Saturday, July 13, 2019

ಮುದುಡುವ ಚಳಿಯಲ್ಲೂ ಅರಳಿದ ಹೊರನೋಟ


ನೇಪಾಳದ ಕಾಠ್ಮಂಡು ನೆಲದಲ್ಲಿ ಮೊದಲ ದಿನ. ಮೈನಸ್ ಡಿಗ್ರಿಯತ್ತ ವಾಲುತ್ತಿದ್ದ ತಾಪಮಾನ. ಎಷ್ಟು ಹೊದೆದುಕೊಂಡರೂ ಮತ್ತಷ್ಟು ಬೇಕೆಂಬ ಮನಸ್ಥಿತಿ. ಇಂತಹ ಚಳಿಯ ಮಹಾತ್ಮೆಯನ್ನು ಪಾಠಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ನೋಡಿದ್ದು ಬಿಟ್ಟರೆ ಇದೇ ಮೊದಲ ಅನುಭವ. ಮುಂಜಾವಿನ ಕೊರೆಯುವ ಚಳಿ. ನೋಡಿದರೆ ಎರಡು ಡಿಗ್ರಿ! ಬೆಳ್ಳಂಬೆಳಿಗ್ಗೆ ಸಿಯಾಚಿನ್ನಂತಹ ಚಳಿ ಪ್ರದೇಶದಲ್ಲಿರುವ ನಮ್ಮ ಸೈನಿಕರು ನೆನಪಾದರು!

ವಿದೇಶಕ್ಕೆ ಹೋದ ಹಲವರ ಮಾತುಗಳಿಗೆ ಕಿವಿಯಾಗಿದ್ದೆ. ಅಲ್ಲಿನ ಚಳಿಗಾಲದ ಗಾಢತೆಯು ಮನಸ್ಸಿಗೆ ಚಳಿ ಹಿಡಿಸಿತ್ತು. ಮನೆಯೊಳಗೆ ಹೀಟರ್, ಅಗ್ಗಿಸ್ಟಿಕೆ; ಹೊರಗೆ ಕಾಲಿಟ್ಟರೆ ವಾಹನದೊಳಗೂ ಕೃತಕ ಬಿಸಿ, ಅಲ್ಲಿಂದ ನೇರ ಕಚೇರಿಗೆ ಹೋದರಂತೂ ಹೀಟರಿನ ಕರಾಮತ್ತು. ಇವೆಲ್ಲಾ ಕೇಳಿ ಗೊತ್ತಿತ್ತು. ಕಾಠ್ಮಂಡಿನಲ್ಲಿ ಸ್ವತಃ ಅನುಭವಕ್ಕೆ ಬಂದಾಗ ವಿದೇಶಯಾನದ ಪುಳಕವನ್ನು ಕಟ್ಟಿಕೊಟ್ಟ ಸ್ನೇಹಿತರು ನೆನಪಾದರು. ಬಂಧುಗಳ ಮನೆಯಲ್ಲಿ ಉಳಕೊಂಡಿದ್ದರಿಂದ ಚಳಿಯಿಂದ ಪಾರಾಗಿ ಸುಖವಾಗಿ ಮರಳುವಂತಾಯಿತು

ಎರಡು ಡಿಗ್ರಿಯ ಚಳಿಯ ದಿನದ ಮುಂಜಾವು. ಗಾಢ ನಿದ್ದೆ ಆವರಿಸಿತ್ತು. ಹತ್ತಾರು ಮಂದಿ ಬಾಯಿತುಂಬಾ ನಗುವ ಸದ್ದು. ಅದು ಕ್ಷಣಿಕ ನಗುವಲ್ಲ, ಚೈನ್ ನಗು! ಮುಸುಕೆಳೆದರೂ ನಗುವಿನ ಅಟ್ಟಹಾಸ ನಿಲ್ಲುತ್ತಿಲ್ಲ. ಸನಿಹದಲ್ಲೇ ರುದ್ರಭೂಮಿಯಿದೆ. ಚಂದಮಾಮ, ಬಾಲಮಿತ್ರ ಪುಸ್ತಕಗಳಲ್ಲಿ ಓದಿದಂತೆ ಭೂತ, ಪ್ರೇತ, ಪಿಶಾದಿಗಳ ರಿಂಗಣ ಇರಬಹುದೇ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು. ಕೊನೆಗೆ ತಿಳಿಯಿತು,  ಆರೋಗ್ಯವರ್ಧನೆಗಾಗಿ ನಗುವವರ ತಂಡ ನಿತ್ಯದ ಅಭ್ಯಾಸವಂತೆ. ಮನದೊಳಗೆ ಹೊಕ್ಕಿದ ಭೂತ ನಕ್ಕು ಮಾಯವಾಯಿತು.  

ಮರುದಿವಸದ ಮುಂಜಾನೆ. ಅಂದೂ ಚಳಿಯ ಆಟೋಪ. ಸುಮಾರು ನಾಲ್ಕೂವರೆ ಐದರ ಸಮಯ. ಬಡಿದೆಬ್ಬಿಸುವ ಸ್ವರ ರಾಚಿತು. ಒಮ್ಮೆಯಲ್ಲ, ಹತ್ತಾರು ಬಾರಿ. ಫಕ್ಕನೆ ಎಚ್ಚರವಾಯಿತು.  ಏನು ಹೇಳ್ತಾರೆ ಎನ್ನುವುದು ಅಸ್ಪಷ್ಟ. ಯಾಕೆ ಬೊಬ್ಬಿಡುತ್ತಾ ಬೆಟ್ಟ ಏರುತ್ತಾರೆ? ಒಂದು ಸ್ವರವಲ್ಲ, ಹತ್ತಾರು ಸ್ವರಗಳು ಒಂದರ ಹಿಂದೆ ಒಂದರಂತೆ ಅನುರಣಿಸಿದರು. ಛೇ.. ಎರಡನೇ ದಿನವೂ ಮುಂಜಾವಿನ ಸುಖನಿದ್ರೆಗೆ ಕೊಕ್. ಸ್ವರ ಮತ್ತೆನಲ್ಲ, ‘ಜೈ ಶಂಭೋಎನ್ನುತ್ತಾ ಮೆಟ್ಟಿಲುಗಳನ್ನು ಏರುತ್ತಾ ಸಾಗುವ ಭಕ್ತ ವೃಂದ

ಕಾಠ್ಮಂಡುವಿನ  ಪಶುಪತಿನಾಥ ದೇವಾಲಯ ನೇಪಾಳಿಗರ ಆರಾಧ್ಯ ದೈವ. ದೇಶದವರಲ್ಲದೆ, ವಿದೇಶಿಯರನ್ನೂ ಸೆಳೆವ ಸಾನ್ನಿಧ್ಯ. ದೇವಾಲಯವನ್ನು ಸಂದರ್ಶಿಸದ ಮಂದಿ ಕಡಿಮೆ. ಜೈ ಶಂಭೋ ನಾಮಸ್ಮರಣಿ ನಿತ್ಯ ಮಂತ್ರ. ಚಳಿ, ಬಿಸಿಲು, ಮಳೆಯೇ ಇರಲಿ ನಾಮಸ್ಮರಣೆಗೆ ವಿರಾಮವಿಲ್ಲ. ಅಲ್ಲಿನವರ ಭಕ್ತಿಗೆ ಮಾರುಹೋದೆ. ಅದು ತೋರಿಕೆಯ ಭಕ್ತಿಯಲ್ಲ, ಸಮರ್ಪಿತ ಭಕ್ತಿ. ಪಶುಪತಿನಾಥನಿಗೆ ತನ್ನನ್ನೇ ಸಮರ್ಪಿಸುವ ಭಕ್ತಿ. ದೇವರ ಎದುರು ನಿಂತುಜೈಶಂಭೋಎಂದು ಗಟ್ಟಿಸ್ವರದಲ್ಲಿ ಪ್ರಾರ್ಥಿಸದಿದ್ದರೆ ಆರಾಧನೆ ಪೂರ್ಣವಾಗದು

ದೇವಾಲಯದ ಸರಹದ್ದಿನಲ್ಲಿ ಹಲವಾರು ಮಂದಿ ಸಾಧುಗಳು ಸ್ವಭಾವದಲ್ಲೂ ಸಾಧುಗಳಾಗಿ ಗಮನ ಸೆಳೆಯುತ್ತಾರೆ. ಅವರ ಆಕರ್ಷಕ ವೇಷಭೂಷಣದ  ನೋಟ  ಚೆನ್ನಾಗಿದೆ. ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ಸೆಲ್ಫಿ ತೆಗೆಸಿಕೊಳ್ಳುವುದು ಪ್ರವಾಸಿಗರಿಗೆ ಮೋಜು. ‘ಈಗೀಗ ಫೋಟೋ ತೆಗೆಸಿಕೊಳ್ಳಲು ಅವರು ಶುಲ್ಕ ವಿಧಿಸುತ್ತಾರೆಹತ್ತಿರದ ಬಂಧು ಭಾರ್ಗವ ಕಾರಂತ ಮೊದಲೇ ನೆನಪಿಸಿದ್ದರು. ಅದರಲ್ಲೂ ವಿದೇಶಿಯರು ಫೋಟೋ ಅಪೇಕ್ಷಿಸಿದರೆ ಒಂದೋ, ಎರಡೋ ಡಾಲರ್ ಸಂಭಾವನೆ ಪಡೆದ ಬಳಿಕವೇ ಫೋಟೋ ಸೆಶನ್. ತಪ್ಪಲ್ಲ ಬಿಡಿ, ಸಾಧುಗಳಿಗೆ ಅದು ಅನ್ನದ ಹಾದಿ.  

ದೇವಳದ ಸನಿಹ ಹರಿವ ನದಿಯ ಇಕ್ಕೆಡೆಗಳಲ್ಲಿ ಬದುಕಿನ ಕೊನೆಯ ಪಯಣಕ್ಕಿರುವ ಸಿದ್ಧತೆಗಳ ತಾಣವಿದೆ. ರುದ್ರಭೂಮಿಯಲ್ಲಿ ಶವ ದಹನವಾದರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆ. ಏನಿಲ್ಲವೆಂದರೂ ದಿವಸಕ್ಕೆ ಇನ್ನೂರಕ್ಕೂ ಮಿಕ್ಕಿ ಶವಗಳಿಗೆ ದಹನ. ಮೊದಲ ಬಾರಿಗೆ ದೃಶ್ಯವನ್ನು ನೋಡಿದ ಜತೆಗಿದ್ದ ಬಂಧುಗಳಿಗೆ ಮುಜುಗರ. ಮತ್ತೆ ಅಭ್ಯಾಸವಾಯಿತು. ಅವರವರ ಅಂತಸ್ತಿಗೆ ತಕ್ಕಂತೆಯೂ ಅಂತ್ಯಸಂಸ್ಕಾರ ಮಾಡುವ ವ್ಯವಸ್ಥೆಗಳು.  ನಾನಲ್ಲಿದ್ದಾಗ ದೇಶದ ರಾಜಕೀಯ/ಆಡಳಿತಕ್ಕೆ ಸಂಬಂಧಿಸಿದ ಓರ್ವರ ಶವದಹನ ವಿಧಿಯು  ಸರಕಾರಿ ಉಪಚಾರಗಳೊಂದಿಗೆ ನಡೆದಿತ್ತು. ನಮ್ಮ ನಡುವೆ ಆರ್ಥಿಕತೆಯ ಶ್ರೀಮಂತಿಕೆಯಿಂದ  ಬೀಗುವ, ದರ್ಪದಿಂದ ತುಳಿಯುವ ದಪ್ಪ ಕನ್ನಡಕ ಹಾಕಿದ ಮಂದಿಗಳು ಇದ್ದಾರಲ್ಲಾ;  ಒಂದರ್ಧ ಗಂಟೆ ಕಾಠ್ಮಂಡುವಿನ ರುದ್ರಭೂಮಿಯ ದೃಶ್ಯಕ್ಕೆ ಸಾಕ್ಷಿಯಾದರೆ ಅವರೊಳಗಿದ್ದ ಮಾನವೀಯತೆಗೆ ಜೀವ ಬರಬಹುದೋ ಏನೋ

ಕಾಸರಗೋಡು ಕೂಡ್ಲಿನ ರಾಮಪ್ರಸಾದ ಮಯ್ಯ, ಮಂಗಳಾದೇವಿಯ ಸುಬ್ರಹ್ಮಣ್ಯ ಐತಾಳರ  ಜತೆ ಇಲ್ಲಿನ ಸಾಂಪ್ರದಾಯಿಕ ಪಂಚೆ, ಶಾಲು ಹಾಕಿ ದೇವಾಲಯಕ್ಕೆ ಹೊರಟಾಗ ಅಪಾದಮಸ್ತಕವಾಗಿ ನೋಡುವ ನೇಪಾಳಿಗರ ಬೆರಗು ಕಣ್ಣುಗಳಿಗೆ ಸಾಕ್ಷಿಯಾದೆವು! ಬಹುಶಃ ಚಳಿಯಲ್ಲೂ ಪ್ಯಾಂಟ್, ಸಾಕ್ಸ್, ಬೂಟು ಹಾಕದೆ ಹೋಗ್ತಾರಲ್ಲಾ.. ಎಂದೆಣಿಸಿರಬಹುದೋ ಏನೋ. ಜತೆಗೆ ಅವರಲ್ಲಿ ಭಾರತದವರೆಂಬ ಗೌರವದ ಭಾವವೂ ಸ್ಫುರಿಸಿರುವುದನ್ನು ಕಾಣಬಹುದಿತ್ತು

ಊರುಸೂರು / 10-2-2019

No comments:

Post a Comment