Saturday, July 13, 2019

ಬದುಕಿನ ಅಂತಿಮ ತಾಣ



ಒಂದಲ್ಲ, ಐದು ಶವಗಳು ಕಾಯುತ್ತಿವೆ! ದಹನದ ಸರದಿಗಾಗಿ. ಸಂಬಂಧಿಕರು ದುಃಖತಪ್ತರಾಗಿ ಅಳುಮೋರೆಯಲ್ಲಿದ್ದರೆ, ಪ್ರವಾಸಿಗರಿಗೆ ಅದು ಮಾಮೂಲಿ. ಅವರ ಪಾಡಿಗೆ  ಸಂಚರಿಸುತ್ತಿರುತ್ತಾರೆ. ರುದ್ರಭೂಮಿಯ ನಿರ್ವಾಹಕನಿಗೆ ಮಾತ್ರ ಕೈತುಂಬಾ ಕೆಲಸ.

ಕಾಠ್ಮಂಡು ವಿಮಾನ ನಿಲ್ದಾಣದಿಂದ ಅನತಿ ದೂರದಲ್ಲಿ ಬಂಧು ಕಾರಂತರ ವಸತಿ. ರಾತ್ರಿ ಹತ್ತು ಗಂಟೆಯಾಗಿರಬಹುದು. ಆಗಲೇ ಒಂದೆರಡು ಶವ ದಹನವಾಗುತ್ತಿತ್ತು. “ಇದು ಇಲ್ಲಿ ಮಾಮೂಲಿ. ಶಿವ ಸ್ಮಶಾನವಾಸಿಯಲ್ವಾ. ನಾಳೆ ಹತ್ತಿರದಿಂದ ವೀಕ್ಷಿಸೋಣಎನ್ನುತ್ತಾ ಕಾರಂತರು ತಂಡವನ್ನು ಬರಮಾಡಿಕೊಂಡರು.

ನಾಲ್ಕು ವರುಷದ ಹಿಂದಿನ ಭೂಕಂಪದ ವರದಿಗಳಲ್ಲಿ ಪಶುಪತಿನಾಥನ ಸನಿಹವಿರುವ ರುದ್ರಭೂಮಿಯ ವಿಚಾರಗಳನ್ನು ಓದಿದ್ದೆ. ಒಂದಷ್ಟು ಮಾಹಿತಿಗಳನ್ನು ಕಲೆಹಾಕಲು ಭಾಷೆ, ಸಮಯ ಮತ್ತು ಅಳುಕು ಅಡ್ಡಿಯಾಗಿತ್ತು. ಇಲ್ಲಿ ಬದುಕಿನ ಅಂತಿಮ ಪಯಣವಾದರೆಸದ್ಗತಿಎನ್ನುವ ನಂಬಿಕೆ.

ಅಂದು ರುದ್ರಭೂಮಿ ಒಂದು ವಿಭಾಗವು ಅಲಂಕೃತಗೊಂಡಿತ್ತು! ರುದ್ರಭೂಮಿಯನ್ನು ಅಲಂಕಾರ ಮಾಡುತ್ತಾರೆಯೇ? ಪ್ರಶ್ನೆಯೂ ರಾಚಿತು. ಆಢ್ಯ ರಾಜಕೀಯ ವ್ಯಕ್ತಿಯೊಬ್ಬರ ದಹನಕ್ಕಾಗಿ ನೂರಾರು ಜನ ಆಗಮಿಸಿದ್ದಾರೆ. ಮತ್ತೊಂದೆಡೆ ರಾಷ್ಟ್ರ ಗೌರವದ ಆಡಳಿತ ವ್ಯವಸ್ಥೆಗಳು. ಕುಶಾಲು ತೋಪುಗಳ ಸಿಡಿತ. ವಾದ್ಯಗಳ ಮೊಳಗುವಿಕೆ. ಗೌಜಿಯ ವಾತಾವರಣ. ಕ್ಷಣಕ್ಕೆ ಎಲ್ಲರೂ ವೀಕ್ಷಕರಷ್ಟೇ.

ಮರುದಿವಸದ ಮತ್ತೊಂದು ದೃಶ್ಯ ಗಮನಿಸಿ. ಎಳೆವಯಸ್ಸಿನ ತರುಣ ಮರಣಿಸಿದ್ದ. ಶವದ ದಹನದ ಪೂರ್ವ ಕ್ರಿಯೆ ನಡೆಯುತ್ತಿತ್ತು. ಮರಣಿಸಿದ ವ್ಯಕ್ತಿಯ ಪತ್ನಿ ಗೋಳೋ ಎಂದು ಅಳುತ್ತಿದ್ದರು. ಅವಳನ್ನು ಸಮಾಧಾನಿಸುವ ಒಂದಷ್ಟು ಮಂದಿ. ಕಾಷ್ಠಕ್ಕೆ ಬೆಂಕಿ ಸ್ಪರ್ಶವಾಗುವಾಗ ಅಳು ತಾರಕಕ್ಕೆ ಏರಿತು! ಉಳಿದ ಸಂಬಂಧಿಕರು ದುಃಖ ತಡೆಯಲಾಗದೆ ಅಳುತ್ತಿದ್ದರು.

ಘಟನೆಯನ್ನು ಇಲ್ಲಿ ಉಲ್ಲೇಖಿಸಲು ಕಾರಣವಿದೆ. ಮರಣದ ಮನೆ ಯಾ ಸೂತಕದ ಮನೆಯ ಅಳು ಹೃದಯವಿದ್ರಾವಕವಾಗಿರುತ್ತದೆ. ಸೂತಕದ ಮನೆಗೆ ಹೋದರೆ ಮಿಂದ ಬಳಿಕವೇ ನಂನಮ್ಮ ಮನೆಯನ್ನು ಪ್ರವೇಶಿಸಬೇಕೆನ್ನುವುದು ಶಾಸ್ತ್ರ. ಅಲ್ಲಿ ಅಪರ ಕ್ರಿಯೆಗಳು ನಡೆಯುವ ತನಕ ಪಾನೀಯ, ಉಪಾಹಾರ ಸೇವನೆ ನಿಷಿದ್ಧ. ಇದು ಹಿರಿಯರು ಹಾಕಿದ ಕಟ್ಟುಪಾಡು.

ಕಾಠ್ಮಂಡುವಿನ ಅಳುವಿನ ದೃಶ್ಯ ನೋಡುತ್ತಾ ಇದ್ದಂತೆಮರಣದ ಮನೆಯಕೆಲವು ಸನ್ನಿವೇಶಗಳು ಹಾದುಹೋದುವು. ‘ಬದುಕಿದ್ದರು. ಈಗ ಮರಣಿಸಿದ್ದಾರೆಎನ್ನುವ ಸಂಬಂಧವಷ್ಟೇ. ಎಲ್ಲರ ಕೈಗಳಲ್ಲಿ ಮೊಬೈಲುಗಳು ಕುಣಿಯುತ್ತಿರುವ ಕಾಲಘಟ್ಟದಲ್ಲಿ ಮರಣದ ಮನೆಯಲ್ಲೂ ಮೊಬೈಲ್ ಆಫ್ ಆಗುವುದಿಲ್ಲ. ‘ಅಳುಎನ್ನುವ ಪದದ ಅರ್ಥವೇ ಗೊತ್ತಿಲ್ಲದ ಭಾವಶುಷ್ಕತೆಯ ಮನಸ್ಸುಗಳಲ್ಲಿ ಅಳು ಬಿಡಿ, ಸ್ಪಂದನವೂ ಸಿಗದು.

ಒಮ್ಮೆ ಹೀಗಾಯಿತು. ಹಿರಿಯರೊಬ್ಬರು ಮರಣಿಸಿದ್ದರು. ಮನೆಯಿಂದ ರುದ್ರಭೂಮಿಗೆ ಸುಮಾರು ಒಂದು ಕಿಲೋಮೀಟರ್ ದೂರ. ಹಿರಿಯರು ಉಸಿರು ಕಳೆದುಕೊಂಡು ತಮ್ಮ ನಾಲ್ವರು ಪುತ್ರರತ್ನರ ಹೆಗಲೇರಿದ್ದರು. ಸ್ವಲ್ಪ ಹೊತ್ತಾಗಿರಬಹುದಷ್ಟೇ. ಇಬ್ಬರ ಜೇಬಿನಲ್ಲಿದ್ದ ಮೊಬೈಲ್ ರಿಂಗಣಿಸಿತು. ಒಂದು ಕೈಯಲ್ಲಿ ಚಟ್ಟ, ಮತ್ತೊಂದು ಕೈಯಲ್ಲಿ ಮೊಬೈಲ್, ಸಾಗಿತು ಶವಯಾತ್ರೆಯ ಮೆರವಣಿಗೆ! ಅವರನ್ನು ಅನುಸರಿಕೊಂಡು ಬರುವವರ ಹಣೆಯಲ್ಲಿ ನೆರಿಗೆಗಳು ಮೂಡಿದುವು. ಹೆಚ್ಚಾಗಿ ಮಾತುಗಳು ಮೌನಕ್ಕೆ ಜಾರುವ ಹೊತ್ತಿನಲ್ಲಿ ಮೊಬೈಲ್ ಅವತಾರಗಳು ಭಾವಗಳನ್ನು ನಾಶ ಮಾಡಿತ್ತು. ಒಂದರ್ಥ ಗಂಟೆ ಮೊಬೈಲ್ ಆಫ್ ಮಾಡದಿದ್ದರೆ ಕಳೆದುಕೊಳ್ಳುವುದೇನಿಲ್ಲ. ಇದೆಲ್ಲಾ ಸ್ವ-ನಿಯಂತ್ರಣ, ಸ್ವ-ಶಿಸ್ತಿನ ಭಾಗಗಳು.

ಸರಿ, ಕಾಠ್ಮಂಡುವಿಗೆ ಮುಖ ಮಾಡೋಣ. ರುದ್ರಭೂಮಿಯ ದಹನದ ಧೂಮ ನಿರಂತರ. ಅಲ್ಲೇ ಹರಿಯುವ, ಭಾಗ್ಮತಿ ನದಿಯು ಜನವರಿಯಲ್ಲೇ ಹರಿಯುವ ವೇಗವನ್ನು ಕಡಿಮೆಗೊಳಿಸಿದ್ದಳು! ದಹನದ ಅಟ್ಟಳಿಗೆಯಿಂದ ಅರ್ಧಸುಟ್ಟ ಕಟ್ಟಿಗೆ, ಇತರ ಶೇಷಗಳನ್ನು ನೇರವಾಗಿ ನದಿಯತ್ತ ತಳ್ಳುವ ದೃಶ್ಯಕ್ಕೆ ಬೇರೆ ಸಾಕ್ಷಿಗಳು ಬೇಕಿಲ್ಲ. ಇದರಿಂದಾಗಿ ಹರಿವು ಅಷ್ಟಕ್ಕಷ್ಟೇ. ಅರೆಸುಟ್ಟ ಕಟ್ಟಿಗೆಗಳನ್ನು ಮತ್ತೆ ದಹನ ಕಾರ್ಯಕ್ಕೆ ಬಳಸುತ್ತಿಲ್ಲ.  

ನದಿಯ ಶುಚಿತ್ವಕ್ಕೆ ಮತ್ತು ದಹನಶೇಷವನ್ನು ವಿಸರ್ಜಿಸಲು ಪ್ರತ್ಯೇಕ ಪರ್ಯಾಯ ವ್ಯವಸ್ಥೆ ಬೇಕು. ಆದರದು ಸಾಧ್ಯವಾ? ನದಿಯಂತೂ ನಿರಂತರ ಹರಿಯುವಂತಾಗಬೇಕು. ಯಾತ್ರಾರ್ಥಿಗಳಿಗೆ ಇದರ ಜಲವೂ ತೀರ್ಥ ತಾನೆ. ಈಗ ಮೀಯುವುದು ಬಿಡಿ, ಪ್ರೋಕ್ಷಣೆಗೂ ನೀರು ಆಗದು.” ಆರಕ್ಷಕರೊಬ್ಬರು ಯಥಾರ್ಥವನ್ನು ಹಂಚಿಕೊಂಡರು.

ಕಾಠ್ಮಂಡು ಕಣಿವೆಯಲ್ಲಿ ಹುಟ್ಟಿದ ಭಾಗ್ಮತೀ ನದಿ ಮುಂದಕ್ಕೆ ಹರಿದು ದೇವನದಿಯಾದ ಗಂಗೆಯನ್ನು ಸೇರುತ್ತಾಳೆ.  ಹಾಗಾಗಿ ನದಿ ಗಂಗೆಗೆ ಸಮಾನ. ಗಂಗೆಯ ತಟದಲ್ಲಿ ಅಂತ್ಯಸಂಸ್ಕಾರ ಮಾಡಿದರೆ ಮುಕ್ತಿ ಎಂಬ ನಂಬುಗೆ. ಇಲ್ಲಿ ಒಂದೆಡೆ ಶವಸಂಸ್ಕಾರದ ಪ್ರಕ್ರಿಯೆಗಳು ಆಗುತ್ತಿದ್ದಂತೆ, ಮತ್ತೊಂದೆಡೆ ಅಪರ ಸಂಸ್ಕಾರಗಳೂ ನಡೆಯುತ್ತಿರುತ್ತದೆ. ಒಂದು ಪ್ರದೇಶದ ಸ್ಥಳೀಯತೆಯು ಅಲ್ಲಿನ ಸಾಂಸ್ಕøತಿಕ ಉಪಾಧಿ. ಅದನ್ನು ಸಂರಕ್ಷಿಸುವ ಹೊಣೆ ಆಡಳಿತದ್ದು. ಜತೆಗೆ ನಾಗರಿಕರದ್ದು ಕೂಡಾ. ಇಷ್ಟೆಲ್ಲಾ ಇದ್ದರೂ ದೇವಾಲಯದ ಪರಿಸರದ ಸ್ವಚ್ಛತೆಯು ಶ್ಲಾಘನೀಯ.       
 
ಎರಡು, ಮೂರು ಡಿಗ್ರಿಯ ಚಳಿಯಲ್ಲಿ ಬರಿಗಾಲಿನಲ್ಲಿ ನಡೆಯುತ್ತಾ ದೇವರನ್ನು ಸಂದರ್ಶಿಸುವುದು ಪುಳಕದ ಕ್ಷಣ. ಬದುಕಿನ ಅಪೂರ್ವವಾದ ಒಂದು ಅನುಭವದ ಬುತ್ತಿ. ರುದ್ರಭೂಮಿಯ ದೃಶ್ಯವಂತೂ ಅಪೂರ್ವ. ಅದನ್ನು ನೋಡುವಲ್ಲಿ ಮುಜುಗರ ಬೇಕಿಲ್ಲ. ಯಾಕೆ ಹೇಳಿ? ನಮಗೂ ನಾಳೆ ಅದು ಬದುಕಿನ ಅಂತಿಮ ತಾಣ.

 ಊರು ಸೂರು /  19-5-2019

No comments:

Post a Comment