Sunday, February 26, 2012

’ಸಿದ್ಧಮೂಲೆ’ಯವರಿಗೆ ’ಮುದ್ದಣ ಪುರಸ್ಕಾರ’ ಪ್ರದಾನ


"ಶಬ್ದಕೋಶ ತಯಾರಿಯಲ್ಲಿ ಕೋಶರಚನಾಕಾರನ ಶ್ರಮ ಎಲ್ಲೂ ದಾಖಲಾಗುವುದಿಲ್ಲ. ಆತ ಅವಜ್ಞೆಗೆ ಒಳಗಾಗಿದ್ದಾನೆ. ಶಬ್ದವೊಂದರ ಎಲ್ಲಾ ಮಗ್ಗುಲುಗಳನ್ನು ಅಧ್ಯಯನ ಮಾಡಿ, ಅದರ ಸಾರಸಂಗ್ರಹವನ್ನು ಸಿದ್ಧಪಡಿಸಲು ಕಾಲದ ಪರಿವೆಯಿಲ್ಲದೆ ದುಡಿಯಬೇಕಾಗುತ್ತದೆ. ಆದರೆ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಭಾಷೆ, ಶಬ್ಧಗಳ ಅನಾದರ ಎದ್ದುಕಾಣುತ್ತಿರುವುದು ವಿಷಾದನೀಯ" ಎಂದು ಹಿರಿಯ ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಹೇಳಿದರು.

ಅವರು ರವಿವಾರ (26-2-2012) ಬಹುಭಾಷಾ ಪಂಡಿತ, ಸೇವಾತತ್ಪರ, ಅನುವಾದಕ ಶ್ರೀ ಸಿದ್ಧಮೂಲೆ ಶಂಕರನಾರಾಯಣ ಭಟ್ಟರಿಗೆ, ಮಂಗಳೂರಿನ 'ಮುದ್ದಣ ಪ್ರಕಾಶನ ಮುದ್ದಣ ಚಾವಡಿ'ಯ ಈ ವರುಷದ 'ಪುದ್ದಣ ಪುರಸ್ಕಾರ' ನೀಡಿ ಗೌರವಿಸುತ್ತಾ, ಸಿದ್ಧಮೂಲೆಯವರ ಸಿದ್ದಿ, ಸಾಧನೆಗಳನ್ನು ವಿವರಿಸಿ, 'ಹಳ್ಳಿಮೂಲೆಯಲ್ಲಿ ಸದ್ದಿಲ್ಲದೆ ಸಾರಸ್ವತ ಲೋಕಕ್ಕೆ ಗಣನೀಯ ಪ್ರಮಾಣದಲ್ಲಿ ವಾಙ್ಮಯ ಕೊಡುಗೆ ನೀಡಿದ ಸಿದ್ದಮೂಲೆಯವರಿಗೆ ಕನ್ನಾಡಿನಲ್ಲಿ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ' ಎಂದು ವಿಷಾದಿಸಿದರು.

ಡಾ.ಪಾದೆಕಲ್ಲು ವಿಷ್ಣು ಭಟ್ಟರು ಶಾಲು, ಫಲತಾಂಬೂಲ, ಪುರಸ್ಕಾರ ಫಲಕ ಮತ್ತು ನಿಧಿಯೊಂದಿಗೆ ಭಟ್ಟರನ್ನು ಗೌರವಿಸಿದರು. 'ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸಾಮಾಜಿಕ ಋಣವನ್ನು ತೀರಿಸುವ ಉದ್ದೇಶದಿಂದ ಬೇರೆ ಬೇರೆ ಕ್ಷೇತ್ರದಲ್ಲಿ ಒಂದಷ್ಟು ಕೆಲಸಗಳನ್ನು ಮಾಡಿದ ಸಂತೃಪ್ತಿ ನನಗಿದೆ' ಎಂದರು ಸಿದ್ಧಮೂಲೆ ಶಂಕರನಾರಾಯಣ ಭಟ್.

ಪುತ್ತೂರು ಸನಿಹದ ಪೆರ್ಲಂಪಾಡಿಯ ಸಿದ್ಧಮೂಲೆಯವರ ಸ್ವಗೃಹದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತಾಧಿಕಾರಿ ಶ್ರೀ ಕೆ.ವಿ.ನಾರಾಯಣ ಅವರು ಸಿದ್ಧಮೂಲೆಯವರ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾ ಅಭಿನಂದಿಸಿದರು.

ಮಂಗಳೂರಿನ ಮುದ್ದಣ ಪ್ರಕಾಶನದ ಗೌರವ ನಿರ್ದೇಶಕ, ಪ್ರಕಾಶಕ ಶ್ರೀ ನಂದಳಿಕೆ ಬಾಲಚಂದ್ರ ರಾವ್ ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿದರು. ಪತ್ರಕರ್ತ, ವಿಮರ್ಶಕ ನಾ. ಕಾರಂತ ಪೆರಾಜೆ ವಂದಿಸಿದರು. ಸಮಾರಂಭದಲ್ಲಿ ಸಿದ್ಧಮೂಲೆಯವರ ಎಲ್ಲಾ ಬಂಧುಗಳು ಉಪಸ್ಥಿತರಿದ್ದರು.

Monday, February 6, 2012

ಪಠ್ಯಕ್ಕೆ ಸೇರ್ಪಡೆಗೊಂಡ 'ಹಾಜಬ್ಬ ಲೇಖನ'

ನಾ. ಕಾರಂತ ಪೆರಾಜೆಯವರು ಅಕ್ಷರಯೋಗಿ ಹಾಜಬ್ಬರ ಕುರಿತು ಪ್ರಜಾವಾಣಿಯಲ್ಲಿ ಬರೆದ ಬರೆಹವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್ನ ಕನ್ನಡ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಈ ಶೈಕ್ಷಣಿಕ ವರ್ಷದಿಂದಲೇ ಹಾಜಬ್ಬರ ಸಾಧನೆ ಕುರಿತ ಕನ್ನಡ ಪಠ್ಯ 'ಸಾಹಿತ್ಯ ಸ್ಪಂದನ ಭಾಗ-2 ರಚನೆಗೊಂಡಿದೆ.

ಹಾಜಬ್ಬ ಕಿತ್ತಳೆ ವ್ಯಾಪಾರಿ. ಹರೇಕಳದ ನ್ಯೂಪಡ್ಪು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯ ಮಟ್ಟಕ್ಕೆ ಕೊಂಡಯ್ದ ಸಾಹಸಿ. ದಾನಿಗಳ ನೆರವಿನಿಂದ ಹಳ್ಳಿಯಲ್ಲಿ ಅಕ್ಷರಕ್ರಾಂತಿಯನ್ನು ಮಾಡಿದ ಯೋಗಿ ಹಾಜಬ್ಬರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕನ್ನಾಡಿನ ಎಲ್ಲಾ ಪತ್ರಿಕೆಗಳು ಅವರ ಸಾಧನೆಗೆ ಬೆಳಕು ಹಾಕಿವೆ. ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.
ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದರ್ಗ ಜಿಲ್ಲೆಗಳ ಕಾಲೇಜುಗಳಲ್ಲಿ ಪಠ್ಯದ ಮೂಲಕ ಹಾಜಬ್ಬರ ಅಕ್ಷರ ಕ್ರಾಂತಿಗೆ ಮಾನ-ಸಂಮಾನ ಪ್ರಾಪ್ತವಾದಂತಾಗಿದೆ. ವಾಣಿಜ್ಯ ಪದವೀಧರರಿಗೆ ಸಾಮಾಜಿಕ ಸ್ಪಂದನದ ಜವಾಬ್ದಾರಿಯ ಸಂದೇಶ ಸಿಗಬೇಕೆನ್ನುವುದು ಪಠ್ಯಪುಸ್ತಕ ರೂಪೀಕರಣ ಸಮಿತಿಯ ಆಶಯ

ಪಠ್ಯದಲ್ಲಿ ಹಾಜಬ್ಬನವರ ಲೇಖನವೂ ಸೇರಿದಂತೆ ಕೃಷಿಋಷಿ ಚೇರ್ಕಾಡಿ ರಾಮಚಂದ್ರ ರಾಯರು, ಕಥೆಗಾರ್ತಿ ಅನುಪಮಾ ನಿರಂಜನ, ಪರಸರ ತಪಸ್ವಿ ಸಾಲುಮರದ ತಿಮ್ಮಕ್ಕ.. ಮೊದಲಾದ ಸಾಧಕರ ಬರೆಹಗಳೂ ಸೇರಿವೆ. ಸಾಹಿತ್ಯ ಸ್ಪಂದನ ಭಾಗ-2 ಪಠ್ಯವು 2016ರ ತನಕ ವಾಣಿಜ್ಯ ವಿಭಾಗಕ್ಕೆ ಪಠ್ಯವಾಗಲಿದೆ. ಒಟ್ಟು 132 ಪುಟಗಳು. ಪ್ರತೀ ಸಾಧಕರ ಬಗ್ಗೆ ಆರೇಳು ಪುಟಗಳ ಮಾಹಿತಿ. ಈ ಬರೆಹವು ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಈ ಹಿಂದೆ ಪ್ರಕಟವಾಗಿತ್ತು.

Thursday, February 2, 2012

ಮೊಂಟೆಪದವು ಕಾರಂತರಿಗೆ ನುಡಿನಮನ




"ಹಳ್ಳಿ ಮೂಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಹುಟ್ಟಿಗೆ ಕಾರಣರಾಗಿ, ತನುಶ್ರಮವನ್ನು ಮರೆತು, ಕುಟುಂಬಕ್ಕಿಂತಲೂ ಶಾಲೆಯನ್ನು ಪ್ರೀತಿಸಿ ಬೆಳೆಸಿದವರು ಅಕ್ಷರ ಯೋಗಿ ಮೊಂಟೆಪದವು ಪರಮೇಶ್ವರ ಕಾರಂತರು. ಇವರು ಒಂದು ಕಾಲಘಟ್ಟದಲ್ಲಿ ಮನೆಮನೆಗೆ ತೆರಳಿ, ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಓಲೈಸಿ, ಹೆತ್ತವರಿಗೆ ಅಕ್ಷರದ ಮಹತ್ವವನ್ನು ಸಾರಿದವರು. ಶಿಸ್ತುಬದ್ಧ ಜೀವನ, ಆಡಳಿತದಿಂದ ಶಿಕ್ಷಣಕ್ಕೆ ಗೌರವ ತಂದವರು," ಎಂದು ನಿವೃತ್ತ ಅಧ್ಯಾಪಕ, ಕವಿ, ಸಾಹಿತಿ ಮುಳಿಯ ಶಂಕರ ಭಟ್ ಹೇಳಿದರು.

ಈಚೆಗೆ ನಿಧನರಾದ ಅಕ್ಷರಯೋಗಿ ಮೊಂಟೆಪದವು ಪರಮೇಶ್ವರ ಕಾರಂತರ ಸ್ವಗೃಹದಲ್ಲಿ ಜರುಗಿದ ಶೃದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸುತ್ತಾ, 'ಅಧ್ಯಾಪಕನೊಬ್ಬನಿಗೆ ಆದರ್ಶಪ್ರಾಯರಾಗಿದ್ದ ಕಾರಂತರಂತಹ ಅಧ್ಯಾಪಕರ ರೂಪೀಕರಣ ಕಾಲದ ಆವಶ್ಯಕತೆ' ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಹಿರಿಯರಾದ ಲಾಡ ನಾರಾಯಣ ಭಟ್ಟರು ದೀಪಜ್ವಲನದೊಂದಿಗೆ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದ್ದರು.

ಅಧ್ಯಾಪಕ ನಾರಾಯಣ ಮಣಿಯಾಣಿ, ಗೋಪಾಲ ಮಾಸ್ತರ್, ಅಬ್ದುಲ್ ಜಲೀಲ್, ಶಾಂತಲಾ ಕಾರಂತ, ಎಡಂಬಳೆ ಗೋಪಾಲ ಭಟ್, ಬಲೆತ್ತೋಡು ನಾರಾಯಣ ಶೆಟ್ಟಿ, ಅಮ್ಮೆಂಬಳ ಸುಬ್ಬಣ್ಣ ನಾವಡ, ಕೊಲ್ಲರಮಜಲು ಶಂಕರ ಭಟ್.. ಮೃತರ ಕೊಡುಗೆಗಳನ್ನು ಸ್ಮರಿಸಿಕೊಂಡರು.

ವಿಶ್ರಾಂತ ಪ್ರಾಂಶುಪಾಲ ಎ.ಸದಾಶಿವ ನಾವಡರ ಸ್ವಾಗತದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಹಿರಿಯ ವೈದ್ಯರಾದ ಕೈರಂಗಳ ನಾರಾಯಣ ಹೊಳ್ಳರು ವಂದಿಸಿದರು.

ಈ ಸಂದರ್ಭದಲ್ಲಿ ಮೊಂಟೆಪದವು ಶೈಕ್ಷಣಿಕ ಸಂಸ್ಥೆಗಳಲ್ಲಿ ಜರುಗಿದ ಶೃದ್ಧಾಂಜಲಿ ಸಭೆಯ ನಡವಳಿಕೆಯನ್ನು ಮೃತರ ಚಿರಂಜೀವಿಗಳಾದ ಲಿಂಗನಾಥ ಕಾರಂತ, ವಾಸುದೇವ ಕಾರಂತ, ಶ್ರೀಕುಮಾರ ಕಾರಂತರಿಗೆ ಹಸ್ತಾಂತರಿಸಲಾಯಿತು. ಕೊನೆಯಲ್ಲಿ ಮಿತ್ರಭೋಜನ ಜರುಗಿತು.