ನ್ಯಾಯವಾದಿ, ಲೇಖಕ, ಪ್ರಕಾಶಕ, ಪುತ್ತೂರು ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ (Bolanthakodi Ishwara Bhat) ನೆನಪು ಕಾರ್ಯಕ್ರಮ ಇಂದು (24-3-2012) ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಂಜೆ ಗಂಟೆ 4-20ಕ್ಕೆ ಜರುಗಿತು. ಸಭಾಧ್ಯಕ್ಷತೆಯನ್ನು ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ವಹಿಸಿದ್ದರು.
ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ಬೋಳಂತಕೋಡಿಯವರ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾ, "ಈಶ್ವರ ಭಟ್ಟರದು ಪ್ರಾಕ್ಟಿಕಲ್ ಬದುಕು. ಬದುಕಿನಲ್ಲಿ ದೊಡ್ಡ ಕನಸುಗಳನ್ನು ಕಾಣುತ್ತಿದ್ದ ಅವರು 'ಕನಸು ಕಾಣುತ್ತಿದ್ದರು' ಅಂತ ಗೊತ್ತಾಗದಂತೆ ಬದುಕಿರುವುದು ವಿಶೇಷ ಅಂತ ಅನ್ನಿಸುತ್ತದೆ. ಬದುಕನ್ನು ಅವರು ಇಷ್ಟವಾದ ಹಾಗೆ 'ಚಂದ'ದಿಂದ ಅನುಭವಿಸಿದವರು. ಅವರು ಎಂದೂ ಹುಸಿಯಾಗಿ ಓಲೈಸಿಲ್ಲ. ಅವರಿಗೆ ಅವರನ್ನು ಓಲೈಸಲು ಸಾಧ್ಯವಾಗಲಿಲ್ಲ! ಉಪದೇಶ ಹೇಳುವವರಲ್ಲ, ಇನ್ನೊಬ್ಬರ ಉಪದೇಶವನ್ನೂ ಕೇಳಿದವರಲ್ಲ!" ಎಂದರು.
ಬೋಳಂತಕೋಡಿಯವರ ನೆನಪಿನಲ್ಲಿ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಯನ್ನು ಪ್ರಥಮವಾಗಿ ಸ್ಥಾಪಿಸಲಾಗಿದ್ದು, ಮೊದಲ ಪ್ರಶಸ್ತಿಗೆ ಮಕ್ಕಳ ಸಾಹಿತಿ ಹಿರಿಯರಾದ ಪಳಕಳ ಸೀತಾರಾಮ ಆಯ್ಕೆಯಾಗಿದ್ದರು. ಪ್ರಶಸ್ತಿ ಪುರಸ್ಕೃತರ ಕುರಿತು ಪ್ರೊ: ವಿ.ಬಿ.ಅರ್ತಿಕಜೆ ಮಾತನಾಡಿದರು. ಗುಣಕಥನ ಫಲಕವನ್ನು ಉಪನ್ಯಾಸಕ ಡಾ. ವಿಜಯಕುಮಾರ್ ಮೊಳೆಯಾರ್ ವಾಚಿಸಿದರು. ಪಳಕಳ ಸೀತಾರಾಮ ಭಟ್ಟರ ಪತ್ರವನ್ನು ಕಿರಣ್ ಬೋಳಂತಕೋಡಿ ವಾಚಿಸಿದರು. ಪಳಕಳದವರು ಅಸೌಖ್ಯದ ಕಾರಣದಿಂದ ಉಪಸ್ಥಿತರಲಿಲ್ಲ. ಅವರ ಮನೆಗೆ ತೆರಳಿ ಪ್ರಶಸ್ತಿಯನ್ನು ಪ್ರದಾನ ಮಾಡುವುದೆಂದು ಘೋಷಿಸಲಾಯಿತು. ಪ್ರಶಸ್ತಿಯು ಶಾಲು, ಫಲ, ಹಾರ, ಗುಣಕಥನ ಫಲಕ, ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ರೂಪಾಯಿಯ ಧನ' ಒಳಗೊಂಡಿದೆ.
ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆಯವರ ಕೃಷಿ ಬರೆಹಗಳ ಸಂಕಲನ 'ಮಣ್ಣ ಮಿಡಿತ' ಮತ್ತು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಂಕಣದ ಆಯ್ದ ಬರಹೆಗಳ ಸಂಕಲನ 'ಮಾಂಬಳ' ಪುಸ್ತಕವನ್ನು ರಾಜೇಶ್ ಪವರ್ ಪ್ರೆಸ್ ಮಾಲಕ ಎಂ.ಎಸ್.ರಘುನಾಥ ರಾವ್ ಬಿಡುಗಡೆ ಮಾಡಿದರು. ಪುಸ್ತಕಗಳ ಕುರಿತು ಉಪನ್ಯಾಸಕ ಅವಿನಾಶ್ ಕೊಡೆಂಕಿರಿ ಪರಿಚಯ ಮಾಡಿದರು.
ನ್ಯಾಯವಾದಿ ಕೆ.ಆರ್.ಆಚಾರ್ಯ ಸ್ವಾಗತಿಸಿದರು. ಪ್ರಕಾಶ್ ಕುಮಾರ್ ಕೊಡೆಂಕಿರಿ ವಂದಿಸಿದರು. ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ.ಶ್ರೀಶಕುಮಾರ್ ನಿರ್ವಹಿಸಿದರು. ಕೊನೆಯಲ್ಲಿ ಆಕಾಶ್ ಆಚಾರ್ಯ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗಿತ ಕಛೇರಿ ಜರುಗಿತು. ಬೋಳಂತಕೋಡಿ ಪ್ರಕಾಶನ, ಪುತ್ತೂರು ಕಾರ್ಯಕ್ರಮವನ್ನು ಸಂಘಟಿಸಿತ್ತು. ಪ್ರತೀ ವರುಷವೂ ಪುತ್ತೂರಿನಲ್ಲಿ ಬೋಳಂತಕೋಡಿಯವರ ನೆನಪು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
No comments:
Post a Comment