ್ಲಿ ನೂರಿಪ್ಪತ್ತೈದು ಕಿಲೋಮೀಟರ್ ದೂರದಲ್ಲಿಮನಕಾಮನಾದೇವಿಯ ದೇವಸ್ಥಾನ. ಸುಮಾರು ನಾಲ್ಕು ಗಂಟೆ ಪಯಣ. ಆಕೆ ಮನದ ಕಾಮನೆಯನ್ನು ಪರಿಹರಿಸುವ ದೇವಿ ಎಂಬ ನಂಬುಗೆ

                ಬಂಧು ಹಾಗೂ ಪಶುಪತಿನಾಥನ ಅರ್ಚಕರಾದ ರಘುರಾಮ ಕಾರಂತರು ಮೊದಲೇ ಪ್ರವಾಸ ಪ್ಲಾನ್ ಮಾಡಿಟ್ಟಿದ್ದರು. “ಮನಕಾಮನ ದೇವಳ ನೋಡಲೇ ಬೇಕು. ಮುಖ್ಯವಾಗಿ ಬೆಟ್ಟದ ಮೇಲಿರುವ ದೇವಾಲಯಕ್ಕೆ ಹೋಗುವುದೇ ಒಂದು ಥ್ರಿಲ್ಎಂದು ಕಳುಹಿಸಿಕೊಟ್ಟಿದ್ದರು. ಅವರ ಪತ್ನಿ ಗೀತಾ ಕಾರಂತರು ಪ್ರವಾಸಕ್ಕೆ ಸಾಥ್ ಆಗಿದ್ದರು.  

                ಮನಕಾಮನ ದೇವಸ್ಥಾನವು ನೆಲಮಟ್ಟದಿಂದ ಸುಮಾರು ಒಂದು ಸಾವಿರದ ನೂರು ಅಡಿ ಎತ್ತರದಲ್ಲಿದೆ. ರೋಪ್ ವೇ ಮೂಲಕ ಸಂಚರಿಸುವ ಮೂವತ್ತಕ್ಕೂ ಹೆಚ್ಚು ಕೇಬಲ್ಕಾರುಗಳು ಪ್ರವಾಸಿಗರನ್ನು ಹೊತ್ತೊಯ್ಯುತ್ತದೆ. ಒಂದೊಂದು ಕಾರಿನಲ್ಲಿ ಆರರಿಂದ ಏಳು ಮಂದಿ ಪಯಣ. ನೇಪಾಳಿಗರಿಗೆ ಆರುನೂರು ರೂಪಾಯಿ, ಇತರರಿಗೆ ಎಂಟುನೂರು ರೂಪಾಯಿ ಶುಲ್ಕ!

                ನೆಲಮಟ್ಟದಿಂದ ಸುಮಾರು ಇನ್ನೂರೈವತ್ತು ಅಡಿ ಮೇಲ್ಪಟ್ಟದಲ್ಲಿ, ಕಡಿದಾದ ಬೆಟ್ಟಗಳನ್ನು ಏರಿ ಸಾಗುವ ಪಯಣ ರೋಚಕ. ಕೆಳ ನೋಡಿದರೆ ಪ್ರಪಾತ! ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿಲ್ಲಿ ನಿರ್ಮಿಸಿದ ವಿರಾಮದ ಮನೆಗಳು, ಕೃಷಿ ಮಾಡದೆ ಹಡಿಲುಬಿಟ್ಟ ಕೃಷಿ ಭೂಮಿಗಳು, ಮಾನವನ ದುರಾಸೆಯ ವಿಕೃತಿಗಳು, ಚಿಕ್ಕ ಪುಟ್ಟ ಜೋಪಡಿ ಮನೆಗಳು ಗೋಚರವಾಗುತ್ತದೆ.

                ಕೇಬಲ್ ಕಾರ್ ತಂತ್ರಜ್ಞಾನ ನಿಜಕ್ಕೂ ಅದ್ಭುತ. 1998 ನವೆಂಬರ್ 24ರಂದು ಉದ್ಘಾಟನೆಗೊಂಡಿತು ಎಂದು ಮಾಹಿತಿಗಳು ಹೇಳುತ್ತವೆ. ಬಹುಶಃ ಕಾರ್ ವ್ಯವಸ್ಥೆ ಇಲ್ಲದೇ ಇರುತ್ತಿದ್ದರೆ ದೇವಾಲಯವು ಭಕ್ತರಿಗೆ ದೂರ, ಬಹುದೂರ. ಬೇರೆ ಮಾರ್ಗದಿಂದ ಬರುವ ವ್ಯವಸ್ಥೆಗಳಿವೆಯಂತೆ. ಮೊದಲು ಬೆಟ್ಟಗಳನ್ನು ಏರಿ ದೇವಿಯ ದರ್ಶನವನ್ನು ಮಾಡುತ್ತಿದ್ದರಂತೆ

                ದೇವಳದ ಅನತಿ ದೂರದಲ್ಲಿ ಕೇಬಲ್ ಕಾರ್ ಇಳಿದು ದೇವಾಲಯ ಸೇರಲು ಒಂದೈದು ನಿಮಿಷ ಪಯಣಿಸಬೇಕು. ಎರಡೂ ಬದಿಯ ಮಾಮೂಲಿ ಸಂತೆ, ಅಂಗಡಿಗಳು. ಗಿರಾಕಿಗಳನ್ನು ಸೆಳೆಯುವ ತಂತ್ರಗಳು. ದೇವಾಲಯ ತುಂಬಾ ಆಕರ್ಷಕ. ನಾಲ್ಕು ಅಂತಸ್ತುಗಳ ಆಕೃತಿ. ನಾವು ತಲುಪಿದಾಗ ಮೈಲುದ್ದದ ಕ್ಯೂ! ಸರದಿ ಸಾಲಿನಲ್ಲಿ ದೇವಿಯನ್ನು ಸಂದರ್ಶಿಸಲು ಏನ್ನಿಲ್ಲವೆಂದರೂ ಎರಡು ತಾಸು ಬೇಕು. ಬೇರೆಡೆ ಪ್ರವಾಸ ಮೊದಲೇ ನಿಗದಿಯಾದ್ದರಿಂದ ಒಂದರ್ಧ ಗಂಟೆ ಕಳೆದು ಇನ್ನೇನು ಹೊರಡಬೇಕು ಎನ್ನುವಾಗ ಕೇಬಲ್ ಕಾರು ತನ್ನ ವಿಶ್ರಾಂತಿಯ ಗಂಟೆ ಬಾರಿಸಿತ್ತು! ಮತ್ತೆರಡು ತಾಸು ಬೆಟ್ಟದ ಮೇಲೆ ವಾಸ.

                ಮನಕಾಮಿನಿ ದೇವಿಯು ಪಾರ್ವತಿ ಸ್ವರೂಪದಿಂದ ಆರಾಧನೆ ಪಡೆಯುತ್ತಾಳೆ. ಪ್ರಾಣಿಬಲಿಯು ದೇವಿಗೆ ಪ್ರಿಯ. ಆಕೆ ಶಕ್ತಿ ದೇವತೆ ಎನ್ನುವ ನಂಬುಗೆ. ಅದಕ್ಕಾಗಿ ಆಡುಗಳನ್ನು ಸಾಕುವ, ಒದಗಿಸುವ ಜಾಲವಿದೆ. ಪ್ರವಾಸಿ ಕ್ಷೇತ್ರ ಹಾಗೂ ದೂರದ ಪಟ್ಟಣಗಳಿಂದ ಸಾಮಗ್ರಿಗಳು ಬರಬೇಕೆನ್ನುವ ಕಾರಣದಿಂದ ಇಲ್ಲಿ ಪ್ರತಿಯೊಂದು ವಸ್ತುವಿಗೂ ಅಧಿಕ ದರ.  

                ಸುಮಾರು ಹದಿನೇಳನೇ ಶತಮಾನದಲ್ಲಿ ದೇವಾಲಯ ನಿರ್ಮಾಣವಾಗಿದೆ ಎಂದು ದಾಖಲೆಗಳು ಸಾರುತ್ತವೆ. ದೇವಳದ ಸೊಬಗು, ಮನದ ಕಾಮನೆಗಳನ್ನು ಪರಿಹರಿಸುವ ದೇವಿಯ ದರ್ಶನ, ಕೇಬಲ್ ಕಾರು, ಹಸಿರು ಪರಿಸರವು ಕ್ಷೇತ್ರಕ್ಕೆ ಭಕ್ತರನ್ನು, ಆಸಕ್ತರನ್ನು ಸೆಳೆಯುತ್ತದೆ.
ಊರು ಸೂರು / 31-3-2019

No comments:

Post a Comment