Saturday, July 13, 2019

ಕಾಗೆಗಳ ಕೃತಜ್ಞತೆ, ಕಪೋತಗಳ ಪ್ರೀತಿ

 
                ಬೆಳಗ್ಗಿನ ಹೊತ್ತು. ಅಡುಗೆ ಮನೆ ಪಕ್ಕ ಐದಾರು ಕಾಗೆಗಳ ಕಾಯುತ್ತಿದ್ದುವು. ಮನೆಯೊಡತಿ ರೇಖಾ ರಾಜೇಂದ್ರ ದೋಸೆಯನ್ನು ಚೂರು ಮಾಡಿ ಕೈ ಮುಂದೆ ಮಾಡಿದ್ದರು. ಕೈಯಲ್ಲಿದ್ದ ದೋಸೆಯ ಚೂರುಗಳು ಕ್ಷಣಾರ್ಧದಲ್ಲಿ ಮಾಯ! ಮತ್ತೆ ಸಂಜೆಯ ಸರದಿ.         ಒಮ್ಮೆ ಇವರ ಅಡುಗೆ ಮನೆಯ ಹತ್ರ ಬಾಗಿಲಿಗೆ ಹಾಕಿದ ಬಲೆಗೆ ಕಾಗೆಯೊಂದು ಸಿಕ್ಕಿಹಾಕಿಕೊಂಡಿತ್ತು. ಬಲೆಯಿಂದ ಬಿಡಿಸಿ ಮುಕ್ತಗೊಳಿಸಿದ್ದರು. ಬಳಿಕ ಕಾಗೆಯ ಸಂಸಾರಕ್ಕೆ ರೇಖಾ ಅವರ ಹಿಂಡೂಮನೆ ನೆಲೆ.  ಬೆಳಗ್ಗಿನ ತಿಂಡಿಯಲ್ಲಿ, ಊಟದಲ್ಲಿ, ಸಂಜೆಯ ಚಹದಲ್ಲಿ ಒಂದು ಪಾಲು. ಅವುಗಳ ಸಂಸಾರ ವೃದ್ಧಿಯಾಗಿ ಕುಟುಂಬವಾಗಿದೆ.
                ನಮಗೆ ಎಲ್ಲಾದರೂ ಮರೆತುಹೋದರೆ ಸಾಕು, ಎಲ್ಲವೂ ಸೇರಿ ಗಲಾಟೆ ಎಬ್ಬಿಸುತ್ತವೆ. ಆಹಾರ ಸಿಕ್ಕಿದ ಮೇಲೆ ತಮ್ಮ ಪಾಡಿಗೆ ಹೋಗುತ್ತವೆ. ದಿನಕ್ಕೆ ಮೂರು ಹೊತ್ತು ಊಟ. ಹೊಟ್ಟೆಗೆ ಸ್ವಲ್ಪ ಕಡಿಮೆಯಾದರೆ ಅಲ್ಲೇ ಮುಷ್ಕರ ಹೂಡಿಬಿಡುತ್ತವೆ. ನಾಲ್ಕು ವರುಷವಾಯಿತು. ವರುಷದಲ್ಲಿ ಮೂರು ತಿಂಗಳು ವಲಸೆ ಹೋಗುತ್ತವೆ.” ಎಂದರು ರೇಖಾ.
                ಹಿಂಡೂಮನೆಯ ಕಾಗೆಗಳ ಪ್ರೀತಿ, ಮನೆಯವರ ಜತೆಗಿನ ಸಂವಹನ, ಒಡನಾಟ ಗ್ರಹಿಸಿಕೊಂಡಾಗ ನಾಡಿದ ದೊರೆಯೊಬ್ಬರು ನೆನಪಾದರು. ಅವರ ಕಾರಿನ ಮೇಲೆ ಕಾಗೆಯೊಂದು ಕುಳಿತು Àನ್ನಾಡಿನಲ್ಲಿ ರಂಪಾಟ ಎದ್ದಿತ್ತು. ವಾಹಿನಿಗಳಲ್ಲಿ ಲೀಡಿಂಗ್ ಸುದ್ದಿಯಾಗಿತ್ತು.
                ಬಲೆಯಲ್ಲಿ ಸಿಕ್ಕಿದ ಕಾಗೆಯನ್ನು ಬಿಡಿಸಿದ ಪರಿಣಾಮ ನೋಡಿ. ಅವುಗಳು ಮನುಷ್ಯನಿಗೆ ಎಷ್ಟು ಹತ್ತಿರವಾಗಿಬಿಟ್ಟಿವೆ. ಕೃತಜ್ಞತೆಯ ಒಂದು ಉದಾಹರಣೆ. ಕೃತಜ್ಞತೆಯ ಭಾವವನ್ನು ನಮ್ಮೊಳಗೆ ಒಮ್ಮೆ ಸಮೀಕರಿಸೋಣ. ನಾಚಿಗೆ ಆಗುತ್ತದೆ! ಕೃತಜ್ಞತೆ ಪದವೇ ಕಾಣೆಯಾಗಿದೆ.
                ಮಿತ್ರ ಜಯಶಂಕರ ಶರ್ಮರೊಂದಿಗೆ ಕಾಗೆಯ ಗಾಥೆಯನ್ನು ಹಂಚಿಕೊಂಡಿದ್ದೆ. ಇದಕ್ಕೆ ಪೂರಕವೋ ಎನ್ನುವಂತೆ ಮತ್ತೊಂದು ಘಟನೆ ನೆನಪಿಸಿದರು. ಧರ್ಮಸ್ಥಳದಲ್ಲೊಬ್ಬರು ಅಜ್ಜಿ. ನೆಲಗಡಲೆ, ಕಿತ್ತಳೆ, ಮಾವು.. ಹೀಗೆ ಚಿಕ್ಕ ಮಾರಾಟ. ಇದನ್ನೇ ನಂಬಿದ ಬದುಕು.
                ಇವರು ಪ್ರತಿದಿನ ಏನಿಲ್ಲವೆಂದರೂ ಇಪ್ಪತ್ತಕ್ಕೂ ಮಿಕ್ಕಿ ಪಾರಿವಾಳಗಳಿಗೆ (ಕಪೋತಗಳಿಗೆ) ನೆಲಗಡಲೆಯ ಸಮಾರಾಧನೆ ಮಾಡುತ್ತಾರೆ. ಅದೇ ಹೊತ್ತಿಗೆ ಅವು ಎಲ್ಲಿಗೆ ಹೋದರೂ ನೆಲಗಡಲೆಯನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಅವು ತಿನ್ನುವುದನ್ನು ನೋಡಿದರೆ ಅಜ್ಜಿಗೆ ಖುಷಿ.
                ಪಾರಿವಾಳಕ್ಕೆ ಹಾಕುವ ಒಂದೊಂದು ಕಡಲೆಯ ಕಾಳಿನಲ್ಲಿ ಅಜ್ಜಿಯ ಬದುಕಿದೆ. ತನ್ನ ಗಳಿಕೆಯ ಒಂದಂಶವನ್ನು ಬುದ್ಧಿಪೂರ್ವಕವಾಗಿ ಆಹಾರದ ರೂಪದಲ್ಲಿ ಪಾರಿವಾಳಗಳಿಗೆ ಉಣಿಸುತ್ತಿದ್ದಾರೆ. ಅಜ್ಜಿ ಪಾರಿವಾಳವನ್ನು ನಂಬಿದ್ದಾರೆ. ಪಾರಿವಾಳಗಳು ಅಜ್ಜಿಯನ್ನು ನೆಚ್ಚಿಕೊಂಡಿದೆ. ಇವರಿಬ್ಬರ ಸಂಬಂಧಗಳು ಅಜ್ಞಾತ. ಪರಸ್ಪರ ಒಪ್ಪಿಕೊಳ್ಳುವ ಭಾವ ಬಂಧಗಳು.
                ಪಾರಿವಾಳ, ಕಾಗೆಗಳ ಘಟನೆಗಳಲ್ಲಿ ಬದುಕಿನ ಸಂದೇಶವಿದೆ. ನೋಡುವ ಕಣ್ಣುಗಳು ಶುಭ್ರವಾಗಿರಬೇಕು. ಹೃದಯದಿಂದ ಮನನಿಸಿದರೆ ಅರ್ಥದ ಮಥನವಾಗುತ್ತದೆ. ಗಂಟಲ ಮೇಲಿನ ನೋಟದ ಮಥನದಿಂದ ಅವುಗಳು ಕೇವಲ ಪಕ್ಷಿಗಳ ಹಾಗೆ ಕಾಣಬಹುದಷ್ಟೇ. ಯಾಕೆಂದರೆ ನಮ್ಮದು ಕೃತಜ್ಞತೆಯ ಸೊಲ್ಲಿಲ್ಲದ ಬದುಕಲ್ವಾ.
                ಮಾಲಿಂಗ ನಾಯ್ಕ್, ವಿಟ್ಲದ ಕುದ್ದುಪದವಿನ ಸನಿಹದ ಕೃಷಿಕರು. ಅವರಬೊಳ್ಳುಕೃಷಿ ಕೆಲಸಕ್ಕೆ ನೆರವಾಗುವ ಸಹಾಯಕ. ಮರದ ಕೆಳಗೆ ಬಿದ್ದ ಹಣ್ಣಡಿಕೆ, ತೆಂಗಿನಕಾಯಿಯನ್ನು ಹೆಕ್ಕುವುದು ಬದ್ಧತೆಯ ಕೆಲಸ. ಬಳಿಕ ದೋಸೆಯ ದಾಸೋಹ. ದೋಸೆ ತಪ್ಪಿತೋ ರಂಪಾಟವೂ ತಪ್ಪಿದ್ದಲ್ಲ.
ಈಗ ಬೊಳ್ಳು ಇಲ್ಲ. ಅದರೊಂದಿಗಿನ ಸ್ನೇಹವನ್ನು ನಾಯ್ಕರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. ಹಿಂದೊಮ್ಮೆ ಮಲೆಯಾಳಿ ವಾಹಿನಿಯೊಂದು ಮಾಲಿಂಗ ನಾಯ್ಕರ ಯಶೋಗಾಥೆಗೆ ಬೆಳಕು ಹಾಕಿದಾಗ ಬೊಳ್ಳುವಿಗೂ ಖುಷಿ. ಬೊಳ್ಳು ಕೂಡಾ ಯಶೋಗಾಥೆಯ ಒಂದಂಗವಾಗಿದ್ದ.
                ಪ್ರಾಣಿ, ಪಕ್ಷಿಗಳ ಸಂಬಂಧ ಹೊಸದೇನಲ್ಲ. ಬೆಕ್ಕು, ನಾಯಿ, ಹಸು, ಮೊಲ.. ಸಾಕಣೆಯು ಬದುಕಿನಂಗ. ಅನ್ನ ಕೊಟ್ಟ ಯಜಮಾನನಿಗೆ ಹೊಂದಿಕೊಂಡು ಬಾಳುವುದು ಗುಣ. ಮನೆಯ ಕಷ್ಟ, ಸುಖಗಳ ಜತೆ ಸಾಥ್ ಆಗಿರುತ್ತವೆ. ಮನೆಯ ಯಜಮಾನ ಮರಣಿಸಿದಾಗ ಕಣ್ಣೀರಿಡುವ ದನಗಳು, ಕಷ್ಟಕ್ಕೊಳಗಾದಾಗ ಚಡಪಡಿಸುವ ನಾಯಿಗಳ ವರ್ತನೆಗಳು ಆಶ್ಚರ್ಯ ಮೂಡಿಸುತ್ತವೆ.
                ವರ್ತಮಾನದಲ್ಲಿ ನಮಗಿಂತ ಪ್ರಾಣಿ, ಪಕ್ಷಿಗಳು ಮೇಲು. ಅವು ಅಳುತ್ತವೆ, ಖುಷಿ ಪಡುತ್ತವೆ. ಅನ್ನ ಹಾಕಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತವೆ. ನಾವು? ನಗಲು ಬರುವುದಿಲ್ಲ. ಅಳಲು ಗೊತ್ತೇ ಇಲ್ಲ. ಖುಷಿ ಎಂಬುದು ಮರೀಚಿಕೆ. ನೆಮ್ಮದಿಯನ್ನು ಅರಸಿ ದೂರದೂರಿಗೆ ಹೋದರೂ ಹಿಂತಿರುಗುವಾಗ ಸಮಸ್ಯೆಗಳ ಮೂಟೆ! ಕಷ್ಟ, ಸುಖ, ದುಃಖ, ಆನಂದ, ನೆಮ್ಮದಿ... ಇವೆಲ್ಲಾ ಪರಸ್ಪರ ಮಿಳಿತಗೊಂಡಾಗಲೇ ಬದುಕು.
ಊರು ಸೂರು / 18-11-2018



                  

‘ಸೆಗಣಿ ಎತ್ತುವುದು ನನಗೆ ನಾಚಿಕೆಯಲ್ಲ!


                ಕೃಷಿಯಲ್ಲಿ ನೆಮ್ಮದಿಯಿದೆಯೇ? ನೀವು ಸುಖವಾಗಿದ್ದೀರಾ?” ವಿದ್ಯಾರ್ಥಿಗಳ ಪ್ರಶ್ನೆ. “ಸುಖ ಅನ್ನೋದು ನಾವು ಕಂಡುಕೊಳ್ಳುವುದರಲ್ಲಿದೆ. ನಾವು ನೆಲದ ಮೇಲಿದ್ದರೆ ಸುಖ ಕಾಣ್ತದೆ.”  ಕೃಷಿಕ ನಾಗೇಂದ್ರ ಸಾಗರರ ಉತ್ತರ. ಒಂದು ಕ್ಷಣ ಎಲ್ಲರ ಮೌನ.
                ಶಿರಸಿ ತೋಟಗಾರಿಕಾ ಕಾಲೇಜಿನ ಅಂತಿಮ ವರುಷದ ವಿದ್ಯಾರ್ಥಿಗಳು ನಾಗೇಂದ್ರ ಸಾಗರರ ಮನೆಯಲ್ಲಿ ಪ್ರಾಕ್ಟಿಕಲ್ ಕಲಿಕೆಗಾಗಿ ಬಂದಿದ್ದರು. ಅಂದು ವಿದಾಯ ಸಮಾರಂಭ. ಏಳೆಂಟು ಮಂದಿ ಹಿರಿಯರು, ಪ್ರಾಧ್ಯಾಪಕರ ಉಪಸ್ಥಿತಿ. ಸಭೆಯಲ್ಲಿ ವಿದ್ಯಾರ್ಥಿಯ ಪ್ರಶ್ನೆಗೆ ಸಾಗರ್ ನೀಡಿದ ಉತ್ತರ ಚಿಂತನಗ್ರಾಹ್ಯ.
                ಕೃಷಿ ವಿಚಾರ ಬಂದಾಗ ಗೊಣಗಾಟಗಳು ರಾಚುತ್ತವೆ. ಸಮಸ್ಯೆಗಳು ವೈಭವಗೊಳ್ಳುತ್ತವೆ. ಇಲ್ಲಗಳನ್ನು ಮಾತನಾಡುವುದು ಪ್ರತಿಷ್ಠೆ! ನಾಗೇಂದ್ರರ ಉತ್ತರದಲ್ಲಿ ಗೊಣಗಾಟಗಳಿಗೆ ಉತ್ತರವಿದೆ. ನಮ್ಮ ಮುಖವೇ ಅಲ್ವಾ - ನಮ್ಮ ಮನೆ, ಕೃಷಿ, ಬದುಕು. ಸುಖ ಇಲ್ಲಾಂದ್ರೆ ಇಲ್ಲ. ಇದೆ ಅಂದರೆ ಇದೆ!
                ನಾಗೇಂದ್ರ ಸಾಗರ್  ಕೃಷಿಕ. ಹೈನುಗಾರಿಕೆ, ಜೇನು ಸಾಕಣೆಯಲ್ಲಿ ನಿಷ್ಣಾತ.  ವಿದ್ಯಾರ್ಥಿಗಳು ಅಕ್ಟೋಬರ್ ಕೊನೆಯ ವಾರ ಕೃಷಿಯಲ್ಲಿ ತೊಡಗಿಸಿಕೊಂಡರು. ಮಣ್ಣು ಮೆಟ್ಟಿದರು, ಮುಟ್ಟಿದರು, ಮೆತ್ತಿಸಿಕೊಂಡರು. ಹಟ್ಟಿಯಲ್ಲಿ ದನಗಳ ಮೈಸವರಿದರು, ಹಾಲು ಕರೆದರು, ಸೆಗಣಿ ಎತ್ತಿದರು. ಸ್ಲರಿಯನ್ನು ಕಂಪೋಸ್ಟ್ ಹೊಂಡಕ್ಕೆ ಹಾಕಿದರು. ಮತ್ತೊಂದು ಗುಂಪು ಜೇನಿನ ಕೃಷಿಯ ಸೂಕ್ಷ್ಮತೆಗೆ ಕಣ್ಣಾದರು, ಕಿವಿಯಾದರು. ಹುಳುಗಳಿಂದ ಚುಚ್ಚಿಸಿಕೊಂಡರು! ಗಿಡಗಳನ್ನು ನೆಟ್ಟರು.                 
                ವಿದ್ಯಾರ್ಥಿಗಳೆಲ್ಲಾ ಪದವಿ ಮುಗಿಸಿ ತಮ್ಮ ಕನಸಿನ ಲೋಕದತ್ತ ಪಯಣಿಸುತ್ತಾರೆ. ಎಲ್ಲರೂ ಕೃಷಿ ಹಿನ್ನೆಲೆಯವರಲ್ಲ. ತಾವು ಆಯ್ದುಕೊಂಡ ಕಲಿಕೆಯ ಅಡಿಗಟ್ಟು ಕೃಷಿ. ಮುಂದೆ ಇವರೆಲ್ಲಾ ಸರಕಾರಿ ಅಧಿಕಾರಿಗಳಾಗಬಹುದು. ಸ್ವಂತ ಉದ್ದಿಮೆ ಮಾಡಬಹುದು, ಕೃಷಿಯಲ್ಲಿ ತೊಡಗಿಸಿಕೊಳ್ಳಬಹುದು. ಯಾವ ಕ್ಷೇತ್ರವನ್ನು ಆಯ್ದುಕೊಂಡರೂ ಕೃಷಿಯ ಸೂಕ್ಷ್ಮತೆಗಳ ಅರಿವಿರಲೇಬೇಕು ತಾನೆ. ಇಲ್ಲದಿದ್ದರೆ ಕ್ಷೇತ್ರದಲ್ಲಿ ಸೋಲುವ ಸಾಧ್ಯತೆಗಳು ಹೆಚ್ಚು.
                ಗೌರವ ಮತ್ತು ಪ್ರೀತಿಗಳು ಸರಕಾರಿ ಇಲಾಖೆಯಲ್ಲಿ ಸಿಗಲಾರವು. ಕೈತುಂಬಾ ಹಣ ಸಿಗಬಹುದು. ಕೃಷಿ, ತೋಟಗಾರಿಕಾ ಕ್ಷೇತ್ರಗಳಲ್ಲಿ ಆಗುತ್ತಿರುವ ಅಪ್ಡೇಟ್ಗಳಿಂದ ಜ್ಞಾನ ವೃದ್ಧಿಯಾಗಬೇಕು.” ಎಂದು ಸಲಹೆ ನೀಡುವ ಕೃಷಿಕ ದೇವೇಂದ್ರ ಬೆಳಿಯೂರು, ಅನ್ನದ ಸಂಸ್ಕೃತಿಯತ್ತ ಬೆರಳು ತೋರಿದರು, “ ದೇಶದಲ್ಲಿ ಗಂಡ, ಹೆಂಡತಿ, ಮಗ, ಮಗಳು, ಕುಟುಂಬ ಜತೆಯಾಗಿ ಹೊಲದಲ್ಲಿ ದುಡಿಯುವುದರಿಂದ ನಾವೆಲ್ಲಾ ಖುಷಿಯಾಗಿದ್ದೇವೆ.”
                ತಂಡದಲ್ಲಿ ನಗರದಲ್ಲಿ ಹುಟ್ಟಿ ಬೆಳೆದ ಓರ್ವ ವಿದ್ಯಾರ್ಥಿನಿಗೆ ಸೆಗಣಿ ಮುಟ್ಟುವುದು ಅಂದರೆ ಯಾಕೋ ಅಲರ್ಜಿ! “ಅದೊಂದು ಕೆಲಸ ಬಿಟ್ಟು ಬೇರೇನಾದ್ರೂ ಹೇಳಿ,” ಎಂದು ಮನೆಯೊಡಗಿ ವಾಣಿಯವರಿಗೆ ದುಂಬಾಲು ಬಿದ್ರಂತೆ! ಆದರೆ ನಾಗೇಂದ್ರರ ಮನೆಯ ಪ್ರಾಕ್ಟಿಕಲ್ ಕಲಿಕೆಯು ಬೆಳಗಾವಿಯ ಓರ್ವ ವಿದ್ಯಾರ್ಥಿಯೊಳಗೆ ಚಿಂತನೆಯ ಗೂಡು ಕಟ್ಟಿತ್ತು. ತೆರಳುವಾಗಸರಕಾರಿ ಕೆಲಸ ಸಿಕ್ಕರೆ ಓಕೆ. ಇಲ್ಲದಿದ್ದರೆ ನಾನೂ ಡೈರಿ ಮಾಡ್ತೇನೆ  ಎಂದು ವಿಶ್ವಾಸದಿಂದ ಹೇಳಿದರಂತೆ.
 ಸಿಲೆಬಸ್ ಕಲಿಕೆಗಿಂತ ಹೊಲದಲ್ಲಿ ಕಲಿಯುವುದು ಬೇಕಾದಷ್ಟಿದೆ ಓರ್ವ ವಿದ್ಯಾರ್ಥಿಯ ಪ್ರತಿಕ್ರಿಯೆ. ಸಾಗರದ ಮೇಘನಾ ಏನು ಹೇಳಿರಬಹುದು, “ಸೆಗಣಿ ಎತ್ತುವುದು ನನಗೆ ನಾಚಿಕೆಯಲ್ಲ.” ನಾಗೇಂದ್ರ ಸಾಗರ್ ಮತ್ತು ಅವರ ಪತ್ನಿ ವಾಣಿಕೃಷಿಯ ಪಾಠ ಮಾಡಿದ್ದರು.
                ವಿದ್ಯಾರ್ಥಿಗಳ ಮಾತನ್ನು ಕೇಳುತ್ತಾ ಕುಳಿತಿದ್ದೆ. ಭವಿಷ್ಯದ ಕಂಗಳಿಗೆ ಕೃಷಿಯು ಬೆರಗನ್ನು ಮೂಡಿಸಿತ್ತು. ದೂರದಲ್ಲಿ ನಿಂತು ಕೃಷಿಯನ್ನು ನೋಡಿದ, ಪಾಠದಲ್ಲಿ ಓದಿದ ವಿಚಾರಕ್ಕಿಂತ ಭಿನ್ನವಾದ ಅನುಭವ ಇಲ್ಲಿದೆ ಎನ್ನುವುದನ್ನು ಪ್ರತ್ಯಕ್ಷ ನೋಡಿದ್ದರು. ಕಾಲೇಜು ಕಲಿಕೆಯಲ್ಲಿ ಆಗಬೇಕಾದುದು ಇಂತಹ ಚಿಕ್ಕ ಸಂಚಲನಗಳು. ಸಿಲೆಬಸ್ ಕಲಿಕೆಯೇ ಅಂತಿಮವಲ್ಲ ಎನ್ನುವುದು ಗೊತ್ತಾದರೆ ಸಾಕು. ಮುಂದಿನ ಜ್ಞಾನವನ್ನು ಅವರೇ ಹುಡುಕಿಕೊಳ್ಳುತ್ತಾರೆ.
                ಕೃಷಿ, ಪರಿಸರ ಕಲಿಕೆಯು ಪ್ರಾಥಮಿಕ ಹಂತದಿಂದಲೇ ಒಂದು ವಿಷಯವಾಗಿ ಕಲಿಸುವ ವ್ಯವಸ್ಥೆಗಳು ಪಠ್ಯದಲ್ಲಿ ಸೇರಬೇಕು. ಹೀಗಾದಾಗ ಮುಂದೆ ಪದವಿ ಹಂತಕ್ಕೆ ಬರುವಾಗ ಕೃಷಿಯ ವಿಚಾರಗಳು ಬೆರಗಾಗುವುದಿಲ್ಲ! ‘ಕೃಷಿಯಲ್ಲಿ ಖುಷಿ ಇದೆಯಾಪ್ರಶ್ನೆಗಳು ಮೂಡುವುದಿಲ್ಲ.
                ಭವಿಷ್ಯದಲ್ಲಿ ನೀವು ಯಾವ ವೃತ್ತಿಯನ್ನೇ ಸ್ವೀಕರಿಸಿ. ಕಲೆ, ಸಾಹಿತ್ಯಗಳು ವೃತ್ತಿಗೆ ಹೊಳಪನ್ನು ನೀಡುತ್ತವೆ. ವೃತ್ತಿಗೆ ಪ್ರವೃತ್ತಿಯ ಸ್ಪರ್ಶ ಕೊಡುವ ಮನಸ್ಸುಳ್ಳವರಾಗಿ,” ಎಂದವರು ತೀರ್ಥಹಳ್ಳಿ ತೋಟಗಾರಿಕಾ ಇಲಾಖೆಯ ಸಿದ್ಧಲಿಂಗೇಶ್.  

ಊರು ಸೂರು / 11-11-2018