ನನ್ನ ಪ್ರಾಥಮಿಕ ಶಾಲೆಯ ಮುಖ್ಯಗುರು ನೇಮಿಚಂದ್ರ ದಿಬ್ಬದ್. (Nemichandra Dibbad) ಪೆರಾಜೆಯ ಕುಂಬಳಚೇರಿ ಸರಕಾರಿ ಶಾಲೆಯಲ್ಲಿ ಮುಖ್ಯ ಗುರುವಾಗಿ ವೃತ್ತಿ ಆರಂಭಿಸಿದವರು. ನಾಲ್ಕು ವರುಷ ಸೇವೆಯಲ್ಲಿದ್ದರು. ನಾನು ಐದರಿಂದ ಏಳನೇ ತರಗತಿಯ ತನಕ (1975-77) ಓದಿದ ಶಾಲೆ. ನಲವತ್ತೈದು ವರುಷದ ಹಿಂದೆ!
ನಿನ್ನೆ (20-8-2020) ಮಧ್ಯಾಹ್ನ ಎರಡೂಕಾಲು ಗಂಟೆ. ಅತ್ತ ಧಾರವಾಡದಿಂದ ದಿಬ್ಬದ್ ಗುರುಗಳ ಕರೆ. ಅವರಾಗಿಯೇ ತನ್ನ ಪರಿಚಯ ಹೇಳಿದಾಗ ಶಾಲಾ ದಿನಗಳತ್ತ ಮನಸ್ಸು ಓಡಿತು. ಆ ಕ್ಷಣದ ಖುಷಿಗೆ ಮಾತು ಕೊಡಲು ಈಗ ಕಷ್ಟವಾಗುತ್ತಿದೆ!
ತನ್ನ ಕುಟುಂಬದ ಮಾಹಿತಿ ನೀಡಿದರು. ನನ್ನ ಕುಟುಂಬವನ್ನು ವಿಚಾರಿಸಿದರು. “ನಾನು ಮೊದಲು ಡ್ಯೂಟಿ ಮಾಡಿದ ಶಾಲೆಯು ಈಗಲೂ ನೆನಪಾಗುತ್ತದೆ. ಅಲ್ಲಿನ ಪರಿಸರ, ಆಗಿನ ಬೌದ್ಧಿಕ ಗಟ್ಟಿತನ, ಹಳ್ಳಿಯ ಮಕ್ಕಳು, ಸಹೃದಯಿ ಊರಿನ ಗಣ್ಯರು.. ಇವರನ್ನೆಲ್ಲಾ ಹೇಗೆ ಮರೆಯಲಿ,” ಎನ್ನುತ್ತಾ, ‘ಈಗ ಧಾರವಾಡದಲ್ಲಿದ್ದೇನೆ. ಮನೆಗೆ ಬನ್ನಿ,’ ಆಹ್ವಾನಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ನೆನಪಿಗಾಗಿ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದುವು. ಅದರಲ್ಲೊಂದು 'ಭಾಗ್ಯದ ಬಾಗಿಲು'. ನನಗೆ ಆ ಪುಸ್ತಕವನ್ನು ಬರೆಯುವ ಅವಕಾಶ ಪ್ರಾಪ್ತವಾಗಿತ್ತು. ಅದರಲ್ಲಿ ಕೃತಿಕಾರನ ಪರಿಚಯವಿತ್ತು. ಈ ಪರಿಚಯದ ಜಾಡನ್ನರಿಸಿ, ಉಜಿರೆಯ ಡಾ.ಶ್ರೀನಾಥರಿಂದ ದೂರವಾಣಿ ಸಂಖ್ಯೆ ಪಡೆದು ಫೋನಿಸಿದ ಗುರುಗಳಿಗೆ ಶರಣು.
ಆ ದಿವಸ - ಅಸ್ಪಷ್ಟ ನೆನಪು... ಬಹುಶಃ ಆರನೇ ತರಗತಿಯಲ್ಲಿದ್ದೆ. ಐದೋ, ಆರೋ ವರುಷದವನಾಗಿರುವಾಗ ಅಂಟಿದ 'ಉಗ್ಗು' ನನ್ನ ಮಾತನ್ನು ಕಸಿದುಕೊಂಡಿತ್ತು. ಈ ವಿಚಾರ ಅಂದು ಗುರುಗಳಿಗೆ ತಿಳಿದಿರಲಿಲ್ಲ. ಪ್ರಶ್ನೆಯೊಂದಕ್ಕೆ ಉತ್ತರಿಸಲು ಮಾತು ಕೈಕೊಟ್ಟಾಗ ಬೆನ್ನಿನಲ್ಲಿ ಗುರುಗಳ ಬೆತ್ತ ಮಾತನಾಡಿತ್ತು! ಪ್ರಶ್ನೆಗೆ ಉತ್ತರ ಗೊತ್ತಿತ್ತು... ಸಂವಹನ ಮಾಡಲು ಸಾಧ್ಯವಾಗಿರಲಿಲ್ಲ. ಬೆತ್ತದ ನೋವು ತಂದ ಕಣ್ಣೀರಿನ ಹಿಂದಿನ ಸತ್ಯಕ್ಕೆ ಮೌನದಳಗೆ ರೋದನ.
ಒಂದೆಡೆ ಸಹಪಾಠಿಗಳ ಪರಿಹಾಸ್ಯ, ಬಂಧುವರ್ಗದವರ ಅನಾದರ, ಕಣ್ಣೆದುರೇ ವ್ಯಂಗ್ಯ ಭಾವಗಳು, ಟೀಕೆಗಳು.. ಅಬ್ಬಾ... ಎಣಿಸಿದಾಗ ಕಣ್ಣಾಲಿ ಆದ್ರ್ರವಾಗುತ್ತದೆ. ತಿಂಗಳೊಳಗೆ ಅವರಿಗೂ ಉಗ್ಗಿನ ವಿಚಾರ ತಿಳಿಯಿತು. ತನ್ನ ಛೇಂಬರಿಗೆ ಕರೆಸಿಕೊಂಡರು. ಸಮಾಧಾನ ಹೇಳಿದ್ದರು. ನಮ್ಮ ಮನೆಗೂ ಬಂದು ಸಾಂತ್ವನ ಹೇಳಿದ್ದರು. 'ತನಗೆ ಗೊತ್ತಿಲ್ಲದೆ ಬೆತ್ತ ಪ್ರಹಾರ ಮಾಡಿದೆ' ಎಂದೂ ಮಾತು ಸೇರಿಸಿದ್ದರು.
ಆರನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ತರಗತಿಗೆ ದ್ವಿತೀಯನಾಗಿ ಅಂಕ ಪಡೆದಿದ್ದೆ. ಮುಂದಿನ ವಾರ್ಶಿಕೋತ್ಸವದ (ಸ್ಕೂಲ್ ಡೇ) ವೇದಿಕೆಯಲ್ಲಿ ಬಹುಮಾನ ಪಡೆಯುತ್ತಿರುವಾಗ, 'ಗುಡ್... ಹೀಗೆ ಕಲಿ.. ಉಗ್ಗು ದೊಡ್ಡ ವಿಷಯವಲ್ಲ' ಎಂದು ಗಲ್ಲ ನೇವರಿಸಿದ್ದರು. ಅವರ ಹಾರೈಕೆಯಂತೆ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲೂ ದ್ವಿತೀಯ ಸ್ಥಾನದ ಅಂಕಗಳು!
ಇಂದು ಫೋನಿಸಿದಾಗ ಹಳೆಯ ನೆನಪುಗಳು ರಾಚಿ ಬಂದು, ಸರ್. ಈಗ ಉಗ್ಗು ಕಡಿಮೆಯಾಗಿದೆ. ಸಲೀಸಾಗಿ ಮಾತನಾಡ್ತೇನೆ' ಎಂದು ಎರಡ್ಮೂರು ಬಾರಿ ಬಡಬಡಿಸಿದೆ. ನನಗರಿವಿಲ್ಲದೆ ಈ ಮಾತುಗಳು ಹೊರಹೊಮ್ಮಿದುವು. ಸುತ್ತ ಯಾರಿದ್ದಾರೆ ಎಂಬ ಪರಿವೆ ಇಲ್ಲದೆ! ಮನದೊಳಗೆ ಅವಿತುಕೊಂಡಿದ್ದ ಭಾವವೊಂದು ಮಾತನಾಡಿದ ಪುಳಕ.
ಇಂದು ಅವರಾಗಿಯೇ ತನ್ನ ಶಿಷ್ಯನನ್ನು ಹುಡುಕಿ ಮಾತನಾಡಿಸಿ ಖುಷಿಪಟ್ಟಾಗ ಆ ಗುರುವಿನಲ್ಲಿ ದೇವರನ್ನು ಕಂಡ ಅನುಭವವಾಯಿತು. ತುಂಬಾ ಖುಷಿಪಟ್ಟೆ. ಜತೆಗೆ ಉಗ್ಗಿನಿಂದಾಗಿ ಪಟ್ಟ ಪಾಡಿನ ದಿವಸಗಳ ನೆನಪುಗಳು ಎರಡು ಹನಿ ಕಣ್ಣೀರಾಗಿ ಜಿನುಗಿ ಕಪೋಲದಲ್ಲಿ ಇಳಿಯಿತು.
ನನ್ನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಬದುಕಿನಲ್ಲಿ ಅಕ್ಷರ ಕಲಿಸಿದ ಕೃಷ್ಣಪ್ಪ ಮಾಸ್ತರ್ ಮತ್ತು ಶುದ್ದಾಂತಕರಣದ ನೇಮಿಚಂದ್ರ ದಿಬ್ಬದ್ ಮಾಸ್ಟ್ರು - ಇವರಿಬ್ಬರದು ಮರೆಯಲಾಗದ ವ್ಯಕ್ತಿತ್ವ. (ಬಹುದಿನಗಳಿಂದ ಇವರಿಬ್ಬರು ಆಗಾಗ್ಗೆ ನೆನಪಾಗುತ್ತಿದ್ದರು)