ನೇಪಾಳದ ಪ್ರಸಿದ್ಧ ಪ್ರವಾಸಿ ತಾಣ ಮನಕಾಮನ. ಇಲೆಕ್ಟಿಕ್ ಕಾರಿನಲ್ಲಿ ಪಯಣಿಸಿ ದೇವಳ ತಲುಪಬೇಕು. ಹೀಗೆ ಕಾರಿನಲ್ಲಿ ಪಯಣಿಸುತ್ತಿದ್ದಾಗ ಕೇಳಭಾಗದಲ್ಲಿ ಮೆಟ್ಟಿಲು ಗದ್ದೆಗಳು! ಏರುತಗ್ಗಿನ ಪ್ರದೇಶವನ್ನು ಅಲ್ಲಲ್ಲಿಗ ಸರಿಸಮ ಮಾಡಿಕೊಂಡು ತಟ್ಟುಗಳಲ್ಲಿ ಭತ್ತದ ಕೃಷಿ, ತರಕಾರಿ ಬೆಳೆಯುತ್ತಿರುವುದು ಅನುಭವಕ್ಕೆ ಬಂತು.
ನೇಪಾಳದ ನಾಲ್ಕೂ ಬದಿ ಹಿಮಾಲಯ ಪರ್ವತ ಶಿಖರಗಳು. ಸಮತಟ್ಟು ಪ್ರದೇಶ ವಿರಳ. ಅಗಲ ಕಿರಿದಾದ ಮೆಟ್ಟಿಲು ಗದ್ದೆಗಳು. ಹೊಟ್ಟೆ ತಂಪು ಮಾಡಲು ಶ್ರಮದ ಬದುಕನ್ನು ಆತುಕೊಂಡವರ ಸಂಖ್ಯೆ ಬಹುಶಃ ಶೇ. 80 ಮೀರಬಹುದು. ಕಾಠ್ಮಂಡು ಮತ್ತು ಅಂತಹುದೇ ಕೆಲವು ಪಟ್ಟಣಗಳ ಆಚೀಚೆ ಕತ್ತು ಹೊರಳಿಸಿದರೆ ಶ್ರಮ ಬದುಕಿನ ಚಿತ್ರಣಗಳೇ ತುಂಬಿಕೊಂಡಿವೆ.
ಇಲ್ಲಿನ ಪ್ರಮುಖ ಬೆಳೆಗಳು ಭತ್ತ, ಜೋಳ, ಗೋಧಿ, ಸಜ್ಜೆ, ಸೋಯಾ, ಅಲಸಂಡೆ... ಹೀಗೆ. ಗದ್ದೆ ಬೇಸಾಯದಲ್ಲಿ ವರುಷಕ್ಕೆ ಮೂರು ಬೆಳೆ. ಎಲ್ಲೆಡೆ ಬಹುಬೆಳೆ ಪದ್ಧತಿಯ ಅಳವಡಿಕೆ ಕಾಣಬಹುದು. ಗದ್ದೆಗಳಲ್ಲಿ ದ್ವಿದಳ ಧಾನ್ಯಗಳ ಬೆಳೆ. ಕನ್ನಾಡಿಗೆ ಹೋಲಿಸಿದರೆ ಭತ್ತದ ಜತೆ ದ್ವಿದಳ ದಾನ್ಯಗಳ ಸಹ ಕೃಷಿ ಹೊಸದೇ. ಹಸಿರೆಲೆ ಗೊಬ್ಬರಗಳ ಬಳಕೆ ಹೆಚ್ಚು. ಪಟ್ಟಣ ಪ್ರದೇಶಗಳ ವ್ಯಾಪ್ತಿಯ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೇರಳವಿದೆ.
“ನೇಪಾಳದ ಭೌಗೋಳಿಕ ಲಕ್ಷಣವೇ ಹಾಗೆ. ವಾಹನಗಳು ಓಡಾಡಲು ಆಗದಂತಹ ಪರ್ವತ ಸಾಲು. ಅಲ್ಲಲ್ಲಿ ಚದುರಿರುವ ಪುಟ್ಟ ಪುಟ್ಟ ಹಳ್ಳಿಗಳ ಜನರಿಗೆ ಪಟ್ಟಣ ತಲಪುವುದೇ ಕಷ್ಟ. ಜೀವನಾವಶ್ಯ ವಸ್ತುಗಳನ್ನು ತರುವುದೇ ಸವಾಲು. ಈ ಅನಿವಾರ್ಯತೆಯಿಂದಾಗಿ ಜನರು ಬೇಕಾದ ಎಲ್ಲಾ ಆಹಾರ ಪದಾರ್ಥಗಳನ್ನೂ ತಾವೇ ಬೆಳೆಯುತ್ತಾರೆ.”
“ಮುಖ್ಯ ಬೆಳೆ ಭತ್ತ. ಗದ್ದೆಯೊಳಗೆ ಮತ್ತು ಬದುಗಳ ಬದಿಯಲ್ಲಿ ವಿವಿಧ ಜಾತಿಯ ದ್ವಿದಳ ಧಾನ್ಯ ಕೃಷಿ, ಅಲಸಂಡೆ, ಸೋಯಾಬೀನ್; ತರತರದ ಅವರೆ, ಕಡಲೆ, ಬಟಾಣಿ, ಪಚ್ಚೆ ಹೆಸರು ಮೊದಲಾದ ಕಾಳುಗಳು; ಅರಶಿನ, ಶುಂಠಿ, ಅರಾರೂಟ್ ಮೊದಲಾದ ಗೆಡ್ಡೆಗಳನ್ನು ನೇಜಿ ನೆಟ್ಟ ಬಳಿಕ ಬದಿಗಳಲ್ಲಿ ಬೆಳೆಯುತ್ತಾರೆ.” ನೇಪಾಳದ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿದ ಡಾ.ಆಶ್ವಿನಿ ಕೃಷ್ಣಮೂರ್ತಿಯವರು ಅಲ್ಲಿನ ಕೃಷಿಕ್ರಮಗಳನ್ನು ದಾಖಲಿಸುತ್ತಾರೆ.
ಚಿಕ್ಕ ಚಿಕ್ಕ ಗದ್ದೆಗಳಾದ್ದರಿಂದ ಉಳುಮೆಯಲ್ಲಿ ಯಾಂತ್ರೀಕರಣ ಬಂದಿಲ್ಲ. ಎತ್ತು, ಕೋಣಗಳನ್ನು ಒಯ್ಯಲೂ ತ್ರಾಸ. ಮಾನವ ಶ್ರಮದಿಂದಲೇ ಉಳುಮೆ ಮಾಡಬೇಕು. ಅಲ್ಲಿನ ಶ್ರಮದ ಕೆಲಸಗಳನ್ನು ಊಹಿಸಿದಾಗಲೇ ಬೆವರು ಮೂಡುತ್ತದೆ! ಭತ್ತ ಕಟಾವ್ ಆಗುವಾಗ ದ್ವಿದಳ ಧಾನ್ಯಗಳೂ ಸಿದ್ಧವಾಗಿರುತ್ತವೆ. ಸಾಗಾಟ ತ್ರಾಸವಾಗಿರುವುದರಿಂದ ಹಳ್ಳಿ ಪ್ರದೇಶದಲ್ಲಿ ತಮಗೆ ಬೇಕಾದಂತಹ ಅನ್ನವನ್ನು ತಾವೇ ಬೆಳೆಯುವ ಅನಿವಾರ್ಯತೆಯಿದೆ.
ನಗರದಲ್ಲಿ ಕೆಲವೆಡೆ ತಾರಸಿ ಕೃಷಿ ಎಬ್ಬಿಸಿದ ಹಸಿರುಪ್ರಿಯರಿದ್ದಾರೆ. ವಿವಿಧ ತರಕಾರಿಗಳನ್ನು ಬೆಳೆದು ತಾವೂ ತಿನ್ನುವುದಲ್ಲದೆ ಆಪ್ತೇಷ್ಟರಿಗೂ ಹಂಚುತ್ತಾರೆ. ಅಡುಗೆ ತ್ಯಾಜ್ಯ, ಎರೆಗೊಬ್ಬರ.. ಮೊದಲಾದವುಗಳನ್ನು ಮನೆಯಲ್ಲೇ ಮಾಡಿಟ್ಟುಕೊಂಡು ಕೃಷಿಗೆ ಬಳಸುತ್ತಾರೆ. ಕಾಠ್ಮಂಡುವಿನಂತಹ ಪ್ರವಾಸಿ ಕ್ಷೇತ್ರದಲ್ಲಿ ಕಾಂಚಾಣದ ಸದ್ದಿಗೆ ಮಹತ್ತಿರುವುದರಿಂದ ಇಂತಹ ಚಿಕ್ಕ ಪುಟ್ಟ ಸಾಧನೆಗಳು ಸದ್ದಾಗುವುದಿಲ್ಲ.
ಕಾಠ್ಮಂಡು ನಗರದ ತರಕಾರಿ ಮಾರುಕಟ್ಟೆಯೊಳಗೆ ಒಂದೆಡೆ ‘ಬ್ರುಕೋಲಿ ‘ ಗಮನ ಸೆಳೆಯಿತು. “ಇದು ಹೂಕೋಸಿಗೆ ಪೈಂಟ್ ಬಳಿದ ಹಾಗಿದೆಯಲ್ಲಾ,” ಜತೆಗಿದ್ದ ರಾಮ್ಪ್ರಸಾದರ ಚಟಾಕಿಗೆ ಅಲ್ಲಿನ ವ್ಯಾಪಾರಿ ಚುರುಕಾದರು. ಅವರ ಭಾಷೆ ನಮಗೆ ಬಾರದು. ನಮ್ಮ ಭಾಷೆ ಅವರಿಗೆ ಅರ್ಥವಾಗದು. ‘ಬ್ರುಕೋಲಿ’ ಎಂದಷ್ಟೇ ತಿಳಿಯಿತು. ಫಕ್ಕನೆ ನೋಡಿದಾಗ ಬೋನ್ಸಾಯ್ ವೃಕ್ಷದಂತೆ ಕಾಣುತ್ತದೆ. ಇದನ್ನು ಹಸಿರು ಹೂಕೋಸು ಎನ್ನೋಣ.
ಬ್ರುಕೋಲಿ ಮನದೊಳಗೆ ಅಂಟಿತು. ಗೂಗಲ್ ಸರ್ಚ್ ಮಾಡಿದಾಗ ಕುತೂಹಲಕರ ಮಾಹಿತಿ ಸಿಕ್ಕಿತು. “ಇದರ ಮೂಲ ಇಟಲಿ. ಇದರಲ್ಲಿ ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಅಂಶಗಳಿವೆ. ಹೃದಯ ಸಂಬಂಧಿ ಕಾಯಿಲೆಗಳು ಕೂಡಾ ನಿಯಂತ್ರಣಕ್ಕೆ ಬರುತ್ತದೆ ಎಂದು ಸಂಶೋಧನೆಗಳು ಹೇಳಿವೆ”
ನಮ್ಮೂರಿನ ಗೆಣಸನ್ನು ಹೋಲುವ ಗೆಡ್ಡೆಯತ್ತ ಆಸಕ್ತಿಯುಂಟಾಯಿತು. ಅಲ್ಲಿ ಅದಕ್ಕೆ ‘ತರೂಳ್’ ಎನ್ನುವ ಹೆಸರು. ಹೊರ ಭಾಗ ಗೆಣಸನ್ನು ಹೋಲುತ್ತದೆ. ಒಳ ತಿರುಳು ನೇರಳೆ ವರ್ಣ. ವಿಶೇಷ ಖಾದ್ಯಗಳಿಗೆ ಬಳಕೆ. ಒಂದೆಡೆ ತರಕಾರಿಗಳ ಮಧ್ಯೆ ಅರ್ಧ ಭಾಗ ಮಾಡಿಟ್ಟ ಹಲಸು ‘ನಾನು ಇಲ್ಲೂ ಇದ್ದೇನೆ’ ಎಂದು ನಕ್ಕಿತು! ವ್ಯಾಪಾರಿ ‘ದಿಸ್ ಇಸ್ ಜ್ಯಾಕ್’ ಎಂದು ಪರಿಚಯ ಮಾಡಿಕೊಟ್ಟ!
ನೇಪಾಳದ ಕೃಷಿ, ಆಹಾರ ಬೆಳೆಗಳು ತಲೆಯೊಳಗೆ ಸುತ್ತುತ್ತಿದ್ದಂತೆ ಒಂದು ಮಾಹಿತಿ ವಾಟ್ಸಪಿನಲ್ಲಿ ಹರಿದಾಡಿತು, “ಫೆಬ್ರವರಿಯಲ್ಲಿ (ಕಳೆದ ತಿಂಗಳು) ನಡೆಯುವ ಪ್ರೇಮಿಗಳ ದಿನವನ್ನು ಆಚರಿಸಲು ಭಾರತದ ಗುಲಾಬಿ ಹೂಗಳಿಗೆ ಭಾರೀ ಬೇಡಿಕೆ. ಕಳೆದ ವರುಷ ಒಂದೂಕಾಲು ಕೋಟಿ ರೂಪಾಯಿ ಮೌಲ್ಯದ ಗುಲಾಬಿಗಳನ್ನು ನೇಪಾಳವು ಆಮದು ಮಾಡಿಕೊಂಡಿತ್ತು. ಈ ಬಾರಿ ಒಂದೂವರೆ ಕೋಟಿಗೆ ಏರಬಹುದು.”(Photo : website)
ಊರುಸೂರು / 17-3-2019
No comments:
Post a Comment