(ಜನವರಿ 21, 2010 ಗುರುವಾರದ ಪ್ರಜಾವಾಣಿಯ ಕೃಷಿ ಪುರವಣಿಯಲ್ಲಿ ಪ್ರಕಟವಾದ ’ಪುಸ್ತಕ ಪರಿಚಯ’ ಬರೆಹ)
ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಇಪ್ಪತ್ತೇಳು ಕೃಷಿ ಸಂಬಂಧಿ ಲೇಖನಗಳನ್ನು ನಾ. ಕಾರಂತ ಪೆರಾಜೆ 'ಕಾಡು ಮಾವು' ಹೆಸರಿನಲ್ಲಿ ಪ್ರಕಟಿಸಿದ್ದಾರೆ. 'ಬೇಸಾಯ ಲಾಭದಾಯಕವಲ್ಲ' ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಎಲೆ ಮರೆಯ ಕಾಯಿಗಳಂತೆ ಬೇಸಾಯ ಹಾಗೂ ಅದರ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾದ ರೈತರ ಯಶೋಗಾಥೆಗಳನ್ನು ಅವರು ಗುರುತಿಸಿ ದಾಖಲಿಸಿದ್ದಾರೆ.
ಲೇಖಕರಿಗೆ ಕೃಷಿ ಹಾಗೂ ಅದರ ಪೂರಕ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಇದೆ. ಕೃಷಿ, ತೋಟಗಾರಿಕೆ, ಜೇನುಸಾಕಣೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿ ಯಶಸ್ವಿಯಾದವರನ್ನು ಗುರುತಿಸಿ ಅವರ ಸಾಹಸ, ಸಾಧನೆಗಳನ್ನು ಇತರರಿಗೆ ಪರಿಚಯಿಸಬೇಕು ಎಂಬ ಆಸಕ್ತಿಯೂ ಇದೆ.
ಜೇನು ಸಾಕಣೆಯಲ್ಲಿ ಯಶಸ್ವಿಯಾದ ಧರ್ಮೇಂದ್ರ ಹೆಗಡೆ, ಹಲಸಿನ ಹಣ್ಣು-ಕಾಯಿಗಳಿಂದ ಹಪ್ಪಳ, ಚಿಪ್ಸ್ ಮತ್ತಿತರ ಉತ್ಪನ್ನಗಳನ್ನು ಮಾಡುವಲ್ಲಿ ಯಶಸ್ವಿಯಾದ ಶಿರಸಿಯ ಎರಡು ರೈತಕುಟುಂಬಗಳು, ನೂರಕ್ಕೂ ಮಿಕ್ಕಿ ಕಾಡುಮಾವಿನ ತಳಿಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಿದ ಮಾಪಲ್ತೋಟದ ಸುಬ್ರಾಯ ಭಟ್, ಸಾವಯವ ಪದ್ದತಿಯಲ್ಲಿ ರಾಜಮುಡಿ ಭತ್ತ ಬೆಳೆದ ಹೊಳೆನರಸಿಪುರ ತಾಲೂಕಿನ ಉಣ್ಣೇನಹಳ್ಳಿಯ ರೈತ ಹೊಯ್ಸಳ ಎಸ್. ಅಪ್ಪಾಜಿ, ಬೆಂಗಳೂರು ಸಮೀಪದ ನೆಲಮಂಗಲದ ಬಳಿ ಒಂದೂಕಾಲೆಕರೆಯಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಎನ್.ಆರ್.ಶೆಟ್ಟಿ ದಂಪತಿ.. ಹೀಗೆ ಹಲವಾರು ಯಶಸ್ವಿ ರೈತರ ಬಗ್ಗೆ ಬರೆದ ಲೇಖನಗಳು ನಮ್ಮ ರೈತ ಸಮುದಾಯಕ್ಕೆ ಮಾದರಿ ಆಗಬಲ್ಲವು.
ಈ ಲೇಖನಗಳೆಲ್ಲಾ ಸುಲಭವಾಗಿ ಓದಿಸಿಕೊಳ್ಳುತ್ತವೆ. ಸಾಮಾನ್ಯ ಕನ್ನಡ ಜ್ಞಾನ ಇರುವವರಿಗೂ ಅರ್ಥವಾಗುತ್ತದೆ. ಈ ಕಾರಣಕ್ಕೆ 'ಕಾಡು ಮಾವು' ಇಷ್ಟವಾಗುತ್ತದೆ.
- ಪಿ.ಕೆ.
Tuesday, January 26, 2010
Subscribe to:
Post Comments (Atom)
No comments:
Post a Comment