Saturday, July 13, 2019

ಬುದ್ಧನನ್ನು ನೆನಪಿಸಿದ ಸ್ವಯಂಭೂ


ಕಾಠ್ಮಂಡು ನಗರದ ಪಶ್ಚಿಮದಲ್ಲಿದೆ, ಬೌದ್ಧವಿಹಾರ ಯಾ ಸ್ವಯಂಭೂ. ನಗರ ನೆಲೆಯಿಂದ ಎತ್ತರದ ಪ್ರದೇಶ. ಅಲ್ಲೊಂದು ಕೃತಕ ಜಲಪಾತ. ಕಲ್ಲಿನ ಮೆಟ್ಟಿಲುಗಳಲ್ಲಿ ಹರಿದು ಬರುವ ನೀರಿನ ಬಳುಕು. ನೀರನ್ನು ಕುಡಿಯಲು ವಾನರ ಹಿಂಡುಗಳ ಪೈಪೋಟಿ. ತಡೆಬೇಲಿ ಇದ್ದುದರಿಂದ ಮಾನವನ ಹಸ್ತಕ್ಷೇಪವಿಲ್ಲ. ಹಾಗಾಗಿ ಸ್ವಲ್ಪ ಜೀವಂತವಾಗಿ ಪ್ರಕೃತಿಯ ನೈಜ ವಿನ್ಯಾಸ ಉಳಿದುಕೊಂಡಿದೆ. ಫೋಟೋ ಸೆಶನ್ಗೆ ಉತ್ತಮ ಹಿನ್ನೆಲೆಯಿದು.

ಹಿಂದೆ ವಿದೇಶಿಯರು ಇಲ್ಲಿಗೆ ಭೇಟಿ ನೀಡಿದಾಗ ವಾನರ ಸೈನ್ಯ ಕಂಡು ಆಶ್ಚರ್ಯಪಟ್ಟರಂತೆ. ಅವರೇಮಂಕಿ ಟೆಂಪಲ್ಎಂದೂ ಹೆಸರಿಟ್ಟರಂತೆ. ಈಗಲೂ ಹೆಸರು ಊರ್ಜಿತದಲ್ಲಿದೆ. ಒಂದು ಪ್ರದೇಶದ ಋಣಾತ್ಮಕ ವಿಚಾರವು ಊರಿನ ಹೆಸರಿನೊಂದಿಗೆ ಕ್ಷಿಪ್ರವಾಗಿ ಹೊಸೆದುಕೊಳ್ಳುತ್ತದೆ. ಇತಿಹಾಸವೂ ದಾಖಲಿಸುತ್ತದೆ. ಮತ್ತದು ಶಾಶ್ವತವಾಗಿ ದಾಖಲಾಗುತ್ತದೆ.
ನೀರಿನ ಕೊಳದ ಮಧ್ಯದಲ್ಲೊಂದು ಬುದ್ಧನ ಪ್ರತಿಮೆಯಿತ್ತು. ಸನಿಹದಲ್ಲೇ ಚಿಕ್ಕ ಪಾತ್ರ (ಬೌಲ್). ಆವರಣದ ಹೊರಗೆ ನಿಂತು ಬೌಲಿನೊಳಗೆ ಬೀಳುವಂತೆ ನಾಣ್ಯ ಎಸೆಯಬೇಕು. ಬೌಲಿಗೆ ನಾಣ್ಯ ಬಿದ್ದರೆ ಅಂತಹವರ ಪುಣ್ಯದ ಖಾತೆಗೆ ಮತ್ತಷ್ಟು ಪುಣ್ಯದ ಜಮೆ! ಪ್ರವಾಸಿಗರೆಲ್ಲಾ ನಾಣ್ಯ ಎಸೆದದ್ದೇ ಎಸೆದದ್ದು. ನೂರಕ್ಕೆ ನಾಲ್ಕೋ ಐದೋ ಮಂದಿ ಪುಣ್ಯಾತ್ಮರಿಗೆ ಪುಣ್ಯ ಒಲಿಯುತ್ತದೆ

ಸ್ವಲ್ಪ ಪುಣ್ಯ ಸಂಚಯವಾಗಲಿಎಂದು ನಮ್ಮ ತಂಡದನೇಕರು ನಾಣ್ಯಗಳನ್ನು ಎಸೆದಿದ್ದಾರೆ! ನಾಣ್ಯ ಬೌಲಿಗೆ ಬೀಳಲಿಲ್ಲ, ಕೊಳಕ್ಕೆ ಬಿದ್ದಿದೆಯಷ್ಟೇ!  ನಿಮ್ಮಲ್ಲಿ ನಾಣ್ಯದ ಕೊರತೆಯಿದ್ದರೆ? ನೀವು ಅನ್ಯ ಪ್ರದೇಶದವರಾಗಿದ್ದರೆ? ಯೋಚನೆ ಬೇಡ. ಆಯಾಯ ದೇಶದ ಹಣವನ್ನು ಪರಿವರ್ತಿಸಿ ನೇಪಾಳಿ ನಾಣ್ಯವನ್ನು ತಕ್ಷಣ ಒದಗಿಸಲು ಒಬ್ಬ ಸಜ್ಜಾಗಿರುತ್ತಾನೆ.
ಬೌದ್ಧ ಪರಂಪರೆಯನ್ನು ನೆನಪಿಸುವ ಕಟ್ಟಡಗಳು, ಚಿಕ್ಕ ಪುಟ್ಟ ರಚನೆಗಳು ಧಾರಾಳ. ಭದ್ರವಾದ ಸ್ಥಂಭಕ್ಕೆ ಬಿಗಿದ ಆಳೆತ್ತರದ ಗಂಟೆಯ ಸೊಬಗನ್ನು ಹತ್ತಿರದಿಂದಲೇ ವೀಕ್ಷಿಸಬೇಕು. ಅದರಲ್ಲಿ ಕೆತ್ತಿದ ಲಿಪಿಗಳು ಇತಿಹಾಸವನ್ನು ಸಾರುತ್ತದೆ. ಲಿಪಿಗಳೇ ಶಿಲ್ಪಗಳಂತೆ ಭಾಸವಾಗುತ್ತದೆ. ಪ್ರವಾಸಿತಾಣವಾದ್ದರಿಂದ ಅಲ್ಲಿನ ಐತಿಹ್ಯ ಮತ್ತು ಕೇತ್ರ ವಿಶೇಷವನ್ನು ತಿಳಿಸುವ ಪಥದರ್ಶಕರು ಬೇಕೆನ್ನಿಸಿತು

ಇದನ್ನೆಲ್ಲಾ ಹಾದು ಮೆಟ್ಟಿಲನ್ನೇರುತ್ತಾ ಹೋದಾಗಬೌದ್ಧನಾಥ ಸ್ಥೂಪ (ಬುದ್ಧಸ್ಥೂಪ) ಗೋಚರ. ದೇವಳದ ಸುತ್ತಲೂ ಪ್ರಾರ್ಥನಾ ತಿರುಗು ಗಂಟೆಗಳನ್ನು ಪೋಣಿಸಿದ್ದಾರೆ. ಗಂಟೆಯನ್ನು ತಿರುಗಿಸುತ್ತಾ ಸಾಗುತ್ತಿದ್ದಂತೆ, ‘ಬುದ್ಧಂ ಶರಣಂ ಗಚ್ಚಾಮಿ, ಸಂಘಂ ಶರಣಂ ಗಚ್ಛಾಮಿ, ಧರ್ಮಂ (ಧಮ್ಮಂ) ಶರಣಂ ಗಚ್ಚಾಮಿಎಂಬ ಧ್ವನಿವರ್ಧಕದ ಮೆಲು ಉದ್ಘೋಷಗಳು ಮುದ ನೀಡಿತು. ಸ್ಥೂಪದ ಮೇಲಿನ ಆಕರ್ಷಕ ಕಣ್ಣುಗಳ ರಚನೆಯು ನಮ್ಮನ್ನು ಒಂದು ಕ್ಷಣ ತಲ್ಲೀನರನ್ನಾಗಿ ಮಾಡುತ್ತದೆ.  ಅದು ಬುದ್ಧನ ಕಣ್ಣುಗಳ ಮಾದರಿಯಂತೆ! ನೇಪಾಳದ  ಮಾರುಕಟ್ಟೆಯಲ್ಲಿರುವ ಉಡುಪಿನಲ್ಲಿ, ಕೀಚೈನಿನಲ್ಲಿ, ಬ್ಯಾಗ್ಗಳಲ್ಲಿ ಚಿತ್ರವನ್ನು ಗಮನಿಸಬಹುದು.

ಇಲ್ಲೊಂದು ಪ್ರಾಚೀನ ವಸ್ತುಸಂಗ್ರಹಾಲಯಲ್ಲಿ ಬುದ್ಧನ ಪ್ರತಿಮೆಗಳಿವೆ, ಕಲಾ ರಚನೆಗಳಿವೆ. ಆಸಕ್ತ  ಮಂದಿ ಮಾತ್ರ ಸಂಗ್ರಹಾಲಯವನ್ನು ವೀಕ್ಷಿಸುತ್ತಾರಷ್ಟೇ. ಸ್ವಯಂಭೂ ಪ್ರದೇಶವು ಬೌದ್ಧರ ಪವಿತ್ರ ತಾಣ. ಭೇಟಿ ನೀಡಿದ್ದರ ನೆನಪಿಗಾಗಿ ಕೈಗೆ, ಕುತ್ತಿಗೆಗೆ, ಬೆರಳಿಗೆ, ಮುಡಿಗೆ ಧರಿಸಬಹುದಾದ ಬಗೆಬಗೆಯ ಆಭರಣಗಳು, ಕಲಾಕೃತಿಗಳ ಮಳಿಗೆಗಳು ಯಾತ್ರಿಕರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿ ಫಕ್ಕನೆ ನೋಡುವಾಗ ಏನೂ ಕಾಣದಿರಬಹುದು. ಬುದ್ಧ, ಆತನ ಬದುಕು, ಆದರ್ಶಗಳ ಕನಿಷ್ಠ ಜ್ಞಾನವಿಲ್ಲದಿದ್ದರೆ ಇಂತಹ ಸ್ಥಳಗಳು ಅರ್ಥವಾಗದು

ಮತ್ತೆ ನಮ್ಮ ಮುಂದಿನ ಪಯಣಬುಡಾನೀಲಕಂಠ ಸನ್ನಿಧಿಗೆ. ಊರಿಗೂ ಅದೇ ಹೆಸರು. ಶಿವಪುರಿ ಬೆಟ್ಟದ ತಪ್ಪಲಲ್ಲಿದೆ. ಇಲ್ಲಿನ ವಿಶೇಷವೆಂದರೆ ಜಲದಲ್ಲಿ ಪವಡಿಸಿದ ಶೇಷಶಾಯಿ ಮಹಾವಿಷ್ಣುವಿನ ನೀಳ ಪ್ರತಿಮೆ. ಸುತ್ತಲೂ ಭದ್ರತೆಗಾಗಿ ಆವರಣ. ರಕ್ಷಣೆಗೆ ರಕ್ಷಕ ಭಟ. ಕ್ಯಾಮರಾ ಕ್ಲಿಕ್ಕಿಸುವಂತಿಲ್ಲ. ತುಂಬಾ ಆಕರ್ಷಕವಾದ ಪ್ರತಿಮೆ. ಇಲ್ಲಿ ಕಾರ್ತಿಕ ಮಾಸದ ಏಕಾದಶಿಯಂದು ಸಂಭ್ರಮ. ಏಳನೇ ಶತಮಾನದ ಕಾಲದ್ದೆಂದು ಹೇಳಲಾಗಿದೆ.

ಸುಮಾರು ಪುತ್ತೂರು ಪೇಟೆಯ ಮೂರನೇ ಒಂದರಷ್ಟು ಚಿಕ್ಕ ಪಟ್ಟಣವದು. ಏನುಂಟು, ಏನಿಲ್ಲ? ಅಷ್ಟಾಗಲೇ ಸುಮಾರು ಸಂಜೆ ನಾಲ್ಕರ ಸಮಯ. ಎಲ್ಲರ ಚಿತ್ತ ಚಹದತ್ತ. ಒಂದೆಡೆಇಂಡಿಯನ್ ವೆಜ್ ರೆಸ್ಟೋರೆಂಟ್ಫಲಕ ಗೋಚರ. ಬಾಗಿಲು ಅರೆ ತೆರೆದ ಹೋಟೆಲಿಗೆ ಹತ್ತು ಮಂದಿಯೂ ನುಗ್ಗಿಯಾಯಿತು. ಹೋಟೆಲಿನ ಒಡತಿ, ಸಹಾಯಕಿಗೆ ಹೊಸ ಗ್ರಾಹಕರು ಸಿಕ್ಕ ಸಂತೋಷ.
ಹತ್ತು ಚಹಾಕ್ಕೆ ಆರ್ಡರ್ ಮಾಡಿದೆವು. ತಕ್ಷಣ ಸಹಾಯಕಿ ಹಾಲು ತರಲು ಮಿಲ್ಕ್ ಪಾರ್ಲರ್ಗೆ ಹೊರಡಬೇಕೇ
 ಆಶ್ಚರ್ಯವಾಯಿತು. ‘ಹತ್ತು ಚಹಕ್ಕೆ ಆಗುವಷ್ಟು ಹಾಲು ಇಲ್ಲಾಂದ್ರೆ ಇದೇನಪ್ಪಾ.. ಹೋಟೇಲೋ.. ಅಥವಾ..’ ತಂಡದ ಒಬ್ಬೊಬ್ಬರದು ಒಂದೊಂದು ಶೈಲಿಯ ಗೊಣಗಾಟ! ಅರ್ಧ ಗಂಟೆ ವಿನೋದ, ಹರಟೆ. ಅಂತೂ ಚಹ ರೆಡಿ. ಒಂದು ಕಪ್ಗೆ ಬರೋಬ್ಬರಿ ಅರುವತ್ತು ರೂಪಾಯಿ

ಇನ್ನೇನು ವಾಹನ ಏರಬೇಕು ಎನ್ನುವಷ್ಟರಲ್ಲಿ ಹೊಸ ಮದುವಣಿಗರ ಗುಂಪಿನತ್ತ ನಮ್ಮ ತಂಡದ ಪಥದರ್ಶಕಿ ಶಿವಾಂಗಿ ಗಮನ ಸೆಳೆದಳು. ಮದುಮಗ, ಮದುಮಗಳ ಮೈತುಂಬಾ ಆಭರಣ, ಹೂಗಳ ಅಲಂಕಾರ. ಒಂದೈದು ನಿಮಿಷ ಮದುಮಕ್ಕಳನ್ನು ಬೀಳ್ಕೊಡುವ ಸನ್ನಿವೇಶಕ್ಕೆ ಸಾಕ್ಷಿಯಾದೆವು. “ಆಧುನಿಕ ವೈಭವಗಳನ್ನು ಎಷ್ಟೇ ಇರಲಿ, ಆದರೆ ಪಾರಂಪರಿಕ ಆಚಾರಗಳನ್ನು ನೇಪಾಳಿಗಳು ಎಂದೂ ಬಿಡಲಾರರು,” ಜತೆಗಿದ್ದ ವಾಹನ ಚಾಲಕ ಕುಮಾರ್ ಕಣ್ಣುಮಿಟುಕಿಸಿದರು. ಅವರ ಅಭಿಮಾನಕ್ಕೆ ಕೈಕುಲುಕಿದೆ

ಊರು ಸೂರು / 7-4-2019

No comments:

Post a Comment