ಅದು ಹಳ್ಳಿ ಶಾಲೆ. ಎರಡನೇ ತರಗತಿಯ ಪಾಠ ಸಾಗುತ್ತಿತ್ತು. ಮಧ್ಯೆ ‘ವಿದ್ಯಾಭ್ಯಾಸದ ಬಳಿಕ ನೀವೇನು ಆಗುತ್ತೀರಿ?’ - ಪುಟ್ಟ ಪ್ರಶ್ನೆಯನ್ನು ಗುರುಗಳು ವಿದ್ಯಾರ್ಥಿಗಳಲ್ಲಿ ಕೇಳಿದರು. ‘ಡಾಕ್ಟರ್, ಇಂಜಿನಿಯರ್,.. ಹೀಗೆ ಹಲವು ಎಳೆ ಮನಸ್ಸಿನ ಉತ್ತರಗಳು. ಅಭಿಯ ಸರದಿ ಬಾಂದಾಗ “ನಾನು ಪ್ರಿನ್ಸಿಪಾಲ್ ಆಗಬೇಕು” ಎಂದ.
ಪುಟ್ಟ ಮಕ್ಕಳು ಶಾಲಾ ವಿದ್ಯಮಾನಗಳನ್ನು, ಅಧ್ಯಾಪಕರ ವರ್ತನೆಗಳನ್ನು, ಪಾಠ ಕ್ರಮವನ್ನು ಬಿಂದು ವಿಸರ್ಗ ಬಿಡದೆ ಹೆತ್ತವರಲ್ಲಿ ಒಪ್ಪಿಸುವುದು ಸಹಜ. ಒಂದು ವೇಳೆ ಅಪ್ಪಿತಪ್ಪಿ ಅಧ್ಯಾಪಕರು ತಪ್ಪಾಗಿ ಹೇಳಿದರೂ ಮಗು ಅವರನ್ನು ಅನುಕರಿಸುತ್ತದೆ. ಅದನ್ನು ಹೆತ್ತವರು ಸರಿಮಾಡಿದರೂ ಮಗು ನಿರಾಕರಿಸುತ್ತದೆ.
ಅಭಿಯು ‘ಪ್ರಿನ್ಸಿಪಾಲ್’ಆಗುವ ದೂರದೃಷ್ಟಿಯು ಹೆತ್ತವರ ಮುಖದಲ್ಲಿ ಮುಗುಳ್ನಗು ಮೂಡಿಸಿತ್ತು. ಎಳೆ ವಯಸ್ಸಿನ ಕನಸು ನನಸಾಗುತ್ತೋ ಇಲ್ವೋ ಬೇರೆ ಮಾತು. ಅಭಿಯ ಪ್ರಶ್ನೆಯು ಇಲ್ಲಿಗೆ ನಿಲ್ಲುವುದಿಲ್ಲ. ಶಾಲೆಯಲ್ಲಿ ಆ ಪ್ರಶ್ನೆ. ಮನೆಯಲ್ಲಿ ಅಮ್ಮನಿಗೆ ಇನ್ನೊಂದು ಕಠಿಣ ಪ್ರಶ್ನೆ - “ಅಮ್ಮ.. ಹಾಗಾದರೆ ಕೃಷಿಕ ಆಗುವವರು ಯಾರು?”
ಕೃಷಿ ಕುಟುಂಬದ ಆ ಮಗುವಿನಲ್ಲಿ ಹುಟ್ಟಿದ ಚೋದ್ಯಕ್ಕೆ ಅಪ್ಪಾಮ್ಮ ಮೌನ. ಅಜ್ಜ-ಅಜ್ಜಿ ನಿರುತ್ತರಿ. “ನೀನು ವಾರದ ಐದು ದಿವಸ ಪ್ರಿನ್ಸಿಪಾಲ್ ಆಗುತ್ತಾ, ಮಿಕ್ಕ ಎರಡು ದಿನ ಕೃಷಿಕನಾದರೆ ಆಯಿತು.” ಈ ಉತ್ತರದಿಂದ ಅಭಿ ಖುಷ್.
ಮಗುವಿನ ಪ್ರಶ್ನೆಗೆ ಹೆತ್ತವರು ದಿಗಿಲು. ಉಡಾಫೆ ಮಾತನಾಡಿಲ್ಲ. ಮಗುವನ್ನು ಹಗುರವಾಗಿ ನೋಡಿಲ್ಲ. ಒಂದು ವೇಳೆ ಗದರಿ ಅನಾದರ ಮಾಡುತ್ತಿದ್ದರೆ ಮಗುವಿನೊಳಗಿನ ಚೋದ್ಯ ಮುರುಟುತ್ತಿತ್ತು. ಮತ್ತೆಂದೂ ಚೋದ್ಯಗಳಿಗೆ ಮಾತನ್ನು ಕೊಡುತ್ತಿರಲಿಲ್ಲ.
ತನ್ನ ತಂದೆಯ, ಅಜ್ಜನ ಕೃಷಿ ಕಾಯಕದೊಂದಿಗೆ ಬೆಳೆಯುತ್ತಿದ್ದ ಆ ಏಳರ ಮಗುವಿನೊಳಗೆ ‘ಕೃಷಿಕ ಆಗುವವರು ಯಾರು’ ಪ್ರಶ್ನೆ ಹುಟ್ಟಿತ್ತು. ಕಣ್ಣ ಮುಂದೆಯೇ ಅಡಿಕೆ, ಬಾಳೆ, ತರಕಾರಿ, ಹಲಸು, ಮಾವಿನ ಮರಗಳನ್ನು, ಅದರ ಫಲಗಳನ್ನು ನೋಡುತ್ತಾ, ತಿನ್ನುತ್ತಾ, ಆನಂದಿಸುವ ಮನಸ್ಸಿನೊಳಗೆ ಇಂತಹ ಪ್ರಶ್ನೆಗಳೇ ಮೂಡಬೇಕು.
ನಮ್ಮ ನೆರಳಿನಂತೆ ಮಕ್ಕಳು ಬೆಳೆಯುತ್ತಾರೆ. ಮನೆಯ ಜಗಲಿಯಲ್ಲೇ ಅವರ ಭವಿಷ್ಯದ ಬೀಜಾಂಕುರವಾಗುತ್ತದೆ. ಅದನ್ನು ಪೋಷಿಸುವ ಜವಾಬ್ದಾರಿ ನಮ್ಮದು. ಆದರೆ ಹಾಗಾಗುತ್ತಿಲ್ಲ. ಉನ್ನತ ಶಿಕ್ಷಣದ ಬಳಿಕ ವಿದ್ಯಾರ್ಥಿಯ ಬದುಕು ಬದಲಾಗುತ್ತದೆ.
ಅಭಿಯ ಎಳೆಯ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಯ ಸುತ್ತ ಸುತ್ತಿದಾಗ ಅದರೊಳಗೆ ಹೆತ್ತವರ ಜವಾಬ್ದಾರಿಗಳು ಮಡುಗಟ್ಟಿವೆ. ಮುಖ್ಯವಾಗಿ ಕೃಷಿಯ ಮಧ್ಯದಲ್ಲಿ ಬೆಳೆಯುವ ಮಗುವಿನೊಳಗೆ ನಗರದ ಚಿತ್ರಣ ಕಾಣದು. ನಾವೀಗ ಬಾಲ್ಯದಿಂದಲೇ ತೋರಿಸುವ ಹಠ ತೊಟ್ಟಿದ್ದೇವೆ. ಮುಂದೆ ಪ್ರಿನ್ಸಿಪಾಲ್ ಆಗುತ್ತಾನೋ, ಕೃಷಿಕನಾಗುತ್ತಾನೋ ಎನ್ನುವುದು ಮುಖ್ಯವಲ್ಲ.
‘ಕೃಷಿ ಪ್ರಯೋಜನವಿಲ್ಲ, ಲಾಭವಿಲ್ಲ, ಬದುಕುವುದು ಕಷ್ಟ, ನಮ್ಮ ಕಾಲಕ್ಕೆ ಸಾಕಪ್ಪಾ..’ ಮೊದಲಾದ ಗೊಣಗಾಟಗಳ ಮಧ್ಯೆಯೇ ಎಳೆಯ ಮನಸ್ಸುಗಳು ಬದುಕನ್ನು ಕಟ್ಟಿಕೊಳ್ಳುತ್ತವೆ. ಮಗು ಅಂಗಳಕ್ಕೆ ಹೋದಾಗಲೂ ತಡೆ. ತೋಟಕ್ಕೆ ಇಳಿದಾಗಲೂ ಅಡ್ಡಿ. ಗದ್ದೆಗೆ ಇಳಿದು ಮೈಕೈ ಕೆಸರು ಮಾಡಿಕೊಂಡಾಗಲೂ ಮುನಿಸು. ಹೆತ್ತವರ ಚರ್ಯೆ ನೋಡುತ್ತಾ ಬೆಳೆಯುವ ಮನಸ್ಸಿಗೆ ಕೃಷಿ ಎಂದರೆ ‘ಸಮಸ್ಯೆಗಳ ಗೂಡು, ಬದುಕಲು ಸಾಧ್ಯವಿಲ್ಲ’ವೆಂಬ ಮನಸ್ಥಿತಿ ಬೆಳೆಯುತ್ತಿರುತ್ತದೆ. ಮುಂದೆ ಹಸಿರು, ಕೃಷಿ ಅಂದಾಗ ಅನಾದರದ ಭಾವ ಮೂಡಿದರೂ ಆಶ್ಚರ್ಯವಿಲ್ಲ.
ಆದರೆ ನಮ್ಮ ಮುಂದೆ ಅನೇಕ ಹೆತ್ತವರು ತಮ್ಮ ಮಕ್ಕಳನ್ನು ಬಾಲ್ಯದಿಂದಲೇ ಕೃಷಿಯ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಕೃಷಿಯ ಬಾಲ್ಯ, ಶಾಲೆಯ ಬದುಕು ಜತೆಜತೆಯಾಗಿ ಸಾಗುತ್ತಿರುತ್ತದೆ. ಇವರು ಉನ್ನತ ವಿದ್ಯಾಭ್ಯಾಸದ ಬಳಿಕ ಕೃಷಿಕರಾಗದಿದ್ದರೂ ಕೃಷಿಯ ಕುರಿತು ಅನಾದರ ಭಾವ ತಾಳದೆ ಗೌರವದಿಂದ ಕಾಣುತ್ತಿರುವುದಕ್ಕೆ ಉದಾಹರಣೆ ಬೇಕಾದಷ್ಟಿದೆ.
ಅಭಿಯ ಮನಸ್ಸಿನೊಳಗೆ ಹುಟ್ಟಿದ ಪ್ರಶ್ನೆಯೊಳಗೆ ಮಗುತನವಿಲ್ಲ. ಅದರೊಳಗೆ ಭವಿಷ್ಯದ ದೊಡ್ಡ ಬದುಕಿದೆ. ಅದಕ್ಕೆ ಪ್ರವೇಶ ಮಾಡಲು ಈ ಪ್ರಶ್ನೆ ಒಂದು ಕಿರು ಹೆಜ್ಜೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿ.. ತರಗತಿಗಳಲ್ಲಿ ರ್ಯಾಂಕ್ ಪಡೆದ, ಪಡೆಯುವ ‘ಪ್ರತಿಭಾವಂತರ’
ಮಾಧ್ಯಮಗಳಿಗೆ ತಮ್ಮ ಮನಸ್ಸನ್ನು ಹಂಚಿಕೊಳ್ಳುವಾಗ ಅಭಿ ನೆನಪಾಗಬೇಕು!
ರ್ಯಾಂಕ್ಗಳು ಬಂದಾಗ ‘ನಾನು ಅಧ್ಯಾಪಕನಾಗುತ್ತೇನೆ, ‘ನಾನು ಕೃಷಿಕನಾಗುತ್ತೇನೆ’ ಎಂದವರನ್ನು ಕಂಡಿಲ್ಲ. ಅವರು ಹಾಗೆ ಹೇಳಬೇಕೆಂದೇನೂ ಇಲ್ಲ. ಪ್ರಜಾಪ್ರಭುತ್ವ ರಾಷ್ಟ್ರವಲ್ವಾ. ಇಲ್ಲಿ ಸ್ವಾತಂತ್ರ್ಯವು ನಂನಮ್ಮ ನೇರಕ್ಕೆ ವಿಶ್ಲೇಷಿಸಲ್ಪಡುತ್ತದೆ. ಇಂತಹ ಹೊತ್ತಲ್ಲಿ ನನಗಂತೂ ಅಭಿಯ ಪ್ರಶ್ನೆಯೊಳಗೆ ಒಳತೋಟಿ ಕಾಣಿಸುತ್ತಿದೆ.
ಊರು ಸೂರು / 25-11-018
No comments:
Post a Comment