Saturday, July 13, 2019

‘ಅನ್ನದ ಭಾಷೆ’ಯೊಳಗೆ ಸ್ಥಳೀಯತೆಯ ಮಿಳಿತ



ಕನ್ನಡ ರಾಜ್ಯೋತ್ಸವ ಸಮನಿಸುತ್ತಿದೆ! ಕನ್ನಾಡಿನಾದ್ಯಂತ ವಾರ್ಷಿಕ ಉತ್ಸವಕ್ಕೆ ಬೇಕಾದ ಸಿದ್ಧತೆಗಳು ಆರಂಭವಾಗಿವೆ. ರಾಜಧಾನಿಯ ಕೆಲವೆಡೆ ತಿಂಗಳ ಪರ್ಯಂತ ಕನ್ನಡಕ್ಕೆ ಉತ್ಸವದ ಯೋಗ! ಸಂಭ್ರಮಗಳು ಮುಖತಗ್ಗಿಸುವಷ್ಟು ಆಡಂಬರ. ಖುಷಿ ಪಡೋಣ, ವರ್ಷಕ್ಕೆ ಒಂದು ದಿನವಾದರೂ ಕನ್ನಡವು ನಗುತ್ತದಲ್ಲಾ!  

ಸೆಪ್ಟೆಂಬರದಲ್ಲಿ ಪುತ್ತೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಕನ್ನಡ ಹಬ್ಬ’.  ಮೈಸೂರಿನ ಡಾ.ಜಯಪ್ಪ ಹೊನ್ನಾಳಿಯವರಿಂದ ದೀಪಜ್ವಲನ. ಅವರ ಮಾತಿನ ಮಧ್ಯೆ ಮೂರು ಪದದ ಒಂದು ವಾಕ್ಯ ತುಂಬಾ ಕಾಡಿತು -  ಕನ್ನಡ ಅನ್ನದ ಭಾಷೆ.
ಬದುಕಿನಲ್ಲಿ ಭಾಷೆಯೊಂದುಅನ್ನವಾದರೆ ಎಡ-ಬಲಗಳು ನುಗ್ಗಿಬಿಡುತ್ತವೆ! ರಾಡಿ ಎಬ್ಬಿಸಿಬಿಡುತ್ತವೆ. ಆಗದು ಭಾರವಾಗುತ್ತದೆ! ಅನ್ನದ ಭಾಷೆಯಾದರೆ ಬದುಕು ಭಾರವಾಗುವುದಿಲ್ಲ. ‘ಭಾರದ ಬದುಕುಆಗುತ್ತದೆ. ಇದು ತಾಳಿಕೊಳ್ಳದ ಭಾರವಲ್ಲ. ಸಮತೋಲನದ ಭಾರ

ಬದುಕು ಭಾರವಾದರೆ ಖುಷಿಗಳು ಮೌನವಾಗುತ್ತವೆ. ನಗು ಮಾಸುತ್ತದೆ. ವಿಷಾದಗಳ ಗೊಂಚಲು ರೂಪುಗೊಳ್ಳುತ್ತವೆ. ಅನ್ನದ ಭಾಷೆಯೊಳಗೆ ವಿಷಾದವಿಲ್ಲ. ಅದು ನಗುವನ್ನು ಕಲಿಸುತ್ತದೆ. ನಾವು ನಗಲು ಕಲಿಯಬೇಕಷ್ಟೇ. ಸಾಹಿತ್ಯ ಸಮ್ಮೇಳನಗಳು ನಗಲು ಕಲಿಸುತ್ತವೆ. ಅರಳಲು ಅನುಕೂಲ ಮಾಡಿಕೊಡುತ್ತವೆ

ಭಾಷೆಯೊಂದರ  ಬೆಳವಣಿಗೆಯಲ್ಲಿಸ್ಥಳೀಯತೆಯ ಅಸ್ತಿತ್ವ ಹಿರಿದು. ಸ್ಥಳೀಯತೆಯನ್ನು ಮರೆತು ಭಾಷೆ ಕಟ್ಟಲು ಸಾಧ್ಯವಿಲ್ಲ. ಸ್ಥಳೀಯತೆ ಎಲ್ಲಿದೆ? - ನಮ್ಮೊಳಗಿದೆ. ಅದಕ್ಕೆ ಸ್ವಯಂ ಪ್ರಕಾಶವಿದೆ. ಅದನ್ನು ಆವರಿಸಿದ ಮಸುಕನ್ನು ಉಜ್ಜಿದರೆ ಸಾಕು, ಹೊಳೆಯುತ್ತದೆ. ಉಜ್ಜುವ ಕೆಲಸ ಮಾಡುವುದು ನಮ್ಮ ಜವಾಬ್ದಾರಿ

ಭಾಷೆಯೊಂದರ  ಬೆಳವಣಿಗೆಯಲ್ಲಿ ನೆಲ, ಜಲ ಸಂರಕ್ಷಣೆಯ ಬದ್ಧತೆಯು ಮಿಳಿತಗೊಂಡಿದೆ. ಊಹಿಸಿ, ವಾಸಿಸುವ ನೆಲವು ಬದುಕಿನಿಂದ ಕಳಚಿಕೊಂಡರೆ? ಜಲ ತೋಯಿಸಿ  ಸೆಳೆದೊಯ್ದರೆ? ಮತ್ತೇನು ಉಳಿದೀತು

ನಾಶವಾದ  ನೆಲದ ನೆಲೆಯ ಸೃಷ್ಟಿ ಹೇಗೆ? ಅದರೊಂದಿಗೆ ಭಾಷೆ, ಸಂಸ್ಕøತಿ, ಆಚಾರ, ವಿಚಾರಗಳೂ ಸೇರಿವೆಯಷ್ಟೇ. ಮತ್ತೆ ಪುನಃ ಅದು ಹಳಿಗೆ ಬರಲು ಎಷ್ಟೋ ವರುಷಗಳು ಬೇಕು. ಹೊತ್ತಿಗೆ ವರ್ತಮಾನವು ಪಲ್ಲಟಗೊಂಡಿರುತ್ತದೆ. ಆಗ ಭಾಷೆಯು ಉಸಿರಿಗಾಗಿ ಒದ್ದಾಡುತ್ತಿರುತ್ತದೆ

ಕನ್ನಡ ಹಬ್ಬದಲ್ಲಿ ನೆಲ, ಜಲ ಸಂರಕ್ಷಣೆಯ ಸಂಕಲ್ಪದ ಸಾರ ಮನಕ್ಕಿಳಿಯಬೇಕು. ಅದರೊಂದಿಗೆ ಭಾಷೆ, ಸಂಸ್ಕøತಿಗಳು ನಮ್ಮೊಳಗೆ ಗೂಡು ಕಟ್ಟುತ್ತವೆ. ಅದಕ್ಕೆ ಬೆಚ್ಚನೆಯ ಕಾವು ಕೊಟ್ಟಾಗ ರೆಕ್ಕೆ ಪುಕ್ಕ ಮೂಡುತ್ತವೆ. ಗೂಡಿಂದ ಇಣುಕುತ್ತದೆ. ಹಾರಲು ಯತ್ನಿಸುತ್ತವೆ. ಒಂದು ದಿನ ಹಾರುತ್ತವೆ. ‘ಹಾರುವ ಕ್ರಿಯೆಎಂದರೆ ಪ್ರಪಂಚ ತೋರಿಸುವ ಕೆಲಸ.

ಚಿಣ್ಣರೊಳಗೆ ಇಂತಹ ಗೂಡು ಕಟ್ಟುವ, ಕಟ್ಟಿಸುವ ಮತ್ತು ಗೂಡಿಂದ ಹಾರಿಸುವ ಹೊಣೆ ಹೊರಬೇಕಾದವರು ಯಾರು? ಹೆತ್ತವರು, ಅಧ್ಯಾಪಕರು, ಶಾಲೆಗಳು. ಎಳೆಯರೊಳಗೆ ಒಂದು ಮನಸ್ಸಿದೆ, ಅದಕ್ಕೆ ವಿಕಾಸದ ಗುಣವಿದೆ, ಹಾರುವ ಆಸಕ್ತಿಯಿದೆ ಎನ್ನುವುದನ್ನು ಬುದ್ಧಿಪೂರ್ವಕವಾಗಿ ಮರೆತಿದ್ದೇವೆ. ನಮ್ಮ ಆಸಕ್ತಿಗಳನ್ನು ಮಕ್ಕಳ ಮೇಲೆ ಹೇರಿ ಖುಷಿಪಡುವ ಮನಸ್ಥಿತಿ ದೂರವಾಗದಿದ್ದರೆ ಮಕ್ಕಳು ಶಿಸ್ತಿನ ಮೂಟೆಯೊಳಗೆ ಬಂಧಿಯಾಗುತ್ತಾರೆ. ಒಮ್ಮೆ ಬಂಧಿಯಾದರೆ ಅದರಿಂದ ಬಿಡುಗಡೆ ತ್ರಾಸ.
ಕನ್ನಡಕ್ಕೂ ಮನಸ್ಸಿದೆ. ಮಕ್ಕಳಲ್ಲೂ ಮನಸ್ಸಿದೆ. ಇವೆರಡರ ಅನುಸಂಧಾನವಾಗಬೇಕು. ಪ್ರಕ್ರಿಯೆಗೆ ಮೊದಲ ತಾಣ ಮನೆ

 ಕನ್ನಡದ ಸೊಗಸನ್ನು ಅನಾವರಣಗೊಳಿಸಲಿರುವ ತಾಣ! ಪುಸ್ತಕವು ಮಕ್ಕಳ ಆಟಿಕೆಯಾಗಲಿ! ಪುಸ್ತಕದೊಂದಿಗೆ ಆಟವಾಡಲಿ.
ಕಲೆ ಮತ್ತು ಸಂಸ್ಕøತಿಯು ಬದುಕಿನೊಂದಿಗೆ, ಭಾಷೆಯೊಂದಿಗೆ ಸದಾ ಎರಕ. ಯಾಕೋ ಏನೋ ಈಚೆಗಂತೂ ಇವುಗಳು ಕನ್ನಡದಿಂದ ದೂರ, ಬಹುದೂರ. ಭಾಷೆಯೊಂದಿಗೆ ಕಲೆ, ಸಂಸ್ಕøತಿಯು ಮಿಳಿತಗೊಂಡರೆ ಅದರ ಸೊಗಸು ಅನುಪಮ. ಅಪಾರ. ಅನನ್ಯ

ಕನ್ನಡಕ್ಕಾಗಿ ಎಷ್ಟು ಮನಸ್ಸುಗಳು ತ್ಯಾಗ ಮಾಡಿವೆ? ಎಷ್ಟೊಂದು ಸಾಹಿತ್ಯಗಳಿವೆ? ಇವೆಲ್ಲಾ ಮಕ್ಕಳಿಗೆ ಹುಳಿದ್ರಾಕ್ಷಿ! ಅದರೊಳಗಿನ ಸಿಹಿಯನ್ನು ತೋರಿಸುವ, ತಿನ್ನಿಸುವ ಅನಿವಾರ್ಯವಿದೆ. ಮೊದಲು ನಾವು ಸಿಹಿಯನ್ನು ಸವಿಯೋಣ. ಮಕ್ಕಳಿಗೂ ಸವಿಯಲು ಅವಕಾಶ ಮಾಡಿಕೊಡೋಣ. ಇವರೆಲ್ಲರ ಹೃದಯದಲ್ಲಿ, ಭಾವದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡೋಣ.

ನವಂಬರ ಒಂದು. ಕನ್ನಡ ರಾಜ್ಯೋತ್ಸವ. ಅಂದು ಸರಕಾರಿ ರಜೆ. ಆದರೆ ಕನ್ನಡಕ್ಕೆ ರಜೆಯಿಲ್ಲ. ನಮ್ಮ ಬಳಿಗೆ ಮಾತನಾಡಲು ವರ್ಷಕ್ಕೊಮ್ಮೆ ಬಂದೇ ಬರುತ್ತದೆ. ಹೀಗೆ ಬಂದಾಗ ಮಾತನಾಡಲು ವಿದ್ಯಾರ್ಥಿಗಳೇ ಇಲ್ಲ! ಕನ್ನಡವು ಢಾಂಢೂಂ ಅದ್ದೂರಿಯನ್ನು ಬಯಸುವುದಿಲ್ಲ. ತನ್ನ ಸೊಗಸನ್ನು ಕಾವ್ಯ, ಕಥೆ, ಕವನ, ಕಾದಂಬರಿಗಳ ಮೂಲಕ ಬಿಂಬಿಸಲು ಹವಣಿಸುತ್ತಿದ್ದರೂ ಕೇಳುವ, ನೋಡುವ ಮನಸ್ಸುಗಳ ಭಾವಗಳು ಚಿಲಕ ಹಾಕಿವೆ! (ಸಾಂದರ್ಭಿಕ ಚಿತ್ರ)

28-10-2018  

Monday, May 20, 2019

'ಹೇಗಿದೆ ವ್ಯಾಪಾರ.... ಜೀವನಕ್ಕೆ ಸಾಕಾಗ್ತದಾ'


    2017 ದಶಂಬರದಲ್ಲಿ ಕಡಬದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಅನಿರೀಕ್ಷಿತವಾಗಿ ಸಮ್ಮೇಳನದ ಅಧ್ಯಕ್ಷೀಯ ಗೌರವ ಪ್ರಾಪ್ತವಾಗಿತ್ತು. ಖುಷಿ ನೀಡಿದ ಕ್ಷಣಗಳು. ಅಧ್ಯಕ್ಷತೆ ಅಂದರೆ ಸಮ್ಮೇಳನಕ್ಕೆ ಸೀಮಿತ. ಆ ಸ್ವಸ್ವರೂಪ ಜ್ಞಾನವಿಟ್ಟುಕೊಂಡೇ ಭೋಜನ ಸಮಯದಲ್ಲಿ ಮಳಿಗೆಗಳನ್ನು ಸುತ್ತುತ್ತಿದ್ದೆ.

ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆಯಲ್ಲಿ ಶ್ಯಾಮ್ ಬ್ಯುಸಿಯಾಗಿದ್ದರು. ಒಂದೈದು ನಿಮಿಷ ಮಳಿಗೆಯಲ್ಲಿ ಕುಳಿತಿದ್ದೆ. ಪರಿಚಿತ ವ್ಯಕ್ತಿಯೊಬ್ಬರು (ಹೆಸರು ನೆನಪಿಲ್ಲ) ಮಳಿಗೆಗೆ ಬಂದು, ನಿಮ್ಮ ಅಣ್ಣನನ್ನು ವೇದಿಕೆಯನ್ನು ನೋಡಿದೆ. ಅವರಿಗೆ ಅಭಿನಂದನೆ ಹೇಳಿ ಎಂದು ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡರು. ಮತ್ತೊಮ್ಮೆ ಓರೆಗಣ್ಣಿನಿಂದ ನೋಡಿ ಹೊರಟರು.

ಅವರ ಓರೆಗಣ್ಣಿನ ತೀಕ್ಷ್ಣತೆ ಅರ್ಥವಾಗಲಿಲ್ಲ. 'ನಿಮ್ಮಣ್ಣನಿಗೆ ಅಭಿನಂದನೆ ಹೇಳಿ' ಎಂದರು. ಯಾರು ಅಣ್ಣ? ಯಾರಿಗೆ ಅಣ್ಣ? ಒಟ್ಟೂ ಗೊಂದಲ. ಸಮ್ಮೇಳನದ ಸಂತೋಷವು ಮುರುಟಬಾರದೆಂದು ಘಟನೆಯನ್ನು ಮರೆತಿದ್ದೆ. ಯಾರಲ್ಲೂ ಹಂಚಿಕೊಂಡಿಲ್ಲ. ಮೂನರ್ಾಲ್ಕು ತಿಂಗಳು ಕಳೆದಿರಬಹುದಷ್ಟೇ. ಅದೇ ವ್ಯಕ್ತಿ ಪ್ರತ್ಯಕ್ಷ. ಹೇಗಿದೆ ವ್ಯಾಪಾರ, ಜೀವನಕ್ಕೆ ಸಾಕಾಗ್ತದಾ. ಛೇ.. ಇಂತಹ ಸ್ಥಿತಿ ಬರಬಾರದಾಗಿತ್ತು. ಎನ್ನುತ್ತಾ ಅನುಕಂಪದಿಂದ ಹತ್ತಾರು ಬಾರಿ ಲೊಚಗುಟ್ಟುತ್ತಾ ನಖಶಿಖಾಂತ ನೋಡಿದರು. ಮಾತು ಸ್ವಲ್ಪ ಸಡಿಲವೇ ಆಗಿತ್ತು.

ವಿಷಯ ಸ್ಪಷ್ಟವಾಯಿತು. ಅಂದು ಪುಸ್ತಕದ ಮಳಿಗೆಯಲ್ಲಿ ಕುಳಿತಿದ್ದೇನಲ್ಲಾ.. ನಾನೀಗ ಪುಸ್ತಕ ವ್ಯಾಪಾರ ಮಾಡುತ್ತಿದ್ದೇನೆಂದು ತಪ್ಪಾಗಿ ಗ್ರಹಿಸಿದ್ದರು. ಆ ಆತ್ಮಕ್ಕೆ ವೇದಿಕೆಯಲ್ಲಿದ್ದುದು ನಾನೇ ಎನ್ನುವುದೂ ಗೊತ್ತಾಗಲಿಲ್ಲ!  ನನ್ನ ಅಣ್ಣ ಎಂದು ಊಹಿಸಿದ್ದರು. ಇರಲಿ, ಪುಸ್ತಕ ವ್ಯಾಪಾರದಲ್ಲಿ ಅಷ್ಟೊಂದು ಕನಿಷ್ಠತೆಯನ್ನು ಯಾಕೆ ಕಂಡುಕೊಂಡರೋ ಗೊತ್ತಿಲ್ಲ.

ವಾರದ ಹಿಂದೆ ಪುನಃ ಸಿಕ್ಕರು. ಪ್ರಮಾದ ಅವರಿಗೆ ಅರ್ಥವಾಗಿ ಮುಜುಗರಪಟ್ಟರು. ಸರಿ... ಪುಸ್ತಕ ವ್ಯಾಪಾರವೂ ಒಂದು ವೃತ್ತಿಯಲ್ವಾ. ಅದನ್ಯಾಕೆ ಕನಿಷ್ಠವಾಗಿ ಕಾಣುತ್ತೀರಿ ಎಂದಾಗ ನಿರುತ್ತರಿ. ನೋಡಿ.. ಪ್ರಕಾಶ್ ಕುಮಾರ್ ಕೊಡೆಂಕಿರಿ ಅವರಿಗೆ ಪುಸ್ತಕವೇ ಸರ್ವಸ್ವ. ಅದುವೇ ಬದುಕು. ಜತೆಗೆ ವೃತ್ತಿ ಧರ್ಮದ ಪಾಲನೆ. ಸಮಾಜದಲ್ಲಿ ಅವರಿಗೆ ಗೌರವದ ಸ್ಥಾನ ಇಲ್ವಾ.. ಎಂದು ಮಾತಿಗೆಳೆದಾಗ ಸಬೂಬು ಹೇಳಿ ಜಾಗ ಖಾಲಿ ಮಾಡಿದರು.

ಸಮಾಜದಲ್ಲಿ ತುಂಬಾ ಮಂದಿಯನ್ನು ನೋಡುತ್ತೇವೆ. ಒಬ್ಬನ ವೃತ್ತಿಯನ್ನು ಕೀಳಾಗಿ ಕಂಡು ತಾನು ಸ್ಥಾಪಿತನಾಗುವ ಪರಿ. ಇಂತಹ ವ್ಯಕ್ತಿಗಳನ್ನು ಮನಸ್ಸಿಗೆ ತಂದುಕೊಂಡಾಗ ಪುತ್ತೂರು ಕೊಕೊ ಗುರು ಉದ್ಯಮದ ಶಿವಶಂಕರ ಭಟ್ ಈಚೆಗೆ ಹೇಳಿದ ವಿಚಾರ ನೆನಪಿಗೆ ಬಂತು - ನನ್ನ ಮನೆಯ ಮೇಣ ರಹಿತ ಹಲಸಿನ ಹಣ್ಣನ್ನು ಅಂಗಡಿಯಲ್ಲಿ ತಂದಿಟ್ಟಿದ್ದೆ. ಯಾರಾದರೂ ಆಸಕ್ತರಿಗೆ ಪ್ರಯೋಜನವಾಗಲಿ. ಕನಿಷ್ಠ ದರವನ್ನೂ ನಿಗದಿಪಡಿಸಿದ್ದೆ. ಹಲಸಿನ ಹಣ್ಣನ್ನೂ ಮಾರುವುದೇ... ಎಂದು ಕೆಲವರು ಗೇಲಿ ಮಾಡಿದರು. ನಮ್ಮ ಉತ್ಪನ್ನಗಳನ್ನು ನಾವು ಮಾರುವುದು ಅವಮಾನವಾ. ಅದು ಗೌರವ ಅಲ್ವಾ.. 

ಯಾವಾಗಲೂ ಪರರನ್ನೇ ಚಿಂತಿಸುವ, ಮಾತನಾಡುವ, ಗೊಣಗಾಡುವ ಮಂದಿಗೆ ಇವೆಲ್ಲಿ ಅರ್ಥವಾಗಬೇಕು? ಮಾನ, ಅಪಮಾನಗಳ ಶಬ್ದಾರ್ಥಗಳನ್ನು ತಿಳಿಯದೆ ಒದ್ದಾಡುತ್ತಿದ್ದಾರೆ. ನಿಮ್ಮ.. ಕರಾವಳಿಯವರಿಗೆ ಬಡತನದ ಅನುಭವ ಇಲ್ಲಾರಿ. ಕೈಯಲ್ಲಿ ಹಣ ಬೇಕಾದಷ್ಟು ಓಡಾಡುತ್ತೆ. ನಮ್ಮ ಕಡೆಗೆ ಬನ್ನಿ. ಬದುಕು ಅರ್ಥವಾಗುತ್ತೆ - ಹಿಂದೊಮ್ಮೆ ಉತ್ತರ ಕರ್ನಾಟಕಕ್ಕೆ ಪ್ರವಾಸ ಹೋದಾಗ ಕೃಷಿಕರೊಬ್ಬರು ಆಡಿದ ಮಾತು ಸತ್ಯವೆಂದು ತೋರುತ್ತದೆ.

ಓರ್ವನ ವೃತ್ತಿಯು ಅವನಿಗೆ ದೊಡ್ಡದು. ಅವನಿಗೆ ಗೌರವ. ಇನ್ನೊಬ್ಬರಿಗೆ ಢಾಳಾಗಿ ಕಾಣಬಹುದು. ವೃತ್ತಿಯಲ್ಲಿ ಯಾವುದೂ ಶ್ರೇಷ್ಟವಲ್ಲ, ಕನಿಷ್ಠವಲ್ಲ. ವೃತ್ತಿಯನ್ನು ನೋಡಿ ವ್ಯಕ್ತಿತ್ವವನ್ನು ಅಳತೆ ಮಾಡುವಾತನಲ್ಲಿ ಬೌದ್ಧಿಕ ದಾರಿದ್ರ್ಯ ಇದೆ ಎನ್ನುವುದಕ್ಕೆ ಕನ್ನಡಿ ಬೇಕಾಗಿಲ್ಲ. 
 

ನಿದ್ರೆಗೆ ಜಾರಿದ ಶೈಕ್ಷಣಿಕ ಎಚ್ಚರ



    ನಾನೀಗ ಟಿವಿ ನೋಡುತ್ತಿಲ್ಲ! ಆರೋಗ್ಯವಾಗಿದ್ದೇನೆ! ಸದ್ಯ ದಿನಪತ್ರಿಕೆಗಳನ್ನು ಓದುತ್ತೇನೆ. ಆ ಓದು ರದ್ದಾಗಲು ಹೆಚ್ಚು ದಿವಸ ಬೇಡ - ಈ ಮಾತುಗಳು 'ನನ್ನನ್ನು ಸ್ಥಾಪಿಸಲು' ಇರುವ ಟೂಲ್ಸ್ ಅಲ್ಲ ಎನ್ನುವ ಎಚ್ಚರವಿದೆ.
    ಯಾವುದೇ ಒಂದು ಮಾಧ್ಯಮವು ಬದುಕಿಗೆ ಹತ್ತಿರವಾದಾಗ, ಬದುಕಲು ಮತ್ತು ಬದುಕಿಗೆ ಬೇಕಾದ ಒಳಸುರಿಗಳನ್ನು ನೀಡಿದಾಗ ಅದು ಸಾಮಾಜಿಕ ಸ್ವಾಸ್ಥ್ಯಕ್ಕೆ ತನ್ನ ಕೊಡುಗೆಯನ್ನು ನೀಡಿದಂತಾಗುತ್ತದೆ. ಈಗ ಮಾಧ್ಯಮಗಳ ಸ್ವಾಸ್ಥ್ಯ ಕಾಪಾಡುವುದೇ ದೊಡ್ಡ ಸಮಸ್ಯೆಯಾಗಿದೆ!
    ಸಾರ್ವತ್ರಿಕವಾದ ಒಂದು ಭಾಷೆಯು ಸಮಾಜದಲ್ಲಿ ಸಂಚಲನವನ್ನುಂಟು ಮಾಡುತ್ತದೆ. ಅದು ಶಿಷ್ಟತೆಯ ವ್ಯಾಪ್ತಿಯಲ್ಲಿರಬೇಕೆನ್ನುವುದು ಸ್ವನಿಯಂತ್ರಣ. ಒಂದು ಕಾಲಘಟ್ಟದ ಜನಜೀವನದಲ್ಲಿ ಇಂತಹ ಸಾರ್ವಜನಿಕ ಶಿಷ್ಟತೆಯ ಭಾಷಾ ವಿನಿಮಯಗಳಿದ್ದುವು, ಭಾಷಾ ಪ್ರಯೋಗಗಳಿದ್ದುವು. ಖಾಸಗಿ ಮಾತುಕತೆಗಳಲ್ಲಿ ಶಿಷ್ಟತೆ ಭಂಗವಾದರೂ ಹತ್ತು ಜನ ಸೇರಿದಾಗ ಭಾಷಾ ಪ್ರಯೋಗಗಳು ಬಿಗಿಯಾಗುತ್ತವೆ. ಇದು ಆ ಕಾಲದ ಶೈಕ್ಷಣಿಕ ಎಚ್ಚರ.
    ಅದನ್ನೇ ಈ ಕಾಲಕ್ಕೆ ಸಮೀಕರಿಸೋಣ. 'ಶಿಷ್ಟ' ಎನ್ನುವ ಪದ ಪದಕೋಶಕ್ಕೆ ಮಾತ್ರ ಸೀಮಿತ. ಎಷ್ಟು ಕೆಟ್ಟದಾಗಿ ಭಾಷಾ ಪ್ರಯೋಗ ಮಾಡಿದಷ್ಟೂ ಆಗ ಸುಭಗ ಮತ್ತು ಬುದ್ಧಿವಂತ. ಅದನ್ನು ಸಂಭ್ರಮಿಸುವ ಆತನ ಅನುಯಾಯಿಗಳು. ಆ ಸಂಭ್ರಮವನ್ನು ಹಬ್ಬಿಸುವ ತುಂಡರಸುಗಳು!
    ವರನಟ ಕೀರ್ತಿಶೇಷ ರಾಜಕುಮಾರ್ ಅವರ ಸಿನಿಮಾವನ್ನೊಮ್ಮೆ ಮನಸ್ಸಿಗೆ ತೆಕ್ಕೊಳ್ಳಿ. ಅವರ ಸಿನಿಮಾಗಳಲ್ಲಿ 'ಮೂರ್ಖ' ಎನ್ನುವ ಪದಪ್ರಯೋಗ ಬಂದರೆ ಅದು ಗರಿಷ್ಠ ಬಯ್ಗಳು. ಬಯ್ಯುವುದಕ್ಕೂ ಶಿಷ್ಟ ಭಾಷೆಯ ಬಳಕೆಯನ್ನು ರಾಜಕುಮಾರ್ ಪಾಲಿಸಿದ್ದರು. ಅದು ಅವರ ಸಂಸ್ಕಾರ. ಈಗಿನ ಸಿನಿಮಾದ ಭಾಷೆಯ ಕುರಿತು ಪ್ರತ್ಯೇಕ ಉಲ್ಲೇಖಿಸಬೇಕಾಗಿಲ್ಲ. ಎಷ್ಟು ಕೆಟ್ಟದಾಗಿ, ಅಸಹ್ಯವಾಗಿ ಮತ್ತು ಹೊಸ ಹೊಸ ಶಬ್ದಗಳನ್ನು ಟಂಕಿಸುವುದು ಖಯಾಲಿಯಾಗಿದೆ.
    ಭಾಷೆ, ಸಂಸ್ಕಾರ ಎನ್ನುವುದರ ಅಡಿಗಟ್ಟು ಶಿಕ್ಷಣ. ಉರುಹೊಡೆದು ನೂರಕ್ಕೆ ನೂರು ಅಂಕ ಪಡೆಯುವುದು ಶಿಕ್ಷಣವಲ್ಲ. ಪ್ರಾಥಮಿಕ, ಪ್ರೌಢ ಹಂತದ ಶಿಕ್ಷಣಗಳಲ್ಲಿ ಬದುಕಿನ ಸಂಸ್ಕಾರಗಳ, ನೀತಿಯ ಪಾಠಗಳನ್ನು ಓದಿ, ಮನನಿಸಿ ಅದರ ತಳಹದಿಯಲ್ಲಿ ಬದುಕನ್ನು ಕಟ್ಟಿದ ಹಿರಿಯರು ಕಣ್ಮುಂದೆ ಇದ್ದಾರೆ. ಆದರೆ ಇಂದು ಸಂಸ್ಕಾರ, ನೀತಿಗಳ ಅರ್ಥಗಳ ಗಾಢತೆಯು ಶುಷ್ಕವಾಗಿದೆ. ಇದನ್ನು ಶುಷ್ಕ ಮಾಡಿದ ಪಾಪಕ್ಕೆ ಕೇವಲ ಸರಕಾರ ಮಾತ್ರವಲ್ಲ ನಾವೆಲ್ಲರೂ ಒಳಗಾಗಲೇ ಬೇಕು.
    ಮಾಧ್ಯಮಗಳನ್ನು ಜನ ನಂಬುತ್ತಾರೆ. ಅದರಲ್ಲಿ ಬರುವ ಸುಳ್ಳುಗಳನ್ನೂ ನಂಬುತ್ತಾರೆ. ಊಹೆಗಳನ್ನೂ ನಂಬುತ್ತಾರೆ. ಜನರು ನಂಬುತ್ತಾರೆಂದು ಏನೇನೋ ಪ್ರಸಾರ ಮಾಡುವುದು ಬೌದ್ಧಿಕ ದಾರಿದ್ರ್ಯ. ವಾಹಿನಿಗಳ ಸುದ್ದಿಗಳನ್ನೋ, ಜಾಹೀರಾತುಗಳನ್ನೋ ಗಮನಿಸಿ. ಸುಳ್ಳುಗಳ ಸರಮಾಲೆ! ಕೆಟ್ಟ ಕೆಟ್ಟ ಶಬ್ದಗಳ ಪ್ರಯೋಗ. ವೈಯಕ್ತಿಕ ವಿಚಾರಗಳತ್ತ ಆಸಕ್ತಿ.
    ಈಗ ಚುನಾವಣೆಯ ಕಾವು ದೇಶದೆಲ್ಲೆಡೆ ಹಬ್ಬುತ್ತಿದೆ. ತಂತಮ್ಮ ಪಕ್ಷಗಳ ಸಾಧನೆಯನ್ನು ಬಿಂಬಿಸುವುದರ ಹೊರತಾದ 'ಶಿಷ್ಟತೆ'ಯನ್ನು ಮರೆತ ಭಾಷಾಪ್ರಯೋಗವನ್ನು ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ನೋಡುತ್ತೇವೆ. ಎಲ್ಲೋ ಒಂದು ಸಭೆಯಲ್ಲೋ, ರ್ಯಾಲಿಯಲ್ಲೋ ಆಡಿದ ಮಾತು ಇಡೀ ದೇಶಕ್ಕೆ ಸಂಬಂಧಿಸಿದ್ದು ಎನ್ನುವ ರೀತಿಯಲ್ಲಿ ಬಿಂಬಿಸುವುದನ್ನು ನೋಡಿದರೆ ಮಾಧ್ಯಮ ಜಗತ್ತು ಎತ್ತ ಸಾಗುತ್ತಿದೆ? ಆರ್ಥವಾಗುತ್ತಿಲ್ಲ.
    ಪಕ್ಷ ಯಾವುದೇ ಇರಲಿ. ದೇಶದ ಪ್ರಧಾನಿಯನ್ನು ಕೊಲ್ಲುತ್ತೇನೆಂದು ಓರ್ವ ಘೋಷಣೆಯನ್ನು ಮಾಡಿದಾಗ ಅದನ್ನು ಪ್ರತಿಭಟಿಸುವ (ಪಕ್ಷಬೇಧ ಮರೆತು) ಬಾಯಿಗಳು ಮೌನವಾಗಿವೆ. ಸಂಭ್ರಮಿಸುವ ಮನಸ್ಸುಗಳು ನೂರಾರಿವೆ. ಪ್ರಧಾನಿಯಲ್ಲ, ದೇಶದ ಯಾವ ನಾಗರಿಕನ್ನೂ ಓರ್ವ 'ಕೊಲ್ಲುತ್ತೇನೆ' ಎನ್ನುವುದೇ ಅಪರಾಧ. ಇದಕ್ಕೆ ಯಾವ ಸಾಕ್ಷಿಗಳು ಬೇಕಾಗಿಲ್ಲ. ಆತನ ಮಾತೇ ಸಾಕ್ಷಿಯಾಗುತ್ತದೆ.
ಹಾಗಾದರೆ 'ಶಿಷ್ಟತೆ' ಎನ್ನುವುದು ಭಾರತಕ್ಕೆ ಮರೀಚಿಕೆಯೇ? ಶಿಷ್ಟತೆ ಎಂದಾಗ ಅದಕ್ಕೆ 'ಎಡ-ಬಲ'ಗಳನ್ನು ಥಳುಕು ಹಾಕಬೇಕಾಗಿಲ್ಲ. ಶಿಕ್ಷಣದಿಂದ 'ಶಿಷ್ಟ' ಭಾಷೆ, ಬದುಕು, ಸಂಸ್ಕಾರಗಳು ನಮ್ಮದಾಗಬಹುದೆನ್ನುವ ಭ್ರಮೆ ನನಗಿಲ್ಲ. ಹಾಗಾದರೆ ಇದನ್ನು ಮರುಸ್ಥಾಪಿಸಲು ಜಾಗ ಎಲ್ಲಿ? ಮಾಧ್ಯಮಗಳಿಂದ ಸಾಮಾಜಿಕ ಸ್ವಾಸ್ಥ್ಯ ಸಿಗಹುದೆನ್ನುವ ನಿರೀಕ್ಷೆಯಿಲ್ಲ. ಆ ಆಶೆ ಎಂದೋ ಸತ್ತು ಹೋಗಿವೆ! 'ಶೈಕ್ಷಣಿಕ ಎಚ್ಚರ'ವು ಪೂರ್ತಿಯಾಗಿ ನಿದ್ರೆಗೆ ಜಾರಿದೆ
-sullia news / may 19
       

Monday, May 6, 2019

'ನಾನ್ಯಾಕೆ ಅಂದು ಆತ್ಮಹತ್ಯೆ ಮಾಡಿಕೊಂಡಿಲ್ಲ'!

ಅಂದು ಎಸ್.ಎಸ್.ಎಲ್.ಸಿ. ಫಲಿತಾಂಶ. ಗೋಡೆಯಲ್ಲಿ ರಿಸಲ್ಟಿನ ಉದ್ದ ಪಟ್ಟಿ ಅಂಟಿಸಿದ್ದರು. ಯಾರು ಪಾಸ್, ಫೇಲ್ ಎಂದು ಮುಖ ನೋಡಿಯೇ ಹೇಳಬಹುದಾಗಿತ್ತು. 'ನಿನ್ನದು ಒಂದು ಸಬ್ಜೆಕ್ಟ್ ಹೋಗಿದೆ ಕಾಣ್ತದೆ' ಸಹಪಾಠಿ ಮೆಲುತ್ತರ ನೀಡಿ ಗುಂಪಿನಲ್ಲಿ ಮರೆಯಾಗಿದ್ದ.

    ಹೌದು.. ಆತ ಅಂದಂತೆ ಆಂಗ್ಲ ವಿಷಯದಲ್ಲಿ ಎರಡು ಅಂಕ ಕೈಕೊಟ್ಟಿತ್ತು. ಬಹುತೇಕ ಸಹಪಾಠಿಗಳು ಉತ್ತೀರ್ಣರಾಗಿದ್ದರು. ವರುಷದುದ್ದಕ್ಕೂ ಒಂದೇ ಬೆಂಚಿನಲ್ಲಿ ಕುಳಿತ ಮನಸ್ಸುಗಳು ಅನುತ್ತೀರ್ಣನಾದವನನ್ನು ಹಿಂದಿನ ಬೆಂಚಿಗೆ ತಳ್ಳಿದ ಅನುಭವ! ಯಾಕೆ ಹೀಗಾಯಿತು? ಈ 'ಅಸಹಾಯಕತೆ'ಯನ್ನು ನೋಡುವ, ಕೇಳುವ, ಗಮನಿಸುವ ಮನಸ್ಸುಗಳ ಭಾವಗಳಂದು ತೂಕಡಿಸುತ್ತಿತ್ತು!

    ಎಸ್.ಎಸ್.ಎಲ್.ಸಿ.ಯಲ್ಲಿ ಫೈಲ್ ಅಂದಾಗ ಮನೆಯಲ್ಲೇನೂ ಆತಂಕದ ವಾತಾವರಣವಿದ್ದಿರಲಿಲ್ಲ. ಇಷ್ಟು ಅಂಕ ಪಡೆಯಲೇಬೇಕೆಂಬ ಹಠವೂ ಇದ್ದಿರಲಿಲ್ಲ. ಅಂಕ ಬಿಡಿ, ಭವಿಷ್ಯದ ನೋಟವೂ ಹೆತ್ತವರಲ್ಲಿ ಇದ್ದಿರಲಿಲ್ಲ! ತಾವು ನಂಬಿದ, ಪ್ರೀತಿಸಿದ ವೃತ್ತಿಯ ಕೂಪದೊಳಗೆ ಬದುಕಿನ ನೋಗವು ಸಾಗುತ್ತಿತ್ತು!

    ಆಂಗ್ಲ ಭಾಷೆಯ ವಿಷಯದಲ್ಲಿ ನೂರಕ್ಕೆ ಮೂವತ್ತಮೂರು ಅಂಕ. ಫೈಲ್ ಅಂಕಪಟ್ಟಿಯನ್ನು ನೋಡುತ್ತಾ ನೋಡುತ್ತಾ ಇದ್ದರೂ ಈಗಿನಂತೆ 'ಆತ್ಮಹತ್ಯೆ'ಯ ಯೋಚನೆಯು ಬಂದಿರಲಿಲ್ಲ! 'ಪರೀಕ್ಷೆಗೆ ಕುಳಿತರಾಯಿತು' ಅಷ್ಟೇ. ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕದಿಂದ ಎಸ್.ಎಸ್.ಎಲ್.ಸಿ.ಉತ್ತೀರ್ಣನಾದರೂ ಆಪ್ತ ವಲಯದಲ್ಲಿ 'ಫೈಲ್' ಹಣೆಪಟ್ಟಿ ಅಂಟಿತ್ತು.

    ಮೊನ್ನೆಯಷ್ಟೇ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಯಿತು. ಪ್ರಥಮ, ದ್ವಿತೀಯ ರ್ಯಾಂಕ್ ಪಡೆದವರ ಸಂಭ್ರಮಗಳು ಪತ್ರಿಕೆಗಳಲ್ಲಿ ಜಾಗ ಪಡೆದುವು. ಫಲಿತಾಂಶದ ಹಿಂದೆ ಒಂದಷ್ಟು ರಾಜಕೀಯ ಘಮಲುಗಳೂ ಸೇರಿದುವು! ಕೆಸರೆರೆಚಾಟಗಳೂ ನಡೆದುವು. ಇಷ್ಟು ವರುಷ ಮೆತ್ತಿಕೊಳ್ಳದ ರಾಜಕೀಯದ ಅಂಟಿನ ಹಿಂದಿನ ಹಾದಿ ಪ್ರಜ್ಞಾವಂತರಿಗೆ ಅರ್ಥವಾಗುತ್ತದೆ.

ಸಂಭ್ರಮಗಳ ಜತೆಗೆ ಆತ್ಮಹತ್ಯೆಗಳ ಸುದ್ದಿಯೂ ರಾಚಿತು. ಫಲಿತಾಂಶ ಬರುವ ಮೊದಲೇ ಇಹಲೋಕಕ್ಕೆ ಮನ ಮಾಡಿದ ಎಳೆಯ ಮನಸ್ಸಿನ ಹಿಂದಿನ ಬದುಕಿನ ವಾತಾವರಣ ಅಧ್ಯಯನವಾಗಬೇಕು. ಒಂದು ಮನೆಯ ಶೈಕ್ಷಣಿಕ ವಾತಾವರಣ, ಹೆತ್ತವರ ನಿರೀಕ್ಷೆಗಳು, ವಿದ್ಯಾಥರ್ಿಯ ಕಲಿಕೆಯ ಪ್ರಮಾಣ, ಧಾರಣ ಶಕ್ತಿ.. ಇವೆಲ್ಲವೂ ವಿದ್ಯಾರ್ಥಿಯ ಮೇಲೆ ಗಾಢ ಪರಿಣಾಮ ಬೀಳುತ್ತದೆ. ಎಲ್ಲರೂ ನೂರಕ್ಕೆ ನೂರು ಅಂಕ ತೆಗೆಯಲು ಸಾಧ್ಯವಿಲ್ಲವಲ್ಲಾ.

ವರ್ತಮಾನಕ್ಕೆ ಅಗತ್ಯ ಎಂದು ಹೇಳಲ್ಪಡುವ 'ನೂರಕ್ಕೆ ನೂರು' ಅಂಕ ಪ್ರಕ್ರಿಯೆಯು ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಕಲಿಕೆಗೆ ಪ್ರವೇಶಿಕೆಯಾಗಬಹುದು. ಆದರದು ಆ ವಿದ್ಯಾರ್ಥಿಯ ನಿಜ ಬೌದ್ಧಿಮತ್ತೆಯಲ್ಲ. ಈಗ ಹೇಳಲ್ಪಡುವ ಶೈಕ್ಷಣಿಕ ನಿರೂಪಗಳಿಗೆ 'ಬುದ್ಧಿಮತ್ತೆ' ಬೇಕಾಗಿಲ್ಲ. ಏನಿದ್ದರೂ ತೊಂಭತ್ತು-ತೊಂಭತ್ತೈದರ ಮೇಲಿನ ಅಂಕ.

ನಿನ್ನೆ ಅಚಾನಕ್ಕಾಗಿ ಹುಡುಕುತ್ತಿದ್ದಾಗ ಸಿಕ್ಕ ನನ್ನ ಎಸ್.ಎಸ್.ಎಲ್.ಸಿ. ಫೈಲ್ ಅಂಕಪಟ್ಟಿಯನ್ನು ನೋಡುತ್ತಿದ್ದಾಗ ಈ ಎಲ್ಲಾ ವಿಚಾರಗಳು ರಾಚಿದುವು.  'ನಾನ್ಯಾಕೆ ಅಂದು ಆತ್ಮಹತ್ಯೆ ಮಾಡಿಕೊಂಡಿಲ್ಲ'? ಮನದೊಳಗೆ ಪ್ರಶ್ನೆ ರಿಂಗಣಿಸಿತು. ಅಂತಹ ಮನಸ್ಥಿತಿಗಳು, ಯೋಚನೆಗಳು ಬದುಕಿನಲ್ಲಿ ಇದ್ದಿರಲಿಲ್ಲ. ಹಾಗಾಗಿ ಬಚಾವಾದೆ!

ಎಲ್ಲಕ್ಕಿಂತಲೂ ಮುಖ್ಯವಾಗಿ ವೈಯಕ್ತಿಕ ಬದುಕಿನ ಸೂಕ್ಷ್ಮಾತಿಸೂಕ್ಷ್ಮಗಳನ್ನು ಪೋಸ್ಟ್ಮಾರ್ಟಂ ಮಾಡಿ, ಹತ್ತಾರು ಕಂತುಗಳಲ್ಲಿ ಬಿತ್ತರಿಸುವ, ಪ್ರಕಟಿಸುವ ಮಾಧ್ಯಮಗಳಂದು ಇದ್ದಿರಲಿಲ್ಲ.
 

Thursday, December 27, 2018

‘ಭಾಗ್ಯದ ಬಾಗಿಲು’ ಕೃತಿ - ಪೂಜ್ಯರಿಂದ ಗೌರವ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಶಿ ಡಾ.ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿ ಐವತ್ತು ಸಂವತ್ಸರಗಳು ಪೂರೈಸುವ ಸವಿನಿನಪಿಗಾಗಿ ‘ಸುವರ್ಣ ಸಂಚಯ’ ಮಾಲಿಕೆ ಪ್ರಕಟ. ಈ ಮಾಲಿಕೆಯಲ್ಲಿ ‘ಭಾಗ್ಯದ ಬಾಗಿಲು’ ಕೃತಿ ರಚನೆಗಾಗಿ  ಪೂಜ್ಯರಿಂದ  ಗೌರವ. 2018 ದಶಂಬರ 6ರಂದು ಪುಸ್ತಕ ಲೋಕಾರ್ಪಣೆಗೊಂಡಿತು.

ಮೊಂಟೆಪದವು ಲಕ್ಷ್ಮೀ ಪರಮೇಶ್ವರ ಕಾರಂತ ವಿಧಿವಶ


           ಬಂಟ್ವಾಳ ತಾಲೂಕಿನ ಮೊಂಟೆಪದವು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ 'ಲಕ್ಷ್ಮೀ ಟೀಚರ್' ಎಂದೇ ಪರಿಚಿತರಾಗಿದ್ದ ಲಕ್ಷ್ಮೀ ಪರಮೇಶ್ವರ ಕಾರಂತ (79) ಇವರು 2018 ದಶಂಬರ 25ರಂದು ವಿಧಿವಶರಾದರು. ಲಿಂಗನಾಥ, ವಾಸುದೇವ, ಶ್ರೀಕುಮಾರ್.. ಮೂವರು ಪುತ್ರರು, ಬಂಧುಗಳನ್ನು ಅಗಲಿದ್ದಾರೆ. ಈಚೆಗೆ ಕೆಲವು ವರುಷಗಳಿಂದ ಪುಣಚ ಸನಿಹದ ಅಜ್ಜಿನಡ್ಕದ 'ಓಂಕಾರಮೂಲೆ'ಯಲ್ಲಿ ವಾಸವಾಗಿದ್ದರು.
        ಮೊಂಟೆಪದವು ಶಾಲೆಯಲ್ಲಿ ಪತಿ ಪರಮೇಶ್ವರ ಕಾರಂತರೊಂದಿಗೆ ಗ್ರಾಮೀಣ ಶಾಲೆಯೊಂದನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ದಂಪತಿಗಳದ್ದು. ಜಾತಿ, ಮತ, ಬೇಧವಿಲ್ಲದೆ ಸಾಮಾನವಾಗಿ ಶಾಲೆಯನ್ನು, ವಿದ್ಯಾರ್ಥಿಗಳನ್ನು ಸಂಸ್ಕಾರ ಪಥದಲ್ಲಿ ಮುನ್ನಡೆಸಿದ್ದರು. ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರಾಗಿದ್ದರು. ಇವರಿಗೆ ಶಾಲೆಯೂ, ಮನೆಯೂ ಒಂದೇ ಆಗಿತ್ತು. ವ್ಯಾಪಕವಾದ ಸಾರ್ವಜನಿಕ ಸಂಪರ್ಕವಿತ್ತು. ರಜೆ, ಗಂಟೆ, ವೈಯಕ್ತಿಕವಾದ ಸುಖ-ದುಃಖಗಳನ್ನು ನೋಡದ ದುಡಿತ.
          ಲಕ್ಷ್ಮೀ ಕಾರಂತರಿಗೆ ಸಾಹಿತ್ಯ ಅಸಕ್ತಿ ಆಪಾರ. ಕವನ, ಹಾಡುಗಳನ್ನು ಬರೆಯುವುದು ಹವ್ಯಾಸ. ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಸಾಹಿತ್ಯದತ್ತ ಹುರಿದುಂಬಿಸುತ್ತಿದ್ದರು. ಶಾಲಾ ವಾರ್ಶಿಕೋತ್ಸವಗಳ ಸಂದರ್ಭಗಳಲ್ಲಿ ಪ್ರತಿ ವರುಷ ಹೊಸತನ್ನು ಅಳವಡಿಸಿಕೊಂಡು ಜನಾನುರಾಗಿಯಾಗಿದ್ದರು. 'ಶಾಲೆಯ ಅಧ್ಯಾಪಕ ಒಂದು ಊರಿನ ಕಣ್ಣುಗಳಿದ್ದಂತೆ' ಎನ್ನುವ ಹಿರಿ ಮಾತನ್ನು ಅನುಷ್ಠಾನಿಸಿದ ನೆಗಳ್ತೆ ಇವರದು.
            ಮನೆಗೆ ಬಂದ ಅತಿಥಿಗಳನ್ನು ಆದರಿಸುವುದರಲ್ಲಿ ವಿಶೇಷಾಸಕ್ತಿ. ಅತಿಥಿಯ ಹೊಟ್ಟೆ ತುಂಬಿದಾಗ ಖುಷಿ ಪಡುವ ಗೃಹಿಣಿ. 2012ರಲ್ಲಿ ಪರಮೇಶ್ವರ ಕಾರಂತರು ವಿಧಿವಶರಾಗಿದ್ದರು. ಆ ಬಳಿಕ ಲಕ್ಷ್ಮೀ ಕಾರಂತರ ದೈಹಿಕವಾಗಿ ಕುಸಿದಿದ್ದರು. ಕಳೆದ ಆರು ವರುಷಗಳಲ್ಲಿ ಸಕ್ರಿಯತೆ ಕೈಕೊಟ್ಟಿತ್ತು. 

ಇವರು ನನ್ನ ಚಿಕ್ಕಮ್ಮ1982ನೇ ಇಸವಿ. ಎಸ್.ಎಸ್.ಎಲ್.ಸಿ.ಫೈಲ್ ಆಗಿ ಅಸಹಾಯಕ ಸ್ಥಿತಿಯಲ್ಲಿದ್ದೆ. ಸುಳ್ಯದ ಚೇತನಾ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಒಂದೆರಡು ವರುಷ ದುಡಿತ. ಅರಂಬೂರಿನ ರಬ್ಬರ್ ಫ್ಯಾಕ್ಟರಿನಲ್ಲಿ ಅಲ್ಪ ಕಾಲ ರಾತ್ರಿ ಪಾಳಿ ಕೆಲಸ. ಮನಸ್ಥಿತಿಗಳಿಗೆ ಎರಡೂ ಉದ್ಯೋಗಗಳು ಒಗ್ಗದಾದಾಗ ನನ್ನನ್ನು ಆದರಿಸಿದವರು ಚಿಕ್ಕಪ್ಪ-ಚಿಕ್ಕಮ್ಮ. ಆರಂಭದಲ್ಲಿ ಮುಳಿಯ ಶಂಕರ ಭಟ್ಟರ ಮೂಲಕ ‘ಜಗದರ್ಶಿ’ ಎನ್ನುವ ಪತ್ರಿಕೆಯಲ್ಲಿ ಸ್ವಲ್ಪ ಕಾಲ ಕಂಪೋಸಿಟರ್ ಉದ್ಯೋಗ. ನಂತರ ಎಡಂಬಳೆ ಗೋಪಾಲ ಭಟ್ಟರ ಮೂಲಕ ಮಂಗಳೂರಿನ ನ್ಯಾಯವಾದಿ ಎ.ಪಿ.ಗೌರೀಶಂಕರರು ಕಾರ್ಯದರ್ಶಿಯಾಗಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದಕ್ಕೆ ಸಹಾಯಕನಾಗಿ ಸೇರ್ಪಡೆ. ಆಗಿನ ಸಂಬಳ ರೂ.300.
          ಚಿಕ್ಕಪ್ಪ ವಾಸವಾಗಿದ್ದ ಮೊಂಟೆಪದವು ಮನೆಯಿಂದ ಹೋಗಿ ಬರುತ್ತಿದ್ದೆ. ತನ್ನ ಮಕ್ಕಳನ್ನುಯಾವ ರೀತಿ ನೋಡಿಕೊಳ್ಳುತ್ತಿದ್ದರೋ ಅಷ್ಟೇ ಪ್ರೀತಿಯಿಂದ ನನ್ನನ್ನೂ ನೋಡಿಕೊಳ್ಳುತ್ತಿದ್ದರು. ಬಹುಶಃ ಮೂರು ವರುಷ ಚಿಕ್ಕಪ್ಪ-ಚಿಕ್ಕಮ್ಮ ಕೈತುತ್ತು ನೀಡಿ ಪ್ರೀತಿ ತೋರಿದ್ದರು. ನಂತರದ ದಿವಸಗಳಲ್ಲಿ ತಲಪಾಡಿಯ ಅಜ್ಜಿ ಮನೆಯಿಂದ ಎಡರನೇ ಇನ್ನಿಂಗ್ಸ್ ಆರಂಭ. 1991 ಜನವರಿ 1 ರಿಂದ ಪುತ್ತೂರು ಅಡಿಕೆ ಪತ್ರಿಕೆಯಲ್ಲಿ ಕಚೇರಿ ಸಹಾಯಕನಾಗಿ ನಿಯುಕ್ತಿ. ಮಂಗಳೂರಿಗೆ ವಿದಾಯ.
          ನನ್ನೆಲ್ಲಾ ಸಾಹಿತ್ಯ, ಕಲೆಯ ಆಸಕ್ತಿಗಳನ್ನು ಪ್ರೋತ್ಸಾಹದ ನುಡಿಗಳ ಮೂಲಕ ಬೆನ್ನುತಟ್ಟುತ್ತಾ ಬಂದಿದ್ದಾರೆ ಚಿಕ್ಕಪ್ಪ-ಚಿಕ್ಕಮ್ಮ. ನನ್ನ ಮದುವೆಯ ಸಂದರ್ಭದಲ್ಲಿ ಬಂಧುಗಳಿಂದ ಉಂಟಾದ ‘ಮಾನಸಿಕ ಕಿರಿಕಿರಿ’ಗಳನ್ನು ಹಗುರ ಮಾಡಿದವರು. ‘ತನ್ನ ಅಣ್ಣನ ಮಗ’ ಎನ್ನುವ ಹೊಕ್ಕಳ ಬಳ್ಳಿಯ ಸಂಬಂಧಗಳು ಚಿಕ್ಕಪ್ಪನಲ್ಲಿ ಸದಾ ಜೀವಂತವಾಗಿರುವುದನ್ನು ಕಂಡಿದ್ದೆನೆ. ‘ನನ್ನ ಭಾವನ ಮಗ’ ಎನ್ನುವ ಅಕ್ಕರೆ ಚಿಕ್ಕಮ್ಮನಲ್ಲೂ ಇತ್ತು. ಅವರ ಮಕ್ಕಳಾದ ಲಿಂಗನಾಥ, ವಾಸುದೇವ, ಶ್ರೀ ಕುಮಾರ್ ತನ್ನನ್ನು ಅನ್ಯನೆಂದು ಇಂದಿಗೂ ಭಾವಿಸದಿರುವುದು ನನ್ನ ಸುಕೃತ.
          1996ರಲ್ಲಿ ಅಪ್ಪನನ್ನು ಕಳೆದುಕೊಂಡೆ. 2012ರಲ್ಲಿ ಚಿಕ್ಕಪ್ಪ ದೂರವಾದರು. 2018ರಲ್ಲಿ ಚಿಕ್ಕಮ್ಮ ದೈವಾಧೀನರಾದರು. ನನ್ನ ಬದುಕಿನಲ್ಲಿ ಪಥದರ್ಶಕರ ಕೊರತೆಯಿಂದಾಗಿ ಆರಕ್ಕೇರದ ಮೂರಕ್ಕಿಳಿಯದ ಒಂದು ರೀತಿಯ ಅತಂತ್ರ ಬದುಕಿನಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದೇನೆ. ಸಾಗಿದ ಬಂದ ದಾರಿಯಲ್ಲಿ ಆರ್ಥಿಕತೆಯ ವೈಭವಗಳಿಲ್ಲ. ಆದರೆ ಕಲೆ, ಸಾಹಿತ್ಯಗಳು ಕೈ ಬಿಡಲಿಲ್ಲ.

Tuesday, October 27, 2015

ಯೂಸ್ ಅಂಡ್ ಥ್ರೋ.....!

              ಬದುಕಿನ ಎಷ್ಟೋ ಕ್ಷಣಗಳಲ್ಲಿ ಆಪ್ತರಿಂದ, ಸ್ನೇಹಿತರಿಂದ, ಬಂಧುಗಳಿಂದ 'ಯೂಸ್ ಅಂಡ್ ಥ್ರೋ' ಅನುಭವ ಬಹುತೇಕರಿಗೆ ಆಗಿರುತ್ತದೆ. ಈ ಅನುಭವ ಮೌನವಾಗುವುದೇ ಹೆಚ್ಚು. ಮಾತಾಗುವುದಿಲ್ಲ. 'ಮಾತಾಗಬೇಕಾದರೆ ಆರ್ಥಿಕ ಸಬಲತೆ ಬೇಕು. ಅಂತಸ್ತು ಬೇಕು' ಮಾತಿನ ಮಧ್ಯೆ ಒಬ್ಬರು ಹೇಳಿದ ಮಾತು ಸತ್ಯವೆಂದು ತೋರುತ್ತದೆ.
               ಸುಮಾರು ಮೂವತ್ತು ವರುಷಗಳ ಸಾಹಿತ್ಯ, ಯಕ್ಷಗಾನ ಬದುಕಿನಲ್ಲಿ ಇಂತಹ ಅನುಭವ ಸಾಕಷ್ಟು ಆಗಿದೆ. ಯೂಸ್ ಮಾಡಿಕೊಳ್ಳುವಾಗ ಅವರು ಮುಂದೆ ಥ್ರೋ ಮಾಡಿಯಾರು ಎನ್ನುವ ಕಲ್ಪನೆ ಮನದ ಮೂಲೆಯಲ್ಲಿದ್ದರೂ 'ಛೇ... ಹೀಗಾಯಿತಲ್ಲಾ' ಅಂತ ಬೇಸರವಾಗುತ್ತದೆ. ಯೂಸ್ ಮಾಡಿಕೊಳ್ಳುವಾಗ ಹೊಗಳಿಕೆಯ ಹೊನ್ನಶೂಲ. ಆತ ಪ್ರಯೋಜನವಿಲ್ಲ ಎಂದಾದರೆ ಹಗುರ, ಗೇಲಿ ಮಾತುಗಳಿಂದ 'ಥ್ರೋ' ಮಾಡಿಬಿಡುತ್ತಾರೆ.
                 ಯೂಸ್ ಮಾಡಿಕೊಳ್ಳುವಾಗ ನಾನು ಹಲವು ಬಾರಿ ಯೋಚಿಸಿದ್ದಿದೆ - 'ಕಷ್ಟ ಕಾಲಕ್ಕೆ ಇವರು ನೆರವಾಗಬಹುದು. ಮುಂದೆ ಎಂದಾದರೂ ಇವರು ಸಹಾಯಕರಾದಾರು'. ಅದೆಲ್ಲಾ ಸುಮ್ಮನೆ...! ಅಲ್ಲೋ ಇಲ್ಲೋ ಸಹೃದಯತೆ ಮತ್ತು ಸಹೃದಯರು ಇರಬಹುದೇನೋ!
                ಈಚೆಗೆ ಶುಭ ಸಮಾರಂಭವೊಂದರಲ್ಲಿ ಪರಿಚಿತರೊಬ್ಬರು ಮಾತಿಗೆ ಸಿಕ್ಕರು. ಅವರು ಮಾತನಾಡುತ್ತಾ, "ಈಗಿನ ಕಾಲದಲ್ಲಿ ಸ್ಟೇಟಸ್ ಬೇಕು. ಅದಿಲ್ಲದಿದ್ದರೆ ಯಾರೂ ಹತ್ತಿರ ಮಾಡಿಕೊಳ್ಳುವುದಿಲ್ಲ. ಬೆರಳಿಗೆ ಉಂಗುರ, ಪ್ರಯಾಣಿಸಲು ಕಾರು, ದೊಡ್ಡ ದೊಡ್ಡ ಮನೆ, ಜಾಗ...ಇದೆಲ್ಲಾ ಬೇಕು. ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ಪ್ರಯೋಜನವಿಲ್ಲ." ಎಂದಿದ್ದರು.
              ಇವರ ಮಾತನ್ನು ಒಪ್ಪಬೇಕಾಗಿಲ್ಲ. ಆದರೆ ಸಮಾಜವನ್ನು ನೋಡುವಾಗ ಹೌದೆಂದು ಅನ್ನಿಸುತ್ತದೆ. ನನ್ನಲ್ಲಿ, "ಉಂಗುರುವಿಲ್ಲ, ವಾಹನವಿಲ್ಲ, ಸ್ವಂತದ್ದಾದ ಮನೆಯಿಲ್ಲ. ಇನ್ನೂ 'ಸೆಟ್ಲ್' ಆಗಿಲ್ಲ." ಹಾಗಾಗಿಯೇ ಇರಬೇಕು - ಯೂಸ್ ಅಂಡ್ ಥ್ರೋ.... ಕಾಡುವುದು.