Saturday, July 13, 2019

ಹಿಮಾಲಯದ ಬೆಳ್ನೊರೆ ಕಾಣಲಾಗಲಿಲ್ಲ!


ನೇಪಾಳದ ಪೋಕರಾ ಸುಂದರ ಪ್ರದೇಶ. ಕಾಠ್ಮಂಡುವಿನಿಂದ ಸುಮಾರು ಇನ್ನೂರು ಕಿಲೋಮೀಟರ್. ಕಣಿವೆ ಮಾರ್ಗದಲ್ಲಿ ಬಸ್ ಪ್ರಯಾಣ ರೋಚಕ. ಕೆಲವೆಡೆ ಸಿಂಗಲ್ ರೋಡ್. ಇನ್ನೂ ಕೆಲವೆಡೆ ದ್ವಿಪಥ. ಸರಕುಗಳನ್ನು ಸಾಗಿಸುವ ಘನ ವಾಹನಗಳ ಸಂಖ್ಯೆ ಹೆಚ್ಚು. ಭಾರತದಿಂದ ಕಾಠ್ಮಂಡು ಸಂಪರ್ಕಿಸುವ ಮಾರ್ಗಗಳಲ್ಲಿ ಇದೂ ಒಂದು. ಗಂಡಕೀ ನದಿಯ ತಟದಲ್ಲಿರುವ ಪೋಕರಾ ಪ್ರವಾಸಿಗಳ ಊರು! ಅನ್ನಪೂರ್ಣ ಪರ್ವತದ ತಪ್ಪಲಲ್ಲಿದೆ. ಸಾಗರ ಮಟ್ಟದಿಂದ 3800 ಅಡಿ ಎತ್ತರ

ಹಿಂದೆ ರಾಜ ಮಹಾರಾಜರು ಚಳಿಗಾಲವನ್ನು ಇಲ್ಲಿ ಕಳೆಯುತ್ತಿದ್ದರಂತೆ. ಪ್ರಾಚೀನ ಮಂದಿರಗಳಿಂದ ಆವೃತವಾದ ಪೋಕರಾವು ಹಿಮಾಲಯದ ಚೆಲುವನ್ನು ಕಣ್ತುಂಬಿಕೊಳ್ಳುವ ಪ್ರದೇಶ. ಬೆಳ್ನೊರೆಯಂತೆ ಕಾಣುವ ಹಿಮವಂತನ ಸೊಬಗನ್ನು ಸನಿಹದಿಂದ ನೋಡುವ ಅವಕಾಶಕ್ಕೆ ಕಾತರ. ಧೌಲಗಿರಿ, ಅನ್ನಪೂರ್ಣ, ಹಿಯನ್ಚುಲಿ, ಮಚ್ಚಪುಚ್ಚೆರೆ.. ಮೊದಲಾದ ಪರ್ವತಗಳಿಂದಾವೃತವಾಗಿದೆ. ಚಾರಣಿಗರಿಗೆ, ಪರ್ವತಾರೋಹಿಗಳಿಗೆ ಹಿಮಾಲಯ ಒಂದು ಮಂತ್ರ.   

ಪೋಕರಾಗೆ ಇನ್ನೇನು ಒಂದೆರಡು ಗಂಟೆಯಷ್ಟೇ. ಮೋಡ ದಟ್ಟೈಸಿ ಮಳೆಯ ಸೂಚನೆ. “ಯಾವಾಗ ಮಳೆ ಬರುತ್ತೆ ಅಂತ ಹೇಳಲಾಗದು. ಮಳೆ ಬಂದರೆ ಪ್ರವಾಸದ ಮೂಡ್ ಹಾಳಾಗುತ್ತದೆ.” ಎಂದರು ತಂಡದಲ್ಲಿದ್ದ ಗೀತಾ ಕಾರಂತ. ಪೊಕರಾ ತಲುಪುತ್ತಿದ್ದಂತೆ ಮಳೆಯ ಸೂಚನೆ ದಟ್ಟವಾಯಿತು. ಹಿನ್ನೀರಿನ ದೊಡ್ಡ ಸರೋವರನ್ನು ನೋಡುತ್ತಾ ಇದ್ದಂತೆ ತುಂತುರು ಮಳೆಯ ಸಿಂಚನ.

ಅಂದು ರಾತ್ರಿ ಮಳೆ ಸುರಿಯಿತು. ವಿದ್ಯುತ್ ಕೈಕೊಟ್ಟಿತ್ತು. ವಸತಿ ಗೃಹ ತಲಪುವಾಗ ಚಳಿಯ ತೀವ್ರತೆಯಿಂದ ಮನಸ್ಸು, ದೇಹ ಮುದುಡಿತ್ತು. ಹೋಟೆಲಿನಲ್ಲಿವೈಫೈ ಫ್ರೀಫಲಕ ಅಂಟಿಸಿದ್ದರು. ಎಲ್ಲರೂ ಅಲರ್ಟ್. ಮೊಬೈಲ್ ಸ್ವಿಚ್ ಆನ್ ಆಯಿತು. ಒಂದೈದು ನಿಮಿಷವಷ್ಟೇ. ಮತ್ತೆ ಮಂಗಮಾಯ! ವಸತಿ ಗೃಹದ ಯಾವುದೋ ಒಂದು ಕೋನದಲ್ಲಿ ರೇಂಜ್ ಸಿಗುತ್ತಿತ್ತಷ್ಟೇ. ಸ್ವಲ್ಪ ಸಮಯ ಪ್ರವಾಸದ ಉದ್ದೇಶ, ನಿರೀಕ್ಷೆ, ಮಾತುಕತೆಗಳನ್ನು ಮೊಬೈಲ್ ಕಸಿದಿತ್ತು

ಪೋಕರಾದಫೆವಾ ಸರೋವರಪ್ರಸಿದ್ಧ. ಸುಮಾರು ನಾಲ್ಕೈದು ಕಿಲೋಮೀಟರ್ ವ್ಯಾಪ್ತಿ. ಎರಡು ಕಿಲೋಮೀಟರ್ ಅಗಲವಿರಬಹುದು. ಇದರಲ್ಲಿ ಬೋಟಿಂಗ್ ಮಾಡಲು ಪ್ರವಾಸಿಗರಿಗೆ ಖುಷಿ. ತುಂತುರು ಮಳೆಯು ಬೋಟಿಂಗ್ ಮನಸ್ಥಿತಿಗೆ ಬ್ರೇಕ್ ಹಾಕಿತ್ತು. ಸರೋವರದ ಮಧ್ಯದಲ್ಲಿ ಪುಟ್ಟ ದ್ವೀಪ. ಅದರಲ್ಲಿ ವಾರಾಹಿ ದೇವಿಯ ಮಂದಿರ. ಸ್ಥಳದ ಮಹಾತ್ಮೆ ಅರಿವಿದ್ದ ನೇಪಾಳಿಗರು ಪೋಕರಾಗೆ ಬಂದಾಗ ದೇವಿಯ ದರ್ಶನ ಮಾಡಿಯೇ ಸಾಗುತ್ತಿದ್ದರು

ಬೋಟಿಂಗಿಗೆ ನಿಗದಿತ ಶುಲ್ಕವಿದೆ. ಓರ್ವ ಚಾಲಕನಿದ್ದಾರೆ. ಅಭ್ಯಾಸವಿದ್ದರೆ ಪ್ರವಾಸಿಗರೂ ಬೋಟಿಂಗ್ ಮಾಡಲು ಅವಕಾಶವಿದೆ. ಜತೆಯಲ್ಲಿದ್ದ ರಾಮಪ್ರಸಾದ್ ಕೇರಳದ ದೋಣಿ ಓಟ ಸ್ಪರ್ಧೆಯ ಸಂದರ್ಭದಲ್ಲಿ ಹಾಡುವ ಮಲೆಯಾಳಿ ಹಾಡಿನೊಂದಿಗೆ ಬೋಟಿಂಗಿಗೆ ತೊಡಗಿದರು. ಇವರ ಹಾಡಿನ ಭಾವ ಅರ್ಥವಾಗದಿದ್ದರೂ, ಲಯಕ್ಕೆ ನೇಪಾಳಿ ನಾವಿಕರು ಉತ್ಸುಕರಾಗಬೇಕೇ! ಅಲ್ಲಿನ ಪಾರಂಪರಿಕ ಹಾಡನ್ನು ಅವರೂ ಹಾಡಿ ಒಂದರ್ಧ ಗಂಟೆ ಹೊಸ ಲಹರಿಯನ್ನು ಸೃಷ್ಟಿಸಿದರು. ಬೆಳಗ್ಗಿನ ಹೊತ್ತಾದ ಕಾರಣ ವಾರಾಹಿ ದೇವಿಯ ದರ್ಶನ ಸುಲಭವಾಯಿತು.  

ಪ್ರಾಚೀನಡೇವಿಸ್ ಫಾಲ್ಸ್ಇನ್ನೊಂದು ಪ್ರೇಕ್ಷಣೀಯ ಸ್ಥಳ. 1961ನೇ ಇಸವಿ. ಸ್ವಿಸ್ ಪ್ರಜೆ ಡೇವಿಸ್ ತಮ್ಮ ಪತಿಯೊಂದಿಗೆ ಜಲಪಾತ ವೀಕ್ಷಣೆ ಬಂದಿದ್ದರಂತೆ. ಅಲ್ಲಿ ಪ್ರಪಾತಕ್ಕೆ ಬಿದ್ದು ಡೇವಿಸ್ ಮೃತಪಟ್ಟಿದ್ದರು. ಅವರ ನೆನಪಿಗಾಗಿ ಜಲಪಾತಕ್ಕೆ ಡೇವಿಸ್ ಹೆಸರು ಹೊಸೆಯಿತು. ‘ಪ್ರಪಾತ ಪ್ರದೇಶಕ್ಕೆ ಇಳಿಯಬೇಡಿಎನ್ನುವ ಪರೋಕ್ಷ ಸೂಚನೆಯೂ ಹೆಸರಿನಲ್ಲಡಗಿದೆ. ಪ್ರಾಕೃತಿವಾಗಿ ರೂಪುಗೊಂಡ ಜಲಪಾತವು ನೂರಡಿ ಆಳವಿದೆ. ವರುಷಪೂರ್ತಿ ನೀರಿನ ಹರಿವು. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಲ್ಲಿ ಜಲಪಾತವು ರಮಣೀಯ

ಗುಪ್ತೇಶ್ವರ ಮಹಾದೇವ ಗುಹೆತುಂಬಾ ಪ್ರಾಚೀನ. ಪ್ರವೇಶ ದ್ವಾರವೇ ಅರಮನೆಯನ್ನು ಹೋಲುತ್ತಿತ್ತು. ಕೆಳಗಿಳಿದಂತೆ ಕಿರಿದಾಗುವ ದಾರಿ. ತುಂತುರು ಮಳೆಯಿಂದಾಗಿ ಮೆಟ್ಟಿಲುಗಳೆಲ್ಲಾ ಒದ್ದೆಯಾಗಿದ್ದು ಜಾರುವ ಭಯವೂ ಇತ್ತು. ಜನವರಿ ಕೊನೆಯಲ್ಲಿ ಗುಹೆಯೊಳಗೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಅದರ ನಿಜವಾದ ಸೌಂದರ್ಯವನ್ನು ಅನುಭವಿಸಲು ಸಾಧ್ಯವಾಗಿಲ್ಲ. ಗುಹೆಯೊಳಗೆ ಕೆಲವೆಡೆ ಎದುರುಬದುರಾಗಿ ಇಬ್ಬರು ಮಾತ್ರ ಚಲಿಸುವಷ್ಟು ಅಗಲಕಿರಿದಾಗಿದೆ. ಗುಹಾ ಪ್ರವೇಶದಲ್ಲಿ ಚಿಕ್ಕ ಕೊಳದಲ್ಲಿ ಪವಡಿಸಿದ ಮಹಾವಿಷ್ಣುವಿನ ವಿಗ್ರಹ ಗಮನ ಸೆಳೆಯಿತು. ಇದನ್ನು ಅಲಂಕಾರಿಕವಾಗಿ ಕೆತ್ತಲಾಗಿದೆಯಷ್ಟೇ

ಮಳೆಯ ದಿಸೆಯಿಂದ ಇಡೀ ದಿವಸದ ಪ್ರವಾಸದ ಪ್ಲಾನ್ ಮಧ್ಯಾಹ್ನಕ್ಕೆ ಮೊಟಕುಗೊಂಡಿತು. “ಅಷ್ಟು ದೂರದಿಂದ ಬಂದಿದ್ದೀರಿ. ನೋಡುವ ಪ್ರದೇಶ ತುಂಬಾ ಇತ್ತು.” ಬೇಸರ ವ್ಯಕ್ತಪಡಿಸಿದರು ವಾಹನ ಚಾಲಕರಾದ ಕುಮಾರ್. ನೇಪಾಳದ ನೆನಪಿಗೆ ಸ್ವಲ್ಪ ಹೊತ್ತು ಶಾಪಿಂಗ್. ದುಬಾರಿ ದರ. ಭಾರತೀಯರೆಂದರೆ ಕೇಳಬೇಕೆ? ಮೊದಲು ದರ ಹೆಚ್ಚು ಹೇಳಿ, ನಂತರ ಕಡಿಮೆ ಮಾಡುವ ಜಾಣ್ಮೆ. ಅಲ್ಲಿನ ಅಂಗಡಿಗಳಲ್ಲಿರುವ ಹಲವು ವಿನ್ಯಾಸಗಳನ್ನು ಗಮನಿಸಿದಾಗ ಚೀನಾದ ಪ್ರಭಾವ ಹೆಚ್ಚಾಗಿ ಕಾಣುತ್ತದೆ. ಕಾಟಕೊಟ್ಟ ಮಳೆಗೆ ಬೇಸರ ಪಡುತ್ತಾ ಮರಳಿ ಕಾಠ್ಮಂಡು ಸೇರಿದಾಗ ರಾತ್ರಿಯಾಗಿತ್ತು. ‘ಇನ್ನೂ ನೋಡಬೇಕಿತ್ತುಮನಸ್ಸಿನೊಳಗಿನ ಪ್ರವಾಸಿಗ ಗೊಣಗಾಡುತ್ತಿದ್ದ

ಪ್ರಯಾಣದುದ್ದಕ್ಕೂ ವಾಹನದೊಳಗೆ ನೇಪಾಳದ ಪಾರಂಪರಿಕ ಹಾಡುಗಳು ಸ್ಪೀಕರಿನಲ್ಲಿ ಮೆಲುದನಿಯಲ್ಲಿ ಮೊಳಗುತ್ತಿತ್ತು. ಒಂದೆಡೆ ತುಂಬಾ ಮನಸ್ಸನ್ನಾವರಿಸುವ, ಲಯಬದ್ಧ ಹಾಡೊಂದು ಮನಸ್ಸನ್ನು ಹೊಕ್ಕಿತು. ನೇಪಾಳಿ ಸಾಹಿತ್ಯದ ಜ್ಞಾನವಿಲ್ಲದಿದ್ದರೂ ಹಾಡಿನ ಲಯವು ಇನ್ನೂ ಮನದಿಂದ ಅಳಿಸಿಲ್ಲ. ಹಾಡಿಗಾಗಿ ಜಾಲತಾಣ ಜಾಲಾಡಿ ಸುಸ್ತು. ನೋಡೋಣ... ಸಿಗಬಹುದು!

ಊರುಸೂರು / 21-4-2019



No comments:

Post a Comment