Monday, May 20, 2019

'ಹೇಗಿದೆ ವ್ಯಾಪಾರ.... ಜೀವನಕ್ಕೆ ಸಾಕಾಗ್ತದಾ'


    2017 ದಶಂಬರದಲ್ಲಿ ಕಡಬದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಅನಿರೀಕ್ಷಿತವಾಗಿ ಸಮ್ಮೇಳನದ ಅಧ್ಯಕ್ಷೀಯ ಗೌರವ ಪ್ರಾಪ್ತವಾಗಿತ್ತು. ಖುಷಿ ನೀಡಿದ ಕ್ಷಣಗಳು. ಅಧ್ಯಕ್ಷತೆ ಅಂದರೆ ಸಮ್ಮೇಳನಕ್ಕೆ ಸೀಮಿತ. ಆ ಸ್ವಸ್ವರೂಪ ಜ್ಞಾನವಿಟ್ಟುಕೊಂಡೇ ಭೋಜನ ಸಮಯದಲ್ಲಿ ಮಳಿಗೆಗಳನ್ನು ಸುತ್ತುತ್ತಿದ್ದೆ.

ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆಯಲ್ಲಿ ಶ್ಯಾಮ್ ಬ್ಯುಸಿಯಾಗಿದ್ದರು. ಒಂದೈದು ನಿಮಿಷ ಮಳಿಗೆಯಲ್ಲಿ ಕುಳಿತಿದ್ದೆ. ಪರಿಚಿತ ವ್ಯಕ್ತಿಯೊಬ್ಬರು (ಹೆಸರು ನೆನಪಿಲ್ಲ) ಮಳಿಗೆಗೆ ಬಂದು, ನಿಮ್ಮ ಅಣ್ಣನನ್ನು ವೇದಿಕೆಯನ್ನು ನೋಡಿದೆ. ಅವರಿಗೆ ಅಭಿನಂದನೆ ಹೇಳಿ ಎಂದು ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡರು. ಮತ್ತೊಮ್ಮೆ ಓರೆಗಣ್ಣಿನಿಂದ ನೋಡಿ ಹೊರಟರು.

ಅವರ ಓರೆಗಣ್ಣಿನ ತೀಕ್ಷ್ಣತೆ ಅರ್ಥವಾಗಲಿಲ್ಲ. 'ನಿಮ್ಮಣ್ಣನಿಗೆ ಅಭಿನಂದನೆ ಹೇಳಿ' ಎಂದರು. ಯಾರು ಅಣ್ಣ? ಯಾರಿಗೆ ಅಣ್ಣ? ಒಟ್ಟೂ ಗೊಂದಲ. ಸಮ್ಮೇಳನದ ಸಂತೋಷವು ಮುರುಟಬಾರದೆಂದು ಘಟನೆಯನ್ನು ಮರೆತಿದ್ದೆ. ಯಾರಲ್ಲೂ ಹಂಚಿಕೊಂಡಿಲ್ಲ. ಮೂನರ್ಾಲ್ಕು ತಿಂಗಳು ಕಳೆದಿರಬಹುದಷ್ಟೇ. ಅದೇ ವ್ಯಕ್ತಿ ಪ್ರತ್ಯಕ್ಷ. ಹೇಗಿದೆ ವ್ಯಾಪಾರ, ಜೀವನಕ್ಕೆ ಸಾಕಾಗ್ತದಾ. ಛೇ.. ಇಂತಹ ಸ್ಥಿತಿ ಬರಬಾರದಾಗಿತ್ತು. ಎನ್ನುತ್ತಾ ಅನುಕಂಪದಿಂದ ಹತ್ತಾರು ಬಾರಿ ಲೊಚಗುಟ್ಟುತ್ತಾ ನಖಶಿಖಾಂತ ನೋಡಿದರು. ಮಾತು ಸ್ವಲ್ಪ ಸಡಿಲವೇ ಆಗಿತ್ತು.

ವಿಷಯ ಸ್ಪಷ್ಟವಾಯಿತು. ಅಂದು ಪುಸ್ತಕದ ಮಳಿಗೆಯಲ್ಲಿ ಕುಳಿತಿದ್ದೇನಲ್ಲಾ.. ನಾನೀಗ ಪುಸ್ತಕ ವ್ಯಾಪಾರ ಮಾಡುತ್ತಿದ್ದೇನೆಂದು ತಪ್ಪಾಗಿ ಗ್ರಹಿಸಿದ್ದರು. ಆ ಆತ್ಮಕ್ಕೆ ವೇದಿಕೆಯಲ್ಲಿದ್ದುದು ನಾನೇ ಎನ್ನುವುದೂ ಗೊತ್ತಾಗಲಿಲ್ಲ!  ನನ್ನ ಅಣ್ಣ ಎಂದು ಊಹಿಸಿದ್ದರು. ಇರಲಿ, ಪುಸ್ತಕ ವ್ಯಾಪಾರದಲ್ಲಿ ಅಷ್ಟೊಂದು ಕನಿಷ್ಠತೆಯನ್ನು ಯಾಕೆ ಕಂಡುಕೊಂಡರೋ ಗೊತ್ತಿಲ್ಲ.

ವಾರದ ಹಿಂದೆ ಪುನಃ ಸಿಕ್ಕರು. ಪ್ರಮಾದ ಅವರಿಗೆ ಅರ್ಥವಾಗಿ ಮುಜುಗರಪಟ್ಟರು. ಸರಿ... ಪುಸ್ತಕ ವ್ಯಾಪಾರವೂ ಒಂದು ವೃತ್ತಿಯಲ್ವಾ. ಅದನ್ಯಾಕೆ ಕನಿಷ್ಠವಾಗಿ ಕಾಣುತ್ತೀರಿ ಎಂದಾಗ ನಿರುತ್ತರಿ. ನೋಡಿ.. ಪ್ರಕಾಶ್ ಕುಮಾರ್ ಕೊಡೆಂಕಿರಿ ಅವರಿಗೆ ಪುಸ್ತಕವೇ ಸರ್ವಸ್ವ. ಅದುವೇ ಬದುಕು. ಜತೆಗೆ ವೃತ್ತಿ ಧರ್ಮದ ಪಾಲನೆ. ಸಮಾಜದಲ್ಲಿ ಅವರಿಗೆ ಗೌರವದ ಸ್ಥಾನ ಇಲ್ವಾ.. ಎಂದು ಮಾತಿಗೆಳೆದಾಗ ಸಬೂಬು ಹೇಳಿ ಜಾಗ ಖಾಲಿ ಮಾಡಿದರು.

ಸಮಾಜದಲ್ಲಿ ತುಂಬಾ ಮಂದಿಯನ್ನು ನೋಡುತ್ತೇವೆ. ಒಬ್ಬನ ವೃತ್ತಿಯನ್ನು ಕೀಳಾಗಿ ಕಂಡು ತಾನು ಸ್ಥಾಪಿತನಾಗುವ ಪರಿ. ಇಂತಹ ವ್ಯಕ್ತಿಗಳನ್ನು ಮನಸ್ಸಿಗೆ ತಂದುಕೊಂಡಾಗ ಪುತ್ತೂರು ಕೊಕೊ ಗುರು ಉದ್ಯಮದ ಶಿವಶಂಕರ ಭಟ್ ಈಚೆಗೆ ಹೇಳಿದ ವಿಚಾರ ನೆನಪಿಗೆ ಬಂತು - ನನ್ನ ಮನೆಯ ಮೇಣ ರಹಿತ ಹಲಸಿನ ಹಣ್ಣನ್ನು ಅಂಗಡಿಯಲ್ಲಿ ತಂದಿಟ್ಟಿದ್ದೆ. ಯಾರಾದರೂ ಆಸಕ್ತರಿಗೆ ಪ್ರಯೋಜನವಾಗಲಿ. ಕನಿಷ್ಠ ದರವನ್ನೂ ನಿಗದಿಪಡಿಸಿದ್ದೆ. ಹಲಸಿನ ಹಣ್ಣನ್ನೂ ಮಾರುವುದೇ... ಎಂದು ಕೆಲವರು ಗೇಲಿ ಮಾಡಿದರು. ನಮ್ಮ ಉತ್ಪನ್ನಗಳನ್ನು ನಾವು ಮಾರುವುದು ಅವಮಾನವಾ. ಅದು ಗೌರವ ಅಲ್ವಾ.. 

ಯಾವಾಗಲೂ ಪರರನ್ನೇ ಚಿಂತಿಸುವ, ಮಾತನಾಡುವ, ಗೊಣಗಾಡುವ ಮಂದಿಗೆ ಇವೆಲ್ಲಿ ಅರ್ಥವಾಗಬೇಕು? ಮಾನ, ಅಪಮಾನಗಳ ಶಬ್ದಾರ್ಥಗಳನ್ನು ತಿಳಿಯದೆ ಒದ್ದಾಡುತ್ತಿದ್ದಾರೆ. ನಿಮ್ಮ.. ಕರಾವಳಿಯವರಿಗೆ ಬಡತನದ ಅನುಭವ ಇಲ್ಲಾರಿ. ಕೈಯಲ್ಲಿ ಹಣ ಬೇಕಾದಷ್ಟು ಓಡಾಡುತ್ತೆ. ನಮ್ಮ ಕಡೆಗೆ ಬನ್ನಿ. ಬದುಕು ಅರ್ಥವಾಗುತ್ತೆ - ಹಿಂದೊಮ್ಮೆ ಉತ್ತರ ಕರ್ನಾಟಕಕ್ಕೆ ಪ್ರವಾಸ ಹೋದಾಗ ಕೃಷಿಕರೊಬ್ಬರು ಆಡಿದ ಮಾತು ಸತ್ಯವೆಂದು ತೋರುತ್ತದೆ.

ಓರ್ವನ ವೃತ್ತಿಯು ಅವನಿಗೆ ದೊಡ್ಡದು. ಅವನಿಗೆ ಗೌರವ. ಇನ್ನೊಬ್ಬರಿಗೆ ಢಾಳಾಗಿ ಕಾಣಬಹುದು. ವೃತ್ತಿಯಲ್ಲಿ ಯಾವುದೂ ಶ್ರೇಷ್ಟವಲ್ಲ, ಕನಿಷ್ಠವಲ್ಲ. ವೃತ್ತಿಯನ್ನು ನೋಡಿ ವ್ಯಕ್ತಿತ್ವವನ್ನು ಅಳತೆ ಮಾಡುವಾತನಲ್ಲಿ ಬೌದ್ಧಿಕ ದಾರಿದ್ರ್ಯ ಇದೆ ಎನ್ನುವುದಕ್ಕೆ ಕನ್ನಡಿ ಬೇಕಾಗಿಲ್ಲ. 
 

ನಿದ್ರೆಗೆ ಜಾರಿದ ಶೈಕ್ಷಣಿಕ ಎಚ್ಚರ



    ನಾನೀಗ ಟಿವಿ ನೋಡುತ್ತಿಲ್ಲ! ಆರೋಗ್ಯವಾಗಿದ್ದೇನೆ! ಸದ್ಯ ದಿನಪತ್ರಿಕೆಗಳನ್ನು ಓದುತ್ತೇನೆ. ಆ ಓದು ರದ್ದಾಗಲು ಹೆಚ್ಚು ದಿವಸ ಬೇಡ - ಈ ಮಾತುಗಳು 'ನನ್ನನ್ನು ಸ್ಥಾಪಿಸಲು' ಇರುವ ಟೂಲ್ಸ್ ಅಲ್ಲ ಎನ್ನುವ ಎಚ್ಚರವಿದೆ.
    ಯಾವುದೇ ಒಂದು ಮಾಧ್ಯಮವು ಬದುಕಿಗೆ ಹತ್ತಿರವಾದಾಗ, ಬದುಕಲು ಮತ್ತು ಬದುಕಿಗೆ ಬೇಕಾದ ಒಳಸುರಿಗಳನ್ನು ನೀಡಿದಾಗ ಅದು ಸಾಮಾಜಿಕ ಸ್ವಾಸ್ಥ್ಯಕ್ಕೆ ತನ್ನ ಕೊಡುಗೆಯನ್ನು ನೀಡಿದಂತಾಗುತ್ತದೆ. ಈಗ ಮಾಧ್ಯಮಗಳ ಸ್ವಾಸ್ಥ್ಯ ಕಾಪಾಡುವುದೇ ದೊಡ್ಡ ಸಮಸ್ಯೆಯಾಗಿದೆ!
    ಸಾರ್ವತ್ರಿಕವಾದ ಒಂದು ಭಾಷೆಯು ಸಮಾಜದಲ್ಲಿ ಸಂಚಲನವನ್ನುಂಟು ಮಾಡುತ್ತದೆ. ಅದು ಶಿಷ್ಟತೆಯ ವ್ಯಾಪ್ತಿಯಲ್ಲಿರಬೇಕೆನ್ನುವುದು ಸ್ವನಿಯಂತ್ರಣ. ಒಂದು ಕಾಲಘಟ್ಟದ ಜನಜೀವನದಲ್ಲಿ ಇಂತಹ ಸಾರ್ವಜನಿಕ ಶಿಷ್ಟತೆಯ ಭಾಷಾ ವಿನಿಮಯಗಳಿದ್ದುವು, ಭಾಷಾ ಪ್ರಯೋಗಗಳಿದ್ದುವು. ಖಾಸಗಿ ಮಾತುಕತೆಗಳಲ್ಲಿ ಶಿಷ್ಟತೆ ಭಂಗವಾದರೂ ಹತ್ತು ಜನ ಸೇರಿದಾಗ ಭಾಷಾ ಪ್ರಯೋಗಗಳು ಬಿಗಿಯಾಗುತ್ತವೆ. ಇದು ಆ ಕಾಲದ ಶೈಕ್ಷಣಿಕ ಎಚ್ಚರ.
    ಅದನ್ನೇ ಈ ಕಾಲಕ್ಕೆ ಸಮೀಕರಿಸೋಣ. 'ಶಿಷ್ಟ' ಎನ್ನುವ ಪದ ಪದಕೋಶಕ್ಕೆ ಮಾತ್ರ ಸೀಮಿತ. ಎಷ್ಟು ಕೆಟ್ಟದಾಗಿ ಭಾಷಾ ಪ್ರಯೋಗ ಮಾಡಿದಷ್ಟೂ ಆಗ ಸುಭಗ ಮತ್ತು ಬುದ್ಧಿವಂತ. ಅದನ್ನು ಸಂಭ್ರಮಿಸುವ ಆತನ ಅನುಯಾಯಿಗಳು. ಆ ಸಂಭ್ರಮವನ್ನು ಹಬ್ಬಿಸುವ ತುಂಡರಸುಗಳು!
    ವರನಟ ಕೀರ್ತಿಶೇಷ ರಾಜಕುಮಾರ್ ಅವರ ಸಿನಿಮಾವನ್ನೊಮ್ಮೆ ಮನಸ್ಸಿಗೆ ತೆಕ್ಕೊಳ್ಳಿ. ಅವರ ಸಿನಿಮಾಗಳಲ್ಲಿ 'ಮೂರ್ಖ' ಎನ್ನುವ ಪದಪ್ರಯೋಗ ಬಂದರೆ ಅದು ಗರಿಷ್ಠ ಬಯ್ಗಳು. ಬಯ್ಯುವುದಕ್ಕೂ ಶಿಷ್ಟ ಭಾಷೆಯ ಬಳಕೆಯನ್ನು ರಾಜಕುಮಾರ್ ಪಾಲಿಸಿದ್ದರು. ಅದು ಅವರ ಸಂಸ್ಕಾರ. ಈಗಿನ ಸಿನಿಮಾದ ಭಾಷೆಯ ಕುರಿತು ಪ್ರತ್ಯೇಕ ಉಲ್ಲೇಖಿಸಬೇಕಾಗಿಲ್ಲ. ಎಷ್ಟು ಕೆಟ್ಟದಾಗಿ, ಅಸಹ್ಯವಾಗಿ ಮತ್ತು ಹೊಸ ಹೊಸ ಶಬ್ದಗಳನ್ನು ಟಂಕಿಸುವುದು ಖಯಾಲಿಯಾಗಿದೆ.
    ಭಾಷೆ, ಸಂಸ್ಕಾರ ಎನ್ನುವುದರ ಅಡಿಗಟ್ಟು ಶಿಕ್ಷಣ. ಉರುಹೊಡೆದು ನೂರಕ್ಕೆ ನೂರು ಅಂಕ ಪಡೆಯುವುದು ಶಿಕ್ಷಣವಲ್ಲ. ಪ್ರಾಥಮಿಕ, ಪ್ರೌಢ ಹಂತದ ಶಿಕ್ಷಣಗಳಲ್ಲಿ ಬದುಕಿನ ಸಂಸ್ಕಾರಗಳ, ನೀತಿಯ ಪಾಠಗಳನ್ನು ಓದಿ, ಮನನಿಸಿ ಅದರ ತಳಹದಿಯಲ್ಲಿ ಬದುಕನ್ನು ಕಟ್ಟಿದ ಹಿರಿಯರು ಕಣ್ಮುಂದೆ ಇದ್ದಾರೆ. ಆದರೆ ಇಂದು ಸಂಸ್ಕಾರ, ನೀತಿಗಳ ಅರ್ಥಗಳ ಗಾಢತೆಯು ಶುಷ್ಕವಾಗಿದೆ. ಇದನ್ನು ಶುಷ್ಕ ಮಾಡಿದ ಪಾಪಕ್ಕೆ ಕೇವಲ ಸರಕಾರ ಮಾತ್ರವಲ್ಲ ನಾವೆಲ್ಲರೂ ಒಳಗಾಗಲೇ ಬೇಕು.
    ಮಾಧ್ಯಮಗಳನ್ನು ಜನ ನಂಬುತ್ತಾರೆ. ಅದರಲ್ಲಿ ಬರುವ ಸುಳ್ಳುಗಳನ್ನೂ ನಂಬುತ್ತಾರೆ. ಊಹೆಗಳನ್ನೂ ನಂಬುತ್ತಾರೆ. ಜನರು ನಂಬುತ್ತಾರೆಂದು ಏನೇನೋ ಪ್ರಸಾರ ಮಾಡುವುದು ಬೌದ್ಧಿಕ ದಾರಿದ್ರ್ಯ. ವಾಹಿನಿಗಳ ಸುದ್ದಿಗಳನ್ನೋ, ಜಾಹೀರಾತುಗಳನ್ನೋ ಗಮನಿಸಿ. ಸುಳ್ಳುಗಳ ಸರಮಾಲೆ! ಕೆಟ್ಟ ಕೆಟ್ಟ ಶಬ್ದಗಳ ಪ್ರಯೋಗ. ವೈಯಕ್ತಿಕ ವಿಚಾರಗಳತ್ತ ಆಸಕ್ತಿ.
    ಈಗ ಚುನಾವಣೆಯ ಕಾವು ದೇಶದೆಲ್ಲೆಡೆ ಹಬ್ಬುತ್ತಿದೆ. ತಂತಮ್ಮ ಪಕ್ಷಗಳ ಸಾಧನೆಯನ್ನು ಬಿಂಬಿಸುವುದರ ಹೊರತಾದ 'ಶಿಷ್ಟತೆ'ಯನ್ನು ಮರೆತ ಭಾಷಾಪ್ರಯೋಗವನ್ನು ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ನೋಡುತ್ತೇವೆ. ಎಲ್ಲೋ ಒಂದು ಸಭೆಯಲ್ಲೋ, ರ್ಯಾಲಿಯಲ್ಲೋ ಆಡಿದ ಮಾತು ಇಡೀ ದೇಶಕ್ಕೆ ಸಂಬಂಧಿಸಿದ್ದು ಎನ್ನುವ ರೀತಿಯಲ್ಲಿ ಬಿಂಬಿಸುವುದನ್ನು ನೋಡಿದರೆ ಮಾಧ್ಯಮ ಜಗತ್ತು ಎತ್ತ ಸಾಗುತ್ತಿದೆ? ಆರ್ಥವಾಗುತ್ತಿಲ್ಲ.
    ಪಕ್ಷ ಯಾವುದೇ ಇರಲಿ. ದೇಶದ ಪ್ರಧಾನಿಯನ್ನು ಕೊಲ್ಲುತ್ತೇನೆಂದು ಓರ್ವ ಘೋಷಣೆಯನ್ನು ಮಾಡಿದಾಗ ಅದನ್ನು ಪ್ರತಿಭಟಿಸುವ (ಪಕ್ಷಬೇಧ ಮರೆತು) ಬಾಯಿಗಳು ಮೌನವಾಗಿವೆ. ಸಂಭ್ರಮಿಸುವ ಮನಸ್ಸುಗಳು ನೂರಾರಿವೆ. ಪ್ರಧಾನಿಯಲ್ಲ, ದೇಶದ ಯಾವ ನಾಗರಿಕನ್ನೂ ಓರ್ವ 'ಕೊಲ್ಲುತ್ತೇನೆ' ಎನ್ನುವುದೇ ಅಪರಾಧ. ಇದಕ್ಕೆ ಯಾವ ಸಾಕ್ಷಿಗಳು ಬೇಕಾಗಿಲ್ಲ. ಆತನ ಮಾತೇ ಸಾಕ್ಷಿಯಾಗುತ್ತದೆ.
ಹಾಗಾದರೆ 'ಶಿಷ್ಟತೆ' ಎನ್ನುವುದು ಭಾರತಕ್ಕೆ ಮರೀಚಿಕೆಯೇ? ಶಿಷ್ಟತೆ ಎಂದಾಗ ಅದಕ್ಕೆ 'ಎಡ-ಬಲ'ಗಳನ್ನು ಥಳುಕು ಹಾಕಬೇಕಾಗಿಲ್ಲ. ಶಿಕ್ಷಣದಿಂದ 'ಶಿಷ್ಟ' ಭಾಷೆ, ಬದುಕು, ಸಂಸ್ಕಾರಗಳು ನಮ್ಮದಾಗಬಹುದೆನ್ನುವ ಭ್ರಮೆ ನನಗಿಲ್ಲ. ಹಾಗಾದರೆ ಇದನ್ನು ಮರುಸ್ಥಾಪಿಸಲು ಜಾಗ ಎಲ್ಲಿ? ಮಾಧ್ಯಮಗಳಿಂದ ಸಾಮಾಜಿಕ ಸ್ವಾಸ್ಥ್ಯ ಸಿಗಹುದೆನ್ನುವ ನಿರೀಕ್ಷೆಯಿಲ್ಲ. ಆ ಆಶೆ ಎಂದೋ ಸತ್ತು ಹೋಗಿವೆ! 'ಶೈಕ್ಷಣಿಕ ಎಚ್ಚರ'ವು ಪೂರ್ತಿಯಾಗಿ ನಿದ್ರೆಗೆ ಜಾರಿದೆ
-sullia news / may 19
       

Monday, May 6, 2019

'ನಾನ್ಯಾಕೆ ಅಂದು ಆತ್ಮಹತ್ಯೆ ಮಾಡಿಕೊಂಡಿಲ್ಲ'!

ಅಂದು ಎಸ್.ಎಸ್.ಎಲ್.ಸಿ. ಫಲಿತಾಂಶ. ಗೋಡೆಯಲ್ಲಿ ರಿಸಲ್ಟಿನ ಉದ್ದ ಪಟ್ಟಿ ಅಂಟಿಸಿದ್ದರು. ಯಾರು ಪಾಸ್, ಫೇಲ್ ಎಂದು ಮುಖ ನೋಡಿಯೇ ಹೇಳಬಹುದಾಗಿತ್ತು. 'ನಿನ್ನದು ಒಂದು ಸಬ್ಜೆಕ್ಟ್ ಹೋಗಿದೆ ಕಾಣ್ತದೆ' ಸಹಪಾಠಿ ಮೆಲುತ್ತರ ನೀಡಿ ಗುಂಪಿನಲ್ಲಿ ಮರೆಯಾಗಿದ್ದ.

    ಹೌದು.. ಆತ ಅಂದಂತೆ ಆಂಗ್ಲ ವಿಷಯದಲ್ಲಿ ಎರಡು ಅಂಕ ಕೈಕೊಟ್ಟಿತ್ತು. ಬಹುತೇಕ ಸಹಪಾಠಿಗಳು ಉತ್ತೀರ್ಣರಾಗಿದ್ದರು. ವರುಷದುದ್ದಕ್ಕೂ ಒಂದೇ ಬೆಂಚಿನಲ್ಲಿ ಕುಳಿತ ಮನಸ್ಸುಗಳು ಅನುತ್ತೀರ್ಣನಾದವನನ್ನು ಹಿಂದಿನ ಬೆಂಚಿಗೆ ತಳ್ಳಿದ ಅನುಭವ! ಯಾಕೆ ಹೀಗಾಯಿತು? ಈ 'ಅಸಹಾಯಕತೆ'ಯನ್ನು ನೋಡುವ, ಕೇಳುವ, ಗಮನಿಸುವ ಮನಸ್ಸುಗಳ ಭಾವಗಳಂದು ತೂಕಡಿಸುತ್ತಿತ್ತು!

    ಎಸ್.ಎಸ್.ಎಲ್.ಸಿ.ಯಲ್ಲಿ ಫೈಲ್ ಅಂದಾಗ ಮನೆಯಲ್ಲೇನೂ ಆತಂಕದ ವಾತಾವರಣವಿದ್ದಿರಲಿಲ್ಲ. ಇಷ್ಟು ಅಂಕ ಪಡೆಯಲೇಬೇಕೆಂಬ ಹಠವೂ ಇದ್ದಿರಲಿಲ್ಲ. ಅಂಕ ಬಿಡಿ, ಭವಿಷ್ಯದ ನೋಟವೂ ಹೆತ್ತವರಲ್ಲಿ ಇದ್ದಿರಲಿಲ್ಲ! ತಾವು ನಂಬಿದ, ಪ್ರೀತಿಸಿದ ವೃತ್ತಿಯ ಕೂಪದೊಳಗೆ ಬದುಕಿನ ನೋಗವು ಸಾಗುತ್ತಿತ್ತು!

    ಆಂಗ್ಲ ಭಾಷೆಯ ವಿಷಯದಲ್ಲಿ ನೂರಕ್ಕೆ ಮೂವತ್ತಮೂರು ಅಂಕ. ಫೈಲ್ ಅಂಕಪಟ್ಟಿಯನ್ನು ನೋಡುತ್ತಾ ನೋಡುತ್ತಾ ಇದ್ದರೂ ಈಗಿನಂತೆ 'ಆತ್ಮಹತ್ಯೆ'ಯ ಯೋಚನೆಯು ಬಂದಿರಲಿಲ್ಲ! 'ಪರೀಕ್ಷೆಗೆ ಕುಳಿತರಾಯಿತು' ಅಷ್ಟೇ. ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕದಿಂದ ಎಸ್.ಎಸ್.ಎಲ್.ಸಿ.ಉತ್ತೀರ್ಣನಾದರೂ ಆಪ್ತ ವಲಯದಲ್ಲಿ 'ಫೈಲ್' ಹಣೆಪಟ್ಟಿ ಅಂಟಿತ್ತು.

    ಮೊನ್ನೆಯಷ್ಟೇ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಯಿತು. ಪ್ರಥಮ, ದ್ವಿತೀಯ ರ್ಯಾಂಕ್ ಪಡೆದವರ ಸಂಭ್ರಮಗಳು ಪತ್ರಿಕೆಗಳಲ್ಲಿ ಜಾಗ ಪಡೆದುವು. ಫಲಿತಾಂಶದ ಹಿಂದೆ ಒಂದಷ್ಟು ರಾಜಕೀಯ ಘಮಲುಗಳೂ ಸೇರಿದುವು! ಕೆಸರೆರೆಚಾಟಗಳೂ ನಡೆದುವು. ಇಷ್ಟು ವರುಷ ಮೆತ್ತಿಕೊಳ್ಳದ ರಾಜಕೀಯದ ಅಂಟಿನ ಹಿಂದಿನ ಹಾದಿ ಪ್ರಜ್ಞಾವಂತರಿಗೆ ಅರ್ಥವಾಗುತ್ತದೆ.

ಸಂಭ್ರಮಗಳ ಜತೆಗೆ ಆತ್ಮಹತ್ಯೆಗಳ ಸುದ್ದಿಯೂ ರಾಚಿತು. ಫಲಿತಾಂಶ ಬರುವ ಮೊದಲೇ ಇಹಲೋಕಕ್ಕೆ ಮನ ಮಾಡಿದ ಎಳೆಯ ಮನಸ್ಸಿನ ಹಿಂದಿನ ಬದುಕಿನ ವಾತಾವರಣ ಅಧ್ಯಯನವಾಗಬೇಕು. ಒಂದು ಮನೆಯ ಶೈಕ್ಷಣಿಕ ವಾತಾವರಣ, ಹೆತ್ತವರ ನಿರೀಕ್ಷೆಗಳು, ವಿದ್ಯಾಥರ್ಿಯ ಕಲಿಕೆಯ ಪ್ರಮಾಣ, ಧಾರಣ ಶಕ್ತಿ.. ಇವೆಲ್ಲವೂ ವಿದ್ಯಾರ್ಥಿಯ ಮೇಲೆ ಗಾಢ ಪರಿಣಾಮ ಬೀಳುತ್ತದೆ. ಎಲ್ಲರೂ ನೂರಕ್ಕೆ ನೂರು ಅಂಕ ತೆಗೆಯಲು ಸಾಧ್ಯವಿಲ್ಲವಲ್ಲಾ.

ವರ್ತಮಾನಕ್ಕೆ ಅಗತ್ಯ ಎಂದು ಹೇಳಲ್ಪಡುವ 'ನೂರಕ್ಕೆ ನೂರು' ಅಂಕ ಪ್ರಕ್ರಿಯೆಯು ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಕಲಿಕೆಗೆ ಪ್ರವೇಶಿಕೆಯಾಗಬಹುದು. ಆದರದು ಆ ವಿದ್ಯಾರ್ಥಿಯ ನಿಜ ಬೌದ್ಧಿಮತ್ತೆಯಲ್ಲ. ಈಗ ಹೇಳಲ್ಪಡುವ ಶೈಕ್ಷಣಿಕ ನಿರೂಪಗಳಿಗೆ 'ಬುದ್ಧಿಮತ್ತೆ' ಬೇಕಾಗಿಲ್ಲ. ಏನಿದ್ದರೂ ತೊಂಭತ್ತು-ತೊಂಭತ್ತೈದರ ಮೇಲಿನ ಅಂಕ.

ನಿನ್ನೆ ಅಚಾನಕ್ಕಾಗಿ ಹುಡುಕುತ್ತಿದ್ದಾಗ ಸಿಕ್ಕ ನನ್ನ ಎಸ್.ಎಸ್.ಎಲ್.ಸಿ. ಫೈಲ್ ಅಂಕಪಟ್ಟಿಯನ್ನು ನೋಡುತ್ತಿದ್ದಾಗ ಈ ಎಲ್ಲಾ ವಿಚಾರಗಳು ರಾಚಿದುವು.  'ನಾನ್ಯಾಕೆ ಅಂದು ಆತ್ಮಹತ್ಯೆ ಮಾಡಿಕೊಂಡಿಲ್ಲ'? ಮನದೊಳಗೆ ಪ್ರಶ್ನೆ ರಿಂಗಣಿಸಿತು. ಅಂತಹ ಮನಸ್ಥಿತಿಗಳು, ಯೋಚನೆಗಳು ಬದುಕಿನಲ್ಲಿ ಇದ್ದಿರಲಿಲ್ಲ. ಹಾಗಾಗಿ ಬಚಾವಾದೆ!

ಎಲ್ಲಕ್ಕಿಂತಲೂ ಮುಖ್ಯವಾಗಿ ವೈಯಕ್ತಿಕ ಬದುಕಿನ ಸೂಕ್ಷ್ಮಾತಿಸೂಕ್ಷ್ಮಗಳನ್ನು ಪೋಸ್ಟ್ಮಾರ್ಟಂ ಮಾಡಿ, ಹತ್ತಾರು ಕಂತುಗಳಲ್ಲಿ ಬಿತ್ತರಿಸುವ, ಪ್ರಕಟಿಸುವ ಮಾಧ್ಯಮಗಳಂದು ಇದ್ದಿರಲಿಲ್ಲ.