Saturday, July 13, 2019

ಆ ದಿನಗಳು ನೇಪಾಳಕ್ಕಲ್ಲ, ವಿಶ್ವಕ್ಕೇ ಬಾರದಿರಲಿ


                ಕಾಠ್ಮಂಡುವಿನಿಂದ ಮರಳುವ ಮುನ್ನಾ ದಿನ. ಆಗಲೇ ಏಳು ದಿನವಾಗಿತ್ತು. ಅಲ್ಲಿನ ಪ್ರಸಿದ್ಧ ಮ್ಹಾಲ್ಗಳನ್ನು ವೀಕ್ಷಿಸುವ ಸಂದರ್ಭ. ಬಂಧು ಹಾಗೂ ಪಶುಪತಿನಾಥನ ಅರ್ಚಕ ರಘುರಾಮ ಕಾರಂತರು ಜತೆಗಿದ್ದು ಮಾರ್ಗದರ್ಶನ ಮಾಡುತ್ತಿದ್ದರು. “ನೋಡಿ.. ಅದು ಭೀಮ್ ಸೇನ್ ಟವರಿನ ಅವಶೇಷ. ಭೂಕಂಪ ಮಾಡಿದ ಅನಾಹುತ. ನಾಲ್ಕುನೂರಕ್ಕೂ ಮಂದಿ ಮರಣವನ್ನಪ್ಪಿದ್ದರು. ಕಾಠ್ಮಂಡುವಿನ ಪ್ರೇಕ್ಷಣೀಯ ತಾಣವಾಗಿತ್ತು.” ಎಂದು ಗಮನ ಸೆಳೆದರು

                2015 ನೇಪಾಳ ಭೂಕಂಪದ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿದ್ದೆವಷ್ಟೇ. ಯುರೋಪಿಯನ್ ಶೈಲಿಯ ಬಹು ಮಹಡಿಯ ಕಟ್ಟಡದ ಚಿತ್ರಗಳನ್ನು ನೋಡಿ ಮರುಗಿದ್ದೆವು. ಇಂದು ಅದರ ಅವಶೇಷವನ್ನು ನೋಡುತ್ತಿದ್ದಾಗ ಅಂದಿನ ವರದಿಗಳು ನೆನಪಾದುವು. ಹಿಮಾಲಯ ವ್ಯಾಪ್ತಿಯ ಹಲವಾರು ವಿನ್ಯಾಸಗಳು ನೆಲಕಚ್ಚಿರುವುದು ಒಂದು ಪ್ರದೇಶದ ಸಾಂಸ್ಕøತಿಕ ಸಂಪತ್ತಿನ ನಾಶ

                2015 ಎಪ್ರಿಲ್ 25. ನೇಪಾಳವು ಮರೆಯದ ದಿನ. ನಡುಮಧ್ಯಾಹ್ನ ಸಂಭವಿಸಿದ ಭೂಕಂಪಕ್ಕೆ ನಾಡು ಸ್ತಬ್ಧ. ನೇಪಾಳಿಗರ ಜೀವ-ಭಾವ ಪಶುಪತಿನಾಥನ ದೇವಾಲಯ ಹೊರತುಪಡಿಸಿ ಸುತ್ತಲಿನ ಮಿಕ್ಕೆಲ್ಲಾ ಮಂದಿರಗಳು, ಮನೆಗಳು, ಭವನಗಳಲ್ಲಿ ಭೂಕಂಪವು ಕುರುಹನ್ನು ಬಿಟ್ಟು ಹೋಗಿತ್ತು. ಅವುಗಳಲ್ಲಿ ಕೆಲವು ಯಥಾಸ್ಥಿತಿಗೆ ಬರಲು ಕೆಲವು ವರುಷಗಳು ಬೇಕಾಗಬಹುದು. “ ದಿವಸ ಏನಾಯಿತೆಂದು ಗೊತ್ತಿಲ್ಲ. ಅಪರಾಹ್ಣ ಎರಡರ ಸುಮಾರಿಗೆ ಪೂಜೆ ಮುಗಿಸಿ ಹೊರ ಬಂದಾಗ ಭೂಕಂಪದ ಪರಿಣಾಮವು ಗೋಚರವಾಯಿತು. ರೋದನಗಳು ರಾಚುತ್ತಿದ್ದುವು. ಮುಂದಿನ ಹಾದಿ ಶೂನ್ಯವಾಗಿತ್ತು.” ಎಂದರು ರಾಮ ಕಾರಂತರು

                ಭೂಕಂಪವು ಇಡೀ ರಾಷ್ಟ್ರವನ್ನು ತಲ್ಲಣಗೊಳಿಸಿದ್ದು ಮಾತ್ರವಲ್ಲದೆ ಎವೆರೆಸ್ಟಿನಲ್ಲೂ ತಲ್ಲಣಗಳನ್ನು ಸೃಷ್ಟಿಸಿತ್ತು. ಪರ್ವತಾರೋಹಿಗಳು ಸಾವನ್ನಪ್ಪಿದ ಸುದ್ದಿಗಳನ್ನು ವಾಹಿನಿಗಳು ಬಿತ್ತರಿಸಿದ್ದುವು. ಇತ್ತ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚೀನಾ, ಬಾಂಗ್ಲಾ, ಭೂತಾನಿನಲ್ಲೂ ಅಲುಗಾಟದ ಅನುಭವ. ಎಲ್ಲರ ಹೃದಯಗಳಲ್ಲಿ ಕಂಪನವನ್ನು ಸೃಷ್ಟಿಸಿದ ಭೂಕಂಪದ ದಿನಗಳನ್ನು ಎಣಿಸಿಕೊಂಡಾಗ ಈಗಲೂ ನೇಪಾಳದಲ್ಲಿ ಕಂಪನದ ಅನುಭವ.

                ಕನ್ನಾಡು ಮೂಲದ ಅರ್ಚಕರಾದ ನಾರಾಯಣ ಭಟ್ಟರು ನೆನಪಿಸಿಕೊಂಡರು, “ಹೆಚ್ಚು ಸಾವು ನೋವುಗಳಾದುದು ಆರ್ಥಿಕವಾಗಿ ಸಬಲರಾಗಿದ್ದವರಿಗೆ. ಬಡವರಿಗೆ ಅವರಷ್ಟು ನಷ್ಟವಾಗಲಿಲ್ಲ.” ಇಲ್ಲಿ ಶಬ್ದಾರ್ಥವಲ್ಲ, ಅದರ ಭಾವವನ್ನು ಗ್ರಹಿಸಬೇಕು. ಚಿಕ್ಕ ಚಿಕ್ಕ ಜೋಪಡಿಗಳಲ್ಲಿ ವಾಸಿಸುತ್ತಿದ್ದ ಬಡವರಿಗೆ ಜೀವಹಾನಿಯಾಗಿಲ್ಲ. ಆದರೆ ಕಾಂಕ್ರಿಟ್ ಮಹಡಿಗಳಲ್ಲಿ ವಾಸವಾಗಿದ್ದವರು ಸಹಜವಾಗಿ ಜೀವ ತೆತ್ತಿದ್ದಾರೆ. ಬದುಕುಳಿದವರು ಮತ್ತೆ ಅಂತಹ ಮನೆಯಲ್ಲಿ ವಾಸಿಸಲು ಹಿಂಜರಿದು ಶೆಡ್ಗಳಲ್ಲಿ ವಾಸಿಸಿದÀ ದಿನಮಾನಗಳಿದ್ದುವು

                ಮನೆಯೊಳಗೆ ಪ್ರವೇಶಿಸಲು ಆತಂಕ ಪಡಬೇಕಾಗಿತ್ತು. ರಾತ್ರಿಯಿಡೀ ಪಾಳಿಯಂತೆ ಜಾಗರಣೆ. ಯಾವಾಗ ಕಂಪನ ಆಗುತ್ತೋ ಎನ್ನುವ ಭಯ. ಹೀಗೆ ಮನೆಯ ಪಕ್ಕದ ಶೆಡ್ಡಿನಲ್ಲಿ ಹಲವಾರು ದಿನಗಳನ್ನು ಕಳೆದಿದ್ದೆವು. ಒಂದೆಡೆ ವಿದ್ಯುತ್ ಕೈಕೊಟ್ಟಿತ್ತು. ಧಾರಾಕಾರ ಮಳೆ ಇನ್ನೊಂದೆಡೆ. ನೇಪಾಳ ಬದುಕಿನ ವಿಷಾದಗಳ ದಿವಸಗಳು ಇಲ್ಲಿಗಲ್ಲ, ವಿಶ್ವಕ್ಕೆ ಬಾರದಿರಲಿ.” ಕಾರಂತರ ಹಾರೈಕೆಯ ಒಳನೋಟದಲ್ಲಿ ಭೂಕಂಪನದ ದರ್ಶನವಿತ್ತು

                ಕಾಠ್ಮಂಡು ನಗರವನ್ನು ಕಾಲಮಿತಿಯಲ್ಲಿ ಸುತ್ತುತ್ತಿದ್ದಾಗ ಬಿರುಕುಬಿಟ್ಟ ಕಟ್ಟಡಗಳ ಸೀಳು ನೋಟಗಳು ಸಾಕ್ಷಿಗಳಾಗಿ ಕಾಂಡುವು. “ವಿಮಾನ ನಿಲ್ದಾಣದೊಳಗಿನ ರಸ್ತೆಗಳು ಬಿರುಕುಬಿಟ್ಟ ಪರಿಣಾಮವಾಗಿ ಹಲವಾರು ದಿವಸ ಹೊರ ಪ್ರಪಂಚದ ಸಂಪರ್ಕವೇ ಇದ್ದಿರಲಿಲ್ಲ. ಸಂಪರ್ಕ ಸಾಧನಗಳು ನಿರ್ಜೀವವಾಗಿದ್ದುವು. ಹೊರ ಊರಿನಿಂದ ಬಂದವರು ಆತಂಕದಲ್ಲಿ ದಿನಕಳೆಯುವ ದಿವಸಗಳು ಸೃಷ್ಟಿಯಾಗಿದ್ದುವು. ಭೂಕುಸಿತದಿಂದ ಸಾವು ನೋವುಗಳಾದುವು. ಬಹುಶಃ ಕಾಠ್ಮಂಡು ಮೊದಲಿನಂತೆ ಆಗಲು ಬಹಳ ಸಮಯ ಬೇಕು.” ವಾಹನ ಚಾಲಕರೊಬ್ಬರ ಮಾತು.

                1934ರಲ್ಲಿ ಭೂಕಂಪ ಆಗಿತ್ತಂತೆ. ಎಂಭತ್ತು ವರುಷದ ಬಳಿಕ ಮತ್ತೆ ಅದಕ್ಕಿಂತ ಪ್ರಬಲ ಭೂಕಂಪ. “ಮಡಿದ ಶವಗಳನ್ನು ದಹನ ಮಾಡಲು ಜಾಗವಿಲ್ಲ. ಮಾರ್ಗದಲ್ಲೇ ದಹನ ಮಾಡಿದ್ದಿದೆ. ಪಶುಪತಿನಾಥನ ದೇವಾಲಯದ ಸನಿಹದ ರುದ್ರಭೂಮಿ, ಅಲ್ಲಿ ನಿಧಾನವಾಗಿ ಹರಿಯುವ ನದಿಯ ಆಚೀಚೆಗಿನ ಖಾಲಿ ಪ್ರದೇಶಗಳಲ್ಲೂ ಹೆಣಗಳನ್ನು ಸುಡುವ ದೃಶ್ಯ ಹಸಿಯಾಗಿದೆ. ಜಾಗವಿಲ್ಲದೆ ಸುಡದೇ ಬಿಟ್ಟ ಹೆಣಗಳೆಷ್ಟೋ. ಗಾಯಾಳುಗಳನ್ನು ಆಸ್ಪತ್ರೆಗೆ ಒಯ್ದರೂ ಅಲ್ಲೂ ಜಾಗದ ಅಭಾವ. ಬೀದಿಗಳಲ್ಲೇ ತಾತ್ಕಾಲಿಕ ವಸತಿ ಕಟ್ಟಿಕೊಂಡವರ ಪಾಡು ಹೇಳತೀರದು.” ಕಣ್ಣೋರೆಸಿಕೊಂಡರು ಆರಕ್ಷಕ ವಿಸ್ಟಾ.

                ಬದುಕಿನಲ್ಲಿ ಎಲ್ಲವನ್ನೂ ಮರೆಯಬಹುದು. ಆದರೆ ಬದುಕನ್ನು ಅಲುಗಾಡಿಸಿದ ಘಟನೆಗಳು ಮರೆಯಬೇಕೆಂದರೂ ಮರೆಯಲಾಗುತ್ತಿಲ್ಲ. ನೇಪಾಳದ ನಗರಗಳನ್ನು ಒಂದು ಕ್ಷಣ ಮರೆತು ಹಳ್ಳಿಗಳತ್ತ ಮುಖ ಮಾಡಿದರೆ ವರದಿಯಾಗದ, ಗೋಚರವಾಗದ ಸುದ್ದಿಗಳು ಮೌನವಾಗಿವೆ. ಭೂಕುಸಿತದಿಂದ ನೆಲಸಮವಾದ ಕೃಷಿ, ವಸತಿ, ಬಂಧುಗಳು, ಕುಟುಂಬಗಳ ಮೌನವು ಶಾಶ್ವತವಾಗಿ ಮೌನಕ್ಕೆ ಜಾರಿದೆ. ಅದು ಮಾತಾಗುವುದು ಅಸಂಭವ

                ಭಾರತದ ಒಂದು ರಾಜ್ಯದಂತೆ ಭಾಸವಾಗುವ ನೇಪಾಳಕ್ಕಂದು ಹರಿದು ಬಂದ ನೆರವು ಭರಪೂರ. ಅದರಲ್ಲೂ ರಾಜಕೀಯ, ಮತೀಯತೆಯ ಪ್ರವೇಶ. ರಾಷ್ಟ್ರ ರಾಷ್ಟ್ರದೊಳಗಿನ ಆಂತರಿಕ ಕಚ್ಚಾಟ ಮತ್ತೊಂದೆಡೆ. ಕಾಣದ ಪ್ರಕ್ರಿಯೆಗಳು ನಾಗರೀಕರ ಬದುಕಿನಲ್ಲಿ ಇಣುಕುವುದಿಲ್ಲ. ಇಷ್ಟೆಲ್ಲಾ ವಿಷಾದಗಳ ಮಧ್ಯೆ ಪಶುಪತಿನಾಥನ ಮೇಲಿರುವ ನೇಪಾಳಿಗರ ಭಕ್ತಿಯನ್ನು ಹತ್ತಿರದಿಂದ ವೀಕ್ಷಿಸಬೇಕು. (ಚಿತ್ರ : ಜಾಲತಾಣ)

ಊರುಸೂರು / 10-3-2019

No comments:

Post a Comment