“ಕೃಷಿಯಲ್ಲಿ ನೆಮ್ಮದಿಯಿದೆಯೇ? ನೀವು ಸುಖವಾಗಿದ್ದೀರಾ?” ವಿದ್ಯಾರ್ಥಿಗಳ ಪ್ರಶ್ನೆ. “ಸುಖ ಅನ್ನೋದು ನಾವು ಕಂಡುಕೊಳ್ಳುವುದರಲ್ಲಿದೆ. ನಾವು ನೆಲದ ಮೇಲಿದ್ದರೆ ಸುಖ ಕಾಣ್ತದೆ.” ಕೃಷಿಕ ನಾಗೇಂದ್ರ ಸಾಗರರ ಉತ್ತರ. ಒಂದು ಕ್ಷಣ ಎಲ್ಲರ ಮೌನ.
ಶಿರಸಿ ತೋಟಗಾರಿಕಾ ಕಾಲೇಜಿನ ಅಂತಿಮ ವರುಷದ ವಿದ್ಯಾರ್ಥಿಗಳು ನಾಗೇಂದ್ರ ಸಾಗರರ ಮನೆಯಲ್ಲಿ ಪ್ರಾಕ್ಟಿಕಲ್ ಕಲಿಕೆಗಾಗಿ ಬಂದಿದ್ದರು. ಅಂದು ವಿದಾಯ ಸಮಾರಂಭ. ಏಳೆಂಟು ಮಂದಿ ಹಿರಿಯರು, ಪ್ರಾಧ್ಯಾಪಕರ ಉಪಸ್ಥಿತಿ. ಆ ಸಭೆಯಲ್ಲಿ ವಿದ್ಯಾರ್ಥಿಯ ಪ್ರಶ್ನೆಗೆ ಸಾಗರ್ ನೀಡಿದ ಉತ್ತರ ಚಿಂತನಗ್ರಾಹ್ಯ.
ಕೃಷಿ ವಿಚಾರ ಬಂದಾಗ ಗೊಣಗಾಟಗಳು ರಾಚುತ್ತವೆ. ಸಮಸ್ಯೆಗಳು ವೈಭವಗೊಳ್ಳುತ್ತವೆ. ಇಲ್ಲಗಳನ್ನು ಮಾತನಾಡುವುದು ಪ್ರತಿಷ್ಠೆ! ನಾಗೇಂದ್ರರ ಉತ್ತರದಲ್ಲಿ ಗೊಣಗಾಟಗಳಿಗೆ ಉತ್ತರವಿದೆ. ನಮ್ಮ ಮುಖವೇ ಅಲ್ವಾ - ನಮ್ಮ ಮನೆ, ಕೃಷಿ, ಬದುಕು. ಸುಖ ಇಲ್ಲಾಂದ್ರೆ ಇಲ್ಲ. ಇದೆ ಅಂದರೆ ಇದೆ!
ನಾಗೇಂದ್ರ ಸಾಗರ್ ಕೃಷಿಕ. ಹೈನುಗಾರಿಕೆ, ಜೇನು ಸಾಕಣೆಯಲ್ಲಿ ನಿಷ್ಣಾತ.
ವಿದ್ಯಾರ್ಥಿಗಳು ಅಕ್ಟೋಬರ್ ಕೊನೆಯ ವಾರ ಕೃಷಿಯಲ್ಲಿ ತೊಡಗಿಸಿಕೊಂಡರು. ಮಣ್ಣು ಮೆಟ್ಟಿದರು, ಮುಟ್ಟಿದರು, ಮೆತ್ತಿಸಿಕೊಂಡರು. ಹಟ್ಟಿಯಲ್ಲಿ ದನಗಳ ಮೈಸವರಿದರು, ಹಾಲು ಕರೆದರು, ಸೆಗಣಿ ಎತ್ತಿದರು. ಸ್ಲರಿಯನ್ನು ಕಂಪೋಸ್ಟ್ ಹೊಂಡಕ್ಕೆ ಹಾಕಿದರು. ಮತ್ತೊಂದು ಗುಂಪು ಜೇನಿನ ಕೃಷಿಯ ಸೂಕ್ಷ್ಮತೆಗೆ ಕಣ್ಣಾದರು, ಕಿವಿಯಾದರು. ಹುಳುಗಳಿಂದ ಚುಚ್ಚಿಸಿಕೊಂಡರು! ಗಿಡಗಳನ್ನು ನೆಟ್ಟರು.
ಈ ವಿದ್ಯಾರ್ಥಿಗಳೆಲ್ಲಾ ಪದವಿ ಮುಗಿಸಿ ತಮ್ಮ ಕನಸಿನ ಲೋಕದತ್ತ ಪಯಣಿಸುತ್ತಾರೆ. ಎಲ್ಲರೂ ಕೃಷಿ ಹಿನ್ನೆಲೆಯವರಲ್ಲ. ತಾವು ಆಯ್ದುಕೊಂಡ ಕಲಿಕೆಯ ಅಡಿಗಟ್ಟು ಕೃಷಿ. ಮುಂದೆ ಇವರೆಲ್ಲಾ ಸರಕಾರಿ ಅಧಿಕಾರಿಗಳಾಗಬಹುದು. ಸ್ವಂತ ಉದ್ದಿಮೆ ಮಾಡಬಹುದು, ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು. ಯಾವ ಕ್ಷೇತ್ರವನ್ನು ಆಯ್ದುಕೊಂಡರೂ ಕೃಷಿಯ ಸೂಕ್ಷ್ಮತೆಗಳ ಅರಿವಿರಲೇಬೇಕು ತಾನೆ. ಇಲ್ಲದಿದ್ದರೆ ಕ್ಷೇತ್ರದಲ್ಲಿ ಸೋಲುವ ಸಾಧ್ಯತೆಗಳು ಹೆಚ್ಚು.
“ಗೌರವ ಮತ್ತು ಪ್ರೀತಿಗಳು ಸರಕಾರಿ ಇಲಾಖೆಯಲ್ಲಿ ಸಿಗಲಾರವು. ಕೈತುಂಬಾ ಹಣ ಸಿಗಬಹುದು. ಕೃಷಿ, ತೋಟಗಾರಿಕಾ ಕ್ಷೇತ್ರಗಳಲ್ಲಿ ಆಗುತ್ತಿರುವ ಅಪ್ಡೇಟ್ಗಳಿಂದ ಜ್ಞಾನ ವೃದ್ಧಿಯಾಗಬೇಕು.” ಎಂದು ಸಲಹೆ ನೀಡುವ ಕೃಷಿಕ ದೇವೇಂದ್ರ ಬೆಳಿಯೂರು, ಅನ್ನದ ಸಂಸ್ಕೃತಿಯತ್ತ ಬೆರಳು ತೋರಿದರು, “ಈ ದೇಶದಲ್ಲಿ ಗಂಡ, ಹೆಂಡತಿ, ಮಗ, ಮಗಳು, ಕುಟುಂಬ ಜತೆಯಾಗಿ ಹೊಲದಲ್ಲಿ ದುಡಿಯುವುದರಿಂದ ನಾವೆಲ್ಲಾ ಖುಷಿಯಾಗಿದ್ದೇವೆ.”
ತಂಡದಲ್ಲಿ ನಗರದಲ್ಲಿ ಹುಟ್ಟಿ ಬೆಳೆದ ಓರ್ವ ವಿದ್ಯಾರ್ಥಿನಿಗೆ ಸೆಗಣಿ ಮುಟ್ಟುವುದು ಅಂದರೆ ಯಾಕೋ ಅಲರ್ಜಿ! “ಅದೊಂದು ಕೆಲಸ ಬಿಟ್ಟು ಬೇರೇನಾದ್ರೂ ಹೇಳಿ,” ಎಂದು ಮನೆಯೊಡಗಿ ವಾಣಿಯವರಿಗೆ ದುಂಬಾಲು ಬಿದ್ರಂತೆ! ಆದರೆ ನಾಗೇಂದ್ರರ ಮನೆಯ ಪ್ರಾಕ್ಟಿಕಲ್ ಕಲಿಕೆಯು ಬೆಳಗಾವಿಯ ಓರ್ವ ವಿದ್ಯಾರ್ಥಿಯೊಳಗೆ ಚಿಂತನೆಯ ಗೂಡು ಕಟ್ಟಿತ್ತು. ತೆರಳುವಾಗ “ಸರಕಾರಿ ಕೆಲಸ ಸಿಕ್ಕರೆ ಓಕೆ. ಇಲ್ಲದಿದ್ದರೆ ನಾನೂ ಡೈರಿ ಮಾಡ್ತೇನೆ ಎಂದು ವಿಶ್ವಾಸದಿಂದ ಹೇಳಿದರಂತೆ.
“ಸಿಲೆಬಸ್ ಕಲಿಕೆಗಿಂತ ಹೊಲದಲ್ಲಿ ಕಲಿಯುವುದು ಬೇಕಾದಷ್ಟಿದೆ ಓರ್ವ ವಿದ್ಯಾರ್ಥಿಯ ಪ್ರತಿಕ್ರಿಯೆ. ಸಾಗರದ ಮೇಘನಾ ಏನು ಹೇಳಿರಬಹುದು, “ಸೆಗಣಿ ಎತ್ತುವುದು ನನಗೆ ನಾಚಿಕೆಯಲ್ಲ.” ನಾಗೇಂದ್ರ ಸಾಗರ್ ಮತ್ತು ಅವರ ಪತ್ನಿ ವಾಣಿ –ಕೃಷಿಯ ಪಾಠ ಮಾಡಿದ್ದರು.
ವಿದ್ಯಾರ್ಥಿಗಳ ಮಾತನ್ನು ಕೇಳುತ್ತಾ ಕುಳಿತಿದ್ದೆ. ಭವಿಷ್ಯದ ಕಂಗಳಿಗೆ ಕೃಷಿಯು ಬೆರಗನ್ನು ಮೂಡಿಸಿತ್ತು. ದೂರದಲ್ಲಿ ನಿಂತು ಕೃಷಿಯನ್ನು ನೋಡಿದ, ಪಾಠದಲ್ಲಿ ಓದಿದ ವಿಚಾರಕ್ಕಿಂತ ಭಿನ್ನವಾದ ಅನುಭವ ಇಲ್ಲಿದೆ ಎನ್ನುವುದನ್ನು ಪ್ರತ್ಯಕ್ಷ ನೋಡಿದ್ದರು. ಕಾಲೇಜು ಕಲಿಕೆಯಲ್ಲಿ ಆಗಬೇಕಾದುದು ಇಂತಹ ಚಿಕ್ಕ ಸಂಚಲನಗಳು. ಸಿಲೆಬಸ್ ಕಲಿಕೆಯೇ ಅಂತಿಮವಲ್ಲ ಎನ್ನುವುದು ಗೊತ್ತಾದರೆ ಸಾಕು. ಮುಂದಿನ ಜ್ಞಾನವನ್ನು ಅವರೇ ಹುಡುಕಿಕೊಳ್ಳುತ್ತಾರೆ.
ಕೃಷಿ, ಪರಿಸರ ಕಲಿಕೆಯು ಪ್ರಾಥಮಿಕ ಹಂತದಿಂದಲೇ ಒಂದು ವಿಷಯವಾಗಿ ಕಲಿಸುವ ವ್ಯವಸ್ಥೆಗಳು ಪಠ್ಯದಲ್ಲಿ ಸೇರಬೇಕು. ಹೀಗಾದಾಗ ಮುಂದೆ ಪದವಿ ಹಂತಕ್ಕೆ ಬರುವಾಗ ಕೃಷಿಯ ವಿಚಾರಗಳು ಬೆರಗಾಗುವುದಿಲ್ಲ! ‘ಕೃಷಿಯಲ್ಲಿ ಖುಷಿ ಇದೆಯಾ’ ಪ್ರಶ್ನೆಗಳು ಮೂಡುವುದಿಲ್ಲ.
“ಭವಿಷ್ಯದಲ್ಲಿ ನೀವು ಯಾವ ವೃತ್ತಿಯನ್ನೇ ಸ್ವೀಕರಿಸಿ. ಕಲೆ, ಸಾಹಿತ್ಯಗಳು ವೃತ್ತಿಗೆ ಹೊಳಪನ್ನು ನೀಡುತ್ತವೆ. ವೃತ್ತಿಗೆ ಪ್ರವೃತ್ತಿಯ ಸ್ಪರ್ಶ ಕೊಡುವ ಮನಸ್ಸುಳ್ಳವರಾಗಿ,” ಎಂದವರು ತೀರ್ಥಹಳ್ಳಿ ತೋಟಗಾರಿಕಾ ಇಲಾಖೆಯ ಸಿದ್ಧಲಿಂಗೇಶ್.
ಊರು ಸೂರು / 11-11-2018
No comments:
Post a Comment