Thursday, December 27, 2018
ಮೊಂಟೆಪದವು ಲಕ್ಷ್ಮೀ ಪರಮೇಶ್ವರ ಕಾರಂತ ವಿಧಿವಶ
ಬಂಟ್ವಾಳ ತಾಲೂಕಿನ ಮೊಂಟೆಪದವು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ 'ಲಕ್ಷ್ಮೀ ಟೀಚರ್' ಎಂದೇ ಪರಿಚಿತರಾಗಿದ್ದ ಲಕ್ಷ್ಮೀ ಪರಮೇಶ್ವರ ಕಾರಂತ (79) ಇವರು 2018 ದಶಂಬರ 25ರಂದು ವಿಧಿವಶರಾದರು. ಲಿಂಗನಾಥ, ವಾಸುದೇವ, ಶ್ರೀಕುಮಾರ್.. ಮೂವರು ಪುತ್ರರು, ಬಂಧುಗಳನ್ನು ಅಗಲಿದ್ದಾರೆ. ಈಚೆಗೆ ಕೆಲವು ವರುಷಗಳಿಂದ ಪುಣಚ ಸನಿಹದ ಅಜ್ಜಿನಡ್ಕದ 'ಓಂಕಾರಮೂಲೆ'ಯಲ್ಲಿ ವಾಸವಾಗಿದ್ದರು.
ಮೊಂಟೆಪದವು ಶಾಲೆಯಲ್ಲಿ ಪತಿ ಪರಮೇಶ್ವರ ಕಾರಂತರೊಂದಿಗೆ ಗ್ರಾಮೀಣ ಶಾಲೆಯೊಂದನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಈ ದಂಪತಿಗಳದ್ದು. ಜಾತಿ, ಮತ, ಬೇಧವಿಲ್ಲದೆ ಸಾಮಾನವಾಗಿ ಶಾಲೆಯನ್ನು, ವಿದ್ಯಾರ್ಥಿಗಳನ್ನು ಸಂಸ್ಕಾರ ಪಥದಲ್ಲಿ ಮುನ್ನಡೆಸಿದ್ದರು. ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರಾಗಿದ್ದರು. ಇವರಿಗೆ ಶಾಲೆಯೂ, ಮನೆಯೂ ಒಂದೇ ಆಗಿತ್ತು. ವ್ಯಾಪಕವಾದ ಸಾರ್ವಜನಿಕ ಸಂಪರ್ಕವಿತ್ತು. ರಜೆ, ಗಂಟೆ, ವೈಯಕ್ತಿಕವಾದ ಸುಖ-ದುಃಖಗಳನ್ನು ನೋಡದ ದುಡಿತ.
ಲಕ್ಷ್ಮೀ ಕಾರಂತರಿಗೆ ಸಾಹಿತ್ಯ ಅಸಕ್ತಿ ಆಪಾರ. ಕವನ, ಹಾಡುಗಳನ್ನು ಬರೆಯುವುದು ಹವ್ಯಾಸ. ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಸಾಹಿತ್ಯದತ್ತ ಹುರಿದುಂಬಿಸುತ್ತಿದ್ದರು. ಶಾಲಾ ವಾರ್ಶಿಕೋತ್ಸವಗಳ ಸಂದರ್ಭಗಳಲ್ಲಿ ಪ್ರತಿ ವರುಷ ಹೊಸತನ್ನು ಅಳವಡಿಸಿಕೊಂಡು ಜನಾನುರಾಗಿಯಾಗಿದ್ದರು. 'ಶಾಲೆಯ ಅಧ್ಯಾಪಕ ಒಂದು ಊರಿನ ಕಣ್ಣುಗಳಿದ್ದಂತೆ' ಎನ್ನುವ ಹಿರಿ ಮಾತನ್ನು ಅನುಷ್ಠಾನಿಸಿದ ನೆಗಳ್ತೆ ಇವರದು.
ಮನೆಗೆ ಬಂದ ಅತಿಥಿಗಳನ್ನು ಆದರಿಸುವುದರಲ್ಲಿ ವಿಶೇಷಾಸಕ್ತಿ. ಅತಿಥಿಯ ಹೊಟ್ಟೆ ತುಂಬಿದಾಗ ಖುಷಿ ಪಡುವ ಗೃಹಿಣಿ. 2012ರಲ್ಲಿ ಪರಮೇಶ್ವರ ಕಾರಂತರು ವಿಧಿವಶರಾಗಿದ್ದರು. ಆ ಬಳಿಕ ಲಕ್ಷ್ಮೀ ಕಾರಂತರ ದೈಹಿಕವಾಗಿ ಕುಸಿದಿದ್ದರು. ಕಳೆದ ಆರು ವರುಷಗಳಲ್ಲಿ ಸಕ್ರಿಯತೆ ಕೈಕೊಟ್ಟಿತ್ತು.
ಇವರು ನನ್ನ ಚಿಕ್ಕಮ್ಮ – 1982ನೇ ಇಸವಿ. ಎಸ್.ಎಸ್.ಎಲ್.ಸಿ.ಫೈಲ್ ಆಗಿ ಅಸಹಾಯಕ ಸ್ಥಿತಿಯಲ್ಲಿದ್ದೆ. ಸುಳ್ಯದ ಚೇತನಾ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಒಂದೆರಡು ವರುಷ ದುಡಿತ. ಅರಂಬೂರಿನ ರಬ್ಬರ್ ಫ್ಯಾಕ್ಟರಿನಲ್ಲಿ ಅಲ್ಪ ಕಾಲ ರಾತ್ರಿ ಪಾಳಿ ಕೆಲಸ. ಮನಸ್ಥಿತಿಗಳಿಗೆ ಎರಡೂ ಉದ್ಯೋಗಗಳು ಒಗ್ಗದಾದಾಗ ನನ್ನನ್ನು ಆದರಿಸಿದವರು ಚಿಕ್ಕಪ್ಪ-ಚಿಕ್ಕಮ್ಮ. ಆರಂಭದಲ್ಲಿ ಮುಳಿಯ ಶಂಕರ ಭಟ್ಟರ ಮೂಲಕ ‘ಜಗದರ್ಶಿ’ ಎನ್ನುವ ಪತ್ರಿಕೆಯಲ್ಲಿ ಸ್ವಲ್ಪ ಕಾಲ ಕಂಪೋಸಿಟರ್ ಉದ್ಯೋಗ. ನಂತರ ಎಡಂಬಳೆ ಗೋಪಾಲ ಭಟ್ಟರ ಮೂಲಕ ಮಂಗಳೂರಿನ ನ್ಯಾಯವಾದಿ ಎ.ಪಿ.ಗೌರೀಶಂಕರರು ಕಾರ್ಯದರ್ಶಿಯಾಗಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದಕ್ಕೆ ಸಹಾಯಕನಾಗಿ ಸೇರ್ಪಡೆ. ಆಗಿನ ಸಂಬಳ ರೂ.300.
ಚಿಕ್ಕಪ್ಪ ವಾಸವಾಗಿದ್ದ ಮೊಂಟೆಪದವು ಮನೆಯಿಂದ ಹೋಗಿ ಬರುತ್ತಿದ್ದೆ. ತನ್ನ ಮಕ್ಕಳನ್ನುಯಾವ ರೀತಿ ನೋಡಿಕೊಳ್ಳುತ್ತಿದ್ದರೋ ಅಷ್ಟೇ ಪ್ರೀತಿಯಿಂದ ನನ್ನನ್ನೂ ನೋಡಿಕೊಳ್ಳುತ್ತಿದ್ದರು. ಬಹುಶಃ ಮೂರು ವರುಷ ಚಿಕ್ಕಪ್ಪ-ಚಿಕ್ಕಮ್ಮ ಕೈತುತ್ತು ನೀಡಿ ಪ್ರೀತಿ ತೋರಿದ್ದರು. ನಂತರದ ದಿವಸಗಳಲ್ಲಿ ತಲಪಾಡಿಯ ಅಜ್ಜಿ ಮನೆಯಿಂದ ಎಡರನೇ ಇನ್ನಿಂಗ್ಸ್ ಆರಂಭ. 1991 ಜನವರಿ 1 ರಿಂದ ಪುತ್ತೂರು ಅಡಿಕೆ ಪತ್ರಿಕೆಯಲ್ಲಿ ಕಚೇರಿ ಸಹಾಯಕನಾಗಿ ನಿಯುಕ್ತಿ. ಮಂಗಳೂರಿಗೆ ವಿದಾಯ.
ನನ್ನೆಲ್ಲಾ ಸಾಹಿತ್ಯ, ಕಲೆಯ ಆಸಕ್ತಿಗಳನ್ನು ಪ್ರೋತ್ಸಾಹದ ನುಡಿಗಳ ಮೂಲಕ ಬೆನ್ನುತಟ್ಟುತ್ತಾ ಬಂದಿದ್ದಾರೆ ಚಿಕ್ಕಪ್ಪ-ಚಿಕ್ಕಮ್ಮ. ನನ್ನ ಮದುವೆಯ ಸಂದರ್ಭದಲ್ಲಿ ಬಂಧುಗಳಿಂದ ಉಂಟಾದ ‘ಮಾನಸಿಕ ಕಿರಿಕಿರಿ’ಗಳನ್ನು ಹಗುರ ಮಾಡಿದವರು. ‘ತನ್ನ ಅಣ್ಣನ ಮಗ’ ಎನ್ನುವ ಹೊಕ್ಕಳ ಬಳ್ಳಿಯ ಸಂಬಂಧಗಳು ಚಿಕ್ಕಪ್ಪನಲ್ಲಿ ಸದಾ ಜೀವಂತವಾಗಿರುವುದನ್ನು ಕಂಡಿದ್ದೆನೆ. ‘ನನ್ನ ಭಾವನ ಮಗ’ ಎನ್ನುವ ಅಕ್ಕರೆ ಚಿಕ್ಕಮ್ಮನಲ್ಲೂ ಇತ್ತು. ಅವರ ಮಕ್ಕಳಾದ ಲಿಂಗನಾಥ, ವಾಸುದೇವ, ಶ್ರೀ ಕುಮಾರ್ ತನ್ನನ್ನು ಅನ್ಯನೆಂದು ಇಂದಿಗೂ ಭಾವಿಸದಿರುವುದು ನನ್ನ ಸುಕೃತ.
1996ರಲ್ಲಿ ಅಪ್ಪನನ್ನು ಕಳೆದುಕೊಂಡೆ. 2012ರಲ್ಲಿ ಚಿಕ್ಕಪ್ಪ ದೂರವಾದರು. 2018ರಲ್ಲಿ ಚಿಕ್ಕಮ್ಮ ದೈವಾಧೀನರಾದರು. ನನ್ನ ಬದುಕಿನಲ್ಲಿ ಪಥದರ್ಶಕರ ಕೊರತೆಯಿಂದಾಗಿ ಆರಕ್ಕೇರದ ಮೂರಕ್ಕಿಳಿಯದ ಒಂದು ರೀತಿಯ ಅತಂತ್ರ ಬದುಕಿನಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದೇನೆ. ಸಾಗಿದ ಬಂದ ದಾರಿಯಲ್ಲಿ ಆರ್ಥಿಕತೆಯ ವೈಭವಗಳಿಲ್ಲ. ಆದರೆ ಕಲೆ, ಸಾಹಿತ್ಯಗಳು ಕೈ ಬಿಡಲಿಲ್ಲ.
Subscribe to:
Posts (Atom)