Tuesday, June 22, 2010

ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ನೀಡುವ 2008ರ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದೇನೆಂದು ತಿಳಿಸಲು ಹರ್ಷವಾಗುತ್ತಿದೆ. ಗ್ರಾಮೀಣ ವರದಿಗಾರಿಕೆ ವಿಭಾಗದಲ್ಲಿ ವಿಜಯಕರ್ನಾಟಕ ಪತ್ರಿಕೆಯ ಸಾಪ್ತಾಹಿಕದಲ್ಲಿ (17-8-2008) ಪ್ರಕಟವಾದ ನನ್ನ 'ಮೌನದ ಬದುಕಿಗೆ ಮಾತು ಕೊಟ್ಟ ಸಸಾ' ಬರೆಹವು 'ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ'ಗೆ ಆಯ್ಕೆಯಾಗಿದೆ. ಜೂನ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಜರಗುವ ಪತ್ರಕರ್ತರ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕೊಪ್ಪದ 'ಸಹಕಾರಿ ಸಾರಿಗೆ'ಯು ಒಂದು ಸಂಘಟನಾತ್ಮಕ ಸಂಸ್ಥೆ. ಕಾರ್ಮಿಕರೇ ಇಲ್ಲಿ ಧನಿಗಳು. ಹಳ್ಳಿ ಮತ್ತು ಗ್ರಾಮೀಣ ಬದುಕನ್ನು ಹತ್ತಿರದಿಂದ ನೋಡಿದ, ಅನುಭವಿಸಿ ಅನುಭವವಿದ್ದ ಸಹಕಾರಿ ಸಾರಿಗೆಯ ಎಲ್ಲಾ ಸದಸ್ಯರ ಒಗ್ಗಟ್ಟಿನ ಫಲವಾಗಿ ಕೊಪ್ಪದ ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆಯಾಗಿ ಸುತ್ತುಮುತ್ತಲ ಹಳ್ಳಿಗಳು ಮತ್ತು ಕೃಷಿ ಅಭಿವೃದ್ದಿಯಾದುವು. ಇದರಿಂದಾಗಿ ಕೃಷಿ ಮತ್ತು ಗ್ರಾಮೀಣ ಬದುಕಿನಲ್ಲಿ ಹೊಸ ಬೆಳಕು ಮೂಡಿದ ತಾಜಾ ಚಿತ್ರಣವನ್ನು 'ಮೌನದ ಬದುಕಿಗೆ ಮಾತು ಕೊಟ್ಟ ಸಸಾ' ಬರೆಹವು ಬೆಳಕು ಚೆಲ್ಲಿತ್ತು.

Tuesday, May 25, 2010

ಪ್ರತಿಮಾ - ಮದುವೆಯ ಸಡಗರ

ಕೂಡ್ಲು ಕ್ರಷ್ಣ ಮಯ್ಯರ ಚತುರ್ಥ ಪುತ್ರಿ ಪ್ರತಿಮಾ ಮತ್ತು ಕಿದೂರು ಮೂಲದ, ಸದ್ಯ ತ್ರಿಶೂರಿನಲ್ಲಿರುವ ಸುಧೀರ್ - ಇವರ ವಿವಾಹ ಸಮಾರಂಭ ಮೇ ೨೧, ೨೦೧೦ರಂದು ಹೊಸಂಗಡಿ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಜರುಗಿತು. ಮರುದಿವಸ ಕಿದೂರು ವರನ ಮನೆಯಲ್ಲಿ ನೂತನ ವಧೂವರರ ಗ್ರಹಪ್ರವೇಶ ಸಮಾರಂಭ ನಡೆಯಿತು. ಮೇ ೨೩ರಂದು ಕೂಡ್ಲು ವಧುವಿನ ಮನೆಯಲ್ಲಿ ’ಸಮ್ಮಾನ. ಆ ದಿವಸ ನಡೆಯಿತು - ಸತ್ಯನಾರಾಯಣ ಪೂಜೆ.

Thursday, April 8, 2010

ನೆನಪು-ಆಸಕ್ತಿ ಮರುಕಳಿಸಿದಾಗ

ನೆನಪು-ಆಸಕ್ತಿ ಮರುಕಳಿಸಿದಾಗ - ಮಾರ್ಚ್ 27, 2010ರಂದು ಕೊಡೆಂಕಿರಿಯಲ್ಲಿ 'ಭೀಷ್ಮವಿಜಯ'
(ಭೀಷ್ಮ: ಗುಂಡ್ಯಡ್ಕ ಈಶ್ವರ ಭಟ್, ಅಂಬೆ : ನಾ.ಕಾ, ಪರಶುರಾಮ : ದಿವಾಣ ಶಿವಶಂಕರ ಭಟ್, ಸಾಲ್ವ : ಉಂಡೆಮನೆ ಕೃಷ್ಣ ಭಟ್, ಬ್ರಾಹ್ಮಣ : ಪೆರುವೋಡಿ ಸುಬ್ಬಣ್ಣ ಭಟ್, ಏಕಲವ್ಯ : ವೆಂಕಟೇಶ ಮಯ್ಯ
ಹಿಮ್ಮೇಳ : ಭಾಗವತರು : ಸತ್ಯನಾರಾಯಣ ಪುಣಿಂಚಿತ್ತಾಯ,
ಚೆಂಡೆ-ಮದ್ದಳೆ : ಜಗನ್ನಿವಾಸ ರಾವ್ ಪಿ.ಜಿ., ಚಂದ್ರಶೇಖರ ಕೊಂಕಣಾಜೆ)

Wednesday, April 7, 2010

ಭತ್ತ ಉತ್ಸವದಲ್ಲಿ ನಾ. ಕಾರಂತ ಪೆರಾಜೆಯವರಿಗೆ ಪುರಸ್ಕಾರ


ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಇವರನ್ನು ದೇಸಿ ಭತ್ತದ ಬೀಜ ಹಾಗೂ ಸಂಸ್ಕ್ಕೃತಿಯನ್ನು ಉಳಿಸಿ ಬೆಳೆಸುವ ವಿಚಾರಗಳನ್ನು ಮಾಧ್ಯಮಗಳಲ್ಲಿ ಬೆಳಕು ಬೀರಿರುವ ಶ್ರಮವನ್ನು ಶ್ಲಾಘಿಸಿ ಬೆಂಗಳೂರಿನಲ್ಲಿ ಜರುಗಿದ 'ಭತ್ತ ಉತ್ಸವದಲ್ಲಿ ಗೌರವಿಸಲಾಯಿತು.

ರಾಜ್ಯ ಸರಕಾರದ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಹರತಾಳು ಹಾಲಪ್ಪ ಇವರ ಉಪಸ್ಥಿತಿಯಲ್ಲಿ ಮಾಜಿ ಸಚಿವೆ ಕು: ಶೋಭಾ ಕರಂದ್ಲಾಜೆಯವರು ಸ್ಮರಣಿಕೆ, ಪುರಸ್ಕಾರ ಕಥನ ಫಲಕವನ್ನು ನೀಡಿ ಗೌರವಿಸಿದರು.

ಎಲೆ ಮರೆಯ ಕಾಯಿಯಂತಿದ್ದ ಅನೇಕ ಸಾವಯವ ಕೃಷಿಕರು ಮತ್ತು ಬೀಜಸಂರಕ್ಷರನ್ನು ಮುಖ್ಯವಾಹಿನಿಗೆ ಪರಿಚಯಿಸಿದ ನಾ. ಕಾರಂತರೂ ಸೇರಿದಂತೆ ರಾಜ್ಯದ ಏಳು ಮಂದಿ ಕೃಷಿ ಮತ್ತು ಗ್ರಾಮೀಣ ಪತ್ರಕರ್ತರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.

ಬೆಂಗಳೂರಿನ 'ಸಹಜ ಸಮೃದ್ಧ', 'ಭತ್ತ ಉಳಿಸಿ ಆಂದೋಳನ', ತಮಿಳುನಾಡಿದ 'ತನೆಲ್' ಮತ್ತು 'ಯೋರಾ' ಸಂಸ್ಥೆಗಳು ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಹಜ ಸಮೃದ್ಧದ ಅಧ್ಯಕ್ಷ ಎನ್.ಆರ್.ಶೆಟ್ಟಿ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ನಿರ್ದೇಶಕ ಜಿ.ಕೃಷ್ಣಪ್ರಸಾದ್ ಕಾರ್ಯಕ್ರಮವನ್ನು ಸಂಘಟಿಸಿದ್ದರು.

Sunday, February 7, 2010

ಬುಕ್ ಟಾಕ್

ಪತ್ರಕರ್ತನೊಬ್ಬನಿಗೆ ಪಾಸಿಟಿವ್ ನೋಟವಿದ್ದರೆ ಆಗುವ ಲಾಭಕ್ಕೆ 'ಕಾಡು ಮಾವು' ಒಳ್ಳೆಯ ಉದಾಹರಣೆ. ಅಡಿಕೆ ಪತ್ರಿಕೆ ಸದ್ದಿಲ್ಲದೆ ಸಮಾಜಮುಖಿ ಸೇವೆಗೆ ನಿಂತಿದೆ.

ಈ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ. ನಾಡಿನ ಉದ್ದಗಲಕ್ಕೂ ಸುತ್ತಾಡಿದ ಇವರು ಯಶಸ್ಸು ಗಳಿಸಿ ಮಾದರಿಯಾದ ರೈತರ ಬಗ್ಗೆ ಬರೆದಿದ್ದಾರೆ. ಆ ಬರೆಹಗಳ ಸಂಕಲನವೇ - ಕಾಡು ಮಾವು.

’ಕಾರಂತರು ಪತ್ರಿಕೋದ್ಯಮದ ಒಳ ಹೊರಗು ಬಲ್ಲವರು. ಅದಕ್ಕೆ ಇಲ್ಲಿರುವ ಲೇಖನಗಳೇ ಸಾಕ್ಷಿ ಎನ್ನುತ್ತಾರೆ’ ಮುನ್ನುಡಿಯಲ್ಲಿ ಶಿವರಾಂ ಪೈಲೂರು. ಪುತ್ತೂರಿನ ಕೊಡೆಂಕಿರಿ ಪ್ರಕಾಶನ ಈ ಕೃತಿ ಪ್ರಕಟಿಸಿದೆ.

(ಫೆ. 6, 2010 - ವಿಜಯಕರ್ನಾಟಕದ 'ಮೀಡಿಯಾ ಮಿರ್ಚಿ ಅಂಕಣದಲ್ಲಿ ಜಿ.ಎನ್.ಮೋಹನ್ ಅವರು ಪುಸ್ತಕದ ಕುರಿತು ಬರೆದ ಒಳ್ಳೆಯ ಮಾತು. ಮೋಹನ್ ಅವರಿಗೆ ಕೃತಜ್ಞತೆಗಳು)

Tuesday, January 26, 2010

ಇಷ್ಟವಾಗುವ 'ಕಾಡು ಮಾವು'

(ಜನವರಿ 21, 2010 ಗುರುವಾರದ ಪ್ರಜಾವಾಣಿಯ ಕೃಷಿ ಪುರವಣಿಯಲ್ಲಿ ಪ್ರಕಟವಾದ ’ಪುಸ್ತಕ ಪರಿಚಯ’ ಬರೆಹ)

ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಇಪ್ಪತ್ತೇಳು ಕೃಷಿ ಸಂಬಂಧಿ ಲೇಖನಗಳನ್ನು ನಾ. ಕಾರಂತ ಪೆರಾಜೆ 'ಕಾಡು ಮಾವು' ಹೆಸರಿನಲ್ಲಿ ಪ್ರಕಟಿಸಿದ್ದಾರೆ. 'ಬೇಸಾಯ ಲಾಭದಾಯಕವಲ್ಲ' ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಎಲೆ ಮರೆಯ ಕಾಯಿಗಳಂತೆ ಬೇಸಾಯ ಹಾಗೂ ಅದರ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾದ ರೈತರ ಯಶೋಗಾಥೆಗಳನ್ನು ಅವರು ಗುರುತಿಸಿ ದಾಖಲಿಸಿದ್ದಾರೆ.

ಲೇಖಕರಿಗೆ ಕೃಷಿ ಹಾಗೂ ಅದರ ಪೂರಕ ಚಟುವಟಿಕೆಗಳಲ್ಲಿ ಅಪಾರ ಆಸಕ್ತಿ ಇದೆ. ಕೃಷಿ, ತೋಟಗಾರಿಕೆ, ಜೇನುಸಾಕಣೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿ ಯಶಸ್ವಿಯಾದವರನ್ನು ಗುರುತಿಸಿ ಅವರ ಸಾಹಸ, ಸಾಧನೆಗಳನ್ನು ಇತರರಿಗೆ ಪರಿಚಯಿಸಬೇಕು ಎಂಬ ಆಸಕ್ತಿಯೂ ಇದೆ.


ಜೇನು ಸಾಕಣೆಯಲ್ಲಿ ಯಶಸ್ವಿಯಾದ ಧರ್ಮೇಂದ್ರ ಹೆಗಡೆ, ಹಲಸಿನ ಹಣ್ಣು-ಕಾಯಿಗಳಿಂದ ಹಪ್ಪಳ, ಚಿಪ್ಸ್ ಮತ್ತಿತರ ಉತ್ಪನ್ನಗಳನ್ನು ಮಾಡುವಲ್ಲಿ ಯಶಸ್ವಿಯಾದ ಶಿರಸಿಯ ಎರಡು ರೈತಕುಟುಂಬಗಳು, ನೂರಕ್ಕೂ ಮಿಕ್ಕಿ ಕಾಡುಮಾವಿನ ತಳಿಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಿದ ಮಾಪಲ್ತೋಟದ ಸುಬ್ರಾಯ ಭಟ್, ಸಾವಯವ ಪದ್ದತಿಯಲ್ಲಿ ರಾಜಮುಡಿ ಭತ್ತ ಬೆಳೆದ ಹೊಳೆನರಸಿಪುರ ತಾಲೂಕಿನ ಉಣ್ಣೇನಹಳ್ಳಿಯ ರೈತ ಹೊಯ್ಸಳ ಎಸ್. ಅಪ್ಪಾಜಿ, ಬೆಂಗಳೂರು ಸಮೀಪದ ನೆಲಮಂಗಲದ ಬಳಿ ಒಂದೂಕಾಲೆಕರೆಯಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಎನ್.ಆರ್.ಶೆಟ್ಟಿ ದಂಪತಿ.. ಹೀಗೆ ಹಲವಾರು ಯಶಸ್ವಿ ರೈತರ ಬಗ್ಗೆ ಬರೆದ ಲೇಖನಗಳು ನಮ್ಮ ರೈತ ಸಮುದಾಯಕ್ಕೆ ಮಾದರಿ ಆಗಬಲ್ಲವು.


ಈ ಲೇಖನಗಳೆಲ್ಲಾ ಸುಲಭವಾಗಿ ಓದಿಸಿಕೊಳ್ಳುತ್ತವೆ. ಸಾಮಾನ್ಯ ಕನ್ನಡ ಜ್ಞಾನ ಇರುವವರಿಗೂ ಅರ್ಥವಾಗುತ್ತದೆ. ಈ ಕಾರಣಕ್ಕೆ 'ಕಾಡು ಮಾವು' ಇಷ್ಟವಾಗುತ್ತದೆ.
- ಪಿ.ಕೆ.

Saturday, January 16, 2010

ಕಾಡುವ ನೆನಪು

ಕೀರ್ತಿಶೇಷ ಕೆರೆಮನೆ ಶಂಭು ಹೆಗಡೆ
ಕೀರ್ತಿಶೇಷ ವಿಟ್ಲ ಗೋಪಾಲಕೃಷ್ಣ ಜೋಯಿಸರು