Monday, February 6, 2012

ಪಠ್ಯಕ್ಕೆ ಸೇರ್ಪಡೆಗೊಂಡ 'ಹಾಜಬ್ಬ ಲೇಖನ'

ನಾ. ಕಾರಂತ ಪೆರಾಜೆಯವರು ಅಕ್ಷರಯೋಗಿ ಹಾಜಬ್ಬರ ಕುರಿತು ಪ್ರಜಾವಾಣಿಯಲ್ಲಿ ಬರೆದ ಬರೆಹವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್ನ ಕನ್ನಡ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಈ ಶೈಕ್ಷಣಿಕ ವರ್ಷದಿಂದಲೇ ಹಾಜಬ್ಬರ ಸಾಧನೆ ಕುರಿತ ಕನ್ನಡ ಪಠ್ಯ 'ಸಾಹಿತ್ಯ ಸ್ಪಂದನ ಭಾಗ-2 ರಚನೆಗೊಂಡಿದೆ.

ಹಾಜಬ್ಬ ಕಿತ್ತಳೆ ವ್ಯಾಪಾರಿ. ಹರೇಕಳದ ನ್ಯೂಪಡ್ಪು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯ ಮಟ್ಟಕ್ಕೆ ಕೊಂಡಯ್ದ ಸಾಹಸಿ. ದಾನಿಗಳ ನೆರವಿನಿಂದ ಹಳ್ಳಿಯಲ್ಲಿ ಅಕ್ಷರಕ್ರಾಂತಿಯನ್ನು ಮಾಡಿದ ಯೋಗಿ ಹಾಜಬ್ಬರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕನ್ನಾಡಿನ ಎಲ್ಲಾ ಪತ್ರಿಕೆಗಳು ಅವರ ಸಾಧನೆಗೆ ಬೆಳಕು ಹಾಕಿವೆ. ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.
ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದರ್ಗ ಜಿಲ್ಲೆಗಳ ಕಾಲೇಜುಗಳಲ್ಲಿ ಪಠ್ಯದ ಮೂಲಕ ಹಾಜಬ್ಬರ ಅಕ್ಷರ ಕ್ರಾಂತಿಗೆ ಮಾನ-ಸಂಮಾನ ಪ್ರಾಪ್ತವಾದಂತಾಗಿದೆ. ವಾಣಿಜ್ಯ ಪದವೀಧರರಿಗೆ ಸಾಮಾಜಿಕ ಸ್ಪಂದನದ ಜವಾಬ್ದಾರಿಯ ಸಂದೇಶ ಸಿಗಬೇಕೆನ್ನುವುದು ಪಠ್ಯಪುಸ್ತಕ ರೂಪೀಕರಣ ಸಮಿತಿಯ ಆಶಯ

ಪಠ್ಯದಲ್ಲಿ ಹಾಜಬ್ಬನವರ ಲೇಖನವೂ ಸೇರಿದಂತೆ ಕೃಷಿಋಷಿ ಚೇರ್ಕಾಡಿ ರಾಮಚಂದ್ರ ರಾಯರು, ಕಥೆಗಾರ್ತಿ ಅನುಪಮಾ ನಿರಂಜನ, ಪರಸರ ತಪಸ್ವಿ ಸಾಲುಮರದ ತಿಮ್ಮಕ್ಕ.. ಮೊದಲಾದ ಸಾಧಕರ ಬರೆಹಗಳೂ ಸೇರಿವೆ. ಸಾಹಿತ್ಯ ಸ್ಪಂದನ ಭಾಗ-2 ಪಠ್ಯವು 2016ರ ತನಕ ವಾಣಿಜ್ಯ ವಿಭಾಗಕ್ಕೆ ಪಠ್ಯವಾಗಲಿದೆ. ಒಟ್ಟು 132 ಪುಟಗಳು. ಪ್ರತೀ ಸಾಧಕರ ಬಗ್ಗೆ ಆರೇಳು ಪುಟಗಳ ಮಾಹಿತಿ. ಈ ಬರೆಹವು ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಈ ಹಿಂದೆ ಪ್ರಕಟವಾಗಿತ್ತು.

Thursday, February 2, 2012

ಮೊಂಟೆಪದವು ಕಾರಂತರಿಗೆ ನುಡಿನಮನ




"ಹಳ್ಳಿ ಮೂಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಹುಟ್ಟಿಗೆ ಕಾರಣರಾಗಿ, ತನುಶ್ರಮವನ್ನು ಮರೆತು, ಕುಟುಂಬಕ್ಕಿಂತಲೂ ಶಾಲೆಯನ್ನು ಪ್ರೀತಿಸಿ ಬೆಳೆಸಿದವರು ಅಕ್ಷರ ಯೋಗಿ ಮೊಂಟೆಪದವು ಪರಮೇಶ್ವರ ಕಾರಂತರು. ಇವರು ಒಂದು ಕಾಲಘಟ್ಟದಲ್ಲಿ ಮನೆಮನೆಗೆ ತೆರಳಿ, ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಓಲೈಸಿ, ಹೆತ್ತವರಿಗೆ ಅಕ್ಷರದ ಮಹತ್ವವನ್ನು ಸಾರಿದವರು. ಶಿಸ್ತುಬದ್ಧ ಜೀವನ, ಆಡಳಿತದಿಂದ ಶಿಕ್ಷಣಕ್ಕೆ ಗೌರವ ತಂದವರು," ಎಂದು ನಿವೃತ್ತ ಅಧ್ಯಾಪಕ, ಕವಿ, ಸಾಹಿತಿ ಮುಳಿಯ ಶಂಕರ ಭಟ್ ಹೇಳಿದರು.

ಈಚೆಗೆ ನಿಧನರಾದ ಅಕ್ಷರಯೋಗಿ ಮೊಂಟೆಪದವು ಪರಮೇಶ್ವರ ಕಾರಂತರ ಸ್ವಗೃಹದಲ್ಲಿ ಜರುಗಿದ ಶೃದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸುತ್ತಾ, 'ಅಧ್ಯಾಪಕನೊಬ್ಬನಿಗೆ ಆದರ್ಶಪ್ರಾಯರಾಗಿದ್ದ ಕಾರಂತರಂತಹ ಅಧ್ಯಾಪಕರ ರೂಪೀಕರಣ ಕಾಲದ ಆವಶ್ಯಕತೆ' ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಹಿರಿಯರಾದ ಲಾಡ ನಾರಾಯಣ ಭಟ್ಟರು ದೀಪಜ್ವಲನದೊಂದಿಗೆ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದ್ದರು.

ಅಧ್ಯಾಪಕ ನಾರಾಯಣ ಮಣಿಯಾಣಿ, ಗೋಪಾಲ ಮಾಸ್ತರ್, ಅಬ್ದುಲ್ ಜಲೀಲ್, ಶಾಂತಲಾ ಕಾರಂತ, ಎಡಂಬಳೆ ಗೋಪಾಲ ಭಟ್, ಬಲೆತ್ತೋಡು ನಾರಾಯಣ ಶೆಟ್ಟಿ, ಅಮ್ಮೆಂಬಳ ಸುಬ್ಬಣ್ಣ ನಾವಡ, ಕೊಲ್ಲರಮಜಲು ಶಂಕರ ಭಟ್.. ಮೃತರ ಕೊಡುಗೆಗಳನ್ನು ಸ್ಮರಿಸಿಕೊಂಡರು.

ವಿಶ್ರಾಂತ ಪ್ರಾಂಶುಪಾಲ ಎ.ಸದಾಶಿವ ನಾವಡರ ಸ್ವಾಗತದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಹಿರಿಯ ವೈದ್ಯರಾದ ಕೈರಂಗಳ ನಾರಾಯಣ ಹೊಳ್ಳರು ವಂದಿಸಿದರು.

ಈ ಸಂದರ್ಭದಲ್ಲಿ ಮೊಂಟೆಪದವು ಶೈಕ್ಷಣಿಕ ಸಂಸ್ಥೆಗಳಲ್ಲಿ ಜರುಗಿದ ಶೃದ್ಧಾಂಜಲಿ ಸಭೆಯ ನಡವಳಿಕೆಯನ್ನು ಮೃತರ ಚಿರಂಜೀವಿಗಳಾದ ಲಿಂಗನಾಥ ಕಾರಂತ, ವಾಸುದೇವ ಕಾರಂತ, ಶ್ರೀಕುಮಾರ ಕಾರಂತರಿಗೆ ಹಸ್ತಾಂತರಿಸಲಾಯಿತು. ಕೊನೆಯಲ್ಲಿ ಮಿತ್ರಭೋಜನ ಜರುಗಿತು.

Friday, January 20, 2012

ಮೊಂಟೆಪದವು ಪರಮೇಶ್ವರ ಕಾರಂತ





ಬಂಟ್ವಾಳ ತಾಲೂಕು ಕೈರಂಗಳ ಸಮೀಪದ ಮೊಂಟೆಪದವು ಪ್ರೌಢಶಾಲೆಯಲ್ಲಿ ಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿ 1992ರಲ್ಲಿ ನಿವೃತ್ತರಾಗಿದ್ದ ಹೆಚ್.ಪರಮೇಶ್ವರ ಕಾರಂತ(76)ರು ೧೯-೧-೨೦೧೨ರಂದು ಮುಂಜಾನೆ ದೈವಾಧೀನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಮತ್ತು ಅಪಾರ ಬಂಧುಗಳನ್ನು, ಅಭಿಮಾನಿಗಳನ್ನು, ಶಿಷ್ಯಗಡಣವನ್ನು ಅಗಲಿದ್ದಾರೆ. ಕಾರಂತರು ಮೂಲತಃ ಕಾಸರಗೋಡು ಸನಿಹದ ಪಳ್ಳಿಕೆರೆ ಹಾರ್ನಾಡಿನವರು.

ಮರ್ಕಂಜ, ಉಳ್ಳಾಲ, ಮಂಜನಾಡಿ, ಮಂಗಳೂರಿನ ಗಾಂಧಿನಗರ ಶಾಲೆಗಳಲ್ಲಿ ಪರಮೇಶ್ವರ ಕಾರಂತರು ಸೇವೆ ಸಲ್ಲಿಸಿದ್ದರು. ಮೊಂಟೆಪದವು ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಅದರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾರಂತರದು ದೊಡ್ಡ ಹೆಜ್ಜೆ. ಪ್ರಾಥಮಿಕ ಹಂತದಿಂದ ಪ್ರೌಢ ಶಾಲೆಯ ತನಕ ಶಾಲೆಯನ್ನು ಕಟ್ಟಿ ಬೆಳೆಸಿ, ಅಲ್ಲೇ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಬದುಕಿನ ಬಹುಪಾಲು ಸಮಯವನ್ನು ಶಾಲಾಭಿವೃದ್ಧಿಗೆ ಮೀಸಲಾಗಿಟ್ಟ ಕಾರಂತರು ಸಾಮಾಜಿಕವಾಗಿ ಮನ್ನಣೆಯನ್ನು ಪಡೆದಿದ್ದರು.

ಪ್ರಾಮಾಣಿಕತೆ, ಶಿಸ್ತು, ನಿಯತ್ತುಗಳಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಪರಮೇಶ್ವರ ಕಾರಂತರು ಶುದ್ಧಹಸ್ತರು. ಶಾಲಾ ಆಡಳಿತ ರೂಪಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ತನ್ನದೇ ಆದ ಚಾಕಚಕ್ಯತೆಯನ್ನು ಹೊಂದಿ ಜನಾನುರಾಗಿಯಾಗಿದ್ದರು. ಶಾಲೆಯ ವಿಚಾರ ಬಂದಾಗ ವೈಯಕ್ತಿಕ ವಿಚಾರಗಳೆಲ್ಲವೂ ಅವರಿಗೆ ಗೌಣವಾಗಿತ್ತು.

ಪರಮೇಶ್ವರ ಕಾರಂತರ ಶಾಲಾ ಅಭಿವೃದ್ಧಿಯ ದೀಕ್ಷೆಯಲ್ಲಿ ಅಧ್ಯಾಪಿಕೆಯಾಗಿ ಪತ್ನಿ ಲಕ್ಷ್ಮೀ ಕಾರಂತರ ಪಾತ್ರವೂ ದೊಡ್ಡದೇ. ಕುಟುಂಬದಲ್ಲಿ, ಸಮಾಜದಲ್ಲಿ ಹಿರಿಯಣ್ಣನಾಗಿದ್ದರು. ಆರ್ತರಿಗೆ ನೆರವಾಗುವ ಗುಣ. ಗಾಂಧಿ ಮಾರ್ಗದಲ್ಲಿ ನಂಬಿಕೆಯಿಟ್ಟು ಅದರಂತೆ ಬದುಕಿದವರು. ಬದುಕಿನುದ್ದಕ್ಕೂ ಸರಳ, ನಿರಾಡಂಬರ ಜೀವನಕ್ಕೆ ಪರಮೇಶ್ವರ ಕಾರಂತರು ಮಾದರಿಯಾಗಿದ್ದರು.

ಮೃತರಿಗೆ ಗೌರವಸೂಚಕವಾಗಿ ಮೊಂಟೆಪದವಿನ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಿಗೆ ತಾ.೧೯ರಂದು ರಜಾ ಸಾರಲಾಗಿತ್ತು.

Monday, December 26, 2011

'ಊಟದ ಬಟ್ಟಲಿನಲ್ಲಿ ವಿಷ'

ಉಪ್ಪಿನಂಗಡಿ ಸನಿಹದ ಪಂಜಳ ಡಾ.ವಸಂತ ಕುಮಾರ್ ತಾಳ್ತಜೆ ಅವರ ಮನೆಯಲ್ಲಿ ದಶಂಬರ 18ರಂದು 'ಹೇಮಂತ' ಹಬ್ಬ ಜರುಗಿತು. ಸನಿಹದ ಶಾಲೆಗಳ ಸುಮಾರು ಅರುವತ್ತು ವಿದ್ಯಾರ್ಥಿಗಳಿಗೆ 'ಜೀವಾಯನ' ಕುರಿತ ತರಬೇತಿ-ಕಾರ್ಯಾಗಾರ.

ನಾ. ಕಾರಂತ ಪೆರಾಜೆಯವರಿಂದ 'ಊಟದ ಬಟ್ಟಲಿನಲ್ಲಿ ವಿಷ' ಎಂಬ ವಿಚಾರದ ಕುರಿತು ಪವರ್ ಪಾಯಿಂಟ್ ಪ್ರಸ್ತುತಿ.

Tuesday, September 13, 2011

ಬೆಥನಿ ಕೈಕಾರಿಕಾ ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸ

ನೆಲ್ಯಾಡಿಯ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್ 27ರಂದು ನೂತನ ವಿದ್ಯಾರ್ಥಿಗಳ ಪ್ರವೇಶೋತ್ಸವ. ನಾ. ಕಾರಂತ ಪೆರಾಜೆಯಿಂದ ದೀಪಜ್ವಲನದ ಮೂಲಕ ಶುಭಾರಂಭ ಮತ್ತು ಪಾಲಕರಿಗೆ ತರಬೇತಿ. ಉದಯವಾಣಿ ವರದಿಗಾರ ಮತ್ತು ನೆಲ್ಯಾಡಿ ಜೆ.ಸಿ.ಐ.ಯ ಅಧ್ಯಕ್ಷ ಪ್ರಕಾಶ್ ಕೆ.ವೈ.ಉಸ್ತುವಾರಿಕೆ.

ರವೀಂದ್ರನಾಥ ಠಾಗೋರ್ ನೆನಪು

ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಗಳು - ಶಿಕ್ಷಣ ಸಂಸ್ಥೆಯಲ್ಲಿ ವಿಶ್ವಕವಿ ರವೀಂದ್ರನಾಥ ಠಾಗೋರರ ನೂರೈವತ್ತನೇ ಜನ್ಮ ವರ್ಷಾಚರಣೆಯ ಉದ್ಘಾಟನಾ ಸಮಾರಂಭ. 6 ಆಗಸ್ಟ್ 2011. ಪೂರ್ವಾಹ್ನ ಗಂಟೆ 9-00.

ಉದ್ಘಾಟಕರು : ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ.ತಾಳ್ತಜೆ ವಸಂತಕುಮಾರರಿಂದ ದೀಪಜ್ವಲನದ ಮೂಲಕ ಉದ್ಘಾಟನೆ. ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಮುಖ್ಯ ಅತಿಥಿ. ಸಂತ ಜಾರ್ಜ್ ಶಿಕ್ಷಣ ಸಂಸ್ಥೆಯಗಳ ಸಂಚಾಲಕ ಅಬ್ರಹಾಂ ವರ್ಗೀಸರ ಅಧ್ಯಕ್ಷತೆ.

ವಿದ್ಯಾರ್ಥಿಗಳಿಂದ ಠಾಗೋರರ ಕವಿತೆ, ಕಥೆಗಳ ನಿರೂಪಣೆ. ಸಮಗ್ರ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದರು. ಉತ್ತಮ ವಾತಾವರಣ. ಶಿಸ್ತುಬದ್ದ ವ್ಯವಸ್ಥೆ.

Tuesday, August 23, 2011

'ಎಡ್ವರ್ಡ್ ರೆಬೆಲ್ಲೋ' ಪುಸ್ತಕ ಅನಾವರಣ

ನಾ. ಕಾರಂತ ಪೆರಾಜೆ ಅವರ 'ಗಿಡಗೆಳೆತನದಿಂದ ಕೃಷಿ ಪ್ರೀತಿ ಬೆಳೆಸುವ ಎಡ್ವರ್ಡ್ ರೆಬೆಲ್ಲೋ' ಎಂಬ ಕಿರು ಪುಸ್ತಕವನ್ನು ಮೋನಪ್ಪ ಕರ್ಕೇರ ಅವರು ಈಚೆಗೆ ಕೇಪು ಗ್ರಾಮದ ಉಬರು ಮನೆಯಲ್ಲಿ ಜರುಗಿದ ಹಲಸಿನ ಹಬ್ಬದಲ್ಲಿ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಡಾ.ವಾರಣಾಶಿ ಕೃಷ್ಣಮೂರ್ತಿ, ಭಾರತ ಸರಕಾರದ ಕಾರ್ಯದರ್ಶಿ ವಿ.ವಿ.ಭಟ್ ಉಪಸ್ಥಿತರಿದ್ದರು.
ಧಾರವಾಡ ಕೃಷಿ ಮಾಧ್ಯಮ ಕೇಂದ್ರವು ಪುಸ್ತಿಕೆಯನ್ನು ಪ್ರಕಾಶಿಸಿದೆ.
ಪುಸ್ತಕದ ಬೆಲೆ ೨೦ ರೂಪಾಯಿ. (೦೮೩೬-೨೪೪೪೭೩೬)