Tuesday, October 27, 2015

ಯೂಸ್ ಅಂಡ್ ಥ್ರೋ.....!

              ಬದುಕಿನ ಎಷ್ಟೋ ಕ್ಷಣಗಳಲ್ಲಿ ಆಪ್ತರಿಂದ, ಸ್ನೇಹಿತರಿಂದ, ಬಂಧುಗಳಿಂದ 'ಯೂಸ್ ಅಂಡ್ ಥ್ರೋ' ಅನುಭವ ಬಹುತೇಕರಿಗೆ ಆಗಿರುತ್ತದೆ. ಈ ಅನುಭವ ಮೌನವಾಗುವುದೇ ಹೆಚ್ಚು. ಮಾತಾಗುವುದಿಲ್ಲ. 'ಮಾತಾಗಬೇಕಾದರೆ ಆರ್ಥಿಕ ಸಬಲತೆ ಬೇಕು. ಅಂತಸ್ತು ಬೇಕು' ಮಾತಿನ ಮಧ್ಯೆ ಒಬ್ಬರು ಹೇಳಿದ ಮಾತು ಸತ್ಯವೆಂದು ತೋರುತ್ತದೆ.
               ಸುಮಾರು ಮೂವತ್ತು ವರುಷಗಳ ಸಾಹಿತ್ಯ, ಯಕ್ಷಗಾನ ಬದುಕಿನಲ್ಲಿ ಇಂತಹ ಅನುಭವ ಸಾಕಷ್ಟು ಆಗಿದೆ. ಯೂಸ್ ಮಾಡಿಕೊಳ್ಳುವಾಗ ಅವರು ಮುಂದೆ ಥ್ರೋ ಮಾಡಿಯಾರು ಎನ್ನುವ ಕಲ್ಪನೆ ಮನದ ಮೂಲೆಯಲ್ಲಿದ್ದರೂ 'ಛೇ... ಹೀಗಾಯಿತಲ್ಲಾ' ಅಂತ ಬೇಸರವಾಗುತ್ತದೆ. ಯೂಸ್ ಮಾಡಿಕೊಳ್ಳುವಾಗ ಹೊಗಳಿಕೆಯ ಹೊನ್ನಶೂಲ. ಆತ ಪ್ರಯೋಜನವಿಲ್ಲ ಎಂದಾದರೆ ಹಗುರ, ಗೇಲಿ ಮಾತುಗಳಿಂದ 'ಥ್ರೋ' ಮಾಡಿಬಿಡುತ್ತಾರೆ.
                 ಯೂಸ್ ಮಾಡಿಕೊಳ್ಳುವಾಗ ನಾನು ಹಲವು ಬಾರಿ ಯೋಚಿಸಿದ್ದಿದೆ - 'ಕಷ್ಟ ಕಾಲಕ್ಕೆ ಇವರು ನೆರವಾಗಬಹುದು. ಮುಂದೆ ಎಂದಾದರೂ ಇವರು ಸಹಾಯಕರಾದಾರು'. ಅದೆಲ್ಲಾ ಸುಮ್ಮನೆ...! ಅಲ್ಲೋ ಇಲ್ಲೋ ಸಹೃದಯತೆ ಮತ್ತು ಸಹೃದಯರು ಇರಬಹುದೇನೋ!
                ಈಚೆಗೆ ಶುಭ ಸಮಾರಂಭವೊಂದರಲ್ಲಿ ಪರಿಚಿತರೊಬ್ಬರು ಮಾತಿಗೆ ಸಿಕ್ಕರು. ಅವರು ಮಾತನಾಡುತ್ತಾ, "ಈಗಿನ ಕಾಲದಲ್ಲಿ ಸ್ಟೇಟಸ್ ಬೇಕು. ಅದಿಲ್ಲದಿದ್ದರೆ ಯಾರೂ ಹತ್ತಿರ ಮಾಡಿಕೊಳ್ಳುವುದಿಲ್ಲ. ಬೆರಳಿಗೆ ಉಂಗುರ, ಪ್ರಯಾಣಿಸಲು ಕಾರು, ದೊಡ್ಡ ದೊಡ್ಡ ಮನೆ, ಜಾಗ...ಇದೆಲ್ಲಾ ಬೇಕು. ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ಪ್ರಯೋಜನವಿಲ್ಲ." ಎಂದಿದ್ದರು.
              ಇವರ ಮಾತನ್ನು ಒಪ್ಪಬೇಕಾಗಿಲ್ಲ. ಆದರೆ ಸಮಾಜವನ್ನು ನೋಡುವಾಗ ಹೌದೆಂದು ಅನ್ನಿಸುತ್ತದೆ. ನನ್ನಲ್ಲಿ, "ಉಂಗುರುವಿಲ್ಲ, ವಾಹನವಿಲ್ಲ, ಸ್ವಂತದ್ದಾದ ಮನೆಯಿಲ್ಲ. ಇನ್ನೂ 'ಸೆಟ್ಲ್' ಆಗಿಲ್ಲ." ಹಾಗಾಗಿಯೇ ಇರಬೇಕು - ಯೂಸ್ ಅಂಡ್ ಥ್ರೋ.... ಕಾಡುವುದು.

Sunday, September 6, 2015

ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ರಕ್ಞಾಬಂಧನ

ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ‍ಆಗಸ್ಟ್ 31ರಂದು ರಕ್ಷಾಬಂಧನ ಮತ್ತು ಓಣಂ ಹಬ್ಬ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ. ಸುಮಾರು 30 ನಿಮಿಷ ಮಾತನಾಡಿದೆ.

ಪುತ್ತೂರಿನಲ್ಲಿ ಕೃಷ್ಣಾಷ್ಟಮಿ


ಪುತ್ತೂರು ಪುರಭವನದಲ್ಲಿ ಸೆಪ್ಟೆಂಬರ್ 5, ಅಪರಾಹ್ನ ಗಂಟೆ 3 ಕ್ಕೆ ಕೃಷ್ಣ ಜನ್ಮಾಷ್ಟಮಿ ಆಚರಣೆ.  ಸರಕಾರಿ ಯೋಜಿತ ಕಾರ್ಯಕ್ರಮ. ಪುತ್ತೂರಿನ ಶಾಸಕಿ ಶ್ರೀಮತಿ ಶಕುಂತಾಲಾ ಟಿ. ಶೆಟ್ಟಿಯವರ ಅಧ್ಯಕ್ಷತೆ. ಸಹಾಯಕ ಕಮಿಷನರ್ ಶ್ರೀ ಬಸವರಾಜ್ ಇವರಿಂದ ಉದ್ಘಾಟನೆ. ನಾ. ಕಾರಂತ ಪೆರಾಜೆಯವರಿಂದ ಕೃಷ್ಣ ಸಂದೇಶ. ತಾ.ಪಂ.ಅಧ್ಯಕ್ಷ ಪುಲಸ್ತ್ಯಾರೈ, ನಗರಸಭಾ ಪೌರಾಯುಕ್ತ ರೇಖಾ ಜೆ. ಶೆಟ್ಟಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್., ತಹಶೀಲ್ದಾರ್ ಸಣ್ಣರಂಗಯ್ಯ.... ಮೊದಲಾದವರ ಉಪಸ್ಥಿತಿ.

Wednesday, June 3, 2015

ಖುಷಿ ನೀಡಿದ ತಾಳಮದ್ದಳೆ


              ಮೇ 27ರಂದು ಅಪರಾಹ್ನ ಗಂಟೆ 3. ಪುತ್ತೂರು ಹಾರಾಡಿ ಶ್ಯಾಮ ಭಟ್ಟರ ಗೃಹಪ್ರವೇಶ. ಬಡೆಕ್ಕಿಲ ಗಣರಾಜ ಇವರ ಆಯೋಜನೆಯಲ್ಲಿ ತಾಳಮದ್ದಳೆ. ಪ್ರಸಂಗ : ದಕ್ಷಾಧ್ವರ. ಸುಮಾರು 3 ಗಂಟೆಯಿಂದ 7-30ರ ತನಕ ತಾಳಮದ್ದಳೆಯ ವೈಭವ.
              ಪದ್ಯಾಣ ಗಣಪತಿ ಭಟ್ ಮತ್ತು ತೆಂಕಬೈಲು ತಿರುಮಲೇಶ್ವರ ಭಟ್ಟರ ದ್ವಂದ್ವ ಹಾಡುಗಾರಿಕೆ ಕೂಟದ ಹೈಲೈಟ್. ಇಬ್ಬರೂ ಸುಶ್ರಾವ್ಯವಾಗಿ ಹಾಡಿ ಪ್ರಸಂಗವನ್ನು ಉತ್ತುಂಗ ಶಿಖರಕ್ಕೇರಿಸಿದ್ದರು. ಚೈತನ್ಯ ಪದ್ಯಾಣರ ಮದ್ದಳೆ. ರವಿ ಭಟ್ ಚೆಂಡೆ.
ಅರ್ಥಧಾರಿಗಳಾಗಿ - ಉಜಿರೆ ಅಶೋಕ ಭಟ್ (ಈಶ್ವರ), ನಾ. ಕಾರಂತ ಪೆರಾಜೆ (ದಾಕ್ಷಾಯಿಣಿ), ಪಕಳಕುಂಜ ಶ್ಯಾಮ ಭಟ್ (ದಕ್ಷ), ಭಾಸ್ಕರ ಬಾರ್ಯ (ದೇವೇಂದ್ರ), ಪೆರುವೋಡಿ ನಾರಾಯಣ ಭಟ್, ಜಯಾನಂದ ಕೊಡಂಗಾಯಿ (ಬ್ರಾಹ್ಮಣರು), ಬಡೆಕ್ಕಿಲ ಗಣರಾಜ ಭಟ್ (ವೀರಭದ್ರ).
            ತುಂಬಾ ತೃಪ್ತಿ ನೀಡಿದ ತಾಳಮದ್ದಳೆ. ಸುಮೂರು ನೂರಕ್ಕೂ ಮಿಕ್ಕಿ ಪ್ರೇಕ್ಷಕರು ಕೂಟವನ್ನು ಆಸ್ವಾದಿಸಿದ್ದರು. ಅಶೋಕ ಭಟ್ಟರ ಮಾತಿನ ವೈಖರಿ. ಎದುರು ಪಾತ್ರವನ್ನು ಮಾತಿಗೆಳೆಯುವ ತಂತ್ರ ಅನನ್ಯ. ಅವರೊಂದಿಗೆ ಮೊದಲು ಪಾತ್ರಗಳನ್ನು ಮಾಡಿದ ಅನುಭವವಿದ್ದುರಿಂದ ಕೂಟದ ಅರ್ಥಗಾರಿಕೆ ಕಷ್ಟವಗಿಲ್ಲ. ಲೌಕಿಕ, ತಿಳಿ ಹಾಸ್ಯದೊಂದಿಗೆ ಪ್ರಸಂಗ ಚೆನ್ನಾಗಿ ಮೂಡಿಬಂತು.
        


ಅರ್ಥವಾಗದ ಬದುಕು....

ಬದುಕು ಅರ್ಥವಾಗುವುದಿಲ್ಲ.....!
ಅರ್ಥವಾಗಬಾರದು ಬಿಡಿ.....

ಭರವಸೆಯ ಬೆಳಕಿನ
ನಂದಾದೀಪದ ಎಣ್ಣೆ
ಆರುವ ವೇಗ ಎಷ್ಟೊಂದು ಕ್ಷಿಪ್ರ...

ಬತ್ತಿ ಕರಟಿದಾಗಲೇ ಗೊತ್ತು...

ಎಣ್ಣೆ ಆರಿದೆ.....
ಮೊದಲೇ ಗೊತ್ತಾಗುತ್ತಿದ್ದರೆ ಎಣ್ಣೆ ಹಾಕುತ್ತಿದ್ದೆ....
ಈ ಗೊತ್ತಾಗದಿರುವುದೇ..... ಬದುಕು...
ಅಬ್ಬಾ..... ಅದರ ತಾಕತ್ತೇ.....!?

ಆರುವ ಮೊದಲು ಪ್ರಕಾಶದ ಪ್ರಭೆ
ಕತ್ತಲು ಸರಿದ ಅನುಭವ
ರಾಚುವ ಖುಷಿಗಳ ಮಾಲೆ
ಸಾಧಿಸಿದ ಗತ್ತು-ಗೈರತ್ತು....

ಬೀರಿದ ಪ್ರಭೆಗೆ ಮೊಗೆಮೊಗೆವ ರಿಂಗಣ
ರಿಂಗಿಸಿದಷ್ಟೂ ಬಾಚಿಕೊಳ್ಳುವ ಅವಕಾಶಗಳು
ಕರಬುವಷ್ಟು... ಗೊಣಗಾಡುವಷ್ಟು... ಹೊಟ್ಟೆಯೊಳಗಿನ ಹುಳ ಸಾಯುವಷ್ಟು..
ವಕ್ರನೋಟಿಗಳಿಗಿದು ಕೊನೆಯ ಅಸ್ತ್ರ

ಪ್ರಭೆಯಾರುವ ಮುನ್ನ ಸುತ್ತುವ ದುಂಬಿಗಳು
ಪ್ರಭೆಯ ಸ್ನೇಹ ಪಡೆದ ಹಪಾಹಪಿ
ಅಂತರ ಹೆಚ್ಚಾದಾಗ ಪ್ರಭೆಯೊಳಗೆ ಪ್ರಭೆಯಾಯಿತು
ಪ್ರಭೆಯ ಪ್ರಖರ ಕಡಿಮೆಯಾದಾಗ ದುಂಬಿಗಳು ಮಾಯ.....

Thursday, July 11, 2013

ಉಪ್ಪಿನಂಗಡಿಯಲ್ಲಿ ಸಂಮಾನ


ಉಪ್ಪಿನಂಗಡಿ ರಾಮನಗರದ ಸೌಹಾರ್ದ ಯಕ್ಷಗಾನ ಸಮಿತಿಯು ನಾ. ಕಾರಂತ ಪೆರಾಜೆಯವರರನ್ನು ಜುಲೈ 6, 2013ರಂದು ಸಂಮಾನಿಸಿತು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣರು ಶಾಲು, ಹಾರ, ಹಣ್ಣುಹಂಪಲು, ಗುಣಕಥನ ಫಲಕ, ಸ್ಮರಣಿಗೆ ನೀಡಿ ಗೌರವಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅಭಿನಂದನಾ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ದಿ.ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ಹದಿನೈದನೇ ವರುಷದ ಪ್ರಶಸ್ತಿಯನ್ನು ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ: ವೇದವ್ಯಾಸ ರಾಮಕುಂಜ ಇವರಿಗೆ ನೀಡಲಾಯಿತು. ಉಪ್ಪಿನಂಗಡಿ ಸ.ಪ.ಪೂ.ಕಾಲೇಜಿನ ಉಪ ಪ್ರಾಚಾರ್ಯ ದಿವಾಕರ ಆಚಾರ್ಯ ಗೇರುಕಟ್ಟೆಯವರು ವಿಷ್ಣುಮೂರ್ತಿ ನೂರಿತ್ತಾಯರ ಸಂಸ್ಮರಣೆ ಮಾಡಿದರು. ರಂಗನಾಥ ರಾವ್ ಬೊಳ್ವಾರು ಗುಣಕಥನ ಫಲಕವನ್ನು ವಾಚಿಸಿದರು. ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಶ ಎನ್ ಉಮೇಶ ಶೆಣ್ಯೆ ಉಪಸ್ಥಿತಿ. ಗುಡ್ಡಪ್ಪ ಬಲ್ಯ ನಿರೂಪಿಸಿದರು.

Wednesday, August 29, 2012

'ಅಭಿವೃದ್ಧಿ-ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನನಾ. ಕಾರಂತ ಪೆರಾಜೆಯವರಿಗೆ ಕರ್ನಾಟಕ ಘನ ಸರಕಾರದ ವಾರ್ತಾ ಇಲಾಖೆಯು ನೀಡುವ 'ಅಭಿವೃದ್ಧಿ-ಪರಿಸರ ಪತ್ರಿಕೋದ್ಯಮ ಪ್ರಶಸ್ತಿ' ಪ್ರದಾನ ಸಮಾರಂಭವು ಆ.27ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜರುಗಿತು. ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಮತ್ತು ಉಪಮುಖ್ಯಮಂತ್ರಿ ಆರ್.ಅಶೋಕ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸರಕಾರದ ಕಾರ್ಯದರ್ಶಿ ಬಸವರಾಜು, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಉಪಸ್ಥಿತರಿದ್ದರು.