ಬೆಳಗ್ಗಿನ ಹೊತ್ತು. ಅಡುಗೆ ಮನೆ ಪಕ್ಕ ಐದಾರು ಕಾಗೆಗಳ ಕಾಯುತ್ತಿದ್ದುವು. ಮನೆಯೊಡತಿ ರೇಖಾ ರಾಜೇಂದ್ರ ದೋಸೆಯನ್ನು ಚೂರು ಮಾಡಿ ಕೈ ಮುಂದೆ ಮಾಡಿದ್ದರು. ಕೈಯಲ್ಲಿದ್ದ ದೋಸೆಯ ಚೂರುಗಳು ಕ್ಷಣಾರ್ಧದಲ್ಲಿ ಮಾಯ! ಮತ್ತೆ ಸಂಜೆಯ ಸರದಿ. ಒಮ್ಮೆ ಇವರ ಅಡುಗೆ ಮನೆಯ ಹತ್ರ ಬಾಗಿಲಿಗೆ ಹಾಕಿದ ಬಲೆಗೆ ಕಾಗೆಯೊಂದು ಸಿಕ್ಕಿಹಾಕಿಕೊಂಡಿತ್ತು. ಬಲೆಯಿಂದ ಬಿಡಿಸಿ ಮುಕ್ತಗೊಳಿಸಿದ್ದರು. ಆ ಬಳಿಕ ಆ ಕಾಗೆಯ ಸಂಸಾರಕ್ಕೆ ರೇಖಾ ಅವರ ಹಿಂಡೂಮನೆ ನೆಲೆ. ಬೆಳಗ್ಗಿನ ತಿಂಡಿಯಲ್ಲಿ, ಊಟದಲ್ಲಿ, ಸಂಜೆಯ ಚಹದಲ್ಲಿ ಒಂದು ಪಾಲು. ಅವುಗಳ ಸಂಸಾರ ವೃದ್ಧಿಯಾಗಿ ಕುಟುಂಬವಾಗಿದೆ.
“ನಮಗೆ ಎಲ್ಲಾದರೂ ಮರೆತುಹೋದರೆ ಸಾಕು, ಎಲ್ಲವೂ ಸೇರಿ ಗಲಾಟೆ ಎಬ್ಬಿಸುತ್ತವೆ. ಆಹಾರ ಸಿಕ್ಕಿದ ಮೇಲೆ ತಮ್ಮ ಪಾಡಿಗೆ ಹೋಗುತ್ತವೆ. ದಿನಕ್ಕೆ ಮೂರು ಹೊತ್ತು ಊಟ. ಹೊಟ್ಟೆಗೆ ಸ್ವಲ್ಪ ಕಡಿಮೆಯಾದರೆ ಅಲ್ಲೇ ಮುಷ್ಕರ ಹೂಡಿಬಿಡುತ್ತವೆ. ನಾಲ್ಕು ವರುಷವಾಯಿತು. ವರುಷದಲ್ಲಿ ಮೂರು ತಿಂಗಳು ವಲಸೆ ಹೋಗುತ್ತವೆ.” ಎಂದರು ರೇಖಾ.
ಹಿಂಡೂಮನೆಯ ಕಾಗೆಗಳ ಪ್ರೀತಿ, ಮನೆಯವರ ಜತೆಗಿನ ಸಂವಹನ, ಒಡನಾಟ ಗ್ರಹಿಸಿಕೊಂಡಾಗ ನಾಡಿದ ದೊರೆಯೊಬ್ಬರು ನೆನಪಾದರು. ಅವರ ಕಾರಿನ ಮೇಲೆ ಕಾಗೆಯೊಂದು ಕುಳಿತು ಕÀನ್ನಾಡಿನಲ್ಲಿ ರಂಪಾಟ ಎದ್ದಿತ್ತು. ವಾಹಿನಿಗಳಲ್ಲಿ ಲೀಡಿಂಗ್ ಸುದ್ದಿಯಾಗಿತ್ತು.
ಬಲೆಯಲ್ಲಿ ಸಿಕ್ಕಿದ ಕಾಗೆಯನ್ನು ಬಿಡಿಸಿದ ಪರಿಣಾಮ ನೋಡಿ. ಅವುಗಳು ಮನುಷ್ಯನಿಗೆ ಎಷ್ಟು ಹತ್ತಿರವಾಗಿಬಿಟ್ಟಿವೆ. ಕೃತಜ್ಞತೆಯ ಒಂದು ಉದಾಹರಣೆ. ಈ ಕೃತಜ್ಞತೆಯ ಭಾವವನ್ನು ನಮ್ಮೊಳಗೆ ಒಮ್ಮೆ ಸಮೀಕರಿಸೋಣ. ನಾಚಿಗೆ ಆಗುತ್ತದೆ! ಕೃತಜ್ಞತೆ ಪದವೇ ಕಾಣೆಯಾಗಿದೆ.
ಮಿತ್ರ ಜಯಶಂಕರ ಶರ್ಮರೊಂದಿಗೆ ಕಾಗೆಯ ಗಾಥೆಯನ್ನು ಹಂಚಿಕೊಂಡಿದ್ದೆ. ಇದಕ್ಕೆ ಪೂರಕವೋ ಎನ್ನುವಂತೆ ಮತ್ತೊಂದು ಘಟನೆ ನೆನಪಿಸಿದರು. ಧರ್ಮಸ್ಥಳದಲ್ಲೊಬ್ಬರು ಅಜ್ಜಿ. ನೆಲಗಡಲೆ, ಕಿತ್ತಳೆ, ಮಾವು.. ಹೀಗೆ ಚಿಕ್ಕ ಮಾರಾಟ. ಇದನ್ನೇ ನಂಬಿದ ಬದುಕು.
ಇವರು ಪ್ರತಿದಿನ ಏನಿಲ್ಲವೆಂದರೂ ಇಪ್ಪತ್ತಕ್ಕೂ ಮಿಕ್ಕಿ ಪಾರಿವಾಳಗಳಿಗೆ (ಕಪೋತಗಳಿಗೆ) ನೆಲಗಡಲೆಯ ಸಮಾರಾಧನೆ ಮಾಡುತ್ತಾರೆ. ಅದೇ ಹೊತ್ತಿಗೆ ಅವು ಎಲ್ಲಿಗೆ ಹೋದರೂ ನೆಲಗಡಲೆಯನ್ನು ಮಿಸ್ ಮಾಡಿಕೊಳ್ಳುವುದಿಲ್ಲ.
ಅವು ತಿನ್ನುವುದನ್ನು ನೋಡಿದರೆ ಅಜ್ಜಿಗೆ ಖುಷಿ.
ಪಾರಿವಾಳಕ್ಕೆ ಹಾಕುವ ಒಂದೊಂದು ಕಡಲೆಯ ಕಾಳಿನಲ್ಲಿ ಅಜ್ಜಿಯ ಬದುಕಿದೆ. ತನ್ನ ಗಳಿಕೆಯ ಒಂದಂಶವನ್ನು ಬುದ್ಧಿಪೂರ್ವಕವಾಗಿ ಆಹಾರದ ರೂಪದಲ್ಲಿ ಪಾರಿವಾಳಗಳಿಗೆ ಉಣಿಸುತ್ತಿದ್ದಾರೆ. ಅಜ್ಜಿ ಪಾರಿವಾಳವನ್ನು ನಂಬಿದ್ದಾರೆ. ಪಾರಿವಾಳಗಳು ಅಜ್ಜಿಯನ್ನು ನೆಚ್ಚಿಕೊಂಡಿದೆ. ಇವರಿಬ್ಬರ ಸಂಬಂಧಗಳು ಅಜ್ಞಾತ. ಪರಸ್ಪರ ಒಪ್ಪಿಕೊಳ್ಳುವ ಭಾವ ಬಂಧಗಳು.
ಪಾರಿವಾಳ, ಕಾಗೆಗಳ ಘಟನೆಗಳಲ್ಲಿ ಬದುಕಿನ ಸಂದೇಶವಿದೆ. ನೋಡುವ ಕಣ್ಣುಗಳು ಶುಭ್ರವಾಗಿರಬೇಕು. ಹೃದಯದಿಂದ ಮನನಿಸಿದರೆ ಅರ್ಥದ ಮಥನವಾಗುತ್ತದೆ. ಗಂಟಲ ಮೇಲಿನ ನೋಟದ ಮಥನದಿಂದ ಅವುಗಳು ಕೇವಲ ಪಕ್ಷಿಗಳ ಹಾಗೆ ಕಾಣಬಹುದಷ್ಟೇ. ಯಾಕೆಂದರೆ ನಮ್ಮದು ಕೃತಜ್ಞತೆಯ ಸೊಲ್ಲಿಲ್ಲದ ಬದುಕಲ್ವಾ.
ಮಾಲಿಂಗ ನಾಯ್ಕ್, ವಿಟ್ಲದ ಕುದ್ದುಪದವಿನ ಸನಿಹದ ಕೃಷಿಕರು. ಅವರ ‘ಬೊಳ್ಳು’ಕೃಷಿ ಕೆಲಸಕ್ಕೆ ನೆರವಾಗುವ ಸಹಾಯಕ. ಮರದ ಕೆಳಗೆ ಬಿದ್ದ ಹಣ್ಣಡಿಕೆ, ತೆಂಗಿನಕಾಯಿಯನ್ನು ಹೆಕ್ಕುವುದು ಬದ್ಧತೆಯ ಕೆಲಸ. ಬಳಿಕ ದೋಸೆಯ ದಾಸೋಹ. ದೋಸೆ ತಪ್ಪಿತೋ ರಂಪಾಟವೂ ತಪ್ಪಿದ್ದಲ್ಲ.
ಈಗ ಬೊಳ್ಳು ಇಲ್ಲ. ಅದರೊಂದಿಗಿನ ಸ್ನೇಹವನ್ನು ನಾಯ್ಕರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. ಹಿಂದೊಮ್ಮೆ ಮಲೆಯಾಳಿ ವಾಹಿನಿಯೊಂದು ಮಾಲಿಂಗ ನಾಯ್ಕರ ಯಶೋಗಾಥೆಗೆ ಬೆಳಕು ಹಾಕಿದಾಗ ಬೊಳ್ಳುವಿಗೂ ಖುಷಿ. ಬೊಳ್ಳು ಕೂಡಾ ಯಶೋಗಾಥೆಯ ಒಂದಂಗವಾಗಿದ್ದ.
ಪ್ರಾಣಿ, ಪಕ್ಷಿಗಳ ಸಂಬಂಧ ಹೊಸದೇನಲ್ಲ. ಬೆಕ್ಕು, ನಾಯಿ, ಹಸು, ಮೊಲ.. ಸಾಕಣೆಯು ಬದುಕಿನಂಗ. ಅನ್ನ ಕೊಟ್ಟ ಯಜಮಾನನಿಗೆ ಹೊಂದಿಕೊಂಡು ಬಾಳುವುದು ಗುಣ. ಮನೆಯ ಕಷ್ಟ, ಸುಖಗಳ ಜತೆ ಸಾಥ್ ಆಗಿರುತ್ತವೆ. ಮನೆಯ ಯಜಮಾನ ಮರಣಿಸಿದಾಗ ಕಣ್ಣೀರಿಡುವ ದನಗಳು, ಕಷ್ಟಕ್ಕೊಳಗಾದಾಗ ಚಡಪಡಿಸುವ ನಾಯಿಗಳ ವರ್ತನೆಗಳು ಆಶ್ಚರ್ಯ ಮೂಡಿಸುತ್ತವೆ.
ವರ್ತಮಾನದಲ್ಲಿ ನಮಗಿಂತ ಪ್ರಾಣಿ, ಪಕ್ಷಿಗಳು ಮೇಲು. ಅವು ಅಳುತ್ತವೆ, ಖುಷಿ ಪಡುತ್ತವೆ. ಅನ್ನ ಹಾಕಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತವೆ. ನಾವು? ನಗಲು ಬರುವುದಿಲ್ಲ. ಅಳಲು ಗೊತ್ತೇ ಇಲ್ಲ. ಖುಷಿ ಎಂಬುದು ಮರೀಚಿಕೆ. ನೆಮ್ಮದಿಯನ್ನು ಅರಸಿ ದೂರದೂರಿಗೆ ಹೋದರೂ ಹಿಂತಿರುಗುವಾಗ ಸಮಸ್ಯೆಗಳ ಮೂಟೆ! ಕಷ್ಟ, ಸುಖ, ದುಃಖ, ಆನಂದ, ನೆಮ್ಮದಿ... ಇವೆಲ್ಲಾ ಪರಸ್ಪರ ಮಿಳಿತಗೊಂಡಾಗಲೇ ಬದುಕು.
ಊರು ಸೂರು
/ 18-11-2018
No comments:
Post a Comment