Saturday, July 13, 2019

ಲಿಮ್ಕಾ ದಾಖಲೆಯ ಪುಸ್ತಕ ಮನೆ


                ಇವರು ಎಂ.ಅಂಕೇಗೌಡರು. ಮಂಡ್ಯದ ಪಾಂಡವಪುರದವರು. ಸಾದಾ ಮನುಷ್ಯ. ಸರಳ ವ್ಯಕ್ತಿತ್ವ. ಶ್ರೀಮಂತಿಕೆಯನ್ನು ಕತ್ತೆತ್ತಿ ನೋಡದ ಹೃದಯ ಶ್ರೀಮಂತ. ನಿಜಾರ್ಥದ ಅಕ್ಷರ ಪ್ರೇಮಿ. ಇವರ ಹತ್ತು ಲಕ್ಷ ಪುಸ್ತಕಗಳಪುಸ್ತಕ ಮನೆಯು ಲಿಮ್ಕಾ ದಾಖಲೆಯಲ್ಲಿ ದಾಖಲಾಗಿದೆ

                ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜನೆಯ ಪುಸ್ತಕ ಹಬ್ಬಕ್ಕೆ ಅಂಕೇಗೌಡರು ಆಗಮಿಸಿದ್ದರು. ಅಕ್ಷರ ಪ್ರೇಮಿಗಳಿಗೆ ಸುದ್ದಿ ಯಾವುದೇ ಭಾವನೆಗಳನ್ನು ಕಟ್ಟಿಕೊಡಲಿಲ್ಲ! ಕುತೂಹಲವೂ ಉಂಟಾಗಲಿಲ್ಲ. ನಮ್ಮಲ್ಲಿ ಹತ್ತು ಪುಸ್ತಕದ ಪುಟ್ಟ ಗ್ರಂಥಾಲಯವೇ ಇಲ್ಲದಿದ್ದ ಮೇಲೆ ಹತ್ತು ಲಕ್ಷ ಪುಸ್ತಕ ಸಂಗ್ರಹದ ಅಂಕೇಗೌಡರ ಆಗಮನ ಹೇಗೆ ಗಮನ ಸೆಳೆದೀತು?

                ಅಂಕೇಗೌಡರಿಗೆ ಬಾಲ್ಯದಿಂದಲೇ ಓದಿನ ದಾಹ. ಕೊಂಡು ಓದುವಷ್ಟು ಉಳ್ಳವರಲ್ಲ. ಓದಬೇಕೆಂಬ ಹಠ. ಶಾಲಾ ಕಲಿಕೆಯೊಂದಿಗೆ ಅಷ್ಟಿಷ್ಟು ಓದು. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸ್ವಲ್ಪ ಕಾಲ ದುಡಿತ. ಮುಂದೆ ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ಅಧಿಕಾರಿಯಾಗಿ ಆಯ್ಕೆ

                ಒಳ್ಳೆಯ ಹವ್ಯಾಸಗಳು ಮೌಲ್ಯಯುತ ಬದುಕನ್ನು ರೂಪಿಸುತ್ತದೆ. ಪುಸ್ತಕಗಳು ಸ್ನೇಹಿತನಿದ್ದಂತೆ. ಅದರ ಸಂಗ್ರಹದಿಂದ ಬಡವರಿಗೆ ಸಹಕಾರಿಯಾಗುತ್ತದೆಎಂದು ಗುರುಗಳಾದ ಕೆ.ಅನಂತರಾಮು ಅವರು ಹೇಳಿದ ಮಾತು ಗೌಡರ ಬದುಕಿನ ಮಂತ್ರವಾಯಿತು. ಅಲ್ಲಿಂದ ಪುಸ್ತಕದ ಗೀಳು. ಗಳಿಕೆಗಳೆಲ್ಲಾ ಪುಸ್ತಕ ಖರೀದಿಗೆ ಮೀಸಲು. ಹನಿಗೂಡಿ ಹಳ್ಳವಾಯಿತು.

                ಉದ್ಯೋಗದಿಂದ ಸ್ವ-ನಿವೃತ್ತಿ ಪಡೆದರು. ಪ್ರಾವಿಡೆಂಟ್ ಫಂಡಿನ ಹಣ ಕೈಗೆ ಬಂತು. ಅದೇ ಹೊತ್ತಿಗೆ ಹೊಲದಲ್ಲಿ ಕಬ್ಬು ಬೆಳೆದು ನಿಂತಿತ್ತು. ಕಬ್ಬನ್ನು ಮಾರಿದ್ದರಿಂದ ಒಂದಷ್ಟು ಹಣ. ಅಲ್ಲದೆ ಮೈಸೂರಿನ ಮತ್ತು ಊರಿನ ತಮ್ಮ  ನಿವೇಶನವನ್ನು ಮಾರಿದ್ದರಿಂದ ಲಭ್ಯವಾದ ಹಣ. ಇವೆಲ್ಲವನ್ನೂ ಸೇರಿಸಿದಾಗ ಸಿಕ್ಕ ದೊಡ್ಡ ಮೊತ್ತವನ್ನು ಗೌಡರು ಬ್ಯಾಂಕಿನಲ್ಲಿ ಠೇವಣಿ ಇಡಲಿಲ್ಲ! ಎಲ್ಲವನ್ನೂ ಕಟ್ಟಡ ನಿರ್ಮಾಣ ಮತ್ತು ಪುಸ್ತಕ ಖರೀದಿಗೆ ಬಳಸಿದರು.  

                ಪುಸ್ತಕದ ಹುಚ್ಚು ಅಲ್ಲ, ಆಸಕ್ತಿ ಒಮ್ಮೆ ಮೈಮೇಲೆ ಬಂದುಬಿಟ್ಟರೆ ಮತ್ತೆ ಅದೊಂದು ನನಗೆ ತಪಸ್ಸಾಯಿತು. ಪುಸ್ತಕಗಳ ಸಂಖ್ಯೆ ಹೆಚ್ಚಾದಂತೆ ಅದನ್ನು ವ್ಯವಸ್ಥಿತವಾಗಿ ಪೇರಿಸುವುದು ಸಮಸ್ಯೆಯಾಯಿತು. ಆಪ್ತರು ನೆರವಾದರೂ ಪುಸ್ತಕಗಳ ಸಂಖ್ಯೆ ಬೆಳೆಯುತ್ತಾ ಹೋಯಿತು.” ಎಂದು ಕಳೆದ ದಿನಗಳನ್ನು ನೆನಪುಮಾಡಿಕೊಳ್ಳುತ್ತಾರೆ

                ಕೆ.ಆರ್.ಎಸ್.ಅಣೆಕಟ್ಟು ನಮಗೆಲ್ಲಾ ಗೊತ್ತು. ಮೈಸೂರಿಗೆ ಭೇಟಿ ನೀಡಿದವರೆಲ್ಲರೂ ಕೆ.ಆರ್.ಎಸ್ಗೆ ಹೋಗದೆ ಪ್ರಯಾಣ ಪೂರ್ತಿಯಾಗುವುದಿಲ್ಲ. ಇದರ ಹಿನ್ನೀರಿನಿಂದಾಗಿ ವೇಣುಗೋಪಾಲ ಸ್ವಾಮಿ ದೇವಸ್ಥಾನ ಮುಳುಗಡೆಯಾಗುವುದರಲ್ಲಿತ್ತು. ಖ್ಯಾತ ಉದ್ಯಮಿ ಶ್ರೀ ಹರಿಖೋಡೆಯವರ ಮುಂದಾಳ್ತನದಲ್ಲಿ ದೇವಳವನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿತ್ತು.

                ಖೋಡೆಯವರಿಗೆ ಅಂಕೇಗೌಡರ ಪುಸ್ತಕಾಲಯ ಮತ್ತು ಅದು ಅವ್ಯವಸ್ಥಿತವಾಗಿರುವುದು ಗಮನಕ್ಕೆ ಬಂತು. ಆರ್ಥಿಕ ಸಹಕಾರ ನೀಡುತ್ತೇನೆಂದರೂ ಗೌಡರು ಸಮ್ಮತಿಸಲಿಲ್ಲ. ಕೊನೆಗೆ ಖೋಡೆಯವರು ತನ್ನ ಓರ್ವ ಇಂಜಿನಿಯರ್ ಮತ್ತು ನಲವತ್ತು ಮಂದಿ ಸಹಾಯಕರನ್ನು ನೀಡಿದರು. ಪುಸ್ತಕವು ವ್ಯವಸ್ಥಿತವಾಗಿ ಜೋಡಣೆಯಾದಾಗ ಅದು ಹಳ್ಳಿಯಲ್ಲಿ ಸುದ್ದಿಯಾಯಿತು. ವಾಚನಾಲಯವನ್ನು ನೋಡಲು ಜನರು ಬರಲಾಂಭಿಸಿದರು. ಹೀಗೆ ಬಂದವರಿಗೆಲ್ಲಾ ಅತಿಥಿ ಸತ್ಕಾರ. ಹೊಟ್ಟೆ ತಂಪು ಮಾಡಿ ಬೀಳ್ಕೊಡುತ್ತಿದ್ದರು.

                ಶತಮಾನಗಳಷ್ಟು ಹಳೆಯದಾದ ಪುಸ್ತಕಗಳು ಗೌಡರ ಸಂಗ್ರಹದಲ್ಲಿವೆ. ಜೈನ ಸಾಹಿತ್ಯ, ಶರಣ ಸಾಹಿತ್ಯ, ದಾಸ ಸಾಹಿತ್ಯ, ಪುರಾಣ ಹಳಗನ್ನಡ, ಕಥಾಸಂಕಲನಗಳು, ಕಾವ್ಯಗಳು, ಕಾದಂಬರಿ, ಪ್ರಬಂಧ, ಆತ್ಮಚರಿತ್ರೆ, ನಾಟಕಗಳು, ಶಿಲ್ಪಕಲೆ, ಸಂಗೀತ... ಹೀಗೆ ಎಲ್ಲಾ ವಿಧದ ಸಾಹಿತ್ಯ ಪ್ರಕಾರಗಳ ಸಂಗ್ರಹಗಳಿವೆ

                ಐನೂರಕ್ಕೂ ಮಿಕ್ಕಿ ರಾಮಾಯಣ ಕೃತಿಗಳಿವೆ. ಇದರಲ್ಲಿ 1785 ತೆಲುಗು ರಾಮಾಯಣವೂ ಸೇರಿದೆ! ಗಾಂಧೀಜಿ ಕುರಿತು ಎರಡೂವರೆ ಸಾವಿರ ಕೃತಿಗಳಿವೆ. ಮೂರು ಸಾವಿರಕ್ಕೂ ಮಿಕ್ಕಿ ಭಗವದ್ಗೀತೆ ರಚನೆಗಳಿವೆ. ಇವೆಲ್ಲಾ ನಮ್ಮ ಭಾಷಾ ಸೊಗಸಿನ ಮಾದರಿಗಳು. ಕನ್ನಡದಲ್ಲಿರುವಷ್ಟು ಸಂಪನ್ಮೂಲ ಬೇರ್ಯಾವ ಭಾಷೆಯಲ್ಲಿ ಇರಲಾರದು,” ಎನ್ನುತ್ತಾರೆ

                ಗೌಡರ ಪತ್ನಿ ವಿಜಯಲಕ್ಷ್ಮೀ. ಗಂಡನ ಆಸಕ್ತಿಯ ಚೇತನಾಶಕ್ತಿ. “ಹಬ್ಬಕ್ಕೆ ಹೊಸ ಬಟ್ಟೆಯ ಬದಲು ಹೊಸ ಪುಸ್ತಕ ತಂದರೆ ಅವಳೆಂದೂ ಗೊಣಗಾಟ ಮಾಡಿದ್ದಿಲ್ಲ. ದಿನಸಿ ತರಲು ಮರೆತುಹೋಗಿ ಪುಸ್ತಕ ತಂದಾಗಲೂ ನಗುಮುಖದ ಸ್ವಾಗತ ನೀಡಿದ್ದಾಳೆ. ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನು ಬೇಕು.” ಎಂದು ಅಂಕೇಗೌಡರು ಭಾವುಕರಾಗುತ್ತಾರೆ, ತನ್ನ ಪತ್ನಿಯ ಕಾಯಕವನ್ನು ಮನಸಾ ನೆನೆಯುತ್ತಾರೆ. ಹತ್ತು ಲಕ್ಷ ಪುಸ್ತಕಗಳನ್ನು ಇವರಿಬ್ಬರೇ ನಿರ್ವಹಿಸುತ್ತಾರೆ ಎಂದರೆ ನಂಬ್ತೀರಾ

                ಅಂಕೇಗೌಡರ ಪುಸ್ತಕ ಸಹವಾಸಕ್ಕೆ ಮೂರುವರೆ ದಶಕ. ಗಳಿಕೆಯ ಮುಕ್ಕಾಲು ಪಾಲು ಪುಸ್ತಕಗಳಿಗೆÉ ವಿನಿಯೋಗ. ಗ್ರಂಥಾಲಯಕ್ಕೆ ಬಂದು ಓದುವವರಿಗೆ ಶುಲ್ಕವಿಲ್ಲ. ಪುಸ್ತಕಗಳು ಅಲ್ಲದೆ ಹತ್ತು ಸಾವಿರಕ್ಕೂ ಮಿಕ್ಕಿ ಅಂಚೆಚೀಟಿಗಳು, ಹಳೆ ನಾಣ್ಯಗಳು, ನೋಟುಗಳು, ಗ್ರೀಟಿಂಗ್ಕಾರ್ಡುಗಳು, ಲಗ್ನ ಪತ್ರಿಕೆಗಳು ಪುಸ್ತಕಗಳಿಗೆ ಸಾಥ್ ನೀಡಿವೆ

                ಪುಸ್ತಕದ ಓದಿನಿಂದ ಜ್ಞಾನದ ವೃದ್ಧಿ. ಏಕಾಂತಕ್ಕಿರುವ ಸ್ನೇಹಿತ.  ಪುಸ್ತಕ ಮತ್ತು ಅದರ ಓದಿನ ಸವಿಯನ್ನುಂಡವರಿಗೆ ನವಮಾಧ್ಯಮಗಳ ಭರಾಟೆ ಕೇಳಿಸದು! ಮೊಬೈಲ್ ಕೂಡಾ ಒಂದು ಪುಸ್ತಕ ಇದ್ದಂತೆ. ಅದರಲ್ಲೂ ಪುಸ್ತಕಗಳನ್ನು ಇಳಿಸಿಕೊಳ್ಳುವ ವ್ಯವಸ್ಥೆಯಿದೆ. ಸಾವಿರಗಟ್ಟಲೆ ಸುರಿದು ಮೊಬೈಲ್ ಖರೀದಿಸಿದರೆ ಸಾಲದು, ಅದರಲ್ಲಿರುವ ಆಪ್ಗಳ ಜ್ಞಾನವೂ ಬೇಕು. ಓದುವ ಆಸಕ್ತಿ ಇಲ್ಲದವರಿಗೆ, ಅಕ್ಷರಗಳೆಲ್ಲಾ ಮಯಮಯ ಕಾಣುವವನಿಗೆ ಲೋಕವೇ ಮುರುಟು!

ಊರುಸೂರು / 9-6-2019