ಕನ್ನಡ ರಾಜ್ಯೋತ್ಸವ ಸಮನಿಸುತ್ತಿದೆ! ಕನ್ನಾಡಿನಾದ್ಯಂತ ವಾರ್ಷಿಕ ಉತ್ಸವಕ್ಕೆ ಬೇಕಾದ ಸಿದ್ಧತೆಗಳು ಆರಂಭವಾಗಿವೆ. ರಾಜಧಾನಿಯ ಕೆಲವೆಡೆ ತಿಂಗಳ ಪರ್ಯಂತ ಕನ್ನಡಕ್ಕೆ ಉತ್ಸವದ ಯೋಗ! ಸಂಭ್ರಮಗಳು ಮುಖತಗ್ಗಿಸುವಷ್ಟು ಆಡಂಬರ. ಖುಷಿ ಪಡೋಣ, ವರ್ಷಕ್ಕೆ ಒಂದು ದಿನವಾದರೂ ಕನ್ನಡವು ನಗುತ್ತದಲ್ಲಾ!
ಸೆಪ್ಟೆಂಬರದಲ್ಲಿ ಪುತ್ತೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ‘ಕನ್ನಡ ಹಬ್ಬ’. ಮೈಸೂರಿನ ಡಾ.ಜಯಪ್ಪ ಹೊನ್ನಾಳಿಯವರಿಂದ ದೀಪಜ್ವಲನ. ಅವರ ಮಾತಿನ ಮಧ್ಯೆ ಮೂರು ಪದದ ಒಂದು ವಾಕ್ಯ ತುಂಬಾ ಕಾಡಿತು - ‘ಕನ್ನಡ ಅನ್ನದ ಭಾಷೆ’.
ಬದುಕಿನಲ್ಲಿ ಭಾಷೆಯೊಂದು ‘ಅನ್ನ’ವಾದರೆ ಎಡ-ಬಲಗಳು ನುಗ್ಗಿಬಿಡುತ್ತವೆ! ರಾಡಿ ಎಬ್ಬಿಸಿಬಿಡುತ್ತವೆ. ಆಗದು ಭಾರವಾಗುತ್ತದೆ! ಅನ್ನದ ಭಾಷೆಯಾದರೆ ಬದುಕು ಭಾರವಾಗುವುದಿಲ್ಲ. ‘ಭಾರದ ಬದುಕು’ ಆಗುತ್ತದೆ. ಇದು ತಾಳಿಕೊಳ್ಳದ ಭಾರವಲ್ಲ. ಸಮತೋಲನದ ಭಾರ.
ಬದುಕು ಭಾರವಾದರೆ ಖುಷಿಗಳು ಮೌನವಾಗುತ್ತವೆ. ನಗು ಮಾಸುತ್ತದೆ. ವಿಷಾದಗಳ ಗೊಂಚಲು ರೂಪುಗೊಳ್ಳುತ್ತವೆ. ಅನ್ನದ ಭಾಷೆಯೊಳಗೆ ವಿಷಾದವಿಲ್ಲ. ಅದು ನಗುವನ್ನು ಕಲಿಸುತ್ತದೆ. ನಾವು ನಗಲು ಕಲಿಯಬೇಕಷ್ಟೇ. ಸಾಹಿತ್ಯ ಸಮ್ಮೇಳನಗಳು ನಗಲು ಕಲಿಸುತ್ತವೆ. ಅರಳಲು ಅನುಕೂಲ ಮಾಡಿಕೊಡುತ್ತವೆ.
ಭಾಷೆಯೊಂದರ ಬೆಳವಣಿಗೆಯಲ್ಲಿ ‘ಸ್ಥಳೀಯತೆಯ ಅಸ್ತಿತ್ವ ಹಿರಿದು. ಸ್ಥಳೀಯತೆಯನ್ನು ಮರೆತು ಭಾಷೆ ಕಟ್ಟಲು ಸಾಧ್ಯವಿಲ್ಲ. ಆ ಸ್ಥಳೀಯತೆ ಎಲ್ಲಿದೆ? - ನಮ್ಮೊಳಗಿದೆ. ಅದಕ್ಕೆ ಸ್ವಯಂ ಪ್ರಕಾಶವಿದೆ. ಅದನ್ನು ಆವರಿಸಿದ ಮಸುಕನ್ನು ಉಜ್ಜಿದರೆ ಸಾಕು, ಹೊಳೆಯುತ್ತದೆ. ಉಜ್ಜುವ ಕೆಲಸ ಮಾಡುವುದು ನಮ್ಮ ಜವಾಬ್ದಾರಿ.
ಭಾಷೆಯೊಂದರ ಬೆಳವಣಿಗೆಯಲ್ಲಿ ನೆಲ, ಜಲ ಸಂರಕ್ಷಣೆಯ ಬದ್ಧತೆಯು ಮಿಳಿತಗೊಂಡಿದೆ. ಊಹಿಸಿ, ವಾಸಿಸುವ ನೆಲವು ಬದುಕಿನಿಂದ ಕಳಚಿಕೊಂಡರೆ? ಜಲ ತೋಯಿಸಿ
ಸೆಳೆದೊಯ್ದರೆ? ಮತ್ತೇನು ಉಳಿದೀತು?
ನಾಶವಾದ ನೆಲದ ನೆಲೆಯ ಸೃಷ್ಟಿ ಹೇಗೆ? ಅದರೊಂದಿಗೆ ಭಾಷೆ, ಸಂಸ್ಕøತಿ, ಆಚಾರ, ವಿಚಾರಗಳೂ ಸೇರಿವೆಯಷ್ಟೇ. ಮತ್ತೆ ಪುನಃ ಅದು ಹಳಿಗೆ ಬರಲು ಎಷ್ಟೋ ವರುಷಗಳು ಬೇಕು. ಆ ಹೊತ್ತಿಗೆ ವರ್ತಮಾನವು ಪಲ್ಲಟಗೊಂಡಿರುತ್ತದೆ. ಆಗ ಭಾಷೆಯು ಉಸಿರಿಗಾಗಿ ಒದ್ದಾಡುತ್ತಿರುತ್ತದೆ.
ಕನ್ನಡ ಹಬ್ಬದಲ್ಲಿ ನೆಲ, ಜಲ ಸಂರಕ್ಷಣೆಯ ಸಂಕಲ್ಪದ ಸಾರ ಮನಕ್ಕಿಳಿಯಬೇಕು. ಅದರೊಂದಿಗೆ ಭಾಷೆ, ಸಂಸ್ಕøತಿಗಳು ನಮ್ಮೊಳಗೆ ಗೂಡು ಕಟ್ಟುತ್ತವೆ. ಅದಕ್ಕೆ ಬೆಚ್ಚನೆಯ ಕಾವು ಕೊಟ್ಟಾಗ ರೆಕ್ಕೆ ಪುಕ್ಕ ಮೂಡುತ್ತವೆ. ಗೂಡಿಂದ ಇಣುಕುತ್ತದೆ. ಹಾರಲು ಯತ್ನಿಸುತ್ತವೆ. ಒಂದು ದಿನ ಹಾರುತ್ತವೆ. ‘ಹಾರುವ ಕ್ರಿಯೆ’ ಎಂದರೆ ಪ್ರಪಂಚ ತೋರಿಸುವ ಕೆಲಸ.
ಚಿಣ್ಣರೊಳಗೆ ಇಂತಹ ಗೂಡು ಕಟ್ಟುವ, ಕಟ್ಟಿಸುವ ಮತ್ತು ಗೂಡಿಂದ ಹಾರಿಸುವ ಹೊಣೆ ಹೊರಬೇಕಾದವರು ಯಾರು? ಹೆತ್ತವರು, ಅಧ್ಯಾಪಕರು, ಶಾಲೆಗಳು. ಎಳೆಯರೊಳಗೆ ಒಂದು ಮನಸ್ಸಿದೆ, ಅದಕ್ಕೆ ವಿಕಾಸದ ಗುಣವಿದೆ, ಹಾರುವ ಆಸಕ್ತಿಯಿದೆ ಎನ್ನುವುದನ್ನು ಬುದ್ಧಿಪೂರ್ವಕವಾಗಿ ಮರೆತಿದ್ದೇವೆ. ನಮ್ಮ ಆಸಕ್ತಿಗಳನ್ನು ಮಕ್ಕಳ ಮೇಲೆ ಹೇರಿ ಖುಷಿಪಡುವ ಮನಸ್ಥಿತಿ ದೂರವಾಗದಿದ್ದರೆ ಮಕ್ಕಳು ಶಿಸ್ತಿನ ಮೂಟೆಯೊಳಗೆ ಬಂಧಿಯಾಗುತ್ತಾರೆ. ಒಮ್ಮೆ ಬಂಧಿಯಾದರೆ ಅದರಿಂದ ಬಿಡುಗಡೆ ತ್ರಾಸ.
ಕನ್ನಡಕ್ಕೂ ಮನಸ್ಸಿದೆ. ಮಕ್ಕಳಲ್ಲೂ ಮನಸ್ಸಿದೆ. ಇವೆರಡರ ಅನುಸಂಧಾನವಾಗಬೇಕು. ಈ ಪ್ರಕ್ರಿಯೆಗೆ ಮೊದಲ ತಾಣ ಮನೆ.
ಕನ್ನಡದ ಸೊಗಸನ್ನು ಅನಾವರಣಗೊಳಿಸಲಿರುವ ತಾಣ! ಪುಸ್ತಕವು ಮಕ್ಕಳ ಆಟಿಕೆಯಾಗಲಿ! ಪುಸ್ತಕದೊಂದಿಗೆ ಆಟವಾಡಲಿ.
ಕಲೆ ಮತ್ತು ಸಂಸ್ಕøತಿಯು ಬದುಕಿನೊಂದಿಗೆ, ಭಾಷೆಯೊಂದಿಗೆ ಸದಾ ಎರಕ. ಯಾಕೋ ಏನೋ ಈಚೆಗಂತೂ ಇವುಗಳು ಕನ್ನಡದಿಂದ ದೂರ, ಬಹುದೂರ. ಭಾಷೆಯೊಂದಿಗೆ ಕಲೆ, ಸಂಸ್ಕøತಿಯು ಮಿಳಿತಗೊಂಡರೆ ಅದರ ಸೊಗಸು ಅನುಪಮ. ಅಪಾರ. ಅನನ್ಯ.
ಕನ್ನಡಕ್ಕಾಗಿ ಎಷ್ಟು ಮನಸ್ಸುಗಳು ತ್ಯಾಗ ಮಾಡಿವೆ? ಎಷ್ಟೊಂದು ಸಾಹಿತ್ಯಗಳಿವೆ? ಇವೆಲ್ಲಾ ಮಕ್ಕಳಿಗೆ ಹುಳಿದ್ರಾಕ್ಷಿ! ಅದರೊಳಗಿನ ಸಿಹಿಯನ್ನು ತೋರಿಸುವ, ತಿನ್ನಿಸುವ ಅನಿವಾರ್ಯವಿದೆ. ಮೊದಲು ನಾವು ಸಿಹಿಯನ್ನು ಸವಿಯೋಣ. ಮಕ್ಕಳಿಗೂ ಸವಿಯಲು ಅವಕಾಶ ಮಾಡಿಕೊಡೋಣ. ಇವರೆಲ್ಲರ ಹೃದಯದಲ್ಲಿ, ಭಾವದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡೋಣ.
ನವಂಬರ ಒಂದು. ಕನ್ನಡ ರಾಜ್ಯೋತ್ಸವ. ಅಂದು ಸರಕಾರಿ ರಜೆ. ಆದರೆ ಕನ್ನಡಕ್ಕೆ ರಜೆಯಿಲ್ಲ. ನಮ್ಮ ಬಳಿಗೆ ಮಾತನಾಡಲು ವರ್ಷಕ್ಕೊಮ್ಮೆ ಬಂದೇ ಬರುತ್ತದೆ. ಹೀಗೆ ಬಂದಾಗ ಮಾತನಾಡಲು ವಿದ್ಯಾರ್ಥಿಗಳೇ ಇಲ್ಲ! ಕನ್ನಡವು ಢಾಂಢೂಂ ಅದ್ದೂರಿಯನ್ನು ಬಯಸುವುದಿಲ್ಲ. ತನ್ನ ಸೊಗಸನ್ನು ಕಾವ್ಯ, ಕಥೆ, ಕವನ, ಕಾದಂಬರಿಗಳ ಮೂಲಕ ಬಿಂಬಿಸಲು ಹವಣಿಸುತ್ತಿದ್ದರೂ ಕೇಳುವ, ನೋಡುವ ಮನಸ್ಸುಗಳ ಭಾವಗಳು ಚಿಲಕ ಹಾಕಿವೆ! (ಸಾಂದರ್ಭಿಕ ಚಿತ್ರ)
28-10-2018
No comments:
Post a Comment