Wednesday, June 3, 2015

ಖುಷಿ ನೀಡಿದ ತಾಳಮದ್ದಳೆ


              ಮೇ 27ರಂದು ಅಪರಾಹ್ನ ಗಂಟೆ 3. ಪುತ್ತೂರು ಹಾರಾಡಿ ಶ್ಯಾಮ ಭಟ್ಟರ ಗೃಹಪ್ರವೇಶ. ಬಡೆಕ್ಕಿಲ ಗಣರಾಜ ಇವರ ಆಯೋಜನೆಯಲ್ಲಿ ತಾಳಮದ್ದಳೆ. ಪ್ರಸಂಗ : ದಕ್ಷಾಧ್ವರ. ಸುಮಾರು 3 ಗಂಟೆಯಿಂದ 7-30ರ ತನಕ ತಾಳಮದ್ದಳೆಯ ವೈಭವ.
              ಪದ್ಯಾಣ ಗಣಪತಿ ಭಟ್ ಮತ್ತು ತೆಂಕಬೈಲು ತಿರುಮಲೇಶ್ವರ ಭಟ್ಟರ ದ್ವಂದ್ವ ಹಾಡುಗಾರಿಕೆ ಕೂಟದ ಹೈಲೈಟ್. ಇಬ್ಬರೂ ಸುಶ್ರಾವ್ಯವಾಗಿ ಹಾಡಿ ಪ್ರಸಂಗವನ್ನು ಉತ್ತುಂಗ ಶಿಖರಕ್ಕೇರಿಸಿದ್ದರು. ಚೈತನ್ಯ ಪದ್ಯಾಣರ ಮದ್ದಳೆ. ರವಿ ಭಟ್ ಚೆಂಡೆ.
ಅರ್ಥಧಾರಿಗಳಾಗಿ - ಉಜಿರೆ ಅಶೋಕ ಭಟ್ (ಈಶ್ವರ), ನಾ. ಕಾರಂತ ಪೆರಾಜೆ (ದಾಕ್ಷಾಯಿಣಿ), ಪಕಳಕುಂಜ ಶ್ಯಾಮ ಭಟ್ (ದಕ್ಷ), ಭಾಸ್ಕರ ಬಾರ್ಯ (ದೇವೇಂದ್ರ), ಪೆರುವೋಡಿ ನಾರಾಯಣ ಭಟ್, ಜಯಾನಂದ ಕೊಡಂಗಾಯಿ (ಬ್ರಾಹ್ಮಣರು), ಬಡೆಕ್ಕಿಲ ಗಣರಾಜ ಭಟ್ (ವೀರಭದ್ರ).
            ತುಂಬಾ ತೃಪ್ತಿ ನೀಡಿದ ತಾಳಮದ್ದಳೆ. ಸುಮೂರು ನೂರಕ್ಕೂ ಮಿಕ್ಕಿ ಪ್ರೇಕ್ಷಕರು ಕೂಟವನ್ನು ಆಸ್ವಾದಿಸಿದ್ದರು. ಅಶೋಕ ಭಟ್ಟರ ಮಾತಿನ ವೈಖರಿ. ಎದುರು ಪಾತ್ರವನ್ನು ಮಾತಿಗೆಳೆಯುವ ತಂತ್ರ ಅನನ್ಯ. ಅವರೊಂದಿಗೆ ಮೊದಲು ಪಾತ್ರಗಳನ್ನು ಮಾಡಿದ ಅನುಭವವಿದ್ದುರಿಂದ ಕೂಟದ ಅರ್ಥಗಾರಿಕೆ ಕಷ್ಟವಗಿಲ್ಲ. ಲೌಕಿಕ, ತಿಳಿ ಹಾಸ್ಯದೊಂದಿಗೆ ಪ್ರಸಂಗ ಚೆನ್ನಾಗಿ ಮೂಡಿಬಂತು.
        


ಅರ್ಥವಾಗದ ಬದುಕು....

ಬದುಕು ಅರ್ಥವಾಗುವುದಿಲ್ಲ.....!
ಅರ್ಥವಾಗಬಾರದು ಬಿಡಿ.....

ಭರವಸೆಯ ಬೆಳಕಿನ
ನಂದಾದೀಪದ ಎಣ್ಣೆ
ಆರುವ ವೇಗ ಎಷ್ಟೊಂದು ಕ್ಷಿಪ್ರ...

ಬತ್ತಿ ಕರಟಿದಾಗಲೇ ಗೊತ್ತು...

ಎಣ್ಣೆ ಆರಿದೆ.....
ಮೊದಲೇ ಗೊತ್ತಾಗುತ್ತಿದ್ದರೆ ಎಣ್ಣೆ ಹಾಕುತ್ತಿದ್ದೆ....
ಈ ಗೊತ್ತಾಗದಿರುವುದೇ..... ಬದುಕು...
ಅಬ್ಬಾ..... ಅದರ ತಾಕತ್ತೇ.....!?

ಆರುವ ಮೊದಲು ಪ್ರಕಾಶದ ಪ್ರಭೆ
ಕತ್ತಲು ಸರಿದ ಅನುಭವ
ರಾಚುವ ಖುಷಿಗಳ ಮಾಲೆ
ಸಾಧಿಸಿದ ಗತ್ತು-ಗೈರತ್ತು....

ಬೀರಿದ ಪ್ರಭೆಗೆ ಮೊಗೆಮೊಗೆವ ರಿಂಗಣ
ರಿಂಗಿಸಿದಷ್ಟೂ ಬಾಚಿಕೊಳ್ಳುವ ಅವಕಾಶಗಳು
ಕರಬುವಷ್ಟು... ಗೊಣಗಾಡುವಷ್ಟು... ಹೊಟ್ಟೆಯೊಳಗಿನ ಹುಳ ಸಾಯುವಷ್ಟು..
ವಕ್ರನೋಟಿಗಳಿಗಿದು ಕೊನೆಯ ಅಸ್ತ್ರ

ಪ್ರಭೆಯಾರುವ ಮುನ್ನ ಸುತ್ತುವ ದುಂಬಿಗಳು
ಪ್ರಭೆಯ ಸ್ನೇಹ ಪಡೆದ ಹಪಾಹಪಿ
ಅಂತರ ಹೆಚ್ಚಾದಾಗ ಪ್ರಭೆಯೊಳಗೆ ಪ್ರಭೆಯಾಯಿತು
ಪ್ರಭೆಯ ಪ್ರಖರ ಕಡಿಮೆಯಾದಾಗ ದುಂಬಿಗಳು ಮಾಯ.....