Saturday, July 13, 2019

ಒಂದಗುಳೂ ನೆಲಕ್ಕೆ ಬೀಳದ ಎಚ್ಚರ!



                ಈಚೆಗೆ ಕಳಂಜದ ಕಾವಿನಮೂಲೆ ಪ್ರಶಾಂತರಲ್ಲಿ ಅಪರೂಪದ ಧಾರ್ಮಿಕ ಕಾರ್ಯಕ್ರಮ. ಸರಣಿ ಶಿವಪೂಜೆ ಅಭಿಯಾನದ ಸಮಾರೋಪ. ದೂರದೂರಿನ ಅತಿಥಿಗಳ ಉಪಸ್ಥಿತಿ. ಆದರೆ ಅವರೆಲ್ಲಾ ಅಭ್ಯಾಗತರಂತೆ ತೋರುತ್ತಿದ್ದರು! ಅತಿಥಿ ಯಾರು, ಅಭ್ಯಾಗತರು ಯಾರು? ಹೊಸಬರಿಗೆ ಗೊಂದಲ. ಸುಮಾರು ಮುನ್ನೂರು ಮಂದಿ ಅಂದುಬ್ಯುಸಿಯಿಂದ ಚಡಪಡಿಸಲಿಲ್ಲ, ಗೊಣಗಾಟವಿಲ್ಲ. ಯಾರಿಗೂ ಒತ್ತಡವಿರಲಿಲ್ಲ. ಅಪರಾಹ್ನ ನಾಲ್ಕು ಗಂಟೆ ತನಕ ನಿರುಮ್ಮಳ ವಾತಾವರಣ.
                ಸರಣಿ ಶಿವಪೂಜೆ - ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸುಂದರ ಕಲ್ಪನೆ. ಪುರೋಹಿತ ವೇದಮೂರ್ತಿ ನಾಗರಾಜ ಭಟ್ಟರ ಪರಿಕಲ್ಪನೆ. ಪ್ರತಿಷ್ಠಾನವು ಬೇಸಿಗೆಯಲ್ಲಿ ನಲವತ್ತು ದಿವಸಗಳ ವೇದ ಶಿಬಿರ ಏರ್ಪಡಿಸುತ್ತದೆ. ಮೂರು ವರುಷ ಪೂರೈಸಿದ ವಿದ್ಯಾರ್ಥಿಯನ್ನು ಪ್ರಾಯೋಗಿಕವಾಗಿ ಸಜ್ಜುಗೊಳಿಸುವ ಅಭಿಯಾನವೇ ಶಿವಪೂಜೆ. ಪ್ರತಿ ವಿದ್ಯಾರ್ಥಿಯ ಮನೆಯಲ್ಲಿ ಪ್ರಾಕ್ಟಿಕಲ್ ಕಲಿಕೆ. ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆತ್ತವರು, ಬಂಧುಗಳು, ಗುರು ವೃಂದದವರ ಸಕ್ರಿಯತೆಯು ಪರಸ್ಪರ ಬಾಂಧವ್ಯ ವೃದ್ಧಿಗೆ ನಾಂದಿ.
                ಮಂತ್ರಗಳ ಕಲಿಕೆಯು ಥಿಯರಿ. ಅದರ ಪ್ರಾಕ್ಟಿಕಲ್ ಕಲಿಕೆಯು ಅಭಿಯಾನದಲ್ಲಿ ಸಂಪನ್ನವಾಗುತ್ತದೆ. ಓರ್ವ ವಿದ್ಯಾರ್ಥಿಯ ಮನೆಯಲ್ಲಿ ಶಿವಪೂಜೆ ಇದ್ದಾಗ ಉಳಿದ ವಿದ್ಯಾರ್ಥಿಗಳೂ ಶ್ರದ್ಧೆಯಿಂದ ಪಾಲ್ಗೊಳ್ಳುತ್ತಾರೆ. ಮಂತ್ರಗಳು, ವಿಧಿಗಳು ಪ್ರತೀ ಸಲವೂ ಪುನರಾವರ್ತನೆಯಾಗುತ್ತದೆ. ಇದರಿಂದಾಗಿ ಥಿಯರಿ ಮತ್ತು ಪ್ರಾಕ್ಟಿಕಲ್ ಎರಡೂ ಮಿಳಿತಗೊಂಡು ಅನುಭವಿ ಅರ್ಚಕನಾಗಿ ರೂಪುಗೊಳ್ಳಲು ಸಹಕಾರಿ.
                ನಾಗರಾಜ ಭಟ್ ಹೇಳುತ್ತಾರೆ, “ಎಲ್ಲರೂ ಅರ್ಚಕರಾದಾರು ಎನ್ನುವಂತಿಲ್ಲ. ಬದುಕಿನ ಉನ್ನತ ವಿದ್ಯಾಭ್ಯಾಸವನ್ನು ಆಯ್ಕೆ ಮಾಡಿಕೊಂಡಾಗ ಕ್ಷೇತ್ರವು ಸಹಜವಾಗಿ ದೂರವಾಗುತ್ತದೆ. ಆದರೆ ಪ್ರತಿಷ್ಠಾನದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಯು ಮುಂದೆ ಎಂದಿಗೂ ಸನಾತನ ನಂಬುಗೆಯ, ಆಚಾರ ವಿಚಾರಗಳನ್ನು ಒಪ್ಪುವ, ಅನುಷ್ಠಾನ ಮಾಡುವ ಮನಸ್ಸುಳ್ಳವರಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ.”
                ಯಾವುದೆಲ್ಲಾ ಪ್ರಾಕ್ಟಿಕಲ್ ಕಲಿಕೆ? ಬಹಳ ಸೂಕ್ಷವಾದ ವಿಚಾರಗಳತ್ತ ಒತ್ತು. ಮುಖ್ಯವಾಗಿ ಸಮಯ ಪಾಲನೆ. ಒಂದೊಂದು ಸೆಕೆಂಡ್ ಕೂಡಾ ಪಾಲನೆ. ಜಾಗಟೆಗೂ ಒಂದು ನಾದವಿದೆ. ಶಂಖದಿಂದ ಹೊರಡುವ ಶಬ್ದಕ್ಕೆ ಲಯವಿದೆ. ಒಂದೊಂದು ದೇವರ ಅರ್ಚನೆಗೆ ಬೇರೆ ಬೇರೆ ಹೂಗಳಿವೆ. ಆರತಿಗೆ ಬತ್ತಿಯನ್ನು ಪೋಣಿಸುವಲ್ಲಿಯೂ ಜಾಣ್ಮೆಯಿದೆ. ಬತ್ತಿಯನ್ನು ಎಣ್ಣೆಯಲ್ಲಿ ಯಾವ ಪ್ರಮಾಣದಲ್ಲಿ ತೋಯಿಸಿದರೆ ಪೂಜಾ ಸಮಯದಲ್ಲಿ ತೊಂದರೆಯಿಲ್ಲದೆ ಉರಿಯುತ್ತದೆ ಎಂಬ ಜ್ಞಾನ, ಪೂಜಾ ಪರಿಸರದ ಸ್ವಚ್ಛತೆ, ಬಟ್ಟೆ ಉಡುವ ಕ್ರಮ, ತಿಲಕ ಧರಿಸುವ ವಿಧಾನ.. ಇವೇ ಮೊದಲಾದ ವಿಚಾರಗಳಿಗೆ ಸರಣಿ ಶಿವಪೂಜೆ ಅಭಿಯಾನವು ಗಮನ ಕೊಡುತ್ತದೆ.
                ಪ್ರತಿಷ್ಠಾನದ ಮೂರು ವರುಷ ಕಲಿಕೆಯ ಸಂದರ್ಭದಲ್ಲಿ ಬದುಕಿನ ಅನ್ಯಾನ್ಯ ವಿಚಾರಗಳತ್ತ ಆದ್ಯತೆ. ಉದಾ: ಊಟ ಮಾಡುವ ವಿಧಾನ. ತಂದೆಯ ಬಳಿ ಮಗನೋ ಮಗಳೋ ಕುಳಿತು ಕಲಿತುಕೊಳ್ಳುವ ಶಿಕ್ಷಣವಿದು. ನಾಗರಾಜ ಭಟ್ ತಂಡವು ವಿದ್ಯಾರ್ಥಿಗಳಿಗೆ ಉಣ್ಣುವ ಕಲೆಯನ್ನೂ ಹೇಳಿಕೊಡುತ್ತಿದೆ. ಉದಾ: ಬಾಳೆ ಎಲೆಯ ಮುಂದೆ ಕುಳಿತುಕೊಳ್ಳುವ ರೀತಿ, ಎಲೆಯನ್ನು ತೊಳೆಯುವ ವಿಧಾನ, ಯಾವ್ಯಾವ ಖಾದ್ಯಗಳು ಎಲ್ಲೆಲ್ಲಿ? ಉಪ್ಪು, ಉಪ್ಪಿನಕಾಯಿಗಳ ಸ್ಥಾನ ಎಲ್ಲಿ? ಯಾವುದನ್ನು ಮೊದಲು ಉಣ್ಣಬೇಕು?
                ಇದಕ್ಕೆ ಹಿರಿಯರು ವೈಜ್ಞಾನಿಕವಾದ ಅಡಿಗಟ್ಟನ್ನು ಹಾಕಿಕೊಟ್ಟಿದ್ದಾರೆ. ಮೊದಲಿಗೆ ಅನ್ನಕ್ಕೆ ತುಪ್ಪ. ಇದು ಅನ್ನನಾಳದ ಶುದ್ಧಿಗೆ. ನಂತರಕಡೆಬಾಳೆಯಲ್ಲಿನ ಪಾಯಸದ ಸವಿ. ನಂತರಸಾರು. ಮತ್ತೆ ಸಾಂಬಾರು, ಹುಳಿ.. ಇತ್ಯಾದಿ. ಕೊನೆಗೆ ಮಜ್ಜಿಗೆ. ಇದು ಜೀರ್ಣಶಕ್ತಿಗೆ. ಒಂದೊಂದು ಖಾದ್ಯಕ್ಕೂ ವೈಜ್ಞಾನಿಕ ವಿವರಣೆ. ಬುದ್ಧಿಶಕ್ತಿ ವೃದ್ಧಿಗೆ ನಿತ್ಯತಂಬುಳಿ  ಸೇವನೆ. ನಾಗರಾಜ ಭಟ್ ಹೇಳುತ್ತಾರೆ – ‘ಅನುಭವಿಗಳೆಂದು ಕರೆಸಿಕೊಳ್ಳುವ ನಮ್ಮಿಂದಲೂ ಚೆನ್ನಾಗಿ ಊಟ ಮಾಡುತ್ತಾರೆ. ಪರಸ್ಪರ ಎಲೆಗೆ ಎಲೆ ತಾಗದಂತೆ, ಅನ್ನದ ಒಂದಗುಳೂ ನೆಲಕ್ಕೆ ಬೀಳದ ಜಾಗೃತಿ ಮಕ್ಕಳಲ್ಲಿ ಮೂಡಿಸಿದೆ.
                ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಇಂತಹ ಪ್ರಾಕ್ಟಿಕಲ್ ಕಲಿಕೆಗಳ ತರಬೇತಿಗಳು ರೂಪುಗೊಳಿಸಬೇಕಾದ ಕಾಲಘಟ್ಟದಲ್ಲಿದ್ದೇವೆ. ಇಲ್ಲಿ ಅಪ್ಪ, ಅಮ್ಮ, ಅಜ್ಜ, ಅಣ್ಣ, ಅಕ್ಕ.. ಇವರೆಲ್ಲರ ಸ್ಥಾನವನ್ನು ಪ್ರತಿಷ್ಠಾನವು ತುಂಬಿದೆ! ಮಕ್ಕಳ ಕಲಿಕೆಗೆ ಕೈತಾಂಗು ಆಗಿದ್ದಾರೆ. ವಿದ್ಯಾರ್ಥಿಗಳ ಬದುಕಿನ ಉನ್ನತಿಗೆ ಪೂರಕವಾದ ಪ್ರತಿಷ್ಠಾನದ ನಿಸ್ವಾರ್ಥ ಕಾಯಕ. ಇದು ವರ್ತಮಾನದ ಪ್ರಗತಿಶೀಲ ಮನಸ್ಸುಗಳಿಗೆ ವಿಪರೀತವಾಗಿ ಕಂಡರೆ ಅದು ಪ್ರತಿಷ್ಠಾನದ ಸಾರಥ್ಯ ವಹಿಸಿದ ಪುರೋಹಿತ ನಾಗರಾಜ ಭಟ್ಟರ ಸಮಸ್ಯೆಯಲ್ಲ

ಊರು ಸೂರು  / 4-11-2018  

No comments:

Post a Comment