Friday, January 20, 2012

ಮೊಂಟೆಪದವು ಪರಮೇಶ್ವರ ಕಾರಂತ





ಬಂಟ್ವಾಳ ತಾಲೂಕು ಕೈರಂಗಳ ಸಮೀಪದ ಮೊಂಟೆಪದವು ಪ್ರೌಢಶಾಲೆಯಲ್ಲಿ ಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿ 1992ರಲ್ಲಿ ನಿವೃತ್ತರಾಗಿದ್ದ ಹೆಚ್.ಪರಮೇಶ್ವರ ಕಾರಂತ(76)ರು ೧೯-೧-೨೦೧೨ರಂದು ಮುಂಜಾನೆ ದೈವಾಧೀನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಮತ್ತು ಅಪಾರ ಬಂಧುಗಳನ್ನು, ಅಭಿಮಾನಿಗಳನ್ನು, ಶಿಷ್ಯಗಡಣವನ್ನು ಅಗಲಿದ್ದಾರೆ. ಕಾರಂತರು ಮೂಲತಃ ಕಾಸರಗೋಡು ಸನಿಹದ ಪಳ್ಳಿಕೆರೆ ಹಾರ್ನಾಡಿನವರು.

ಮರ್ಕಂಜ, ಉಳ್ಳಾಲ, ಮಂಜನಾಡಿ, ಮಂಗಳೂರಿನ ಗಾಂಧಿನಗರ ಶಾಲೆಗಳಲ್ಲಿ ಪರಮೇಶ್ವರ ಕಾರಂತರು ಸೇವೆ ಸಲ್ಲಿಸಿದ್ದರು. ಮೊಂಟೆಪದವು ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಅದರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾರಂತರದು ದೊಡ್ಡ ಹೆಜ್ಜೆ. ಪ್ರಾಥಮಿಕ ಹಂತದಿಂದ ಪ್ರೌಢ ಶಾಲೆಯ ತನಕ ಶಾಲೆಯನ್ನು ಕಟ್ಟಿ ಬೆಳೆಸಿ, ಅಲ್ಲೇ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಬದುಕಿನ ಬಹುಪಾಲು ಸಮಯವನ್ನು ಶಾಲಾಭಿವೃದ್ಧಿಗೆ ಮೀಸಲಾಗಿಟ್ಟ ಕಾರಂತರು ಸಾಮಾಜಿಕವಾಗಿ ಮನ್ನಣೆಯನ್ನು ಪಡೆದಿದ್ದರು.

ಪ್ರಾಮಾಣಿಕತೆ, ಶಿಸ್ತು, ನಿಯತ್ತುಗಳಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಪರಮೇಶ್ವರ ಕಾರಂತರು ಶುದ್ಧಹಸ್ತರು. ಶಾಲಾ ಆಡಳಿತ ರೂಪಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ತನ್ನದೇ ಆದ ಚಾಕಚಕ್ಯತೆಯನ್ನು ಹೊಂದಿ ಜನಾನುರಾಗಿಯಾಗಿದ್ದರು. ಶಾಲೆಯ ವಿಚಾರ ಬಂದಾಗ ವೈಯಕ್ತಿಕ ವಿಚಾರಗಳೆಲ್ಲವೂ ಅವರಿಗೆ ಗೌಣವಾಗಿತ್ತು.

ಪರಮೇಶ್ವರ ಕಾರಂತರ ಶಾಲಾ ಅಭಿವೃದ್ಧಿಯ ದೀಕ್ಷೆಯಲ್ಲಿ ಅಧ್ಯಾಪಿಕೆಯಾಗಿ ಪತ್ನಿ ಲಕ್ಷ್ಮೀ ಕಾರಂತರ ಪಾತ್ರವೂ ದೊಡ್ಡದೇ. ಕುಟುಂಬದಲ್ಲಿ, ಸಮಾಜದಲ್ಲಿ ಹಿರಿಯಣ್ಣನಾಗಿದ್ದರು. ಆರ್ತರಿಗೆ ನೆರವಾಗುವ ಗುಣ. ಗಾಂಧಿ ಮಾರ್ಗದಲ್ಲಿ ನಂಬಿಕೆಯಿಟ್ಟು ಅದರಂತೆ ಬದುಕಿದವರು. ಬದುಕಿನುದ್ದಕ್ಕೂ ಸರಳ, ನಿರಾಡಂಬರ ಜೀವನಕ್ಕೆ ಪರಮೇಶ್ವರ ಕಾರಂತರು ಮಾದರಿಯಾಗಿದ್ದರು.

ಮೃತರಿಗೆ ಗೌರವಸೂಚಕವಾಗಿ ಮೊಂಟೆಪದವಿನ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಿಗೆ ತಾ.೧೯ರಂದು ರಜಾ ಸಾರಲಾಗಿತ್ತು.

No comments:

Post a Comment