Wednesday, July 6, 2011

ಚರಕ ಪ್ರಶಸ್ತಿ - ಮತ್ತೊಮ್ಮೆ!

"ಉದಯವಾಣಿಯಲ್ಲಿ ಪ್ರಕಟವಾದ 'ವಿಷಮಳೆಗೆ ಮುರುಟಿದ ಬದುಕು' ಲೇಖನವು ಈ ಸಾರಿಯ ಚರಕ ಪ್ರಶಸ್ತಿಗೆ ಆಯ್ಕೆಯಾಗಿದೆ," ಬೆಂಗಳೂರಿನ ಕಮ್ಯುನಿಕೇಷನ್ ಡೆವಲಪ್ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆಯಿಂದ ದೂರವಾಣಿ ಬಂದಾಗ ಆಶ್ಚರ್ಯ ಮತ್ತು ಖುಷಿ. 2003ರಲ್ಲಿ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ನನ್ನ 'ಹರಿನೀರ ಥಳಕು ಮನೆಮನೆ ಬೆಳಕು' ಲೇಖನಕ್ಕೆ ಚರಕ ಪ್ರಶಸ್ತಿ ಬಂದಿತ್ತು. ಈಗ ಎರಡನೇ ಇನ್ನಿಂಗ್ಸ್! ಬೆಂಗಳೂರಿನ ರಾಜಭವನದಲ್ಲಿ ಜುಲೈ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ. ಘನತೆವೆತ್ತ ರಾಜ್ಯಪಾಲರಾದ ಶ್ರೀ ಎಚ್.ಆರ್.ಭಾರದ್ವಾಜ್ರಿಂದ ಪ್ರಶಸ್ತಿ ಸ್ವೀಕಾರ. ಪ್ರಥಮ ಬಾರಿಗೆ ರಾಜಭವನನ್ನು ವೀಕ್ಷಿಸಲು ಮತ್ತು ರಾಜ್ಯಪಾಲರನ್ನು ಹತ್ತಿರದಿಂದ ನೋಡುವ, ಮಾತನಾಡುವ ಅವಕಾಶಕ್ಕೆ ಪ್ರಶಸ್ತಿಯು ಅನುವು ಮಾಡಿಕೊಟ್ಟಿದ್ದಕ್ಕೆ ಸಿಡಿಎಲ್ ಸಂಸ್ಥೆಗೆ ಆಭಾರಿ.

Monday, June 13, 2011

ಪುಸ್ತಕ ಪುರಸ್ಕಾರ ಪ್ರದಾನ

ಶ್ರೀ ಕ್ಷೇತ್ರ ಹೊರನಾಡಿನ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಷಿಯವರಿಂದ
ಗೌರವ, ಪುಸ್ತಕ ಪುರಸ್ಕಾರ.

Wednesday, February 2, 2011

ಕೊಡಂಗಾಯಿ ವೆಂಕಟ್ರಮಣ ಮಯ್ಯ ನಿಧನ

ಹಿರಿಯ ವಿದ್ವಾಂಸ, ನಿವೃತ್ತ ಅಧ್ಯಾಪಕ ಕೊಡಂಗಾಯಿ ಪಿ.ವೆಂಕಟ್ರಮಣ ಮಯ್ಯರು (83) ಅಲ್ಪ ಕಾಲದ ಅಸೌಖ್ಯದಿಂದ ಫೆ.1, 2011, ಮಂಗಳವಾರದಂದು ತನ್ನ ಸ್ವಗೃಹ ಕೊಡಂಗಾಯಿ ’ಪ್ರಶಾಂತವನ’ದಲ್ಲಿ ನಿಧನರಾದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಶಿಸ್ತಿನ ಸಿಪಾಯಿಯಂತಿದ್ದ ಮಯ್ಯರು ವಿಟ್ಲದ ಕೂಡೂರು ಸನಿಹದ ಅಣಿಲಕಟ್ಟೆ, ಮಂಕುಡೆ, ಕಾಸರಗೋಡುಗಳಲ್ಲಿ ಸೇವೆ ಸಲ್ಲಿಸಿ, ಕೊನೆಯ ಎರಡು ದಶಕಗಳಿಗೂ ಮಿಕ್ಕಿ ಪೈವಳಿಕೆ ಸರಕಾರಿ ಪೌಢ ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ, ಊರವರ ವಿಶ್ವಾಸ ಗಳಿಸಿದ್ದರು.
ಅಧ್ಯಾಪಕನಾಗಿರುವಾಗಲೇ ಸ್ವಾಧ್ಯಾಯ ನಿರತನಾಗಿ, ಹಿಂದಿ ಪ್ರವೀಣ ಪದವಿ ಗಳಿಸಿದ ಸಾಹಸಿ. ಸಾಮಾಜಿಕ ಹೊಂದಾಣಿಕೆ, ಸರಳ ಜೀವನ, ಮೃದು ಮಧುರ ಮಾತು ಮಯ್ಯರ ಬದುಕಿನ ಯಶಸ್ಸಿನ ಗುಟ್ಟು. ನಿವೃತ್ತಿಯ ಬಳಿಕ ಕೊಡಂಗಾಯಿ ಅಂಚೆ ಕಚೇರಿಯಲ್ಲಿ 'ಬ್ರಾಂಚ್ ಪೋಸ್ಟ್ ಮಾಸ್ಟರ್' ಆಗಿ ಎಂಟು ವರುಷಗಳ ಕಾಲ ಸೇವೆ ಸಲ್ಲಿಸಿದ್ದರು.

ಪತ್ನಿ ಶ್ರೀದೇವಿ, ಮೂವರು ಗಂಡು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಬಂಧುಬಾಂಧವರಲ್ಲದೆ ಅನೇಕ ಅಭಿಮಾನಿಗಳನ್ನು ಅಗಲಿದ್ದಾರೆ. ಇದೇ ಫೆಬ್ರವರಿ 10ರಂದು ಅವರ 84ನೇ ಹುಟ್ಟುಹಬ್ಬವಾಗಿದ್ದು, ಅಂದೇ ಅವರ ವೈಕುಂಠಯಾತ್ರೆ ಒದಗಿ ಬಂದಿರುವುದು ಕಾಕತಾಳೀಯ, ಯೋಗಾಯೋಗ.

Friday, November 5, 2010

'ಹಾರಕ' - ಸ್ಪರ್ಧಾ ಬಹುಮಾನ/ಪ್ರಶಸ್ತಿ ಪ್ರದಾನ

ಉದಯವಾಣಿಯಲ್ಲಿ ಪ್ರಕಟವಾದ ನಾ. ಕಾರಂತ ಪೆರಾಜೆ ಅವರ 'ಉಳಿಸಬೇಕಿದೆ, ಈ ಕಿರುಧಾನ್ಯ : ಹಾರಕ' ಬರೆಹಕ್ಕೆ 'ಭಾರತೀಯ ಕಿರುಧಾನ್ಯಗಳ ಜಾಲ'ವು ಪ್ರಾಯೋಜಿಸುವ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ. ಇತ್ತೀಚೆಗೆ ಮೂಡಿಗೆರೆ ಸನಿಹದ ದೇವವೃಂದದಲ್ಲಿ ನಡೆದ ಕೃಷಿ ಮಾಧ್ಯಮ ಕೇಂದ್ರದ (ಕಾಮ್) ದಶಮಾನ ಕಾರ್ಯಕ್ರಮದಲ್ಲಿ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯ ಕಮ್ಯೂನಿಟಿ ಮೀಡಿಯಾ ಮೊಲ್ಲಮ್ಮ ಪ್ರಶಸ್ತಿ ಪತ್ರ ಮತ್ತು ಬಹುಮಾನ ಮೊತ್ತ ರೂ.5,000 ನೀಡಿ ಗೌರವಿಸಿದರು. ಮಿಲೆಟ್ ನೆಟ್ವರ್ಕ್ ಆಫ್ ಇಂಡಿಯಾದ ರಾಷ್ಟ್ರೀಯ ಸಂಯೋಜಕ ವಟ್ಟೂರಿ ಶ್ರೀನಿವಾಸ್ ಸಂದರ್ಭೋಚಿತವಾಗಿ ಮಾತನಾಡಿದರು. ಕಾಮ್ ದಶಮಾನ ವೇದಿಕೆಯಲ್ಲಿ ಶ್ರೀ ಪಡ್ರೆ, ವೈ.ಸಿ.ರುದ್ರಪ್ಪ, ಎಸ್.ಎಂ.ಪಾಟೀಲ, ಡಿ.ಬಿ.ಸುಬ್ಬೇಗೌಡ, ಅನಿತಾ ಪೈಲೂರು ಉಪಸ್ಥಿತರಿದ್ದರು.

Thursday, November 4, 2010

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮೂಡಿಗೆರೆ ಸನಿಹದ ದೇವವೃಂದದಲ್ಲಿ ನವೆಂಬರ್ 28ರಿಂದ 30ರ ತನಕ ಕೃಷಿ ಮಾಧ್ಯಮ ಕೇಂದ್ರದ ಪತ್ರಿಕೋದ್ಯಮ ತರಬೇತಿ ಶಿಬಿರ. ನ.31ರಂದು ಕೇಂದ್ರದ ದಶಮಾನೋತ್ಸವ. ಸಿರಿಧಾನ್ಯಗಳ ಕುರಿತಾದ ಬರೆಹಕ್ಕೆ ಪ್ರಥಮ ಬಹುಮಾನ ಪಡೆದ ಗುಂಗಿನಲ್ಲಿದ್ದಾಗ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರದ ಸುದ್ದಿ.

ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ 'ರಾಜಕೀಯ ಸರ್ಕಸ್' ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿತ್ತು. ಪ್ರಶಸ್ತಿಯೊಂದಿಗೆ ಸಿಗುವ ಒಂದು ಲಕ್ಷದ ಲಕ್ಷ್ಯ! ಅದಕ್ಕೆ ಪ್ರಶಸ್ತಿ ಉಪಾಧಿ. ಇದಕ್ಕಾಗಿ ಎಂತೆಂತಹ ರಾಜಕೀಯ ಒತ್ತಡ, ವಶೀಲಿ, ಮಧ್ಯವರ್ತಿಗಳು... ಮತ್ತೊಂದೆಡೆ `ಸರಿಯಾಗಿ ತೂಗಿನೋಡಿಯೇ ಅರ್ಹರಿಗೆ ಪ್ರಶಸ್ತಿ ಕೊಟ್ಟಿದ್ದೇವೆ' ಎನ್ನುವ ಮುಖ್ಯಮಂತ್ರಿಗಳು. ಈ ಮಧ್ಯೆ ಕನ್ನಡಪ್ರಭದ ಸಂಪಾದಕರು ಪ್ರಶಸ್ತಿಯನ್ನು ನಿರಾಕರಿಸಿಯೇ ಬಿಟ್ಟರು.

ರಾಜಧಾನಿಯಲ್ಲಿ ಪ್ರಶಸ್ತಿ ಕುರಿತಾದ ಎದ್ದು ಕಾಣುವ ಕೊಳಕುಗಳು. ಇತ್ತ ಜಿಲ್ಲಾ ಪ್ರಶಸ್ತಿಯು ಯಾವುದೆ ಸದ್ದುಗದ್ದಲವಿಲ್ಲದೆ ಹುಡುಕಿ ಬಂದದ್ದು. ಅದೂ 'ಗ್ರಾಮೀಣ ಪತ್ರಿಕೋದ್ಯಮ' ವಿಭಾಗಕ್ಕೆ. ಪ್ರತೀ ವರ್ಷ ದಕ್ಷಿಣ ಕನ್ನಡ ಜಿಲ್ಲಾಡಳಿತವು 'ಪತ್ರಕರ್ತ ವಿಭಾಗ'ದಲ್ಲಿ ಪ್ರಶಸ್ತಿಯನ್ನು ನೀಡುತ್ತಿತ್ತು. ಈ ಸಲ ಗ್ರಾಮೀಣ ಪತ್ರಿಕೋದ್ಯಮಕ್ಕೆ ಮಣೆ. ಈ ಪ್ರಶಸ್ತಿಗೆ ನಾನೇ ಬಲಿಯಾಗಬೇಕೇ?!

ಇರಲಿ, ಕೊನೇ ಪಕ್ಷ ಬೇರೇನೂ ಸಿಗದಿದ್ದರೂ (ಕಾಫೀ ವಗೈರೆ..!) ಸರಕಾರದ ಮುದ್ರೆಯುಳ್ಳ 'ಪ್ರಶಸ್ತಿ ಪತ್ರ'ವಾದರೂ ಸಿಕ್ಕಿತಲ್ಲಾ! (ಈ ಪತ್ರವನ್ನಿಟ್ಟುಕೊಂಡು ಏನು ಮಾಡೋದು ಎಂಬುದು ಬೇರೆ ಮಾತು). ಇದೇ ರೀತಿ ಪ್ರಶಸ್ತಿಗಳು ಕನ್ನಾಡಿನಾದ್ಯಂತ ಅರ್ಹರನ್ನು ಅರಸಿಕೊಂಡು ಹೋದರೆ ಚೆನ್ನಾಗಿತ್ತಲ್ವಾ. ಆ ಖುಷಿನೇ ಬೇರೆ. ಸ್ನೇಹಿತರೊಂದಿಗೆ ಹೇಳಿಕೊಳ್ಳಲು ಮಜಾ.

ಇಂತಹ ಮಜಾ, ಖುಷಿಯನ್ನು ’ಪ್ರಶಸ್ತಿ’ಯ ಹಿನ್ನೆಲೆಯಲ್ಲಿ ಹಂಚಿಕೊಳ್ಳುತ್ತಿದ್ದೇನೆ.

Tuesday, October 19, 2010

'ಹಾರಕ' ಲೇಖನಕ್ಕೆ ಪ್ರಥಮ ಪುರಸ್ಕಾರ

ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆಯವರ 'ಉಳಿಸಬೇಕಿದೆ ಈ ಕಿರುಧಾನ್ಯ - ಹಾರಕ' ಬರೆಹವು ಮಿಲ್ಲೆಟ್ ನೆಟ್ವರ್ಕ್ ಆಪ್ ಇಂಡಿಯಾ (ಮಿನಿ) ಆಯೋಜಿಸಿದ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ.

ಜುಲೈ 21, 2010ರಂದು ಉದಯವಾಣಿಯ ಹುಬ್ಬಳ್ಳಿ ಆವೃತ್ತಿಯಲ್ಲಿ ಈ ಬರೆಹ ಪ್ರಕಟವಾಗಿತ್ತು. ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ನೇತೃತ್ವದಲ್ಲಿ ಪುರಸ್ಕಾರಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು.

ನಮ್ಮ ಕೃಷಿರಂಗ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಬಲ್ಲ; ಆಹಾರ ಮತ್ತು ಮೇವಿನ ಭದ್ರತೆ ಕಲ್ಪಿಸಬಲ್ಲ, ಅಪಾರ ಪೌಷ್ಟಿಕಾಂಶಗಳ ಆಗರವಾಗಿರುವ; ಆರೋಗ್ಯಕ್ಕೆ ಪೂರಕವಾಗಿರುವ ಸಾವಿ, ನವಣೆ, ಸಜ್ಜೆ, ಆರ್ಕ, ಉದಲು, ಕೊರ್ಲೆ, ಬರಗ ಮೊದಲಾದ ಧಾನ್ಯಗಳಿಗೆ ಒರಟು ಧಾನ್ಯಗಳೆಂಬ ಹಣೆಪಟ್ಟಿ ಕಟ್ಟಿ ಇವನ್ನು ದೇಶದ ಆಹಾರ ಧಾನ್ಯಗಳ ಅಗ್ರಪಂಕ್ತಿಯಲ್ಲಿ ಪೂರ್ಣ ಕಡೆಗಣಿಸಲಾಗಿದೆ. 'ಮಿನಿ' ಅವುಗಳನ್ನು ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಮಾಧ್ಯಮವೂ ಈ ಕಾರ್ಯದಲ್ಲಿ ಕೈಜೋಡಿಸಬೇಕೆನ್ನವ 'ಮಿನಿ' ಅಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಿದೆ.

ಬಹುಮಾನವು ಐದು ಸಾವಿರ ರೂಪಾಯಿ ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಪುರಸ್ಕಾರ ಪ್ರದಾನ ಸಮಾರಂಭವು ಅಕ್ಟೋಬರ್ 31, 2010ರಂದು ಬೆಳಿಗ್ಗೆ 10 ಗಂಟೆಗೆ ಮೂಡಿಗೆರೆ ತಾಲೂಕಿನ ದೇವವೃಂದದಲ್ಲಿ ನಡೆಯುವ ಕೃಷಿ ಮಾಧ್ಯಮ ಕೇಂದ್ರದ ದಶಮಾನ ಸಮಾರಂಭದಲ್ಲಿ ನಡೆಯಲಿದೆ.

Sunday, July 4, 2010

ಪ್ರಶಸ್ತಿ ಪಡೆದಾಗ...

ಕೇಂದ್ರ ರೈಲ್ವೇ ಸಚಿವ ಮುನಿಯಪ್ಪನವರಿಂದ 'ಮಂಡಿಬೆಲೆ ಶ್ಯಾಮಣ್ಣ ಸ್ಮಾರಕ ಪ್ರಶಸ್ತಿ' ಪಡೆದಾಗಿನ ಸಂದರ್ಭ
(27 ಜೂನ್ 2010, ಅರಮನೆ ಮೈದಾನ, ಬೆಂಗಳೂರು. ಸಂದರ್ಭ: ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನ)