ಜನ್ಮ ದಿನ (ಬರ್ತ್ ಡೇ) ಅಂದಾಗ ನೆನಪಾಗುವುದು 'ಕೇಕ್'. ಅದನ್ನು ತುಂಡರಿಸಿ, ಉರಿಸಿದ ದೀಪ ನಂದಿಸಿದಾಗ 'ಆಚರಣೆ'ಯಲ್ಲಿ ಖುಷಿಯ ಭಾವ. ಸಾರ್ಥಕ. ತುಂಡರಿಸುವುದರಲ್ಲಿ, ನಂದಿಸುವುದರಲ್ಲಿ ಆಯುಷ್ಯ ಇಳಿಲೆಕ್ಕಕ್ಕೆ ಜಾರುತ್ತಾ ಇರುತ್ತದೆ...
ಇರಲಿ.. ವಿಷಯ ಎಲ್ಲೋ ಹೋಯಿತು... ನಾನು 1990ರಲ್ಲಿ ಪುತ್ತೂರಿನಲ್ಲಿ ವೃತ್ತಿ ಬದುಕನ್ನು ಆರಂಭಿಸಿದೆ. ಆಗೊಮ್ಮೆ ತಾಳಮದ್ದಳೆಯಲ್ಲಿ ವೀಕ್ಷಕನಾಗಿ ಹೋಗಿದ್ದಾಗ ಪಿ.ಜಿ.ಜಗನ್ನಿವಾಸ ರಾವ್ ಪರಿಚಯ. ಆತ್ಮೀಯರಿಗೆ ಇವರು ಜಗ್ಗಣ್ಣ. ಅಂದೂ... ಈಗಲೂ... ಮುಂದೆಯೂ....
ಮನೆ ಸುಳ್ಯದಾಚೆ... ವೃತ್ತಿ ಸುಳ್ಯದೀಚೆ.... ಆಗ ಚಂದು ಶೆಟ್ಟರ ಅಂಗಡಿಯ ಎದುರು ಜಗ್ಗಣ್ಣನ ಮನೆ. ಅವರ ಅಮ್ಮ ಪುಷ್ಪಾವತಿ. ಅಣ್ಣ ಚಂದ್ರಶೇಖರ್. ನಂತರದ ದಿವಸಗಳಲ್ಲಿ ರಮೇಶ್ ಭಟ್ ಪುತ್ತೂರು, ರಮಾನಂದ ನೆಲ್ಲಿತ್ತಾಯ, ಗಂಗಾಧರ ಬೆಳ್ಳಾರೆ (ದಿ.), ಕನ್ಯಾನ ಕೇಶವ ಭಟ್ (ದಿ) ಮತ್ತು ಪರಮೇಶ್ವರ ಜೋಯಿಸ್, ರಾಮ ಜೋಯಿಸ್ ಬೆಳ್ಳಾರೆ..ಯವರು ಪ್ರವೃತ್ತಿಗಳಿಗೆ ಸಾಥ್ ಆದರು.
ಎಷ್ಟೋ ಬಾರಿ ಕೂಟ, ಆಟ ಮುಗಿಸಿ ಪೆರಾಜೆಗೆ ಹೋಗಿ ಬರುವಷ್ಟು ಸಮಯವಿದ್ದಿರಲಿಲ್ಲ. ಸ್ನಾನ, ಕಾಫಿ, ಊಟ ಎಲ್ಲವೂ ಜಗ್ಗಣ್ಣನ ಮನೆಯಲ್ಲೇ. ಅವರ ಅಮ್ಮ ಮನೆಯ ಮಗನಂತೆ ಬಡಿಸಿ, ತಿನ್ನಿಸುತ್ತಿದ್ದ, ಉಣ್ಣಿಸುತ್ತಿದ್ದ ದಿನಮಾನಗಳು ಬದುಕಿನ ಮರೆಯದ ಕಾಲಘಟ್ಟ. ಇದು ಒಂದೆರಡು ದಿವಸವಲ್ಲ... ವರುಷಗಟ್ಟಲೆ... ಬೇಸಿಗೆಯಲ್ಲಿ ವಾರಕ್ಕೆ ಎರಡು ದಿವಸ ಗ್ಯಾರಂಟಿ! ಒಂದು ವಾರ ಹೋಗಿಲ್ಲವಾದರೆ ಅಮ್ಮನಿಂದ ಬುಲಾವ್ ಬರುತ್ತಿತ್ತು! ಗಂಗಾಧರ ಬೆಳ್ಳಾರೆಯವರ ಹಾಸ್ಯ ಲಹರಿಗಳು ರಸಗವಳವಾಗಿತ್ತು. ನಂತರದ ದಿವಸಗಳಲ್ಲಿ ಜಗ್ಗಣ್ಣ ಬಪ್ಪಳಿಗೆಯ 'ಅಗ್ರಹಾರ'ದಲ್ಲಿ ನೆಲೆಯಾದರು.
ಇದು ಪೀಠಿಕೆ.... ನಿನ್ನೆ (19-8-2020) ನನ್ನ ಹುಟ್ಟುಹಬ್ಬವನ್ನು ಫೇಸ್ ಬುಕ್ ಜ್ಞಾಪಿಸಿತು. (ನಿಜಕ್ಕೂ ದುರಂತ!) ಯಾರ ಹುಟ್ಟುಹಬ್ಬವೋ ಅವರು ಆಪ್ತರಿಗೆ ಸಿಹಿ ನೀಡುವುದು ರೂಢಿ... ಆದರೆ ನಿನ್ನೆ ಆದುದೇ ಬೇರೆ. ಸಂಜೆ ಜಗ್ಗಣ್ಣನ ಫೋನ್... ಅರ್ಜಂಟ್ ಕಾಲು ಗಂಟೆ ಮಾತಿಗೆ ಸಿಗಬೇಕು.. ಅವರು ಹಾಗೆನ್ನುವುದು ತೀರಾ ವಿರಳ. ಅವರ ಕಾರು ಅವರ ಮನೆಯತ್ತ ಮುಖ ಮಾಡಿದಾಗಲೂ ಅಲ್ಲಿ ಅರ್ಜಂಟಿನ ದುಗುಡ ಕಾಣಲಿಲ್ಲ! ಮನೆಯೊಳಗೆ ಕಾಲಿಟ್ಟಾಗಲೂ ಸುಳಿವೂ ಇದ್ದಿರಲಿಲ್ಲ. ಪೂರಿ, ಗಸಿ, ಸಿಹಿಯ ಸಮಾರಾಧನೆಯಾಯಿತು. ಉಭಯಕುಶಲೋಪರಿ, ಕೊರೋನಾ ವೃತ್ತಾಂತ, ಲೋಕದ ಸುದ್ದಿ ಮಾತನಾಡುವಾಗಲೂ 'ಅರ್ಜಂಟ್' ಇಣುಕಲಿಲ್ಲ! ಸರಿ, ಹೊಟ್ಟೆ ತುಂಬಿತು, ಇನ್ನೇನು ಹೊರಡಬೇಕು ಎಂದಾಗ ಮನೆಮಂದಿಯಿಂದ ಉಡುಗೊರೆಗಳ ಪ್ರದಾನ.
ಬೆರಗಿನ ಕ್ಷಣ.. ಒಂದು ಕ್ಷಣ ಮಾತು ಮೌನಕ್ಕೆ ಜಾರಿತು.. ಇಂತಹ ಕ್ಷಣಗಳು ಮೊದಲೇ ತಿಳಿದಿರುತ್ತಿದ್ದರೆ ಜಾರುತ್ತಿದ್ದೆ. ಇಲ್ಲಿ ಜಗ್ಗಣ್ಣ ಕುಟುಂಬದ ಪ್ರೀತಿಯಲ್ಲಿ ಬಂಧಿಯಾದೆ. ಅವರ ಪತ್ನಿ ವಿದ್ಯಾ, ಮಗಳು ವೈಷ್ಣವಿ, ಮಗ ಶ್ರೀಕೃಷ್ಣ ಇವರೆಲ್ಲರ ಸುಪ್ತ ಪ್ರೀತಿಯ ಅನಾವರಣಕ್ಕೆ ನನ್ನ ಹುಟ್ಟಹಬ್ಬದ ದಿನಾಂಕ ಸಾಕ್ಷಿಯಾಯಿತು.. ಅವರೆಲ್ಲರಿಗೂ ಶುಭಾಶಯಗಳು.
ಹಿಂದೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಆಯ್ಕೆಯಾದಾಗ ಮನತುಂಬಿ ಖುಷಿಯನ್ನು ಹಂಚಿಕೊಂಡಿದ್ದರು. ತಮ್ಮ ಒತ್ತಡದ ಬದುಕಿನ ಮಧ್ಯೆ ಅರ್ಧ ದಿವಸ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಪತ್ರಿಕೆಗಳಲ್ಲಿ ಶುಭಾಶಯ ಕೋರಿದ್ದರು. ತಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳ ಯೋಜನೆ, ಯೋಚನೆಗಳಲ್ಲಿ ನನಗೊಂದು ಪ್ರತ್ಯೇಕವಾದ ಸ್ಥಾನವನ್ನು ನೀಡಿದ, ನೀಡುವ ಸುಪ್ತ ಮನಃಸ್ಥಿತಿ ಅವರದು.
ನಿನ್ನೆ 'ಉಡುಗೊರೆ ನೀಡಿದ್ದಾರೆ' ಎನ್ನುವ ಕಾರಣಕ್ಕೆ ಅವರಿಗೆ ಈ ಅಭಿನಂದನೆ ಅಲ್ಲ. ಬದುಕಿನಲ್ಲಿ ಸ್ನೇಹಿತರು ಹಾದು ಹೋಗುತ್ತಲೇ ಇರುತ್ತಾರೆ. ಒಂದೊಂದು ನಿಲ್ದಾಣ ತಲಪುವಾಗ 'ತಮ್ಮ ಕೆಲಸವಾಯಿತು' ಎಂದು ಕೆಲವರು ತಪ್ಪಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಸೇರಿಕೊಳ್ಳುತ್ತಾರೆ.. ಕೆಲವೊಮ್ಮೆ 'ಸ್ನೇಹಿತರೆಂದು' ನಂಬಿದವರೇ 'ತಾನು ಸ್ನೇಹಿತ ಅಲ್ಲ' ಎಂದು ವರ್ತನೆಯಲ್ಲೇ ತೋರಿಬಿಡುತ್ತಾರೆ.. ಅದೂ ಒಳ್ಳೆಯದೇ...
ಈ ಹಿನ್ನೆಲೆಯಲ್ಲಿ ಮೂವತ್ತು ವರುಷಗಳ ಬದುಕಿನಲ್ಲಿ ನಾನು, ಅವರು ಹಲವು ನಿಲ್ದಾಣಗಳಲ್ಲಿ ನಿಂತಿದ್ದೇವೆ.. ಸಾಗಿ ಬಂದ ಹಾದಿಯನ್ನು ಹಿಂತಿರುಗಿ ನೋಡಿದ್ದೇವೆ.. ಮತ್ತೆ ಮುಂದಿನ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿದ್ದೇವೆ.. ಹಾಗಾಗಿ ಎಲ್ಲಾ ನಿಲ್ದಾಣಗಳ ಪರಿಚಯವು ಅನುಭವವಾಗಿ ಮನದೊಳಕ್ಕೆ ಇಳಿದ ಪರಿಣಾಮವೇ ಇರಬೇಕು... ಸ್ನೇಹ ಬಿರುಕು ಬಿಟ್ಟಿಲ್ಲ. ಅದರ ಕೊಂಡಿಗಳು ಕಳಚಿಲ್ಲ. ಕೆಲವೊಮ್ಮೆ ವೈಚಾರಿಕ ಕಾರ್ಮೋಡಗಳು ಆವರಿಸಿದ್ದುಂಟು. ಆದರೆ ಅದು ಅಷ್ಟೇ ವೇಗವಾಗಿ ತಿಳಿಯಾದುದುಂಟು.
'ಥ್ಯಾಂಕ್, ಗ್ರೇಟ್, ಸೂಪರ್..' ಪದಗಳು ಢಾಳಾಗಿರುವ ಕಾಲಘಟ್ಟದಲ್ಲಿ ಸ್ನೇಹಕ್ಕೆ ಮಾನ ಕೊಟ್ಟ ಜಗ್ಗಣ್ಣನನ್ನು ಅಕ್ಷರಗಳ ಮೂಲಕ ಅಭಿನಂದಿಸುತ್ತೇನೆ... ಈ ಎಲ್ಲಾ ವಿಚಾರಗಳನ್ನು ಮುಖತಃ ಹೇಳುವುದು ಮುಜುಗರದ ಸಂಗತಿ.. ಅವರಿಗೆ ಕೂಡಾ..
ನಿಜ ಕಾರಂತಣ್ಣ.. ಪ್ರೀತಿಗೆ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಒಂದು ಲಕ್ಷವೋ ಹತ್ತು ಲಕ್ಷವೋ ನೋಟು ಕಟ್ಟ ಕೊಟ್ಟು ಲೆಕ್ಕ ಮಾಡಿ ಅಂದ್ರೆ ತಕ್ಷಣ ಲೆಕ್ಕ ಮಾಡಿ ಹೇಳಬಹುದು .ಪ್ರೀತಿ, ವಿಶ್ವಾಸ ಅಭಿಮಾನ ದ ಬೆಲೆ ಹೃದಯಗಳಿಗಷ್ಟೇ ಅನುಭವಕ್ಕೆ ಬರಬಹುದು .ಆತ್ಮೀಯತೆಗೆ ಕಾಣುವ ಸಂದರ್ಭಗಳು ,ಕ್ರಮಿಸುವ ದೂರ, ಭೇಟಿಯ ಸಮಯ ಮುಖ್ಯ ಅಲ್ಲ. ನೀವು ನನ್ನ ಮನೆಗೆ ಬಂದು 13ವರ್ಷಗಳೇ ಸಂದು ಹೋದವು .ಆದರೆ ಆ ನೆನಪು ಇನ್ನೂ ಸಿಹಿಯಾಗಿ ಮಾಗಿದ ಹಣ್ಣಿನಂತೆ ಹಸಿರಾಗಿಯೇ ಇದೆ .ನಿಮ್ಮ ಮನಸಿನಂತೆ ಬರವಣಿಗೆಯೂ ಸೂಪರ್. ಓದುತ್ತಲೇ ಇರಬೇಕು ಅನಿಸುವಂತಿದೆ. ನನಗೆ ಸ್ಫೂರ್ತಿ ನೀವು. ಕೆಲವು ವರ್ಷಗಳ ಹಿಂದೆ ಫೇಸ್ಬುಕ್ ಗೆ 3ಕಲಾವಿದರ ಬಗ್ಗೆ ಬರೆದಿದ್ದೆ .ಎಲ್ಲರಿಗೂ ಇಷ್ಟವಾಗಿ ಹೊಗಳಿದ್ದರು .ಶಶಿಕಾಂತ ಶೆಟ್ಟಿ ಅವರ ಬಗ್ಗೆಯೂ ಬರೆದಿದ್ದೆ. ಅವರು ಹೊಗಳಿದರು .ಆಗ ಅವರಲ್ಲಿ ಹೇಳಿದ್ದೆ " ನನ್ನ ಬರಹಗಳಿಗೆ ನಾ. ಕಾರಂತರು ಸ್ಫೂರ್ತಿ "ಎಂಬುದಾಗಿ. ಧನ್ಯವಾದಗಳು ಕಾರಂತಣ್ಣ .
ReplyDelete