ಅವರನ್ನು ಬಾಲ್ಯದಿಂದಲೂ ನೋಡುತ್ತಿದ್ದೇನೆ. ಅದೇ ಮಂದಸ್ಮಿತ ನಗು. ಸರಳ ಶುಭ್ರ ಉಡುಪು. ಬದುಕು ಕೂಡಾ ಶುಭ್ರ-ಸರಳ. ತಮ್ಮ ಪಾಡಿಗೆ ಇದ್ದುಬಿಡುವ ಸ್ವ-ಭಾವ. ಸಾಹಿತ್ಯ, ಯಕ್ಷಗಾನ ಸಂಬಂಧಿ ಮಾತುಕತೆಗಳಿಗೆ ಕಿವಿಯಾಗುವ ಕುತೂಹಲಿ. ಎಲ್ಲರೂ ಕರೆಯುವುದು, ಕೇಶವ ಮಾಸ್ತರ್. ಸುಳ್ಯದ ಪೆರಾಜೆಯವರು.
ನಮ್ಮ ಮನೆಯ ಮುಂದೆ ರಸ್ತೆಯಿದೆ. ಅಲ್ಲಿಗೆ ತಲಪುವಾಗ ಒಮ್ಮೆ ಕತ್ತು ತಿರುಗಿಸಿ ಆಚೀಚೆ ನೋಡಿ ಮುಂದೆ ಸಾಗುತ್ತಿದ್ದರು. ಆಗ ಮುಖಾಮುಖಿಯಾದರೆ ‘ಸಣ್ಣ ಮಾತುಕತೆ’. ಅದರಲ್ಲಿ ಕೇಶವ ಮಾಸ್ತರರ ‘ಮಾಸ್ತರಿಕೆ’ಯ ದಟ್ಟತೆಯನ್ನು ಗಮನಿಸಿದ್ದೇನೆ. ಮುಂದಿನ ದಿವಸಗಳಲ್ಲಿ ನಾನು ಪೆರಾಜೆಗೆ ‘ದೊಡ್ಡ ನಮಸ್ಕಾರ’ ಹಾಕುವಾಗಲೂ ‘ಊರಲ್ಲ, ದೇಶ ಸುತ್ತಬೇಕು’ಎಂದಿದ್ದರು. ಮೂರು ಪದದ ಅವರ ವಾಕ್ಯವು ಅನುಭವಕ್ಕೆ ಬಂದಾಗಲೆಲ್ಲಾ ಮಾಸ್ತರರ ನೆನಪಾಗುತ್ತಿತ್ತು.
ಫಕ್ಕನೆ ನೋಡುವಾಗ ಅಂತರ್ಮುಖಿಯಂತೆ ಭಾಸವಾಗುತ್ತಿದ್ದರು. ಮಾತಿಗೆಳೆದಾಗ ಮುಗ್ಧತೆಯ ಮಾಸಿನೊಳಗೆ ಪ್ರೌಢ ಮಾತುಕತೆಗಳಿಗೆ ತೆರೆದುಕೊಳ್ಳುತ್ತಿದ್ದರು. ವರ್ತಮಾನದ ಝಳಕು ಲೋಕದಲ್ಲಿ ಮುಗ್ಧತೆಯೂ ಸ್ವಭಾವವಾಗುತ್ತದೆ, ಲೋಕದ ವಿಕಾರಗಳನ್ನು ನೋಡುತ್ತಾ ಅದರಿಂದ ದೂರವಿರುವ ಸ್ವ-ರೂಢನೆಯ ಗುಣವನ್ನು ಆತುಕೊಂಡ ಅಪರೂಪದ ಅಧ್ಯಾಪಕ.
ನಿರಂತರ ಓದು. ಕಲೆಯ ಸಂಸ್ಕಾರ. ವಿದ್ಯಾರ್ಥಿಗಳನ್ನು ಬೆಳೆಸುವ ನೈಜ ಅಧ್ಯಾಪಕ. “ಮಕ್ಕಳನ್ನು ತಿದ್ದುವುದು ಅಧ್ಯಾಪಕನ ಕರ್ತವ್ಯ. ಅಧ್ಯಾಪಕನಿಂದ ಶಿಲೆ ಶಿಲ್ಪವಾಗುವುದು. ಅಂತಹ ಯೋಗ್ಯತೆಯನ್ನು ಸ್ವಯಾರ್ಜನೆಯಿಂದ ಅಧ್ಯಾಪಕ ಗಳಿಸಿಕೊಳ್ಳಬೇಕು. ಆತ ಸಮಾಜದ ಕಣ್ಣು.” ಎನ್ನುತ್ತಿದ್ದರು. ಇದು ಗಂಟಲ ಮೇಲಿನ ಮಾತಲ್ಲ.
ಬಹುತೇಕರನ್ನು ನೋಡುತ್ತಿದ್ದೇನೆ. ನವೆಂಬರ್ ತಿಂಗಳು ಬಂದಾಗ ಕನ್ನಡದ ನಾಮಸ್ಮರಣೆಯ ಪರ್ವ ಆರಂಭವಾಗುತ್ತದೆ. ಕೇಶವ ಮಾಸ್ತರರಿಗೆ ಕನ್ನಡವು ವರುಷಪೂರ್ತಿ ಉತ್ಸವ. ಅವರ ಕನ್ನಡ ಅಭಿಮಾನವು ಎಲ್ಲೂ ಢಾಂಢೂಂ ಸದ್ದು ಮಾಡುವುದಿಲ್ಲ. ಕನ್ನಡಾಭಿಮಾನದ ಫೋಸ್ ಕೊಡಲು ಅವರಿಗೆ ಗೊತ್ತಿಲ್ಲ. “ಸಾಹಿತ್ಯ ಎನ್ನುವುದು ನಮ್ಮನ್ನು ನಾವು ತಿದ್ದಿಕೊಳ್ಳಲು ಮತ್ತು ಬದುಕಿನಲ್ಲಿ ಅಪ್ಡೇಟ್ ಆಗಲಿರುವ ಟೂಲ್ಸ್”ಎಂದು ಈಚೆಗೆ ಹೇಳಿದ್ದ ನೆನಪು ಹಸಿಯಾಗಿದೆ.
ಮಡಿಕೇರಿಯಲ್ಲಿ ವೃತ್ತಿ ಬದುಕು.ರಾಜ್ಯದ ಯಾವುದೇ ಪ್ರದೇಶದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿ, ತಾನು ಪ್ರತಿನಿಧಿ ಶುಲ್ಕ ಪಾವತಿಸಿ ಸಮ್ಮೇಳನದಲ್ಲಿ ಭಾಗವಹಿಸುವುದು ಮಾಸ್ತರರ ಹಿರಿಮೆ. ಸಮ್ಮೇಳನಾಧ್ಯಕ್ಷರ ಭಾಷಣವನ್ನು ಆಲಿಸುವುದಲ್ಲದೆ, ಅದರ ಲಿಖಿತ ಪ್ರತಿಯನ್ನು ಕಾಪಿಟ್ಟುಕೊಳ್ಳುತ್ತಿದ್ದರು. ಅಲ್ಲದೆ ಜಿಲ್ಲಾ, ತಾಲೂಕು ಸಮ್ಮೇಳನಗಳಲ್ಲಿ ಖಾಯಂ ಭಾಗಿ. ಸಾಹಿತ್ಯ, ಕನ್ನಡದ ವಿಚಾರ ಬಂದಾಗ ಓರ್ವ ಅಧ್ಯಾಪಕ ಹೇಗಿರಬೇಕು ಎನ್ನುವುದಕ್ಕೆ ಕೇಶವ ಮಾಸ್ತರ್ ಮೋಡೆಲ್.
ಇವರು ಸಾಹಿತ್ಯ ಕೃತಿಗಳ ಉತ್ತಮ ಓದುಗ. ಸಂಬಂಧಪಟ್ಟ ಸಾಹಿತಿಗಳೊಂದಿಗೆ ಮಾತುಕತೆ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಪುಸ್ತಕ ಉಡುಗೊರೆ ಕೊಡುವುದರಲ್ಲಿ ಆಸಕ್ತ. ಉಚಿತವಾಗಿ ಪುಸ್ತಕವನ್ನು ಪಡೆಯುವುದರಲ್ಲಿ ನಿರಾಸಕ್ತ. “ಉಚಿತ ಅಂದರೆ ಅಗ್ಗ. ಪುಸ್ತಕವನ್ನು ಹಣ ಕೊಟ್ಟು ಖರೀದಿ ಮಾಡಿ ಓದುವ ಖುಷಿಯು ಉಚಿತವಾಗಿ ಪಡೆದ ಪುಸ್ತಕಗಳ ಓದಿನಲ್ಲಿ ಸಿಗುವುದಿಲ್ಲ.” ಎಂದು ವಿನೋದಕ್ಕೆ ಹೇಳಿದ್ದರು.
2018 ದಶಂಬರ 15ರಂದು ಪುತ್ತೂರಿನಲ್ಲಿ ‘ಸಾಹಿತ್ಯ ಸೌರಭ-ಪುಸ್ತಕ ಹಬ್ಬ’ ಜರುಗಿತ್ತು. ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ಕುಮಾರ್ ಕೊಡೆಂಕಿರಿಯವರು ಈ ಬಾರಿ ಪುಸ್ತಕ ಹಬ್ಬದ ಉದ್ಘಾಟನೆಗೆ ಕೇಶವ ಪೆರಾಜೆಯವರನ್ನು ಆಹ್ವಾನಿಸಿದಾಗ, “ಛೇ.. ನನಗೆ ಅಂತಹ ಯೋಗ್ಯತೆ ಇದೆಯಾ? ನಾನು ಸಾಹಿತಿಯಲ್ಲ. ಸಾಹಿತ್ಯದ ಓದುಗನಷ್ಟೇ ” ಎಂದು ವಿನಮ್ರವಾಗಿ ಹೇಳಿದಾಗ ಕೇಶವರ ಬೌದ್ಧಿಕ ಯೋಗ್ಯತೆಯ ಗಾಢತೆ
ಅನುಭವಕ್ಕೆ ಬಂತು.
ಅಂದು ಹಬ್ಬವನ್ನು ಉದ್ಘಾಟಿಸಿ ಅರ್ಥಪೂರ್ಣವಾಗಿ ಮಾತನಾಡಿದ್ದರು. “ಮಕ್ಕಳಿಗೆ ಎಳವೆಯಲ್ಲೇ ಪುಸ್ತಕದ ಪ್ರೀತಿ ಬೆಳೆಸಲು ಮನೆಯಿಂದಲೇ ಯತ್ನಿಸಬೇಕು. ಪುಸ್ತಕ ಸಂಸ್ಕತಿ ಬೆಳೆದಾಗ ಮಾತ್ರ ಜ್ಞಾನ ವೃದ್ಧಿಯಾಗಲು ಸಾಧ್ಯ. ಪುಸ್ತಕದ ಮನಸ್ಥಿತಿ ಇಲ್ಲದಿದ್ದರೆ ಪುಸ್ತಕ ಸಂಸ್ಕøತಿ ಬೆಳೆಯದು. ನಮ್ಮ ಜೀವನಕ್ಕೆ ಅನ್ಯ ವಸ್ತುಗಳು ಹೇಗೆ ಮುಖ್ಯವೋ ಪುಸ್ತಕವೂ ಅಷ್ಟೇ ಮುಖ್ಯ.”
ಕಾರ್ಯಕ್ರಮ ಮುಗಿಸಿ, ಅವರೊಂದಿಗೆ ಉಪಾಹಾರ ಸೇವಿಸುತ್ತಾ ಇದ್ದಂತೆ ಮಾತಿನ ಮಧ್ಯೆ ಜಿಗಿದ ಪದಸರಣಿಗಳನ್ನು ಗಮನಿಸಿ - “ಕಲೆ, ಸಾಹಿತ್ಯ, ಸಂಸ್ಕತಿಗಳು ಜೊತೆಗಿದ್ದಾಗ ಮಾತ್ರ ಬದುಕು. ವರ್ತಮಾನ ಸಮಾಜದ ಮನಸ್ಥಿತಿಯನ್ನು ನೋಡುವಾಗ ಬದುಕು ಭಾರವಾಗುವ ಅನುಭವವಾಗುತ್ತದೆ. ಪುತ್ತೂರಿಗೆ ಬಂದಿರುವುದು ಖುಷಿ ನೀಡಿದೆ. ಇನ್ಯಾವಾಗ ಎಲ್ಲರನ್ನು ನೋಡುವುದೋ ಏನೋ.” ಎಂದು ಮಗನೊಂದಿಗೆ ಕಾರನ್ನು ಏರಿ ಕುಳಿತುಕೊಂಡ ಕೇಶವ ಮಾಸ್ತರರ ಮಂದಸ್ಮಿತ ನಗು ಇನ್ನು ನೆನಪು ಮಾತ್ರ.
ಬದುಕಿನಲ್ಲಿ ಎಂದೂ ‘ಅಹಂ, ಪ್ರತಿಷ್ಠೆ’ಗಳನ್ನು ನುಸುಳಲು ಬಿಡದ ಎಚ್ಚರದ ಬದುಕನ್ನು ಬಾಳಿದ್ದಾರೆ. ಅಕ್ಷರಗಳನ್ನು
ಆರಾಧಿಸಿದ ಅಧ್ಯಾಪಕ ಕೇಶವ ಪೆರಾಜೆಯವರು
2019
ಜನವರಿ 31ರಂದು ದೂರವಾದರು. ಅವರಿಗಿದು ಅಕ್ಷರ ನಮನ.
ಊರುಸೂರು / 3-2-2019
No comments:
Post a Comment